ಅವನು, ಅವಳು ಮತ್ತು ಪಾರಿವಾಳ

ಪ್ರೀತಿ ಅಂದರೇನು ?
ಈ ಪ್ರಶ್ನೆ ಬಹುಶಃ ಪ್ರಪಂಚದ ಬಹುತೇಕರಿಗೆ ಕಾಡಿದೆ. ಕಾಡುತ್ತಲೇ ಇರುತ್ತದೆ. ಪ್ರೀತಿ ಅನ್ನೋದು ಒಬ್ಬೊಬ್ಬರಿಗೆ ಒಂದೊಂದು ರೀತಿಯ ಅನುಭವ.
ಒಬ್ಬರಿಗೆ ಬಿಟ್ಟಿರಲಾರದ ಬಂಧವಾದರೇ ಮತ್ತೊಬ್ಬರಿಗೆ ಸಜೆ.

-ಅವರಿಬ್ಬರೂ ಪ್ರೀತಿಸುತ್ತಿದ್ದಾರೆ.
ಮುಂದೊಂದು ದಿನ ಮದುವೆಯಾಗಿ ಸುಖವಾಗಿರಲು ಈಗಿಂದಲೇ ಹಗಲು-ರಾತ್ರಿ ಪಾಳಿಯ ಕೆಲಸ ಮಾಡಿ ಹಣ ಕೂಡಿಡುತ್ತಿದ್ದಾರೆ.
ಹಾಗಾದರೇ ಪ್ರೀತಿ ಎಂದರೆ ಮುಂದೊಂದು ದಿನ ಸುಖವಾಗಿರಲು ಈಗ ಕಷ್ಟ ಪಡುವುದೇ......?
ಕಷ್ಟ ಪಟ್ಟರೆ ಪ್ರೀತಿ ಆದೀತೆ....!?
ಪ್ರೀತಿ ಅನ್ನುವುದು ಮಳೆ ಇದ್ದ ಹಾಗೇ ಬಂದಾಗ ಸುರಿದು ಬಿಡಬೇಕು.

-ಅವನು ಅವಳನ್ನು ಅತಿಯಾಗಿ ಪ್ರೀತಿಸುತ್ತಾನೆ.
"ಅತಿ" ಎನ್ನುವುದೇ ಅವಳಿಗೆ ಹಿಂಸೆ...
ಅತಿಯಾದರೇ ಅಮೃತವು ವಿಷವೆಂದು ಪದೇ ಪದೇ ಹೇಳುತ್ತಾಳೆ.
ಹಾಗಿದ್ದರೇ, ಅತಿಯಾದ ವಿಷವೂ ಅಮೃತವಾದೀತೆ..?
"ಅತಿಯಾಗಿ ದ್ವೇಷಿಸುವವರು ಒಂದು ರೀತಿ ಪ್ರೀತಿಸುತ್ತಿದ್ದಾರೆಯೇ.....!?
ದ್ವೇಷದಿಂದ ಹರಿಯನ್ನು ಸೇರಿದ ಹಿರಣ್ಯಕಶ್ಯಪನಂತೆ.
ಮತ್ತೆ ಅತಿಯಾಗಿ ಪ್ರೀತಿಸಬಾರದೇ..? ಪ್ರೀತಿ ಅಂದರೇ...?
ಗಾಳಿಯಂತೆ..... ಶ್ವಾಸಕ್ಕೆ ಎಷ್ಟು ಬೇಕೋ ಅಷ್ಟು...
ಹೆಚ್ಚಾದರೆ ಹೈಪರಾಕ್ಸಿಯಾ, ಕಡಿಮೆಯಾದರೇ ಹೈಪಾಕ್ಸಿಯಾ.....

-ಅವಳು ಅವನಿಗೆ ಶರಣಾಗಿದ್ದಾಳೆ.....
ಅವನೆಂದರೇ ಇವಳಿಗೆ ಉಸಿರು. ಅವನ ಮೌನಕ್ಕೆ ಶರಣಾಗಿದ್ದಾಳೆ.
ಅವಳ ಪ್ರೀತಿಯನ್ನು ಅವನು ಒಪ್ಪಿಕೊಂಡಿಲ್ಲ ಹಾಗೇ ತಿರಸ್ಕರಿಸಿಯೂ ಇಲ್ಲ. ಒಟ್ಟಿನಲ್ಲಿ ಇವಳು ಅವನಿಗೆ ಶರಣಾಗಿದ್ದಾಳೆ...ಅವನು ನಾನಾಗಬೇಕೆಂದು.
ಹಾಗಾದರೇ ಪ್ರೀತಿ ಎಂದರೆ ಶರಣಾಗತಿಯೋ....!?
ಊಹ್ಞೂ....ಹೊಳೆದಂಡೆಯಲ್ಲಿ ಮೀನಿಗೆ ಗಾಳ ಹಾಕಿ ಕೂತಂತೆ. ಪ್ರೀತಿ ಅನ್ನುವುದು ನಿಮಗೆ ಸೀಗಡಿ ರೂಪದಲ್ಲಿಯೋ ಅಥವಾ ಭೂತಾಯಿ ಮೀನಿನ ರೂಪದಲ್ಲಿಯೋ ಇಲ್ಲ ಮತ್ಯಾವುದೋ ರೂಪದಲ್ಲಿ ಸಿಗಬಹುದು. ಕೆಲವೊಬ್ಬರಿಗೆ ಪ್ರೀತಿ ಎನ್ನುವ ಮೀನು ಸಿಗುವುದೇ ಇಲ್ಲ.
ಕೂತು ಬಂಡೆ ಬಿಸಿ ಮಾಡಿದ್ದಷ್ಟೇ ಪ್ರಯೋಜನ.

-ಅವಳು ಪ್ರೀತಿಸುತ್ತಿಲ್ಲ ಎಂಬುದೇ ಅವನ ಚಿಂತೆ.
ಇವನು ಅವಳಿಗೋಸ್ಕರ ಪ್ರಾಣ ಕೊಡಲು ಸಿದ್ಧ.
ಆದರೆ ಅವಳಿಗೆ ಇವನ ಪ್ರಾಣವೂ ಬೇಡ. ಪ್ರೀತಿಯೂ ಬೇಡ. ಮತ್ತೊಬ್ಬನ ಪ್ರಾಣ ಬೇಕು, ಅವನ ಪ್ರೀತಿ ಬೇಕು ಇವಳಿಗೆ. ಆ ಪುಣ್ಯಾತ್ಮನಿಗೆ ಇನ್ಯಾರ ಪ್ರೀತಿ ಬೇಕೋ....
ಹಾಗಿದ್ದರೇ, ಪ್ರೀತಿ ಅಂದರೇ ಇಬ್ಬರೂ ಸೇರಿಯೇ ಮಾಡುವುದೋ.....?
ಅದಕ್ಕೆ ಬೇರೆಯದೇ ಹೆಸರಿದೆ ಅಲ್ಲವೇ.....
ಅವಳ ಪ್ರೀತಿ ಅವಳಿಗೆ, ನಿನ್ನ ಪ್ರೀತಿ ನಿನಗೆ.
ಆಕಾಶದಲ್ಲಿರುವ ಚಂದಿರನನ್ನು ನೋಡುವುದು ನಿನ್ನಷ್ಟವಾದರೇ.... ಚಂದಿರ ಮತ್ತೊಬ್ಬರನ್ನು ನೋಡುತ್ತಿರಬಹುದು ಅದು ಅವನಿಷ್ಟ.
ನೋಡಬೇಡ ಅನ್ನುವುದಕ್ಕೆ ನಾವ್ಯಾರೂ.....!!

-ಅವಳಿಗೆ ಪಾರಿವಾಳ ಪ್ರೀತಿಯ ಸಂಕೇತ.
ಅವಳು ಅವನನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಹೆಣಗಾಡುತ್ತಿದ್ದಾಳೆ. ನನ್ನ ಅಂಗೈಯಲ್ಲೇ ಇರಬೇಕೆಂಬುದು ಅವಳ ಕೋರಿಕೆ.
"ಬಿಗಿಯಾಗಿ ಹಿಡಿದರೆ ಸತ್ತೋಗುತ್ತದೆ. ಸಡಿಲ ಬಿಟ್ಟರೇ ಹಾರಿ ಹೋಗುತ್ತದೆ" ಹಾಗಾದರೇ ಪ್ರೀತಿ ಅಂದರೇ.....
ನಾಜೂಕಾಗಿ ಹಿಡಿದುಕೊಳ್ಳುವುದೇ.....!?
ಕೈಯನ್ನು ಸಡಿಲಗೊಳಿಸಿ ಪಾರಿವಾಳವನ್ನು ಹಾರಲು ಬಿಟ್ಟು ಮತ್ತೆ ಬರುತ್ತದೆ ಎಂದು ಕಾಯುವ ನಂಬಿಕೆಯೇ ಪ್ರೀತಿಯೋ....!? ಗೊತ್ತಿಲ್ಲ.
ಪಾರಿವಾಳಕ್ಕೆ ನಿಮ್ಮ ಮೇಲೆ ಪ್ರೀತಿ ಇದ್ದರೇ ಬಂದು ನಿಮ್ಮ ಹೆಗಲ ಮೇಲೆ ಕೂರಬಹುದು. ಇಲ್ಲ ಇನ್ನೊಬ್ಬರ ಮೇಲೋ ಅಥವಾ ಯಾವುದೋ ಸಮಾಧಿ ಮೇಲೆ ಕೂರಬಹುದು.
ಕಾಯುವಿಕೆ....ನಂಬಿಕೆ ಅಷ್ಟೇ ಸತ್ಯ. ಉಳಿದೆಲ್ಲವೂ ಮಿಥ್ಯ.
ನಿಮ್ಮ ಪಾರಿವಾಳ ಕೈಯಲ್ಲಿರುವುದೋ ಅಥವಾ ಗೋರಿಯ ಮೇಲೋ....?
ಪ್ರೀತಿ ಎಂದರೇ ಸಾವೇ...? ಮೋಕ್ಷವೇ...? ಪರಮಾತ್ಮನನ್ನು ಸೇರುವುದೇ..?

-ಅವನು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಪ್ರೀತಿಯೆಂಬ ಬಂಡೆ ತಾಗಿ ಕಾಲಿನಲ್ಲಿ ರಕ್ತ ಒಸರುತ್ತಿದೆ.
ಇನ್ನೊಬ್ಬ ಅದೇ ಬಂಡೆಗೆ ಎಡವಿದಾಗ ಏನೂ ಆಗಲೇ ಇಲ್ಲ. ಮತ್ತೊಬ್ಬನಿಗೆ ಪಾಪ ಕಾಲೇ ಹೋಯಿತು.
ಒಬ್ಬೊಬ್ಬರಿಗೆ ಒಂದೊಂದು ಅನುಭವ.
ಹಾಗಿದ್ದರೇ ಪ್ರೀತಿ ಅಂದರೇನು...? 
ನಿಮ್ಮ ಅನುಭವ.

ಚಿಟ್ಟೆ ಹಿಡಿಯಲು ಹೋದ ಮಗುವಿನಂತೆ ಚಿಟ್ಟೆ ಸಿಕ್ಕರೂ ಸಿಗಬಹುದು ಅಥವಾ ಹಾರಿ ಮತ್ತೊಂದು ಗಿಡಕ್ಕೆ ಹೋಗಬಹುದು. ಸಿಕ್ಕರೇ ನಮಗೂ ಖುಷಿಯೇ....!

                                    ******
ಮಹೇಶ್.ಆರ್
07/08/2017
amaheshr@gmail.com

Comments

Popular Posts