ಕಳೆದುಕೊಳ್ಳಲು ಅಣಿಯಾಗಿರಿ ಪ್ರೀತಿಯನ್ನು...

ಆಕಾಶ ಭೂಲೋಕ ಒಂದಾಗುವಷ್ಟು ಪ್ರೀತಿ ಮಾಡಿರುತ್ತೀರಿ.. ಲೆಕ್ಕವಿಲ್ಲದ ಸಮುದ್ರದ ಅಲೆಗಳಷ್ಟು ಮಾತನಾಡಿರುತ್ತೀರಿ... ನಕ್ಷತ್ರ ಪುಂಜಗಳಷ್ಟು ಕನಸುಗಳನ್ನು ಕಂಡಿರುತ್ತೀರಿ... ನನ್ನ ಕೊನೆ ಉಸಿರಿರುವವರೆಗೂ ನಿನ್ನ ಬಿಡುವುದಿಲ್ಲ ಎಂದು ಆಣೆ ಪ್ರಮಾಣಗಳನ್ನು ಮಾಡಿರುತ್ತೀರಿ... ನಿಮ್ಮೆಲ್ಲಾ ಆಶ್ವಾಸನೆ, ದೃಢ ನಿರ್ಧಾರ ಟೊಳ್ಳಾಗುವ ಸಮಯವೊಂದು ಭೂಕುಸಿತದಿಂದ ತಲೆ ಮೇಲೆ ಬಂದು ಎರಗುವ ಬಂಡೆಯಂತೆ ನಿಮ್ಮ ಮೇಲೆ ಬೀಳುತ್ತದೆ.. ಅಷ್ಟು ಸಾಕು... ನಿಮ್ಮ ಅಗಾಧವಾದ, ಸರ್ವ ಶ್ರೇಷ್ಠವಾದ ಪ್ರೇಮ ಅವನತಿ ಕಾಣಲು.

ಬಂಧನದಿಂದ ಬಿಡಿಸಿಕೊಳ್ಳಲು ಒಂದು ಕಾರಣ ಬೇಕಷ್ಟೇ.. ಅದು ಮನೆಯವರೋ..‌ ನೆರೆಮನೆಯವರೋ.. ಸ್ನೇಹಿತರೋ.. ಶತ್ರುಗಳೋ.. ಇವರೆಲ್ಲರಿಗಿಂತ ಹೆಚ್ಚಾಗಿ ಪ್ರೀತಿಗೆ ಹೊರಗಿನ ವೈರಿಗಳಿಗಿಂತ ನಮ್ಮೊಳಗಿನ ವೈರಿಗಳೇ ಅತಿ ಭಯಾನಕ... ಸ್ವಾರ್ಥ, ಅಹಂ, ಪೊಸೇಸಿವ್ನೆಸ್ ಬಿಟ್ಟು ಪ್ರೀತಿ ಮಾಡಿದರೆ ನನ್ನದಲ್ಲದ ವಸ್ತುವನ್ನು ನನಗಿಂತ ಹೆಚ್ಚಾಗಿ ಪ್ರೀತಿಸುತ್ತೀದ್ದೇನೆ ಎಂಬ ಅಳುಕು..
ಒಂದರೆಕ್ಷಣವೂ ಬಿಟ್ಟಿರದಂತೆ ಅಂಟಿಕೊಂಡಿದ್ದರೇ, ಪ್ರೇಮಿಸುವವರಿಗೆ ಕುತ್ತಿಗೆ ಹಿಸುಕುವಂತಾ ಇಕ್ಕಟಿನ ಪರಿಸ್ಥಿತಿ.. ಅಲ್ಲಿಗೆ ಅವರಿಗೂ ಬಿಡುಗಡೆ ಬೇಕು.

ಈ ಪ್ರೀತಿಯೇ ಹಾಗೇ ಇದ್ದಕ್ಕಿದ್ದ ಹಾಗೇ ಮಳೆ ಧೋ ಎಂದು ಬಂದಂತೆ ಬಂದು ಬಿಡುತ್ತದೆ..
ಕಾಡಿನ ಏಕಾಂತವನ್ನು ಅನುಭವಿಸುತ್ತಾ ಹೋಗುವಾಗ ಸಟಕ್ಕನೇ ಗಾಡಿ ನಿಂತ ಹಾಗೇ ಪ್ರೀತಿ ನಿಂತು ಬಿಡುತ್ತದೆ.. ಅದಕ್ಕೆ ಇಂಥದ್ದೇ ಕಾರಣಗಳು ಇರಬೇಕೂಂತಲೇ ಇಲ್ಲ.. ಹಳೇ ಕಾರಣಗಳು ಹೊಸ ಪರಿಸ್ಥಿತಿ ಎರಡು ಸೇರಿದರೆ ಅಧೋಗತಿ.. ಎಷ್ಟೋಂದು ಆಸೆಯಿಂದ ಕಾಡಿಗೆ ಖುಷಿ ಪಡಲು ಹೋಗಿ ಈಗ ವಾಹನ ಕೆಟ್ಟು ಒಬ್ಬರೇ ಇದ್ದೀರಿ... ಇಷ್ಟೋತ್ತು ಖುಷಿ ಕೊಟ್ಟ ಕಾಡು, ಮರ, ಗಿಡ, ಬೆಟ್ಟ ಎಲ್ಲವೂ ನಿಮ್ಮನ್ನು ಬಲಿ ತೆಗೆದುಕೊಳ್ಳುಲು ಬಂದಿರುವ ಬ್ರಹ್ಮ ರಾಕ್ಷಸನಂತೆ ಹಾಗೂ ಅವನ ಸೈನ್ಯದಂತೆ ಕಾಣುವುದು.. ಒಂದೇ ಸಲ ಇಡೀ ಜೀವವೇ ಹೋದ ಹಾಗೇ ಭಾಸವಾಗುವುದು.. ಆದರೆ ನೀವು ಸಾಯುವುದಿಲ್ಲ.. ಕೇವಲ ಅದನ್ನು ಅನುಭವಿಸಬೇಕಷ್ಟೇ.. ಒಂದು ಸಮಯದಲ್ಲಿ ಅದ್ಭುತವಾಗಿ ಕಂಡಿದ್ದೇಲ್ಲಾ ಈಗ ಬೀಭತ್ಸವಾಗಿ ಕಾಣುವುದು.. ಪ್ರೀತಿಯು ಹಾಗೇ... ಪ್ರೀತಿಸಿದ ಮೇಲೆ ಪ್ರೀತಿಯನ್ನು ಯಾವುದೋ ಒಂದು ಘಳಿಗೆಯಲ್ಲಿ ಕಳೆದುಕೊಳ್ಳುಲು ಮೊದಲೇ ಸಿದ್ಧವಾಗಿರಬೇಕು.. ಅದು ಜೀವಂತವಾಗಿಯೋ.. ಶವವಾಗಿಯೋ..
ಇಲ್ಲದಿದ್ದರೆ ದಟ್ಟ ಅಡವಿಯ ನಟ್ಟ ನಡುವೆ ಬ್ರಹ್ಮ ರಾಕ್ಷಸನ ಕೈಗೆ ಸಿಕ್ಕ ಹಸುಳೆಯಂತೆ ಬಿಕ್ಕಳಿಸಬೇಕಾಗುತ್ತದೆ..

ಪ್ರೀತಿ ಎಂದರೆ ಹಾಗೆಯೇ ಕೊಟ್ಟು ಕಳೆದುಕೊಳ್ಳುವುದು... ಅದರಲ್ಲೂ ಒಂದು ನಶೆಯಿದೆ...
ಪ್ರೇಮಿಸುವವರ ಸಂತೋಷದಲ್ಲಿ ನಮ್ಮನ್ನ ನಾವು ಕಳೆದುಕೊಳ್ಳುವುದಿದ್ದೀಯಲ್ಲ ಅದಕ್ಕಿಂತ ಮಿಗಿಲಾದ ಖುಷಿ ಮತ್ತೊಂದಿಲ್ಲ... ಹಾಗಂತ ಪ್ರೀತಿಸುವವರು ನಿಮ್ಮ ಪಕ್ಕದಲ್ಲಿದ್ದರೇ ಮಾತ್ರ ನಿಜವಾದ ಪ್ರೇಮ ಅಂತೇನಿಲ್ಲ... ಬೀದಿಯ ಕೊನೆ ಮನೆಯಲ್ಲೋ.. ಊರಿನ ಹೊರಗೋ... ಸಮುದ್ರದಾಚಿನ ದೇಶದಲ್ಲೋ ಅಥವಾ ಬೇರೋಬ್ಬನ ಜೊತೆಯಲ್ಲೋ... ಒಟ್ಟಿನಲ್ಲಿ ಪ್ರೇಮಿಸುವವರು ಇರಬೇಕಷ್ಟೇ... ಅಲ್ಲಲ್ಲ... ಸದಾ ಸಸ್ಮಿತರಾಗಿರಬೇಕು..
ಇದೇ ಸತ್ಯ... ಇದೇ ಪ್ರೀತಿ...
ಒಟ್ಟಿನಲ್ಲಿ ಕಳೆದುಕೊಳ್ಳುಲು ಅಣಿಯಾಗಿರಬೇಕಷ್ಟೇ..

                                 ****
ಮಹೇಶ್. ಆರ್
೨೩-೧೦-೨೦೧೮

Comments

Popular Posts