ಕೆಂಡದ ಮೇಲೆ ಕೂತಂತೆ ಬದುಕು.

ಮಹಾನಗರವೇ ಹಾಗೇ.. ಯಾರನ್ನೂ ಸುಮ್ಮನೆ ಇರಲು ಬಿಡುವುದಿಲ್ಲ. ಇಲ್ಲಿ ಎಲ್ಲರೂ ಕಾರ್ಯ ಪ್ರವೃತ್ತರೇ. ಕಳ್ಳ ಖದೀಮರಿಂದ ಹಿಡಿದು ಸಾಫ್ಟ್‌ವೇರ್ ಕಂಪನಿಯ ಸಿ.ಇ.ಒ ಗಳವರೆಗೂ ಎಲ್ಲರೂ ಸಮಯ ವ್ಯರ್ಥ ಮಾಡದೆ ದುಡಿಯುವವರೆ. ಮಹಾನಗರಗಳಲ್ಲಿ ಅವಕಾಶಗಳು ಹೆಚ್ಚು. ಸಂಬಳವೂ ಹೆಚ್ಚು. ಜೀವನ ಸಾಗಿಸಬೇಕೆಂದರೂ ಹೆಚ್ಚು ಹಣ ಬೇಕು. ಕಾಸಿಗೆ ತಕ್ಕಂತೆ ಕಜ್ಜಾಯವೆಂಬಂತೆ. ಸಂಬಳಕ್ಕೆ ತಕ್ಕ ಜೀವನ. ಮಹಾನಗರ ಬಿಸಿ ತುಪ್ಪದಂತೆ ಉಗಿಯಲೂ ಆಗದೂ ನುಂಗಲು ಆಗದು. ಮೀನಿಗೆ ಎರೆಹುಳುವಿನ ಆಸೆ ತೋರಿಸಿ ಗಾಳಕ್ಕೆ ಸಿಕ್ಕಿಸಿದಂತೆ ಮಹಾನಗರವೂ ಆಡಂಬರದ ಜೀವನವನ್ನು ತೋರಿ ಮನುಜರನ್ನು ಕೊಕ್ಕೆಗೆ ಸಿಕ್ಕಿಸಿಕೊಂಡಿದೆ. 

ಸಮೀಕ್ಷೆಯೊಂದರ ಪ್ರಕಾರ ನಗರಗಳಲ್ಲಿ ವಾಸಿಸುವ ಜನರು ೧೯೫೦ರಲ್ಲಿ ೩೦% ಇತ್ತು. ೨೦೧೪ರಲ್ಲಿ ೫೪% ಗೆ ಏರಿಕೆಯಾಗಿದೆ. ಇನ್ನೂ ೨೦೫೦ರಕ್ಕೆ ಶೇಕಡಾ ೭೦%ರಷ್ಟು ಜನರು ನಗರಗಳಲ್ಲಿ ವಾಸಿಸಲ್ಲಿದ್ದಾರೆ. ಮಹಾನಗರಗಳಲ್ಲಿ ಜನ ಸಂಖ್ಯೆ ಹೆಚ್ಚಾದಂತೆ ಸ್ವಂತ ವಾಹನಗಳು, ಸರ್ಕಾರಿ ವಾಹನಗಳು ಅತಿಯಾಗಿ ಮಾಲಿನ್ಯ ಉಂಟಾಗುತ್ತದೆ. ವಾಹನಗಳ, ಕಾರ್ಖಾನೆಯ ಹಾಗೂ ಮನೆಗಳಿಂದ ಉತ್ಪತ್ತಿಯಾಗುವ ಹೊಗೆಯಿಂದ ನಗರದಲ್ಲಿ ಜೀವಿಸುವವರ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರುತ್ತಿವೆ.

ಮಹಾನಗರಗಳಲ್ಲಿ ಇರುವವರಿಗೆ ಭದ್ರತೆಯು ಕಡಿಮೆ. ಕೇವಲ ನೂರಿನ್ನೂರು ರೂಪಾಯಿಗೆ ಖೂನಿ ಮಾಡುವವರಿದ್ದಾರೆ. ಸಬ್‌ವೇಗಳಲ್ಲಿ ಹೆಂಗಸರ ಕಿವಿ ಸಮೇತ ಓಲೆಗಳನ್ನು ಕೊಯ್ದುಕೊಂಡು ಹೋದವರಿದ್ದಾರೆ. ಪೋಲಿಸರು ಅಥವಾ ಸರ್ಕಾರ ಎಷ್ಟು ಜನಕ್ಕೆ ಅಂತ ರಕ್ಷಣೆ ಕೊಡಲು ಸಾಧ್ಯ ? ಹಳ್ಳಗಳಿಗೆ ಹೋಲಿಸಿದರೆ ನಗರಗಳಲ್ಲಿ ಭದ್ರತೆ ಕೊಂಚ ಮಟ್ಟಿಗೆ ಕಡಿಮೆ. ಹಳ್ಳಿಗಳಲ್ಲಿ ಜೀವನಪರ್ಯಂತ ಒಂದೇ ಮನೆಯಲ್ಲಿ ಕಾಲ ದೂಡುವವರಿದ್ದಾರೆ. ಆದರೆ ನಗರಗಳಲ್ಲಿ ಹಾಗಲ್ಲ, ಇಲ್ಲಿ ಅವಶ್ಯಕತೆಗೆ ಅನುಗುಣವಾಗಿ ಮನೆಯಿಂದ ಮನೆಗೆ, ಕೆಲಸದಿಂದ ಕೆಲಸಕ್ಕೆ ಹೋಗುವವರಿದ್ದಾರೆ. ಮನೆ ಹಾಗೂ ವೃತ್ತಿ ಬದಲಾಯಿಸುವದರಲ್ಲೇ ಬದುಕನ್ನು ಪೂರ್ಣಗೊಳಿಸಬೇಕೆಂಬ ಧ್ಯೇಯವೇ.. ?

ನಗರಗಳು ವಿದ್ಯೆಯನ್ನು ಅತಿ ಮುಖ್ಯವಾದ ದಂಧೆಯನ್ನಾಗಿ ಮಾಡಿಕೊಂಡಿದೆ. ಎಲ್.ಕೆ.ಜಿ ಮಗುವಿಗೆ ಐವತ್ತು ಸಾವಿರ ಫೀಸು ಕಿತ್ತುಕೊಳ್ಳುವ ವಿದ್ಯಾ ಸಂಸ್ಥೆಗಳಿವೆ. ವಿದ್ಯೆ ಒಂದೇ ಅಲ್ಲ ಆಸ್ಪತ್ರೆಗಳು ಕೂಡ.. ವರ್ಷ ಪೂರಾ ದುಡಿದು ಮಗುವಿನ ಫೀಸಿಗೂ ಪರದಾಡಬೇಕು ಎಂದರೆ ಎಂಥಾ ಹೀನಾಯ ಸ್ಥಿತಿಯಲ್ಲಿ ನಾವು ಬದುಕುತ್ತಿದ್ದೆವೆ. 

ಇನ್ನೂ ನಗರಗಳಲ್ಲಿನ ಸರ್ಕಾರಿ ಶಾಲೆಗಳ ವಿಷಯಕ್ಕೆ ಬಂದರೆ ವಿದ್ಯಾರ್ಥಿಗಳ, ಕಟ್ಟಡಗಳ, ಶಿಕ್ಷಕರ ಕೊರತೆಯಿಂದ ಶಾಲೆಗಳು ಪಾಳು ಬೀಳುತ್ತಿವೆ. ಎಲ್ಲರಿಗೂ ಅವರವರ ಮಕ್ಕಳನ್ನು ಖಾಸಗೀ ಶಾಲೆಗೆ ಸೇರಿಸಿ ಐನ್ಸ್ಟೈನ್ ಮಾಡಬೇಕೆಂಬ ಹಂಬಲ.

ಹಾಗಂತ ಮಹಾನಗರಗಳಲ್ಲಿ ಬಡವರೇ ಇಲ್ಲ ಅಂದು ಕೊಳ್ಳಬೇಡಿ. ಹಳ್ಳಿಗಳ ಗುಡಿಸಲುಗಳಿಗಿಂತ ಚಿಕ್ಕದಾದ ಮನೆಗಳಲ್ಲಿ, ಸ್ಲಂಗಳಲ್ಲಿ ಬದುಕುವವರಿದ್ದಾರೆ. ಅವರೂ ಬದುಕನ್ನು ಅರಸಿ ನಗರಕ್ಕೆ ಬಂದವರೆ. ಇಂಥಾ ಕಡು ಬಡತನದಲ್ಲಿ ಬದುಕಲು ಮಹಾನಗರಗಳಿಗೆ ವಲಸೆ ಬರಬೇಕಿತ್ತೆ.. ? ಹಳ್ಳಿಗಳಲ್ಲೇ ಆರಾಮದಾಯಕವಾದ ಜೀವನವನ್ನು ನಡೆಸಬಹುದಾಗಿತ್ತಲ್ಲವೇ..? ಬಹುತೇಕ ಜನರು ಮೂಲದಲ್ಲಿ ಕೃಷಿ ಹಾಗು ಕೃಷಿಗೆ ಸಂಬಂಧಪಟ್ಟಂತ ಕೆಲಸಗಳಲ್ಲಿ ತೊಡಗಿಸಿಕೊಂಡವರೆ. ಕ್ರಮೇಣ ಕೃಷಿಯಲ್ಲಿ ಸೋತು. ಮಳೆ, ಬೆಳೆ ಬರದೆ ನಗರಗಳತ್ತ ಮುಖ ಮಾಡಿದವರಿಗಿಂತ ಹೆಚ್ಚಾಗಿ, ಮಹಾನಗರಗಳಲ್ಲಿನ ಜೀವನಕ್ಕೆ ಮುಗಿಬಿದ್ದು ವಲಸೆ ಬಂದವರೆ ಹೆಚ್ಚು. ಹಾಗೆ ಮಳೆ ಬರದೆ, ಭೂಮಿ ಕೈ ಕೊಟ್ಟು ಸಾಲ ಮಾಡಿ ಸತ್ತ ರೈತರಿಗಿಂತ, ಸಾಲ ತೆಗೆದುಕೊಂಡು ಅರಳಿ ಮರದ ಕೆಳಗೆ ಇಸ್ಪೀಟು ಆಡುತ್ತಾ, ಹೆಂಡತಿ ಮಕ್ಕಳನ್ನು ಹೊಲಕ್ಕೆ ದುಡಿಮೆಗೆ ಕಳುಹಿಸಿ ಜೂಜಿನಿಂದ ಮತ್ತಷ್ಟು ಸಾಲ ಮಾಡಿಕೊಂಡು ಸತ್ತವರ ಸಂಖ್ಯೆ ಜಾಸ್ತಿ. ೧೯೯೫ರಿಂದ ೨೦೧೩ ವರೆಗೆ ೩ ಲಕ್ಷಕ್ಕೂ ಹೆಚ್ಚು ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾಗೇ ನಗರಗಳತ್ತ ಮುಖ ಮಾಡಿದ ಜನರ ಲೆಕ್ಕವೇ ಇಲ್ಲ. 

" ರೈತ ಭಾರತದ ಬೆನ್ನೆಲುಬು " ಹೀಗೆ ಯುವಕರು, ಕೃಷಿಕರು ನಗರಗಳತ್ತ ಹೋದರೆ ಬೆನ್ನೆಲುಬು ಮುರಿದು ಬೀಳುವುದರಲ್ಲಿ ಯಾವುದೇ ಸಂದೇಹವಿಲ್ಲ.. ನಗರ ಜೀವನಕ್ಕೆ ಒತ್ತು ಕೊಟ್ಟಷ್ಟೇ ಹಳ್ಳಿಗಳಲ್ಲಿನ ಬದುಕಿಗೂ ಪ್ರಾಧಾನ್ಯ ನೀಡಿದರೆ.. ನಾವೆಲ್ಲರೂ ಇನ್ನೂ ಒಂದಷ್ಟು ವರುಷಗಳು ಅನ್ನ ತಿನ್ನಬಹುದು. ಇಲ್ಲದಿದ್ದರೆ ನಗರಗಳಲ್ಲಿನ ಪ್ಲಾಸ್ಟಿಕು, ಹೊಗೆ ಕುಡಿದು ಬದುಕಬೇಕಾಗುವ ಪರಿಸ್ಥಿತಿ ಬರಬಹುದು.

ನಗರೀಕರಣದ ಹೆಸರಿನಲ್ಲಿ ಸುತ್ತ ಮುತ್ತ ಹಳ್ಳಿಗಳನ್ನು ಒಟ್ಟು ಮಾಡಿ ಬೃಹತ್‌ ಮಹಾನಗರ ಮಾಡುವುದರಿಂದ ಉಂಟಾಗುವ ಇನ್ನೊಂದು ಅತಿ ಮುಖ್ಯ ಅನಾಹುತವೆಂದರೆ ಪಕ್ಷಿಗಳು, ಚಿರತೆಗಳು, ಜಿಂಕೆ-ಕಿರುಬಗಳು ಇನ್ನಿತರ ಸಣ್ಣ ಪುಟ್ಟ ಕಾಡು ಪ್ರಾಣಿಗಳ ಸಂತತಿಗೆ ಮಾರಕವಾಗಿದೆ. ನಾವು ಇತ್ತೀಚೆಗೆ ಹೆಚ್ಚಾಗಿ ಕೇಳುವ, " ಚಿರತೆ ಶಾಲೆಗೆ ನುಗ್ಗಿತ್ತು, ಜಿಂಕೆ ಪಾರ್ಕಿಗೆ ಬಂದಿದೆ". ಅವುಗಳ ವಾಸ ಸ್ಥಾನವನ್ನು ನಾವು ಸ್ವಾಧೀನ ಪಡಿಸಿಕೊಂಡು ಅವುಗಳನ್ನು ದೂರುವುದು ಎಷ್ಟು ಸಮಂಜಸ.. ?ನಮ್ಮ ಬಾಲ್ಯದಲ್ಲಿ ಕಂಡ ಗುಬ್ಬಚ್ಚಿಗಳು, ಇನ್ನಿತರ ಪಕ್ಷಿಗಳು ಅತಿಯಾದ ನಗರೀಕರಣದಿಂದ ಇಂದು ಮಾಯವಾಗಿವೆ.

ನಗರ ಜೀವನದಲ್ಲಿನ ಬಾಳು ನಿತ್ಯ ಕರ್ಮದಂತೆ... ಸ್ನಾನ ಮಾಡು, ತಿಂಡಿ ಮಾಡು, ಟ್ರಾಫಿಕ್ಕಲ್ಲಿ ತಗ್ಲಾಕೋ, ಕತ್ತೆ ತರ ಕೆಲಸ ಮಾಡು, ಮತ್ತೆ ಸಿಗ್ನಲ್ಲಿ ಸಿಕ್ಕಾಕೋ, ಮನೆ, ಸಂಸಾರ, ಸಂಭೋಗ ಇತ್ಯಾದಿ....ಕೆಂಡದ ಮೇಲೆ ಕೂತಂತ ಬದುಕು. ಬದುಕಿನ ಅರ್ಥವೇನು ? ಟ್ರಾಫಿಕ್ನಲ್ಲಿ ಸಿಕ್ಕಿ ಹಾಕಿಕೊಳ್ಳುವುದೋ... ಅಥವಾ ದುಡಿದೂ ದುಡಿದು ಹಣ ಸಂಪಾದಿಸಿ ಮುಪ್ಪಿನ ಕಾಲದಲ್ಲಿ ಆಸ್ಪತ್ರೆಗಳಲ್ಲಿ ಖರ್ಚು ಮಾಡುವುದೋ... ನಗರದ ಬದುಕಿಗೆ ಅರ್ಥವಿಲ್ಲದಂತಾಗಿದೆ. ಇಲ್ಲಿ ಎಲ್ಲರೂ ರನ್ನಿಂಗ್ ರೇಸಿಗೆ ನಿಂತವರೇ. ಯಾರಿಗೂ ಪುರುಸೋತ್ತಿಲ್ಲ.. ಎಲ್ಲರಿಗೂ ನಾನೇ ಮೊದಲು ಬರಬೇಕೆಂಬ ಆಸೆ. ಇಳಿ ಸಂಜೆಯ ಮಳೆಗೆ ಕ್ಯಾಕರಿಸಿ ಉಗಿಯುವ ಜನರಿದ್ದಾರೆ. ಮಳೆ, ಮಣ್ಣು, ಗಾಳಿ, ಬಿಸಿಲು, ಪ್ರಕೃತಿ ಇದನ್ನೆಲ್ಲಾ ಆಸ್ವಾದಿಸದೆ ಹುಟ್ಟಿರುವುದೇ ದುಡಿಯುವುದಕ್ಕೆ ಎಂಬಂತೆ ಚಾಕರಿ ಮಾಡುವುದು ಸರಿಯೇ ?

ಅಭಿವೃದ್ಧಿಯ ಹೆಸರಿನಲ್ಲಿ ಅಕ್ಕ ಪಕ್ಕದ ಹಳ್ಳಿಗಳನ್ನೆಲ್ಲಾ ನುಂಗಿ ಹಾಕುತ್ತಿರುವ ನಗರಗಳು.. ಇರುವ ಕೆರೆಯನ್ನು ಮುಚ್ಚಿ ಅಪಾರ್ಟ್ಮೆಂಟ್ ಕಟ್ಟಿ ಕುಡಿಯುವ ನೀರಿಗೆ ಪರದಾಡುವ ಸ್ಥಿತಿ. ಉದ್ಯೋಗ, ಬದುಕಿನ ಗುರಿಯನ್ನು ಅರಸಿ ಹೀಗೆ ಎಲ್ಲರೂ ನಗರಗಳತ್ತ ಯುದ್ಧಕ್ಕೆ ಹೊರಟಂತೆ ಬಂದರೆ ಒಂದಿಲ್ಲೊಂದು ದಿನ ಹಳ್ಳಿಗಳೇ ಮಾಯವಾಗುವ ಪರಿಸ್ಥಿತಿ ಬರಬಹುದು. ವ್ಯವಸಾಯ ಮಾಡುವವರಾರು ? ಫ್ಲೈ ಓವರ್ ಕೆಳಗೆ ಭತ್ತ, ರಾಗಿ, ಕಬ್ಬು ಹಾಕಿಕೊಂಡು ಕೂರುವುದಕ್ಕೆ ಸಾಧ್ಯವೋ.. ಮುಂದೊಂದು ದಿವಸ ಅದು ಮಾಡಿಯಾರು. ಹಣ, ತಂತ್ರಜ್ಞಾನ, ಬಣ್ಣದ ಬದುಕಿನ ನಡುವೆ ಎಲ್ಲೋ ಒಂದು ಕಡೆ ನಮ್ಮನ್ನೇ ನಾವು ಕಳೆದುಕೊಂಡ ಭಾವ.

ಹೆಣಗಳು ತುಂಬಿದ ಸ್ಮಶಾನದಂತೆ ಜನಗಳನ್ನು ತುಂಬಿದ ನಗರಗಳು. ಇಲ್ಲಿ ಎಲ್ಲರೂ ಅಪರಿಚಿತರೇ. ಇಲ್ಲಿ ಎಲ್ಲರೂ ನಿಗೂಢ ಮನುಷ್ಯರೇ.. ಎಲ್ಲರಿಗೂ ಒಂದೊಂದು ಮೂಲವುಂಟು, ಎಲ್ಲರಿಗೂ ಒಂದೊಂದು ಕಥೆಯುಂಟು. ಆದರೆ ಕೇಳುವವರಿಲ್ಲ...ಹೇಳುವವರಿಲ್ಲ.. ಎಲ್ಲರೂ ಅವರವರ ಗುರಿಗಳತ್ತ ಮುನ್ನುಗುತ್ತಿದ್ದಾರೆ. ಸದ್ಯಕ್ಕೆ ಈ ಸಿಗ್ನಲ್ನಿಂದ ಮುಂದಿನ ಸಿಗ್ನಲ್ನತ್ತ ಹೊರಟಿದ್ದಾರೆ.

ಸ್ವಚ್ಛ ಗಾಳಿ, ಶುಚಿಯಾದ ಆಹಾರ, ಭವಿಷ್ಯ, ಆಸೆ,  ಒಂದೆರೆಡು ಪ್ರೀತಿಯ ಮಾತು, ಒಳ್ಳೆಯ ಆರೋಗ್ಯ ಇದಕ್ಕಾಗಿ ತಾನೆ ಎಲ್ಲರೂ ಸಂಪಾದಿಸುವುದು. ಇದೇ ಇಲ್ಲದೆ ಹೋದರೆ ಇನ್ಯಾವ ಪುರುಷಾರ್ಥಕ್ಕೆ ದುಡಿಯಬೇಕು. ನಿಮ್ಮ ಬದುಕು, ದುಡಿಮೆ ಎಷ್ಟು ಸಾರ್ಥಕ.. ?

                           ******

ಮಹೇಶ್. ಆರ್
೧೮-೦೨-೨೦೧೮
amaheshr@gmail.com

Comments

Popular Posts