ಪ್ರೇಮಂ ಶರಣಂ ಗಚ್ಛಾಮಿ

" ಪ್ರೀತಿ...ಅನುಭವಿಸಬೇಕಷ್ಟೇ "
ಅದೊಂದು ದಿವ್ಯ ಗಂಧದಂತೆ ಅನುಭವಿಸಬೇಕಷ್ಟೇ... ಯಾರು ಎಷ್ಟೇ ಹೇಳಿದರೂ... ಕೇಳಿದರೂ... ನಾನೆಷ್ಟೇ ಬರೆದರೂ... ಪ್ರೀತಿ ಹೀಗೆ ಎಂದು ಹೇಳಲು ಆಗುವುದಿಲ್ಲ. ಸೂರ್ಯ ಬಾನಿನಂಚಿನಿಂದ ಇಳಿದು ಭುವಿಗೆ ಮುತ್ತಿಕ್ಕುವ ಸಮಯದಲ್ಲಿ ಸಮುದ್ರ ತಟದ ಮುಂದೆ ನಿಂತು ತಣ್ಣನೆಯ ಗಾಳಿಯೊಂದು ನಿಮ್ಮ ಮೈ ಸೋಕಿದಂತೆ... ಸಾಗರದ ಅಲೆಗಳು ನಿಮ್ಮ ಪಾದಗಳಿಗೆ ಕಚಗುಳಿ ಇಟ್ಟಂತೆ.. ಪ್ರೇಮವೆಂದರೆ ಹಾಗೇ.. ಅಲೆಮಾರಿ ಭಾವನೆಗಳಿಗೆ ಹಿಡಿದು ನಿಲ್ಲಿಸಿ ಪ್ರೀತಿ ಎಂಬ ಅಂಗಿ ತೊಡಿಸಿದಂತೆ. ನೀವೇಷ್ಟೇ ಮೋಹಿಸಿದರೂ... ನೀವೇಷ್ಟೇ ಕಾಡಿದರೂ.. ಬೇಡಿದರೂ.. ಪ್ರೀತಿ ನಿಮ್ಮ ಮಾತು ಕೇಳುವುದಿಲ್ಲ.. ಯಾವಾಗ ನೀವು ತೊಡಿಸಿದ ಅಂಗಿಯನ್ನು ಕಿತ್ತೋಗೆಯುತ್ತದೆ ಎಂದು ಊಹಿಸಲು ಆಗದು... ಅನುಭವಿಸಬೇಕಷ್ಟೇ..

" ಪ್ರೇಮವೋ.. ನಂಬಿಕೆಯೋ "
ಪ್ರೀತಿ ಎಂದರೆ ನಂಬಿಕೆಯಷ್ಟೇ.. ಅಮ್ಮ ತೋರಿದವರನ್ನು ಕಣ್ಣು ಮುಚ್ಚಿಕೊಂಡು ಅಪ್ಪ ಅಂತ ಒಪ್ಪಿಕೊಂಡಂತೆ. ನೀವು ಅಪ್ಪ ಎಂದು ನಂಬಿರುವವರೆಗೂ ಅವರು ನಿಮ್ಮ ತಂದೆಯೇ.. ಅದೇ ರೀತಿ ಪ್ರೀತಿಯೂ ಕೂಡ ನಾವು ಪ್ರೀತಿಸುತ್ತಿದ್ದೇವೆ ಅನ್ನುವ ಭಾವನೆ ಎಲ್ಲಿಯವರೆಗೆ ನಮ್ಮಲ್ಲಿರುತ್ತದೆಯೋ ಅಲ್ಲಿಯವರೆಗಷ್ಟೇ ಪ್ರೀತಿ.. ಇಲ್ಲದಿದ್ದರೆ ಬ್ಯಾಟರಿ ಇಲ್ಲದ ಮೊಬೈಲ್ನಂತೆ.. ನಿಮ್ಮ ಭಾವನೆಗಳನ್ನು ಆಗಾಗ ಚಾರ್ಜ್ ಮಾಡುತ್ತಲೇ ಇರಬೇಕು. ಇಲ್ಲವೆಂದರೆ ನಿಮ್ಮ ಮೊಬೈಲ್ ಕೆಲಸವೇ ಮಾಡುವುದಿಲ್ಲ.

" ಒಲವು ಎಂಬ ಲ್ಯಾಂಡ್ ಲೈನು "
ನಿಮ್ಮೆಲ್ಲರಿಗೂ ತಿಳಿದಿರುವಂತೆ ಮೊಬೈಲ್ಗಿಂತ ಮುಂಚೆ ಲ್ಯಾಂಡ್‌ ಲೈನ್ ಫೋನುಗಳಿದ್ದವು. ಅವು ಹೇಗೆ ಎಂದರೆ ಅದಕ್ಕೆ ಎಷ್ಟು ವೈರ್ ಕೊಟ್ಟಿರುತ್ತಾರೋ ಅಷ್ಟೇ ದೂರ ತೆಗೆದುಕೊಂಡು ಹೋಗಬೇಕು ಒಂಚೂರು ಹೆಚ್ಚಾಗಿ ಎಳೆದರೂ ಕೀಳುವುದು ಗ್ಯಾರಂಟಿ.. ನಾವುಗಳು ಅಷ್ಟೇ ಪ್ರೀತಿಗೆ ಸ್ವಾರ್ಥ, ಕೋಪ, ನನ್ನದು ಎಂಬ ವೈರ್ಗಳನ್ನು ಕೊಡಬಾರದು.. ಕೊಂಚ ಏರುಪೇರಾದರೂ ಸಂಬಂಧ ಕೀಳುವುದಂತೂ ಖಚಿತ... ಪ್ರೀತಿ ಮೊಬೈಲ್ನಂತಿರಬೇಕು ಸಲೀಸಾಗಿ ಎಲ್ಲೆಂದರಲ್ಲಿ ಕೊಂಡೊಯ್ಯುವಂತೆ... ಹರಿಯ ಬಿಡಿ ನಿಮ್ಮ ಭಾವನೆಗಳೆಂಬ ದೋಣಿಯನ್ನು ಪ್ರೀತಿಯ ನದಿಯೊಳಗೆ....ಬದುಕು ಎಷ್ಟು ಸರಾಗ..
ಕೊಂಚ ವಿರುದ್ಧ ದಿಕ್ಕಿನಲ್ಲಿ ದೋಣಿಯನ್ನು ತಿರುಗಿಸಿ ನೋಡಿ.. ಆಗ ಗೊತ್ತಾಗುತ್ತದೆ ಪ್ರಪಂಚ, ನಾವುಗಳು, ಎಲ್ಲವೂ ಪ್ರೀತಿಗೆ ಎಷ್ಟು ತಡೆಯೊಡ್ಡುತ್ತವೆ ಎಂದು.

" ಖೈದಿಗಳಂತೆ ಬಂಧಿಗಳಾಗಬೇಡಿ "
ಅಯ್ಯೋ.. ಪ್ರೀತಿ ಮಾಡಿಬಿಟ್ಟಿದ್ದೇನೆ ನನಗೇನೂ ಗ್ರಹಚಾರಗಳು ಕಾದಿದಿಯೋ ಅಂತ ಒದ್ದಾಡಬೇಡಿ.. ಪ್ರೀತಿಸಿದ್ದೀರಾ ? ಮನಸಾರೆ ಪ್ರೀತಿಸಿ. ಇಂದೇ...ಈಗಲೇ ಕೊನೆ ಕ್ಷಣವೆಂಬಂತೆ ಪ್ರೀತಿಸಿ. ಅರ್ಧಕ್ಕಿಂತ ಹೆಚ್ಚು ಜನ ಪ್ರೀತಿಸುವ ಬದಲು ಪ್ರೀತಿಸುತ್ತೀದ್ದೇನೆ ಎಂಬ ಚಿಂತೆಯಲ್ಲೇ ಕಾಲ ಕಳೆಯುತ್ತಾರೆ.. ನೀವು ಮೊದಲಗಿಂತ ಸಂತೋಷವಾಗಿದ್ದೀರ ಎಂದರೆ ನೆಟ್ಟಗೆ ಪ್ರೇಮಿಸುತ್ತಿದ್ದೀರಿ ಅಂತಲೇ ಅರ್ಥ.. ಇಲ್ಲ ಪ್ರೀತಿಸಿದ ಮೇಲೆ ಏಳುರಾಟೆ ಶನಿ ಶುರುವಾಯಿತು ಎನಿಸಿದರೆ ಅದು ಪ್ರೀತಿಯೇ ಅಲ್ಲ... ಯಾವುದೋ ಬಂಧನಕ್ಕಾಗಿ ಇದ್ದೀರಿ ಅಷ್ಟೇ...

" ಪ್ರೀತಿ ಎಂಬ ಅಫೀಮು "
ಒಟ್ಟಾರೆ ಇಡೀ ಪ್ರಪಂಚವೇ ಪ್ರೀತಿ ಎನ್ನುವ ಅಫೀಮನ್ನು ಗೊತ್ತಿದ್ದೋ... ಗೊತ್ತಿಲ್ಲದೆಯೋ ಸೇವಿಸುತ್ತಿದೆ. ಕೆಲವರಿಗೆ ಪ್ರೇಮ ಎಂಬುವುದು ವ್ಯವಹಾರವಾದರೆ ಇನ್ನೊಂದಷ್ಟು ಜನಕ್ಕೆ ದೈವ.. ಇವೆರಡರ ನಡುವೆ ತೂಗಿಸಿಕೊಂಡುವ ಹೋಗುವ ಖದೀಮರಿದ್ದಾರೆ.. ಇದು ಎಲ್ಲಿಯವರೆಗೆ ಹೀಗೇ ಇರುತ್ತದೆ ಅಂತ ಹೇಳಲು ಆಗುವುದಿಲ್ಲ. ಇದೊಂಥರ ಬೀದಿಯ ಸರ್ಕಾರಿ ಕೊಳಾಯಿಯಲ್ಲಿ ನೀರು ಬಂದಂತೆ... ಬಂದರೆ ಬಂದೀತು.. ಇಲ್ಲದಿದ್ದರೆ ಇಲ್ಲ.. ಬಂದಿದ್ದಷ್ಟೇ ಭಾಗ್ಯ.. ಪ್ರೀತಿಯೂ ಅಷ್ಟೇ... ದಕ್ಕಿದಷ್ಟೇ.

" ಆಕರ್ಷಣೆ ಮತ್ತು ಪ್ರೇಮ "
ನೋಡಿದ ತಕ್ಷಣ ಹುಟ್ಟುವುದಲ್ಲ ಪ್ರೇಮ.. ಆಕರ್ಷಣೆ ಮದ್ಯವನ್ನು ಕುಡಿದು ಮತ್ತೇರಿಸಿಕೊಂಡಂತೆ, ಅಮಲಿಳಿದ ಮೇಲೆನೇ ನಿಜ ಸ್ಥಿತಿ ಅರಿಯುವುದು. ದೇಹ ಪ್ರೀತಿಗೆ ಪೂರಕವಾಗಿರಬೇಕಷ್ಟೇ.. ದೇಹ ಪ್ರೇಮವೇ ಮುಖ್ಯವಲ್ಲ... ಸಾವಿರದೆಂಟು ಮುತ್ತುಗಳನ್ನು ಮೊಬೈಲ್ನಲ್ಲಿ ಕೊಡುವುದಲ್ಲ ಪ್ರೀತಿ.. ಕುಲುಮೆಯಲ್ಲಿ ಕಬ್ಬಿಣವನ್ನು ಹಾಕಿ ಸರಿ ಮಾಡಿದಂತೆ ಪ್ರತಿ ಘಳಿಗೆಯೂ ಭಾವನೆಗಳಲ್ಲಿ, ವ್ಯಕ್ತಿತ್ವದಲ್ಲಿ ಬದಲಾಗುತ್ತಾ... ಸರಿ‌ ಹೊಂದುತ್ತಾ... ಅರ್ಥ ಮಾಡಿಕೊಳ್ಳತ್ತಾ... ಮೌನದಿಂದಲೇ ಪ್ರೇಮಿಸುವವರನ್ನು ಧ್ಯಾನಿಸಿದಂತೆ.

" ಪ್ರೀತಿಯೋ ನಿಷೇಧಾಜ್ಞೆಯೋ "
ಪ್ರೀತಿಸಿದವರು ಹೀಗೇ ಇರಬೇಕು.. ನನ್ನ ಮಾತೇ ಕೇಳಬೇಕು.. ನಾನು ಹೇಳಿದ ಹಾಗೇ ನಡೆದುಕೊಳ್ಳುಬೇಕು ಎಂದು ಪ್ರೀತಿಸಲು ಹೊರಟಿದ್ದರೆ ನಿಮ್ಮಂಥ ಶತ ದಡ್ಡರು ಇನ್ನೊಬ್ಬರಿಲ್ಲ.. ನಿಮ್ಮ ನೀತಿ - ನಿಯಮಗಳು ನಿಮಗೆ ಪ್ರೀತಿ ಅನಿಸಬಹುದು ಆದರೆ ನಿಮ್ಮ ಪ್ರೇಮಿಗೆ ಅದು ಕಡಿವಾಣವಾದೀತು.. ತಡೆದಷ್ಟು ಅದರ ಪ್ರತಿರೋಧ ಹೆಚ್ಚು.. ಅವರಿಷ್ಟಕ್ಕೆ ಅವರನ್ನು ಬಿಟ್ಟು ಬಿಡಿ ಅದಕ್ಕಿಂತ ಪ್ರೀತಿಯಲ್ಲಿ ಮಾಡುವುದು ಮತ್ತೇನು ಇಲ್ಲ.. ನಿಮ್ಮನ್ನು ಪ್ರೀತಿಸುತ್ತಾರೆ ಎನ್ನುವುದು ಎಷ್ಟು ಸತ್ಯವೋ... ಅವರನ್ನು ನಿಮಗೆ ಸಂಪೂರ್ಣವಾಗಿ ಬರೆದು ಕೊಟ್ಟಿಲ್ಲ ಅನ್ನುವುದು ಅಷ್ಟೇ ಸತ್ಯ.. ಪ್ರೇಮ ಇಬ್ಬರ ಭಾವನೆ, ಆಶೆ - ಆಕಾಂಕ್ಷೆಯನ್ನು ಹಂಚಿಕೊಳ್ಳಲು ಇರುವುದೇ ಹೊರತು. ಒಬ್ಬರಿಗೊಬ್ಬರು ಕಟ್ಟುಪಾಡುಗಳನ್ನು ಹಾಕಲು ಅಲ್ಲ.. ಆ ರೀತಿ ಮಾಡಿದರೆ ಅದು ಪ್ರೇಮವಾಗುವುದಿಲ್ಲ.. ಸರ್ವಾಧಿಕಾರಿ ಧೋರಣೆಯಾಗುವುದು..

" ಪ್ರೇಮಿಸಲು ಕಲಿಯಿರಿ "
ಇಡೀ ಜಗತ್ತೇ ಅಸೂಯೆ, ದ್ವೇಷ, ಸ್ವಾರ್ಥದಿಂದ ತುಂಬೆ ತುಳುಕುತ್ತಿದೆ. ಇದೆಲ್ಲದರ ನಡುವೆ ಹಿಡಿ ಪ್ರೀತಿಗೆ ಮನುಷ್ಯ ಹಂಬಲಿಸುತ್ತಿದ್ದಾನೆ. ಒಮ್ಮೆ ನಿಮ್ಮೆಲ್ಲಾ ಜಂಜಾಟಗಳನ್ನು ಬದಿಗಿರಿಸಿ ಸ್ವಚ್ಛಂದವಾದ ಮನಸ್ಸಿನಿಂದ ಪ್ರೀತಿಸಿ.. ಅಷ್ಟು ಸಾಕು...! ರೋಬೋಟ್ನಂತಿರುವ ಈ ಪ್ರಪಂಚಕ್ಕೆ ಮರು ಜೀವ ಬರಲು.. ಕಾಲ ಕಾಲದಿಂದಲೂ ಹೊಡೆದಾಟ, ಬಡಿದಾಟ, ಹಣ, ಭೂಮಿ, ಚಿನ್ನ, ಹೆಣ್ಣು ಎಲ್ಲದಕ್ಕೂ ಕಿತ್ತಾಡುವುದರ ನಡುವೆ ಮನುಜ ಪ್ರೀತಿಸುತ್ತಲೇ ಬಂದಿದ್ದಾನೆ.. ಅದೊಂದೆ ನೋಡಿ ಕೊನೆಯವರೆಗೂ ಉಳಿಯುವುದು.. ಒಂದು ಸಲ ಕಣ್ಣು ಮುಚ್ಚಿ ಧೀರ್ಘವಾಗಿ ಉಸಿರು ಹೊರ ಹಾಕಿ ' ನಾ ನಿನ್ನ ಪ್ರೀತಿಸುತ್ತಿದ್ದೇನೆ ' ಎಂದು ಬಿಡಿ.. ಇಡೀ ಪ್ರಪಂಚವೇ ನಿಮ್ಮನ್ನು ಪ್ರೀತಿಸಲು ಶುರು ಮಾಡುತ್ತದೆ...
ಹ್ಯಾಪಿ ವ್ಯಾಲೆಂಟೈನ್ಸ್ ಡೇ..

                          ‌‌    ******

ಮಹೇಶ್. ಆರ್
೨೮/೦೧/೨೦೧೯

               ‌‌‌

Comments

Popular Posts