ಮೌನ
ಒಂದು ಒಂಟಿ ಮನೆ.
ಆ ಮನೆಯಲ್ಲಿ ನೆನಪುಗಳು ಬಿಟ್ರೇ ಬೇರೇನೂ ಇಲ್ಲ.
ಆತ್ಮಗಳ ನೆನಪು, ಕನಸುಗಳ ನೆನಪು.
ಅವಳಿಗೆ ಅದೇ ನೆನಪು.
ಆ ಘಟನೆ ನಡೆದಾಗ ಅವಳಿಗೆ ಸರಿ ಸುಮಾರು ಇಪ್ಪತ್ತೋಂದು ವರ್ಷವಿರಬೇಕು.
ಅದು ಘಟನೆ ಅಲ್ಲ. ಅವಳ ಬದುಕಿನ ಕೊನೆ ತಿರುವು.
ಇಳಿ ಸಂಜೆ. ಸೂರ್ಯ ಅರಬ್ಬೀ ಸಮುದ್ರಕ್ಕೇ ಬೀಳುವ ಸಮಯ.
ಅಪ್ಪು ಅದೇ ತಾನೆ ಡಾನ್ಸ್ ಕ್ಲಾಸು ಮುಗಿಸಿ ಬಂದ.
ಅವತ್ತೇಕೋ ಅವನು ಎಂದಿನ ಹಾಗೇ ಇರಲಿಲ್ಲ.
ಅವನ ಕಣ್ಣುಗಳು ಏನನ್ನೋ ಹುಡುಕಾಡುತ್ತಿದ್ದವು.
ಕತ್ತಲಲ್ಲಿ ಕೂತು ಬೆಳಕಿಗಾಗಿ ತಡಕಾಡುವ ಚಿಟ್ಟೆಯ ಹಾಗೇ. ಕಳ್ಳನ ಹಾಗೇ ಸುತ್ತಾಮುತ್ತ ಗಮನಿಸುತ್ತಿದ್ದ.
ಅವತ್ತು ಅವನು ಬೇರೆ ವ್ಯಕ್ತಿಯ ತರ ಕಂಡ.
"ಯಾಕೋ ಅಪ್ಪು ಹೀಗ್ ನೊಡ್ತಿದ್ಯಾ ? ದೆವ್ವ ಮೆಟ್ಟಿಕೊಂಡಂಗೆ,ಏನಾಯ್ತೋ ?" ಅಂತ ಕೇಳಿದ ನೆನಪು ಅವಳಿಗೆ.
ಯಾವತ್ತೂ ಉಪಯೋಗಕ್ಕೇ ಬಾರದ ಎಮರ್ಜೇನ್ಸಿ ಲೈಟಿನಿಂದ ರಪ್ಪನೇ ತಲೆಗೆ ಹೊಡೆದ ನೆನಪು. ಅಷ್ಟೇ.. ಆಮೇಲೆ..ಏನಾಯ್ತು..ಮಂಪರು..ಕತ್ತಲು..ಕಣ್ಣಿಗೆ ಕರಿ ಮಸಿ ಬಳೆದಷ್ಟು ಕತ್ತಲು.
ನಾಟಕದ ಪರದೆ ಮೆಲ್ಲನೆ ಮೇಲೆತ್ತುವಂತೆ, ಅಷ್ಟೇ ನಿಧಾನವಾಗಿ ಕಣ್ಣು ರೆಪ್ಪೆ ತೆರೆದಳು.
ಕಣ್ಣಿನ ನೇರಕ್ಕೆ ಗಾಳಿಯಲ್ಲಿ ತೇಲುತ್ತಿರುವ ಕಾಲುಗಳು. ಹಾಗೇ ಸ್ವಲ್ಪ ಕಷ್ಟಪಟ್ಟು ಮೇಲೆ ನೋಡಿದಳು.
ಅಪ್ಪು ಮನೆಯ ಅಟ್ಟಕ್ಕೆ ಸೀರೆ ಹಾಕಿಕೊಂಡು ಸತ್ತಿದ್ದಾನೆ.
ನೋಡುತ್ತಿರುವುದು ಭ್ರಮೆ ಎಂಬ ಭಾವ.
ವಾಸ್ತವಕ್ಕೆ ಬಂದು ಏಳಲು ಪ್ರಯತ್ನಿಸಿದಳು. ಏನೋ ಒಂದು ಶಕ್ತಿ ಬಂಧಿಸಿದ ಹಾಗೇ. ಸರಿಯಾಗಿ ಕಣ್ಣು ತೆರೆದು ನೋಡಿದಳು.
ಬೆತ್ತಲಾಗಿ ಮಂಚದ ಕಾಲಿಗೆ ಕಟ್ಟು ಹಾಕಿದ್ದಾರೆ.
ಅವಳ ಹೆಣ್ತನದ ಬೇಲಿಯನ್ನು ಬಲಾತ್ಕಾರವಾಗಿ ಅಪ್ಪು ಪ್ರವೇಶಿಸಿದ್ದ ಅನ್ನುವುದರಲ್ಲಿ ಯಾವುದೇ ಅನುಮಾನವಿರಲಿಲ್ಲ. ಹುಚ್ಚಿಯಂತೆ ಚೀರಿದಳು.
ಕಿರುಚುತ್ತಲೇ ಬಲಗಡೆ ಗೋಡೆಯತ್ತ ಕಣ್ಣಾಡಿಸಿದಳು.
ಹಳೆಯ ಫೋಟೋ ಫ್ರೇಮಿನಲ್ಲಿ ದೇವರ ಪಾದ ಸೇರಿರುವ ಅಪ್ಪ,ಅಮ್ಮ, ಅವಳು ಮತ್ತು ಅಪ್ಪು.
ಮತಿಹೀನಳಂತೆ ಕಿರುಚುತ್ತಾ ಹಾಗೇ ಮೌನವಾದಳು.
ಮತ್ತೇಂದು ಅವಳು ಮಾತನಾಡಲಿಲ್ಲ.
ಅವತ್ತಿಂದ ಆ ಮನೆಯಲ್ಲಿ ಮೌನ.
*****
©ಮಹೇಶ್ ಪುಲಿಕೇಶಿ
06-03-2017
Comments
Post a Comment