ಅಟೆಂಡರ್ ರಾಮಯ್ಯ
ರಾಮಯ್ಯ ಗ್ರಂಥಾಲಯದ ಬಾಗಿಲು ಹಾಕಿದಾಗ ಚಂದ್ರ ನೆತ್ತಿ ಮೇಲಿದ್ದ. ಹುಣ್ಣುಮೆಯ ರಾತ್ರಿ ಆಗಿದ್ದರಿಂದ ರಸ್ತೆ ಮೇಲೆಲ್ಲಾ ಚಂದ್ರನ ಬೆಳಂದಿಗಳು ಸೂಸುತ್ತಿತ್ತು. ಗ್ರಂಥಾಲಯದಿಂದ ಹಳೆ ಸೈಕಲ್ ಹತ್ತಿ ಹೊರಟ ರಾಮಯ್ಯನ ಮನಸ್ಸಿನಲ್ಲಿ ಬೆಳಗ್ಗಿನಿಂದ ಆ ಒಂದು ಘಟನೆ ಪದೇಪದೇ ಘಾಸಿಗೊಳಿಸುತ್ತಿತ್ತು.
ಬೆಳಗ್ಗೆ ಎಂಟಕ್ಕೆ ಬಂದು ಗ್ರಂಥಾಲಯದ ಬಾಗಿಲು ತೆಗೆದು, ಮುಂದುಗಡೆ ಇರುವ "ಗಣಪತಿಯ" ಫೋಟೋಗೆ ಎರಡು ಗಂಧದ ಕಡ್ಡಿ ಹಚ್ಚಿ ಅವತ್ತಿನ ಕೆಲಸ ಶುರು ಮಾಡುವನು. ಹಿಂದಿನ ದಿನ ಸಾರ್ವಜನಿಕರು ಕದಡಿದ ಪುಸ್ತಕಗಳನ್ನು ಅದದೇ ಕಪಾಟಿಗೆ ಎತ್ತಿ ಇಡುವುದು, ಹೊಸ ಪುಸ್ತಕಗಳನ್ನು ಜೋಡಿಸುವುದು ರಾಮಯ್ಯನ ಕೆಲಸವಾಗಿತ್ತು ಶಾಂತ ಸ್ವಭಾವದ ರಾಮಯ್ಯ ಬದುಕಿನ ಹತಾಶೆಗೆ, ಯಾಂತ್ರಿಕ ಜೀವನಕ್ಕೆ ರೇಗು ಹತ್ತಿ ಕೆಲವೊಮ್ಮೆ ತನ್ನ ಮುಂದಿರುವವರು ಯಾರು ಎತ್ತ ಅಂತ ನೋಡದೆ ಎಗರಾಡಿ ಬಿಡುವ ಆಸಾಮಿ. ಸ್ವಲ್ಪ ಹೊತ್ತು ಕಳೆದ ನಂತರವೋ ಅಥವಾ ನಾನು ಮಾಡಿದ್ದು ತಪ್ಪು ಅನಿಸಿದರೆ ಕ್ಷಮೆಯನ್ನು ಕೇಳಿಯೋ, ಇಲ್ಲ ಎದುರಿನ ಪೆಟ್ಟಿ ಅಂಗಡಿಯಲ್ಲಿ ಒಂದು ಅರ್ಧ ಲೋಟ ಕಾಫೀ ಕೊಡಿಸಿಯೋ ಸರಿ ಮಾಡಿಕೊಳ್ಳುತ್ತಿದ್ದ. ಹಲವು ಬಾರಿ ತನ್ನದಲ್ಲದ ಕೆಲಸವನ್ನು ಮಾಡಿ ಜನರಿಗೆ ಕರ್ಣನಂತೆ ಕಾಣುತ್ತಿದ್ದ. ಕೆಲವು ಸಲ ಅವನ ಕೆಲಸವನ್ನೂ ಸಹ ಮಾಡದೆ ದುರ್ಯೋಧನ ರೀತಿ ವರ್ತಿಸುತ್ತಿದ್ದ. ಇಂಥಾ.. ರಾಮಯ್ಯನಿಗೆ ಸುಖಾಸುಮ್ಮನೆ ಸಾಲ ಮಾಡುವ ಚಾಳಿ. ವಿನಾಕಾರಣ ಖರ್ಚು, ದುಂದು ವೆಚ್ಚ, ಹೀಗೇ ಕಾರಣವಿಲ್ಲದೆ ವೃಥಾ ಹಣ ವ್ಯಯಿಸುವುದು. ಇದರಿಂದಲೇ ಊರಿನ ತುಂಬ ಸಾಲ ಮಾಡಿಕೊಂಡಿದ್ದನು. ಬರುವ ಮೂರು ಕಾಸಿಗೆ ಆರು ಕಾಸಿನ ಸಾಲ ಮಾಡಿದ್ದ. ಹೀಗಾಗಿ ಗ್ರಂಥಾಲಯದ ಮುಂದೆ ಒಂದಷ್ಟು ಜನ ಬಂದು ಹಣ ವಾಪಸ್ಸು ಕೇಳುವುದು. ಹಿರಿಯ ಅಧಿಕಾರಿಗಳಿಗೆ ದೂರು ನೀಡುವುದು ಇತ್ಯಾದಿ ನಡೆಯುತ್ತಿತ್ತು. ಇದ್ದೊಬ್ಬ ಮಗಳನ್ನು ಮದುವೆ ಮಾಡಿ ಒಂದು ದಡ ಸೇರಿಸಿದ್ದಾನೆ. ಮಗಳ ಓದು, ಮದುವೆ, ಬಾಣಂತನ ಎಲ್ಲವನ್ನೂ ತಾನೇ ನಿಭಾಯಿಸಿದ್ದನು. ದುಡ್ಡು ಇದ್ದಾಗ ಸಾಲಗಾರರ ನೆನಪೆ ಆಗುವುದಿಲ್ಲ. ಸಾಲಗಾರರು ಬಂದಾಗ "ಸಂಬಳ" ಬಂದ ತಕ್ಷಣವೇ ಅವರಿಗೆ ಮೊದಲು ಕೊಡಬೇಕೆಂದು ಎಷ್ಟೇ ಧೃಡ ನಿರ್ಧಾರದಿಂದ ತೀರ್ಮಾನಿಸಿದ್ದರೂ ಒಂದು ರೂಪಾಯಿಯನ್ನು ಸಲ್ಲಿಸುತ್ತಿರಲಿಲ್ಲ.
ಇಂದು ಬೆಳಗ್ಗೆ ಆಗಿದ್ದು ಅದೇ... ರಂಗಮ್ಮನೆಂಬ ಬಜಾರಿ ಹತ್ತಿರ ಸುಮಾರು ನಲ್ವತ್ತು ಸಾವಿರ ಸಾಲವನ್ನು ಪಡೆದು ಅಸಲು ಬಡ್ಡಿಗೂ ಎಳ್ಳು ನೀರು ಬಿಡುತ್ತಿದ್ದನು. ಇದರಿಂದ ರೋಸತ್ತಿ ಹೋದ ರಂಗಮ್ಮ ಬೆಳ್ಳಂ ಬೆಳಗ್ಗೆ ಗ್ರಂಥಾಲಯಕ್ಕೆ ಶನಿಯಂತೆ ವಕ್ಕರಿಸಿ, "ದುಡ್ಡು ಮಡುಗೋ ಬೋಳಿ ಮಗ್ನೇ" ಅಂದಳು. ಅವಳ ಬಾಯಿಗೆ ಅಂಜಿದ ರಾಮಯ್ಯ, "ಅಕ್ಕ ಈ ಸಲ ಸಂಬ್ಳ ಆಗ್ತಿದ್ದಂಗೆ ತಲುಪಿಸ್ತೀನಿ" ಎಂದು ಮೆಲ್ಲಗೆ ಉಸುರಿದನು. "ಏನ್ ತಲುಪ್ಸೋದು ನನ್ ಸೆಪ್ಪವಾ" ಎಂದು ಹೀನಾಯ ಬೈಗುಳದಿ ನಿಂದಿಸಿದಳು. ಈ ಮಾತನ್ನು ಕೇಳುತ್ತಿದ್ದಂತೆ ರಾಮಯ್ಯ ಅವಮಾನಿತನಾಗಿ ಕೊಂಚ ಕೋಪದಿಂದ ಹಾಗೂ ಹುಂಬತನದಿಂದ "ಕೊಡ್ತೀನಿ ಬಿಡ್ರೀ.. ಇಲ್ದೇ ಇರೋ ಮಾತೆಲ್ಲಾ ಬೇಡ" ಎಂದು ಹಲ್ಲು ಕಡಿದನು. ರಂಗಮ್ಮನಿಗೆ ಕೋಪ ಎಲ್ಲಿತ್ತೋ ಗೊತ್ತಿಲ್ಲ. ಕಾಲಲ್ಲಿ ಮೆಟ್ಟಿದ ರಬ್ಬರ್ ಜೋಡಿನಿಂದ ಎರ್ರಾಬಿರ್ರೀ ಬಾರಿಸಿದಳು.. ಈ ಆಘಾತದಿಂದ ಹೊರ ಬರಲಾರದೇ ರಾಮಯ್ಯ, " ಅಕ್ಕ ಕೊಡ್ತೀನೀ.. ಬೇಡಕ್ಕ" ಎಂದು ಕೈ ಕೈ ಮುಗಿದು ಗೋಗರೆಯುತ್ತಿದ್ದನು. ರಂಗಮ್ಮ ಕರುಣೆಯಿಲ್ಲದಂತೆ ಇನ್ನೂ ನಾಲ್ಕು ಹೊಡೆದಳು. ಆಮೇಲೆ ಅಲ್ಲೇ ಇದ್ದ ಹಿರಿಯ ಅಧಿಕಾರಿಗಳಿಬ್ಬರು ಬಂದು, " ಹೋಗ್ಲಿ ಬಿಡು ರಂಗಮ್ಮ ಈ ಸಲ ಸಂಬ್ಳ ಆದಾಗ ಕೊಡ್ತೀನಿ ಅಂದೋನಲ್ಲ. ಕೊಡ್ಲಿಲ್ಲ ಅಂದ್ರೆ ಮಾತಾಡು" ಎಂದು ಸಮಾಧಾನಿಸಲು ಯತ್ನಿಸಿದರು. ರಂಗಮ್ಮನಿಗೆ ಏನನಿಸಿತೋ ಏನೋ, "ನಿನ್ ಜನ್ಮಕ್ಕೆ ಬೆಂಕಿ ಹಾಕ. ನನ್ನಂಥ ಹೆಂಗ್ಸಿನ ಕೈಲಿ ಹೊಡಿಸ್ಕೋಂಡ ಮೇಲು ದುಡ್ಡು ಕೊಡ್ಲಿಲ್ಲ ಅಂದ್ರೆ ನೀನು ಬದ್ಕಿದ್ದು ಸತ್ತಂಗೆ " ಎಂದು ಮುಖಕ್ಕೆ ಉಗಿದು ಕೈಲಿದ್ದ ಕಿತ್ತು ಹೋದ ಚಪ್ಪಲಿಯನ್ನು ಅವನ ಮೇಲೆ ಎಸೆದು ಇನ್ನೊಂದು ಚಪ್ಪಲಿಯನ್ನು ಅಲ್ಲೇ ಬಿಡುತ್ತಾ, " ನಿಂಗ್ ಹೊಡ್ದಿರೋ ಚಪ್ಲಿ ಮೆಟ್ಕೋಂಡ್ರು ಪಾಪ ಬತ್ತದೆ " ಅಂದು ಬರೀ ಕಾಲಿನಲ್ಲಿ ಬಿರ ಬಿರನೇ ಮೆಟ್ಟಲಿಳಿದು ರಸ್ತೆ ಬದಿಯಲ್ಲಿ ನಿಂತಿದ್ದ ಆಟೋ ಹತ್ತಿ ಹೊರಟೇ ಬಿಟ್ಟಳು.
ಸ್ತಬ್ಧ... ಹೆಚ್ಚು ಕಡಿಮೆ ರಾಮಯ್ಯ ಈ ಅವಮಾನದಿಂದ ಹೊರ ಬರಲಾರದೆ ಮೂಕ ಪ್ರೇಕ್ಷಕನಂತೆ ಒಂದು ಮೂಲೆಯಲ್ಲಿ ಕೂತಲ್ಲಿ ಕೂತುಬಿಟ್ಟ. ಒಂದಿಬ್ಬರು "ಬಿಡು ರಾಮಯ್ಯ. ತಲೆ ಕೆಡಿಸ್ಕೋಬೇಡ ಅವಳು ಎಂಥಾ ಚಂಗುಲಿ ಮುಂಡೆ ಅಂತ ಊರಿಗೆ ಗೊತ್ತು. ನಂಗೂ ಒಂದ್ ಸಲಿ ಕತ್ತಿನ ಪಟ್ಟಿ ಇಟ್ಕೋಂಡಿದ್ಲು" ಎಂದು ಹೇಳಿದರೂ ತೆಪ್ಪಗೆ ಕೂತಿದ್ದ ರಾಮಯ್ಯ. ಕಸ ಗುಡಿಸುವ ತಿಮ್ಮಕ್ಕ ಬಂದು, "ರಾಮಣ್ಣ ಬೇಜಾರು ಮಾಡ್ಕಬೇಡ. ಅವ್ಳು ವಡುದ್ರೆ ಅವಳಿಗೂ ವಡಿಯೋ ಪುಣಾತ್ಮ ಒಬ್ಬ ಉಟ್ಟೇ ಇರ್ತಾನೆ" ಎಂದು ಸಮಾಧಾನದ ಮಾತುಗಳನ್ನು ಹೇಳುತ್ತಿದ್ದಂತೆ ರಾಮಯ್ಯನಿಗೆ ಬಿಕ್ಕಳಿಕೆ ಸಮೇತವಾಗಿ ಅಳು ಬಂತು. ಎಳೆಯ ಮಗುವಿನಂತೆ ಕೆಮ್ಮುತ್ತಾ, ಬಿಕ್ಕಳಿಸುತ್ತಾ, ಅಳುತ್ತಾ "ನಾನೇನು ಅವ್ರ ದುಡ್ಡು ತಿಂದುಕೊಂಡು ಬಿಡ್ತಿದ್ನ ತಿಮ್ಮಕ್ಕ. ಮನೆಗೆ ಮಗ್ಳು, ಅಳಿಯ, ಮೊಮ್ಮಕ್ಕಳು ಎಲ್ಲಾ ಬಂದಿದ್ರು, ಕಾಸೆಲ್ಲಾ ಖರ್ಚಾಗೋಯ್ತು. ಇಟ್ಕೋಂಡು ಕೊಡೋಕೆ ನಂಗೇನು ರೋಗ" ಎಂದು ಕಣ್ಣೋರಿಸಿಕೊಂಡನು. "ಹೋಗ್ಲಿ ಬಿಡು. ಸಮಾದಾನ ಮಾಡ್ಕೋ" ಎಂದು ಕಸ ಗುಡಿಸಲು ತಿಮ್ಮಕ್ಕ ಹೋದಳು. ರಾಮಯ್ಯ ಕೆಲವು ಗಂಟೆಗಳು ಹಾಗೇ ಕೂತು ನಂತರ ಮೊದಲಿನಂತಾಗಲು ಪ್ರಯತ್ನಿಸಿದ. ಆದರೂ ಎಲ್ಲರ ಮುಂದೆ ಆದ ಅವಮಾನ ಪದೇ ಪದೇ ಮುಖಕ್ಕೆ ನೀರು ರಾಚಿದಂತೆ ಆಗುತ್ತಿತ್ತು. ಬಿಟ್ಟು ಬಿಡದೇ ಕಾಡುತ್ತಿತ್ತು.. ಇದಕ್ಕೆ ಏನಾದರೂ ಮಾಡಬೇಕು. ನನ್ನ ಪ್ರತೀಕಾರವನ್ನೂ ತೀರಿಸಿಕೋಬೇಕು ಎಂದು ಅಚಲವಾಗಿ ನಿರ್ಧರಿಸಿದನು.
ಧಡಕ್ಕೆಂದು ರೋಡಿನ ಹಂಪಿನ ಮೇಲೆ ಸೈಕಲ್ ಬಿಟ್ಟ ರಾಮಯ್ಯ ಎಚ್ಚೆತ್ತು ಹುಷಾರಾಗಿ ರಸ್ತೆಯನ್ನೇ ದಿಟ್ಟಿಸುತ್ತಾ ಸೈಕಲನ್ನು ತುಳಿಯುತ್ತಾ ಕತ್ತಲನ್ನು ಹಿಂದು ಹಾಕುತ್ತ ಹೊಸ ಬೆಳಕನ್ನು ಅರಸುತ್ತಾ ಹೊರಟನು.
ಊಟದ ನಂತರ ಹಾಸಿಗೆಯ ಮೇಲೆ ಮಂಕಾಗಿದ್ದ ರಾಮಯ್ಯನನ್ನು ಹೆಂಡತಿ ಸುಶೀಲ, " ಏನಾಯ್ತುರೀ.. ಗರ ಬಡಿದವರಂಗೆ ಇದ್ದೀರಿ" ಎಂದು ವಿಚಾರಿಸಿದಳು. ತಿರುಗುತ್ತಿರುವ ಫ್ಯಾನನ್ನು ನೋಡುತ್ತ ಮಲಗಿದ್ದ ರಾಮಯ್ಯ ಹೆಂಡತಿಗೆ ಮುಖ ಕೊಟ್ಟು ಮಾತಾಡಲು ಆಗದೆ ಮಗ್ಗಲು ಬದಲಿಸಿದ. ಏನೋ ಅವಘಡ ಸಂಭವಿಸಿರಬೇಕು ಅಂದುಕೊಂಡ ಪತ್ನಿ, " ಹೇಳ್ರೀ ತಲೆ ಹೋಗುವಂಥದ್ದು ಏನಾಗಿದೆ ?" ಎಂದು ಗಂಡನನ್ನು ಮತ್ತೊಮ್ಮೆ ಪ್ರಶ್ನಿಸಿದಳು. ರಾಮಯ್ಯ ಬೆಳಗ್ಗೆಯಿಂದ ನಡೆದ ಅಷ್ಟು ರಾದ್ಧಾಂತವನ್ನು ನಿಶ್ಥೇಜವಾಗಿ ಹೇಳಿದ. ಅವನ ಮಾತುಗಳಲ್ಲಿ ಯಾವುದೇ ನೋವು ಇಲ್ಲದಿದ್ದರೂ ಅಂತರಾಳದೊಳಗೆಲ್ಲೋ ಈ ಘಟನೆ ಮನಸ್ಸನ್ನ ಕದಡುತ್ತಿದೆ ಎಂದು ಅವನು ಹೇಳುವ ಧಾಟಿಯಲ್ಲೇ ಊಹಿಸಬಹುದಾಗಿತ್ತು. ಪೂರಾ ಕೇಳಿದ ಮೇಲೆ ಸುಶೀಲಾ, " ಹಾಳ್ಮುಂಡೆ.. ಈ ತರ ಅವಮಾನ ಮಾಡ್ಬೇಕು ಅಂತ ಎಷ್ಟು ದಿನದಿಂದ ಕಾಯ್ತಿದ್ಲೋ. ನೀನೇನು ಅವ್ಳ್ ಮಗ್ಳು ಹತ್ರ ಹೋಗಿದ್ದ ಚಪ್ಲೀಲಿ ಹೊಡೆಯೋಕೆ. ಬೆವೋರ್ಸಿ ರಂಡೆ" ಎಂದು ನೆಟಕೆ ಮುರಿಯುತ್ತಾ ಹಿಡಿ ಹಿಡಿ ಶಾಪ ಹಾಕಿದಳು. ಸುಶೀಲ ಶಾಪ ಹಾಕಿದಂತೆಲ್ಲಾ ರಾಮಯ್ಯನ ಕೋಪ ಇಮ್ಮಡಿಯಾಗುತ್ತಿತ್ತು. ರಂಗಮ್ಮನ ಮೇಲಿದ್ದ ಸಿಟ್ಟಿನಲ್ಲಿ ಹೆಂಡತಿಯನ್ನು ಎರಡು-ಮೂರು ಬಾರಿ ಸಂಭೋಗಿಸಿ ಕತ್ತು ಕೊಯ್ದ ಕೋಳಿಯಂತೆ ಪಕ್ಕಕ್ಕೆ ಹೊರಳಿದನು. ನಿಧಾನಕ್ಕೆ ಜೊಂಪು ಹತ್ತಿತ್ತು. ಮುಕ್ಕಾಲು ತಾಸಿನ ನಂತರ ಪೂರ್ತಿ ನಿದ್ರೆ ಹಾರಿ ಹೋಯಿತು. ಕೋಪ ಇನ್ನೂ ಹಾಗೇ ಇತ್ತು. ಹೆಂಡತಿ ಮೇಲು ತೀರಿಸಿಕೊಳ್ಳಲು ಆಗದ ಪರಿಸ್ಥಿತಿ. ಸುಶೀಲಳೋ ಚಿರ ನಿದ್ರೆಗೆ ಜಾರಿದ ಹೆಣದಂತೆ ದೇಹದ ಪರಿವೇ ಇಲ್ಲದೆ ನಿದ್ರಿಸುತ್ತಿದ್ದಳು. ಎಬ್ಬಿಸಲು ಹೋದರೆ ಬೈದಾಳು ಎಂಬ ಭಯದಿ ರಾಮಯ್ಯ ಒಬ್ಬನೇ ತನ್ನ ರೂಮಿನ ಕಿಟಕಿಯಿಂದ ಕಾಣುವ ನಕ್ಷತ್ರವನ್ನೂ ನೋಡುತ್ತ ಕುಳಿತನು. ಕೆಲ ಹೊತ್ತಿನ ತರುವಾಯ ಏನೋ ಹೊಳದಂತೆ ಕೋಣೆಯನ್ನು ಪೇಪರಿಗಾಗಿ ಜಾಲಾಡಿದನು. ತುಸು ಸಮಯ ಹುಡುಕಿದ ಮೇಲೆ ಹಳೆ ಪೇಪರ್ ಒಂದು ಸಿಕ್ಕಿತು. ಅದರಲ್ಲಿ ತನ್ನ ಜೀವನದ ಮಹತ್ತರವಾದ ಏನೋ ಬರೆಯುವಂತೆ ದೇವರಿಗೊಮ್ಮೆ ಮನಸ್ಸಿನಲ್ಲೇ ನಮಿಸಿ ಬರೆಯುತ್ತಾ ಹೋದನು.
"ಅರ್ಧಾಂಗಿಗಿಂತ ಹೆಚ್ಚಾಗಿರುವ ಸುಶೀಲಾಳಿಗೆ. ನಿನಗೆ ಮದುವೆಯಾದಗಿಂದಲು ನನ್ನಿಂದ ನೆಮ್ಮದಿಯನ್ನು ಕೊಡಲಾಗಲಿಲ್ಲ. ಬರೀ ಕಷ್ಟಗಳೇ. ಕೆಲಸವಿಲ್ಲದೆ ಪರದಾಡಿದ ದಿನಗಳು.. ಲಾಟರಿ ಹುಚ್ಚು ಹತ್ತಿ ಒಡವೆಗಳು, ಮಾಂಗಲ್ಯ ಮಾರಿಕೊಂಡ ದಿನಗಳು.. ಆಮೇಲೆ ಸಿಕ್ಕ ಗ್ರಂಥಾಲಯದಲ್ಲಿ ಸಿಕ್ಕ ಅಟೆಂಡರ್ ಕೆಲಸ. ಅದು ಸಿಕ್ಕ ಮೇಲೂ ಅಂತಾದ್ದೇನೂ ನಿನಗೆ ಮಾಡಲಿಲ್ಲ. ಕೆಲವು ಬಾರಿ ತಿನ್ನಲು ಇರದ ಪರಿಸ್ಥಿತಿಯಲ್ಲಿ ಇದ್ದದ್ದು. ಎಲ್ಲಾ ಕಡೆ ಸಾಲ ಮಾಡಿ. ಸಾಲ ಕೊಟ್ಟವರು ಬಂದು ನಿನ್ನನ್ನು ಕೇಳಿ ಬಯ್ಯುವ ಹಾಗೆ ಮಾಡಿದೆ. ಇನ್ನೂ ರಂಗಮ್ಮನ ವಿಚಾರ ಬೆಳಗ್ಗೆಯಿಂದ ಅವಳ ಮೇಲೆ ಒಂದು ಹಗೆ ಹುಟ್ಟಿತ್ತು. ಏನಾದ್ರೂ ಮಾಡಿ ನನಗೆ ಆಗಿರುವ ಎರಡು ಪಟ್ಟು ರಂಗಮ್ಮನಿಗೆ ಅಪಮಾನ ಮಾಡಬೇಕು ಅಂದುಕೊಂಡಿದ್ದೆ. ಒಂದು ಅವಳ ಮೇಲೆ ಪೊಲೀಸ್ ಕಂಪ್ಲೇಂಟ್ ಕೊಟ್ಟು ಕೋರ್ಟಿಗೆ ಎಳೆಯುವುದು. ರಂಗಮ್ಮನ ಹಣಕಾಸಿನ ಪರಿಸ್ಥಿತಿ ಚೆನ್ನಾಗಿರುವುದರಿಂದ ದುಡ್ಡು ಖರ್ಚು ಮಾಡಿ ಇದರಿಂದ ಆರಾಮಾಗಿ ಹೊರಗೆ ಬರುತ್ತಾಳೆ. ಇನ್ನೊಂದು ಅವಳ ಮೇಲೆ ಮಾನಭಂಗ ಮಾಡುವುದು. ರಂಗಮ್ಮನಿಗೆ ಅರವತ್ತಕ್ಕಿಂತ ಹೆಚ್ಚು ವಯಸ್ಸಾಗಿರುವುದರಿಂದ ಅವಳ ಮೇಲೆ ಅತ್ಯಾಚಾರ ಮಾಡಲು ಮನಸ್ಸಿಲ್ಲ. ಮೂರನೇದು ರಂಗಮ್ಮನನ್ನು ಖೂನಿ ಮಾಡುವುದು. ಆಮೇಲೆ ನಾನು ಜೈಲಿಗೆ ಹೋಗುವುದು. ನಾನು ಬದುಕಿದ್ದು ಸತ್ತಂತೆ. ರಂಗಮ್ಮನ ಮನೆಯವರು ನಿನ್ನ ಮೇಲೆ ಸೇಡು ತೀರಿಸಿಕೊಳ್ಳುವುದು. ಮತ್ತೆ ನಿನಗೆ ಮಾನಸಿಕ, ದೈಹಿಕ ಹಿಂಸೆ.. ಅದರ ಬದಲಾಗಿ ನಾನೇ ಹೋಗಿ ಬಿಡುತ್ತೇನೆ. ರಂಗಮ್ಮ ಸಾಯುವವರೆಗೂ ಪಾಪ ಪ್ರಜ್ಞೆಯಲ್ಲಿದ್ದು ಸಾಯಬೇಕು. ನನಗೆ ಅವಮಾನಿಸಿದವಳಿಗೆ ಇದಕ್ಕಿಂತ ದೊಡ್ಡ ಶಿಕ್ಷೆಯಿಲ್ಲ. ನಾನು ಹೋದ ಮೇಲೆ ನನ್ನ ಕೆಲಸ ನಿನಗೆ ಸಿಗಬಹುದು. ಇಷ್ಟವಿದ್ದರೆ ಮಾಡು ಇಲ್ಲವಾದರೆ ಅಷ್ಟೋ ಇಷ್ಟೋ ಹಣ ಬರಬಹುದು.. ಅದರಲ್ಲಿ ಎಲ್ಲರ ಸಾಲವನ್ನು ವಾಪಸ್ಸು ಕೊಟ್ಟು, ಮಿಕ್ಕ ಹಣವನ್ನು ಕೂಡಿಟ್ಟಿಕೋ. ಮಗಳು, ಅಳಿಯ ಯಾರನ್ನು ನಂಬಬೇಡ. ನಿನ್ನ ಕೈಲಾಗುವವರೆಗೂ ನಿಶ್ಚಿಂತೆಯಿಂದ ಇರು. ಆಸರೆ ಬೇಕು ಎನ್ನುವ ಸಮಯಕ್ಕೆ ಯಾವುದಾದರೂ ವೃದ್ಧಾಶ್ರಮಕ್ಕೆ ಎಲ್ಲವನ್ನೂ ದಾನ ಮಾಡಿ. ಅಲ್ಲಿಯೇ ಕಾಲದೂಡು. ಸುಶೀಲಾ ಅರ್ಧಾಂಗಿಯನ್ನು ಅರ್ಧಕ್ಕೆ ಬಿಟ್ಟು ಹೋಗುತ್ತಿದ್ದೇನೆ ಎಂದು ಬೇಸರಿಸಿಕೊಳ್ಳಬೇಡ. ಆ ಭಗವಂತ ನಿನ್ನ ಜೊತೆಯಿದ್ದಾನೆ. ಕ್ಷಮಿಸಿ ಬಿಡು ಎಂದು ಕೇಳುವ ಅರ್ಹತೆಯು ಇಲ್ಲ... ಕ್ಷೇಮವಾಗಿರು ಸುಶೀಲ.. ಇಂತಿ ನಿನ್ನ "ರಾಮಯ್ಯ" ಎಂದು ಸಹಿ ಮಾಡಿ ಮನೆಯಲ್ಲಿ ಮಾತ್ರೆಗಳಿಗಾಗಿ ಹುಡುಕಾಡಿದನು.. ನಾಲ್ಕೈದು ಬಿ.ಪಿ ಮಾತ್ರೆಗಳು ಮಾತ್ರ ಸಿಕ್ಕಿದವು. ವಿಧಿಯಿಲ್ಲದೆ ಅದೇ ಮಾತ್ರೆಗಳನ್ನು ಒಟ್ಟು ಮಾಡಿ ಒಂದೇ ಗುಟುಕಿಗೆ ನುಂಗಿ ನೀರು ಕುಡಿದು ದೇವರಿಗೆ ಕೈ ಮುಗಿದು, ಸುಶೀಲಳ ಬಳಿ ಬಂದು ಅವಳ ಪಾದಗಳಿಗೆ ಎರಡು ಕೈಯಲ್ಲಿ ಮುಟ್ಟಿ ನಮಸ್ಕರಿಸಿ.. ಅವಳ ಪಕ್ಕಕ್ಕೆ ಬಂದು ಮಲಗಿ ತೋಳನ್ನು ಹೆಂಡತಿ ಮೇಲೆ ಹಾಕಿದನು. ಸುಶೀಲ ಹೂಂ... ಎಂದು ನಿದ್ದೆಯಲ್ಲೇ ಹೂಂಕರಿಸಿದಳು.
********
ಮಹೇಶ್. ಆರ್
೦೩-೦೨-೨೦೧೮
amaheshr@gmail.com
Comments
Post a Comment