ಅಸಲಿ ಸನ್ನದುದಾರ

ವಿರಹವೇಕೆ ಇಷ್ಟು ಚಂದ?
ನಿನ್ನನ್ನು ಇನ್ನಷ್ಟು ಮೋಹಿಸುವಂತೆ...

ನೀ ಇರದ ಈ ಘಳಿಗೆಯಲ್ಲಿ,
ತಂಪಾದ ಗಾಳಿ ಕೂಡ ನನ್ನೊಟ್ಟಿಗೆ ಸುಮ್ಮನೆ ಸಿಟ್ಟಿಗೇಳುತ್ತಿದೆ.

ನಾ ಬರೆಯುವ ಕವಿತೆಗಳೆಲ್ಲವೂ ನಿನ್ನಿಂದಲೇ,
ಎರವಲು ಪಡೆದ ಪ್ರೀತಿಯ ರೂಪಕಗಳು.

ಅವಳು ಸಿಡುಕುವಾಗಲೆಲ್ಲಾ ಸಾಕ್ಷಾತ್ ರೂಪಸಿಯಂತೆ ಕಾಣುವಳು,
ನನಗಾಗಲೇ ಅವಳನ್ನು ಮುದ್ದಿಸುವ ಖಯಾಲಿ ದುಪ್ಪಟ್ಟಾಗುವುದು.

ಅವಳ ಮುನಿಸಿನಲ್ಲೂ ಒಂದು ಅದ್ಭುತ ಲಯವಿದೆ,
ಆ ಕೋಪದ ಅಲೆಯಲ್ಲೂ ಪ್ರೀತಿಯ ದೋಣಿ ತೇಲುತ್ತದೆ.

ನಿನ್ನ ಕಣ್ಣಂಚಿನ ನೋಟಕ್ಕೆ ಮರುಳಾಗದ ಹಾದಿಯಿಲ್ಲ,
ನನ್ನೆದೆಯ ಗುಡಿಯಲ್ಲಿ ನಿನ್ನ ಬಿಟ್ಟರೆ ಬೇರೆ ದೇವರಿಲ್ಲ.

ಬಿಸಿಲಿನಲ್ಲಿ ಬೆವರುವ ಮುನ್ನವೇ ನಾನು ನಿನ್ನ ನೆರಳಾಗುವೆ,
ನೀ ದಣಿದು ಕುಳಿತರೆ ನಿನ್ನ ಉಸಿರಿಗೆ ಜೀವವನ್ನೇ ನೀಡುವೆ.

ನೀ ದೂರ ಸರಿದಷ್ಟು, ನಾ ಸನಿಹ ಬರುವೆ,
ಕಗ್ಗತ್ತಲ ರಾತ್ರಿಗೆ ಹೊಳೆಯುವ ನಕ್ಷತ್ರದಂತೆ.

ನಾ ಕೆಸರಾಗಿದ್ದರೂ ಬೇಸರವಿಲ್ಲ,
ನೀ ಕಮಲವಾಗಿ ನನ್ನೊಂದಿಗಿರುವುದೇ ಖುಷಿ.

ನಿನ್ನ ಮೌನವು ನನಗೊಂದು ನಿಗೂಢ ಕವಿತೆಯಂತೆ
ನೀನಿಲ್ಲದ ಈ ಬದುಕು ಬರಿ ಖಾಲಿ ಕಾಗದದಂತೆ.

ನಿನ್ನೆಲ್ಲಾ ಸಂತಸ, ದುಃಖ-ದುಮ್ಮಾನಗಳಿಗೂ,
ನಾನೊಬ್ಬನೇ ಈಗ ಅಸಲಿ ಸನ್ನದುದಾರ.

ನಿನ್ನೊಡನೆ ಗೆದ್ದು ಬೀಗುವ ಸಂಭ್ರಮ ನನಗೇಕೆ ಬೇಕು?
ನಿನ್ನ ಮುಂದೆ ಸೋತು, ನೀ ಸಲಹುವ ಒಲವೇ ಸಾಕು.

ಸಾವಿರಾರು ಮೈಲಿ ನಿನ್ನೊಟ್ಟಿಗೆ ಸಾಗಿ ಒಬ್ಬನೇ ಹೇಗೆ ಹಿಂದಿರುಗಲಿ?
ಹೊರಲು ನಾಲ್ಕು ಹೆಗಲಾದರೂ ಬೇಡವೇ?

Comments

Popular Posts