ಬಾಳೆಲೆ

ಪಶ್ಚಿಮ ಘಟ್ಟಗಳ ಕಾಡಿನಂಚಿನಲ್ಲಿರುವ ಗ್ರಾಮ "ಕಾಕನಕೋಟೆ" ಅಲ್ಲಿಂದ ಎಡಕ್ಕೆ ಹರಿಯುವ ನದಿ ದಡದಲ್ಲೇ ಐದಾರು ಮೈಲಿ ನಡೆದರೆ ಸಿಗುವ ಹಳ್ಳಿಯೇ "ಬಾಳೆಲೆ" ಹಳ್ಳಿ ಎನ್ನುವುದಕ್ಕಿಂತ ಕಾಡು ಎಂದು ಕರೆಯಬೇಕು.
ದಿನಾ ಬೆಳಿಗ್ಗೆ ಸೂರ್ಯ ಉದಯಿಸುವಂತೆ ಇಲ್ಲಿ ಮಳೆ ಬರುವುದು ಅಷ್ಟೇ ಸಹಜ. ಆದರೆ ಎರಡು ದಿನ ಸುರಿಯುವ ಜಡಿ ಮಳೆಗೆ ಅಥವಾ ಜೋರು ಮಳೆ ಬಂತೆಂದರೇ ಹಳ್ಳಿಯಲ್ಲಿ ಒಬ್ಬರಾದರೂ ಕಾಣೆಯಾಗುತ್ತಿದ್ದರು.
ಕಾಣೆಯಾದವರ ದೇಹ ಅರ್ಧಂಬರ್ಧ ಮಾತ್ರ ಸಿಗುತ್ತಿತ್ತು.
ಕೆಲೆವೊಮ್ಮೆ ಅದು ಇಲ್ಲ.

ಹಳ್ಳಿಯಲ್ಲಿ ಇರುವ ನಾಲ್ಕು ಮುಖಂಡರು ಸೇರಿ ವಿಚಾರ ಮಾಡಿದಾಗ ಒಬ್ಬೊಬ್ಬರು ಒಂದು ರೀತಿ ಕಾರಣಗಳನ್ನು ಕೊಡಲು ಶುರು ಮಾಡಿದರು.
"ಈ ಕಾಡಲ್ಲಿ ಯಾವ್ದೋ ಒಂದು ಹೆಣ್ಣು ಮೋಯೀನೀ ಸೇರ್ಕೋಂಡಿದೆ ಅದ್ಕೆ ಬಿಸಿ ರಕ್ತ ಕುಡಿಯುವ ಚಟ, ಅದು ಓಡಾಡದು ನಾನು ನೋಡಿದ್ದೀನಿ " ಎಂದ ಚಿಕ್ಕ.
"ಹೇ ದೆಯ್ಯಾ ಗಿಯ್ಯ ಯೆಲ್ಲಾ ಸುಳ್ಳು ಕಣ, ಬೇರೇ ಯಾನಾದ್ರೂ ಈಸ್ಯ ಇರ್ಬೇಕು" ಎಂದು ಊರಿನ ಹಿರಿಯಿಕ ತಮ್ಮಣ್ಣ ಯೋಚಿಸ ತೊಡಗಿದ.
"ವೊದ ಸಲ ಉಗಾದಿನಾಗ ಕುರಿ ಕದಿಯೋಕೆ ಬಂದ ಹುಡುಗ್ರನ್ನ ಕಂಬಕ್ಕೆ ಕಟ್ಟಿ ವಡುದ್ವಲ್ಲ ಅದ್ರಲ್ಲೀ ಒಬ್ಬ ಅವಮಾತೀ ತಡಿಯೊಕಾದೇ ನೇಣಾಕಂಡು ಸತ್ನಂತೆ, ಅವ್ನಿಯಾ ಇವಾಗ ದೆಯ್ಯ ಆಗಿ ನಮ್ನ ಬಡಿದು ಬಾಯಿಗೆ ಆಕಂತಿರದು" ಎಂದು ಸುಬ್ಬಣ್ಣ ಎಲ್ರಿಗೂ ದಿಗಿಲು ಹತ್ತಿಸಿದ.
ಎದೆಯಲ್ಲಿ ಎಲ್ರಿಗೂ ಇವಾಗ ಪುಕ ಪುಕ ಅಂತ ಬಡಿದುಕೊಳ್ಳಲು ಶುರುವಾಯಿತು.
ಅವತ್ತು ನೀ ಹೊಡೆದ್ದಿದ್ದು, ಅವ್ನು ಕಟ್ಟಾಕ್ಕಿದ್ದು, ಇವ್ನು ಚಪ್ಲೀ ಹಾಕಿದ್ದು ಅಂತ ಜಗಳ ಆಡಲು ನಿಂತರು.
"ಯೇ ನಿಲ್ಸ್ರುಲಾ ಇವಾಗ ಏನ್ ಮಾಡ್ಬೇಕು ಅಂತ ಯೇಚ್ನೇ ಮಾಡದ್ಬುಟ್ಟು ಕನ್ನಾಯಿಗಳ ತರ ಕಿತಾಡ್ತಾವೇ" ಎಂದು ಹಳ್ಳಿಯ ಮುಖಂಡ ಚಾಮಯ್ಯ ಎಚ್ಚರಿಸಿದನು.
ಎಲ್ರೂ ಚಿಂತಾಕ್ರಾಂತರಾಗಿದ್ದಾಗ ಹಳ್ಳಿಯ ಹಿರೇ ಜೀವ "ಮರಿಸಾಮಿ" ಎಲ್ರೂ "ಮುತ್ತಜ್ಜ" ಅಂತಾನೇ ಕರೆಯುವುದು, ಒಂದು ಸಲಹೆಯನಿತ್ತರು.
"ನಮ್ಮ ದ್ಯಾವತೇ ಮಾಸ್ತಮ್ಮನಿಗೆ ಒಂದು ಕುರಿಯ ಬಲಿ ಕೊಟ್ಟು ಬಿಟ್ರೇ, ಮಿಕ್ಕಿದ್ದೆಲ್ಲ ತಾಯಿ ನೊಡ್ಕೊತಾಳೆ" ಎಂದನು.
ಎಲ್ರೂ ಇದಕ್ಕೆ "ಊ" ಎಂದು ತಲೆಯಾಡಿಸಿದರು.
"ಸರಿ. ಇವತ್ತು ಸ್ವಾಮಾರ ನಾಳೆ ತಾಯಿ ವಾರ, ನಾಳೆಕೆಯ ಪೂಜೆ ಮಾಡುಮ, ಇವತ್ತು ಬಲಿ ಕೊಡೋ ಕುರಿನ ತಾಯಿ ಗುಡಿ ಮುಂದೇ ಕಟ್ಟಿ" ಎಂದು ಚಾಮಯ್ಯ ಎದ್ದನು.

ಚಿಕ್ಕ, ಸುಬ್ಬಣ್ಣ ಇಬ್ಬರು ಸೇರಿ ಕೆಂಪಮ್ಮನ ಒಂದು ಪೊಗುರುದಸ್ತಾದ ಕುರಿ ತಂದು ಕಟ್ಟುತ್ತಾ ಚಿಕ್ಕ ಹೇಳಿದ. 
"ಸುಬ್ಬಣ್ಣ ನಿನ್ನ ಹೇಣ್ತಿ ಮ್ಯಾಲೆ ಆಣೆಗೂ ಯೇಳ್ತೀನಿ ಕ್ಯಾಳು ನಾಳೆ ವತಾರೋತ್ತಿಗೆ ಈ ಕುರಿ ಇರಕ್ಕಿಲ್ಲ" ಎಂದು ನಿಶ್ಚಯವಾಗಿ ಹೇಳಿದ.
"ಕೆರ ತಕ್ಕ ವಡಿತಿನಿ ನನ್ನ ಹೇಣ್ತೆ ತಂಟೆಗೆ ಬಂದ್ರೆ ಮಗ್ನೆ" ಎಂದು ಕೆಂಡಾಮಂಡಲವಾದ.
"ಆತು ಬಿಡಣ್ಣೋ, ನಿನ್ನ ಮಗ್ಳು ಮಾಲ್ಯೇ ಆಣೆ ಇಕ್ಕಿದ್ರೆ ಕ್ವಾಪ ಮಾಡ್ಕತಿಯ ಅಂತ ಅಂಗದೆ" ಎಂದು ನಿಧಾನಕ್ಕೇ ಉಸುರಿದ.
"ಮಗ್ಳು ಗಿಗ್ಳು ಅಂದೆ ಅಟ್ಟೇಯಾ ಅಂದು" ಎಂದು ಕುರಿಯನ್ನು ಬಿಗಿಯಾಗಿ ಕಟ್ಟು ಹೊರಟು ಹೋದನು.
ಚಿಕ್ಕ ಅಲ್ಲೇ ಕುರಿ ಪಕ್ಕ ಕೂತನು.

ದ್ಯಾವತೇ ಗುಡಿ ಮುಂದೇ ಕಟ್ಟಿದ್ದ ಕುರಿ ಕಾಯುವ ಉಸ್ತುವಾರಿಯನ್ನು ಚಿಕ್ಕನ ಹೆಗಲಿಗೆ ಕಟ್ಟಲಾಯ್ತು.
ಕೆಲ್ಸ ಕಾರ್ಯ ಇಲ್ಲದ ಸ್ವಾಂಬೇರಿ, ದೇವ್ರ ಕೆಲ್ಸನಾದ್ರು ಮಾಡ್ಲಿ ಎಂದು.

ಮಾಸ್ತಮ್ಮನ ಗುಡಿಯಿಂದ ಹತ್ತು ಹದಿನೈದು ಹೆಜ್ಜೆ ಪೂರ್ವಕ್ಕೆ ನಡೆದರೆ ನರಿ ಬಂಡೆ ಸಿಗುತ್ತದೆ.
ತುಕಡಿಸುತ್ತಿದ್ದ ಚಿಕ್ಕನಿಗೆ ಕುರಿಯ ಸದ್ದಾಗಿ ಎಚ್ಚರವಾಯ್ತು.
ಕುರಿ ಅರಚುತ್ತಲೇ ಇದೆ, ಎಚ್ಚೆತ್ತ ಚಿಕ್ಕ
"ಯಾವನ್ಲಾ ಬಡ್ಡೈದ, ಬಾರ್ಲಾ ಈಗ ಗಂಡಸಾಗಿದ್ರೆ" ಎಂದು ದೊಣ್ಣೆಯನ್ನು ಎರಡು ಸಲ ನೆಲಕ್ಕೆ ಬಡಿದನು.
ಹಂಗೇ ಒಂದು ಎರಡು ಹೆಜ್ಜೆ ಮುಂದೆ ಬಂದು ಅತ್ತಿತ್ತ ನೋಡಿದ.
ಯಾರೋ ನರಿ ಬಂಡೆಯಿಂದ ದಡ ದಡ ಅಂತ ಓಡಿದ ಸದ್ದು.
"ಮೋಯಿನಿ, ಸತ್ನಲ್ಲಪೊ" ಎಂದು ದೊಣ್ಣೆ ಬಿಸಾಕಿ ಓಟ ಕಿತ್ತನು.

ಎದ್ನೋ ಬಿದ್ನೋ ಅಂತ ಓಡಿ ಬಂದು ಚಾಮಯ್ಯ, ಕಾಳ, ಕೆಂಪ, ಸುಬ್ಬಣ್ಣ ಎಲ್ರಿಗೂ ಎಬ್ಬಿಸಿ.
"ನರಿ ಬಂಡೆ ತವ ಮೊ... ಮೋಯಿನಿ" ಎಂದು ತೊದಲಿಸಿದನು.
"ಏನ್ಲಾ, ಯಾವ ಮೋಯಿನಿ" ಎಂದು ಕೇಳಿದಾಗ.
"ನಾನು ಗುಡಿ ತವ ಕುರಿ ಕಾಯೋವಾಗ, ನರಿ ಬಂಡೆಯಿಂದ ಒಂದು ಹೆಣ್ಣು ಓಡಿ ಹೋಯ್ತು " ಎಂದು ಏದುಸಿರು ಬಿಟ್ಟನು.
"ಎಂಗೆ ಇತ್ಲಾ ಮೋಯಿನಿ" ಎಂದು ಕೆಂಪ ಜೊಲ್ಲು ಸುರಿಸಿದ.
"ಲಂಗ ದಾವಣಿ ಹಾಕಂಡಿತ್ತು " ಎಂದನು.
"ಯೇ ಮಂಕಾ, ಮೋಯಿನಿ ಯಾವತ್ತಾದ್ರೂ ಹಾಕಂಡದ, ಏನಿದ್ರೂ ಬಿಳಿ ಸೀರೆ" ಎಂದು ಸುಬ್ಬಣ್ಣ ಹೇಳಿದ. 
ಹಿಂದಿನಿಂದ ಬಂದ ಚಾಮಯ್ಯನ ಮಗ ಭೈರ ಕೂಡ 
"ಹು ಈ ಮಂಕಾ ಅದೇನ್ ನೋಡೀದಾನೊ" ಅಂದ.
"ಪಟ್ಟಣದ ದೆಯ್ಯಾಗಳು ಪ್ಯಾಂಟು ಸಲ್ಟು ಹಾಕತವಂತೇ ಇನ್ನೂ ನಮ್ಮ ಕಾಡು ಮೋಯಿನಿ ಲಂಗ ದಾವಣಿ ಹಾಕಬಾರದ" ಎಂದು ಮರು ಪ್ರೆಶ್ನೆ ಹಾಕಿದ.
ಏಯ್ ಕುಂಡ ಅದೇನ್ ನೋಡಿದೋ ತೋರ್ಸು" ಎಂದು ಚಾಮಯ್ಯ ಗದರಿದ.
"ಸರಿ" ಎಂದು ಎಲ್ರೂ ಮಾಸ್ತಮ್ಮನ ಗುಡಿ ಹತ್ತಿರ ಹೋದರು.

ಗುಡಿ ಮುಂದೆ ಇರೋ ಪಂಜು ಉರಿತಿದೆ ಆದ್ರೆ ಕುರಿ ಕಾಣ್ತ ಇಲ್ಲ.
"ಎಷ್ಟೇ ತಡಕಾಡಿದರು ಬರೀ ರಕ್ತದ ಕಲೆ, ಕಲೆಯನ್ನೇ ಹುಡುಕುತ್ತಾ ಹೋದರೆ ನರಿ ಬಂಡೆಯನ್ನು ದಾಟಿ ಹೋಗಿತ್ತು.
"ನಾನ್ ಯೇಳಿಲ್ವ ಅದೇ ಮೋಯಿನಿ ರಕ್ತ ಕುಡಿದು ಕುರಿ ಎತ್ತಿಕೊಂಡು ಹೋಗೀರದು" ಎಂದನು.
ಮಧ್ಯರಾತ್ರಿ ಚಳಿಯಲ್ಲೇ ಎಲ್ರೂ ಬೆವತಿ ಬೆರಗಾದರು.

ಹಳ್ಳೀಲಿ ಇರೋದೇ 80-90 ಜನ ಅವ್ರನ್ನು ಈ ಮೋಯಿನಿ ಹಿಂಗೇ ಬಡಿದು ಹಾಕ್ತೀದ್ರೇ ಎಂಗೆ ಬದ್ಕೋದೂ ಈ ಕಾಡಲ್ಲಿ ಎಂದು ಎಲ್ರೂ ಯೋಚನಾ ಮಗ್ನರಾದರು.

ಮಳೆಗೆ ದಯ್ಯಾ ಹಿದಡಿದವರಂತೇ ಒಂದೇ ಸಮನೇ ಧೋ ಎಂದು ಸುರೀತ್ತಿತ್ತು.
ಒಂದು ಹಗಲು ಒಂದು ರಾತ್ರಿ ಕಳೆದ ಮೇಲೆ ಮಳೆ ಕಮ್ಮಿಯಾಯಿತು.
ಆದರೆ ಸುಬ್ಬಣ್ಣ ತಲೇಲಿ ಒಂದು ವಿಚಾರ ಬೀಡು ಬಿಟ್ಟಿತ್ತು.
ಅವತ್ತು ಚಿಕ್ಕ ಮೋಯಿನಿ ನೋಡಿದೆ ಎಂದ ದಿನ ತನ್ನ ಮಗಳು ಬೆಳ್ಳಿ ಹಿತ್ತಲ್ಲಿಂದ ಓಡಿ ಬಂದಳು, ಏನಾಯ್ತು ಅಂದಿದಕ್ಕೇ "ವಂದಕ್ಕೇ ಹೋಗಿದ್ದೆ ಹಾವು ನೋಡಿ ಗಾಬ್ರಿ ಆಗಿ ಓಡಿ ಬಂದೆ" ಎಂದಳು.
ಅವತ್ತು ಇವ್ಳು ಲಂಗ ದಾವಣಿ ಹಾಕಿದ್ಲು.
ಯಾವ್ದಕ್ಕೂ ಒಂದು ಕಣ್ಣು ಇಡಬೇಕು ಇವ್ಳ ಮಾಲ್ಯೇ ಅಂದುಕೊಂಡು ಸಮಯಕ್ಕೇ ಕಾದರು.

ಹುಣ್ಣಿಮೆ ಬೆಳದಿಂಗಳ ರಾತ್ರಿ...
ಬೆಳ್ಳಿ ಮತ್ತೆಗೆ ಎದ್ದು ಹಿತ್ತಲ ಕದ ತೆಗಿದಾಗ, ಸುಬ್ಬಣ್ಣನಿಗೆ ಎಚ್ಚರವಾಯ್ತು.
ಸೀಮೆಣ್ಣೆ ದೀಪ ಹಿಡಿದು ಹಿಂಬಾಲಿಸುತ್ತಾ ಬಂದ ಸುಬ್ಬಣ್ಣ, ಜಡಿ ತುಂತುರು ಮಳೆಗೆ ದೀಪ ಹಾರಿ ಹೋಯ್ತು.
ಮಬ್ಬುಗತ್ತಲ್ಲಲು ಸುಮಾರಾಗಿ ಕಾಣ್ತಿತ್ತು.
ಮರಗಳ ನಡುವೆ ನರಿ ಬಂಡೆಯ ಮರೆಯಲ್ಲಿ ಮಗಳು ಚೂರು ಮರೆಯಾದಳು.
ಚಿಟಾರನೆ ಮಗಳು ಕಿರುಚಿದ ಸದ್ದಾಯ್ತು.
ಸುಬ್ಬಣ್ಣ ಇಪ್ಪತ್ತು ಹೆಜ್ಜೆಯನ್ನು ಒಂದೇ ಉಸುರಿಗೆ ಹಾಕಿದ.
ಬಂಡೆ ಸುತ್ತ ಓಡಿ ಹೋಗಿ ನೋಡಿದ ಯಾರು ಇಲ್ಲ, ಚೂರಾದ ಬಳೆಗಳು, ರಕ್ತದ ಕಲೆ ಅಷ್ಟೇ.
ಸುತ್ತಾಮುತ್ತ ತಡಕಾಡಿದರು ಪತ್ತೆಯಿಲ್ಲ.

ಜನಗಳನ್ನು ಎಚ್ಚರಿಸಿ ಹುಡುಕಾಡಿದ ಸಿಗಲಿಲ್ಲ.
ಮಳೆ ನಿಂತಿತ್ತು.
ಆ ಕಡೇಯಿಂದ ಚಿಕ್ಕ ಪಂಜು ಹಿಡಿದುಕೊಂಡು ಜನರತ್ತ ಬಂದನು.
"ನನ್ನ ಮಗಳಿಗೆ ಏನು ಮಾಡಿದೋ" ಎಂದು ಸುಬ್ಬಣ್ಣ ಚಿಕ್ಕನನ್ನು ಹಿಡಿದು ಜಗ್ಗಾಡಿದ.
"ನಂಗೇನ್ ಗೊತ್ತಿಲ್ಲ, ಯಾರೋ ಕಿರುಚಿದ ಸದ್ದಾಯ್ತು ಅದಕ್ಕೆ ಪಂಜು ತಕ್ಕಂಡು ಮೋಯಿನಿ ಇರ್ಬೇಕು ಅಂತ ಹುಡುಕಲು ಬಂದೆ" ಎಂದ.
ಚಿಕ್ಕ ಏನೇ ಹೇಳಿದರೂ ಕೇಳಲು ಸುಬ್ಬಣ್ಣ ಸಿದ್ಧನಿರಲಿಲ್ಲ.
ಬೆಳಿಗ್ಗೆ ತಡಕಾಡಿದ ಮೇಲೆ ಅರ್ಧ ಮೈಲಿ ಗುಡ್ಡದ ಮೇಲೆ ನಡೆದರೆ ಸಿಗುವ ಕೊರಕಲು ಹತ್ತಿರ ಬೆಳ್ಳಿಯ ದೇಹ ಅರೆ ಬೆತ್ತಲಾಗಿ ರಕ್ತ-ಸಿಕ್ತವಾಗಿ ಸಿಕ್ತು.
ಚಿಕ್ಕನೇ ನನ್ನ ಮಗಳನ್ನು ಮಾನಭಂಗ ಮಾಡಿ ಅವ್ಳ ಎದೆಯ ಮೇಲೆ ಕಲ್ಲು ಎತ್ತು ಹಾಕಿದ್ದಾನೆ ಎಂದು ಆಪಾದನೆ ಮಾಡಿದ.

ಊರಿನ ಮುಖಂಡರೇಲ್ಲಾ ಪಂಚಾಯ್ತಿ ಸೇರಿ ಚಿಕ್ಕನಿಗೆ ವಿಷ ಪೂರಿತ ಬಾಣಗಳನ್ನು ಬಿಟ್ಟು ಸಾಯಿಸಬೇಕು ಎಂದು ತೀರ್ಮಾನ ತೆಗದುಕೊಂಡರು.
ಚಿಕ್ಕನ ಅಪ್ಪ ಎಷ್ಟೇ ಕೇಳಿಕೊಂಡರು ಬಿಡಲಿಲ್ಲ.
"ಇವತ್ತು ಸಂಜೆ ಚಿಕ್ಕನಿಗೆ ಮಾಸ್ತಮ್ಮನ ಗುಡಿ ಹತ್ತಿರ ಸಿಕ್ಷೆ ಕೊಡ್ತಾರೆ" ಎಂದು ಬೀರ ತಮಟೆ ಸಾರಿದ.

ಸಂಜೆ ಅಷ್ಟರಲ್ಲಿ ಹಳ್ಳಿಯ ಜನ ಎಲ್ರೂ ಸೇರಿದರು.
ದೇವಿಗೆ ಪೂಜೆ ಮಾಡಿ ಇನ್ನೇನು ಚಿಕ್ಕನಿಗೆ ಬಾಣ ಬಿಡಬೇಕು ಅನ್ನುವಷ್ಟರಲ್ಲೀ ಭೈರ ಬಂದ..
"ಸಾಯಿಸ್ಬೇಡಿ ಅವ್ನ ಬುಟ್ಟು ಬುಡಿ" ಎಂದು ಕುತ್ತಾ ಬಂದನು.
"ನಿನ್ ಯಾಕ್ಲಾ ಬಂದೆ, ಮೈ ಮೇಲೆ ಹಾವು ಸತ್ತೋನಂಗೆ ಮನಿಕಂಡಿದ್ದೆ" ಎಂದು ಭೈರನ ಅಪ್ಪ ಚಾಮಯ್ಯ ಹೇಳಿದಕ್ಕೆ.
"ಚಿಕ್ಕನ ತಪ್ಪೇನು ಇಲ್ಲ ಅವ್ನ ಬುಟ್ಟು ಬುಡಿ, ನಾನ್ ಯೇಳ್ತಿನೀ ಯೆಲ್ಲಾ" ಅಂದನು.
"ಅದೇನು ಬೊಗ್ಳು ಬಡ್ಡಿಹೈದ್ನೇ" ಎಂದು ಚಾಮಯ್ಯ ಗುಡುಗಿದ.
"ನಾನು ಮತ್ತೆ ಬೆಳ್ಳಿ ಲಗ್ನ ಮಾಡ್ಕಬೇಕು ಅಂದುಕೊಂಡಿದ್ದೋ, ಹುಣ್ಣಿಮೆ ದಿನ ನಾವು ಯಾವಗ್ಲೂ ಸೇರ್ತೀದ್ದೋ ನರಿ ಬಂಡೆ ತವ, ರಾತ್ರಿಯೂ ನನ್ನ ನೋಡೋಕೆ ಬೆಳ್ಳಿ ಬಂದು ನರಿ ಬಂಡೆತವು ನಿಂತಿದ್ಲು, ನಾನ್ ಹೋಗೋದು ಒಂಚೂರು ತಡ ಆಯ್ತು, ನಾನ್ ಹೋಗಬೇಕಾದ್ರೆ ಒಂದು ಪಟ್ಟೆ ಹುಲಿ ಬೆಳ್ಳಿ ಎದೆ ಮೇಲೆ ಒಂದು ಪಂಜ ವಡಿತು, ಅದು ವಡಿದ ರಭಸಕ್ಕೇ ಬೆಳ್ಳಿ ಅಲ್ಲೇ ಬಿದ್ದು ಹೋದ್ಲು. ಆಮೇಲೆ ಆ ಪಟ್ಟೆ ಹುಲಿ ಅವಳ್ನ ಬಾಯಲ್ಲೀ ಕಚ್ಚಿಕೊಂಡು ಗುಡ್ಡದ ಮೇಲೆ ಎತ್ತಿಕೊಂಡು ಹೋಯ್ತು. ಇದನ್ನ ನೋಡಿ ನಂಗೆ ಭಯ ಆಗಿ ಅಲ್ಲೇ ಪಂಚೇಲೇ ವಂದ ಮಾಡ್ಕಬಿಟ್ಟೆ, ಓಡಿ ಬಂದು ಗುಡಿಸಲಲ್ಲಿ ಮನಿಕಂಡಿದ್ದೇ, ಇವಾಗ ಕರಿಯ ಹೇಳ್ದ ಚಿಕ್ಕನ ಸಾಯ್ಸ್ತಾವರೇ ಅಂತ ಅದಕ್ಕೆ ಓಡೋಡಿ ಬಂದೆ" ಎಂದು ಒಂದೇ ಉಸುರಿನಲ್ಲಿ ಹೇಳಿದ.

ಭೈರನ ಮಾತು ಕೇಳಿ ಅಲ್ಲಿ ಇರೋರಿಗೆಲ್ಲಾ ಗುಂಡುಕಾಯಿ ಬಾಯಿಗೆ ಬಂದಂಗೆ ಆಯ್ತು.
ಇಷ್ಟು ದಿನ ಜನ ಸಾಯ್ತೀದ್ದು ಮೋಯಿನಿ ಕಾಟದಿಂದಲ್ಲ ಈ ಪಟ್ಟೆ ಹುಲಿಯಿಂದ ಎಂದು ಎಲ್ಲ್ರಿಗೂ ಅನಿಸಿತು.
ಕುರಿ ತಿಂದಿದ್ದು ಇದೆ ಇರ್ಬೇಕು ಎಂದು ಎಲ್ಲ್ರೂ ಊಹಿಸಿದರು.

"ಹಾಳಾದ್ದು ಮೋಯಿನಿ ಅನ್ಕಂಡು ಬೆಳ್ಳಿನ ಬುಟ್ಟು ಬುಟ್ನಲ್ಲ, ಗೊತ್ತಿದ್ರೆ ನಾನು ಒಂದು ಕೈ ನೋಡ್ಕೋಬೋದೀತ್ತು" ಅಂತ ಚಿಕ್ಕ ಮನಸಲ್ಲೇ ಅಂದುಕೊಂಡ.
ಅಂತೂ ಚಿಕ್ಕನಿಗೆ ಸಾವಿನಿಂದ ಬಿಡುಗಡೆಯಾಯ್ತು.
ಈಗ ಊರೋರೆಲ್ಲಾ ಸೇರಿ ಆ ಪಟ್ಟೆ ಹುಲಿ ಹೊಡೀಬೇಕು ಎಂದು ತೀರ್ಮಾನಿಸಿದರು.
ಚಿಕ್ಕ ಅಂತೂ "ಇದೆ ಈಸದ ಬಾಣದಿಂದ ನಾನೇ ಅದರ ಬಲಿ ಹಾಕ್ತೀನಿ" ಅಂತ ಪಣ ತೊಟ್ಟನು.

"ಹುಲಿ ಹೊಟ್ಟೆ ತುಂಬದೆ, ಇನ್ನೂ ಎಲ್ಡು ದಿಸ ಅದು ಇತ್ಲಾಗೆ ಬರಾಕಿಲ್ಲ, ಮೂರನೇ ದಿಸ ಬತ್ತದೆ ಆವಾಗ ಒಂದು ಕುರಿನೋ, ಕರನೋ ಕಟ್ಟಿ ಅಳ್ಳ ತೋಡಿ ಸಾಯ್ಸೀ" ಎಂದು ಮುತ್ತಜ್ಜ ಉಪಾಯ ಹೇಳಿದ.
ಇದು ಎಲ್ಲ್ರಿಗೂ ಸರಿ ಅನಿಸ್ತು.
ಎಲ್ರೂ ಸೇರಿ ಮಾಸ್ತಮ್ಮನ ಗುಡಿ ಮುಂದೆ ಹನ್ನೇಲ್ಡು ಅಡಿ ಖೆಡ್ಡಾ ತೋಡಿ ಅದರ ಮೇಲೆ ಸೊಪ್ಪು ಗಿಪ್ಪು ಎಲ್ಲಾ ಹಾಕಿ ಮುಚ್ಚಿ ಪಕ್ಕದಲ್ಲೇ ಒಂದು ಕರುವನ್ನು ಕಟ್ಟಿದರು.

ಮೂರನೇ ದಿನ ಬಂದು ನೋಡುತ್ತಾರೆ. ಕರು ಇಲ್ಲ ಎಂಥಾ ಹುಲಿ ಇರ್ಬೇಕು ಎಂದು ಖೆಡ್ಡಾ ನೋಡುತ್ತಾರೆ.
ಬಾಯೆಲ್ಲಾ ರಕ್ತವಾದ ಪಟ್ಟೆ ಹುಲಿ ಘರ್ಜಿಸುತ್ತಿದೆ.
ಅದರ ಒಂದು ಘರ್ಜನೆಗೆ ಮಾರುದ್ದ ಓಡಿ ಹೋದರು.
ಹುಲಿ ಬರುವಾಗ ಆ ಕಡೇಯಿಂದ ಬಂದು ಕರುವನ್ನು ಹಿಡಿದುಕೊಂಡು ಹೋಗುವಾಗ ಖೆಡ್ಡಾಕ್ಕೇ ಬಿದ್ದಿದೆ ಎಂದು ಊಹಿಸಿದರು.
ಎಲ್ಲಾ ಜನಗಳು ಸೇರಿಕೊಂಡು ಕಲ್ಲು, ಬಾಣ ಎಸೆದರು.
ಹುಲಿ ಬಿಟ್ಟರೇ ಎಲ್ಲಾರನ್ನೂ ಸಾಯಿಸುವ ರೀತಿ ಘರ್ಜಿಸುತ್ತಿತ್ತು.
"ನನ್ನ ಮಗಳನ್ನು ತಿಂದು ಹಾಕಿದ ರಾಕ್ಷಸ" ಅಂತ ಸುಬ್ಬಣ್ಣ ಕಲ್ಲು ಎತ್ತಿ ಹಾಕಿದ. ದಢೂತಿ ಕಲ್ಲು ಬಾಲವನ್ನು ಸವರಿಕೊಂಡು ಪಕ್ಕಕ್ಕೆ ಬಿತ್ತು.

ಚಿಕ್ಕನ ಎರಡರಷ್ಟಿದ್ದ ಹುಲಿಯನ್ನು ಸಾಯಿಸಲು ಗುಡಿಸಲಿನಲ್ಲಿ ಬಿದ್ದಿದ್ದ ಹಲಗೆಯನ್ನು ತಂದು ಎಸೆದ. ಅದು ಖೆಡ್ಡಾದಲ್ಲಿ ಓರೆಯಾಗಿ ನಿಂತಿತ್ತು. ಹುಲಿ ಇದರ ಮೇಲೆ ಒಂದೇ ಸಲಕ್ಕೇ ಹಾರಿ ಮುಂಗಾಲನ್ನು ಹಲಗೆ ಮೇಲಿಟ್ಟ, ಇನ್ನೊಂದು ಜಿಗಿತಕ್ಕೆ ಮೇಲೆ ಬಂದು ಓಡಲು ಶುರು ಮಾಡಿತು.
ಜನ ದಿಕ್ಕಾ ಪಾಲಾಗಿ ಓಡಿದರು.
ಕಲ್ಲು ಎತ್ತಿಕೊಳ್ಳಲು ಬಗ್ಗಿದ ಚಿಕ್ಕನ ಕುಂಡಿಗೆ ಆಕಸ್ಮಿಕವಾಗಿ ತಾಗಿದ ಹುಲಿಯ ಮುಂಗೈ ಅವನ ಕುಂಡಿ ಮೇಲೆ ತ್ರಿಶೂಲದಿಂದ ತಿವಿದಂತೆ ಗಾಯ ಮಾಡಿತ್ತು.
ಏಟು ತಿಂದ ಪಟ್ಟೆ ಹುಲಿ ಗುಡ್ಡದ ಮ್ಯಾಲೆ ಓಡಿ ಹೋಯ್ತು.
ಹದಿನೈದು ದಿನಗಳ ನಂತರ ಚಿಕ್ಕ ಸುಧಾರಿಸಿಕೊಂಡ.
"ಪಟ್ಟೆ ಹುಲಿ ತನ್ನ ಗುರುತು ಇಟ್ಟುಕೊಂಡಿದೆ ಒಂದಲ್ಲಾ ಒಂದು ದಿನ ಬಂದು ನನ್ನ ಸಾಯ್ಸುತ್ತೆ" ಅಂತ ಈಗಲೂ ಪೇಚಾಡುತ್ತಿರುತ್ತಾನೆ.

ಅದೇ ಕೊನೇ ಮತ್ತೆ ಪಟ್ಟೆ ಹುಲಿ ಕಾಣಲಿಲ್ಲ. 
ಆದರೆ ಧೋ ಎಂದು ಮಳೆ ಸುರಿದರೆ "ಬಾಳೆಲೆ" ಕಾಡಿನವರಿಗೆ ಈಗ್ಲೂ ಪಟ್ಟೆ ಹುಲಿ ಬಂದು ಯಾರ್ನಾದ್ರೂ ಎತ್ತಿಕೊಂಡು ಹೋಗಬಹುದು ಎಂಬ ಭಯದಿಂದ ಗುಡಿಸಲಿನ ಆಚೆಯೇ ಬರುವುದಿಲ್ಲ.

                                             *****
10/07/2016
©ಮಹೇಶ್.ಆರ್ 
amaheshr@gmail.com

Comments

Popular Posts