ಬಕ್ರಾ ಆದ ನೆನಪು

ಅವಳ ಜೊತೆ ಮಾತಾಡೀನೇ ಆರು ತಿಂಗಳ ಮೇಲಾಗಿತ್ತು. ಇನ್ನೇನು ಎಲ್ಲಾ ಮುಗಿದು ಹೋಯ್ತು ಎಂದುಕೊಂಡು ಒಬ್ಬನೇ " ಪ್ರೀತಿಯ ಪಾರಿವಾಳ ಹಾರಿ ಹೋತೋ ಗೆಳೆಯ " ಅಂತ ಹಾಡಿಕೊಂಡು ಇದ್ದವನಿಗೆ ಹುಣ್ಣುಮೆಯ ಒಂದು ಸಂಜೆ ದಿಢೀರನೇ ಸ್ಪರ್ಶ ಕರೆ ಮಾಡಿದಳು. ನಮಗೆ ಜಗದಾಶ್ಚರ್ಯ ಅಪ್ಪಿ ತಪ್ಪಿ ಕರೆ ಮಾಡಿದಳಾ.. ? ಅಥವಾ ಬಯ್ಯೋಕೆ ಮರೆತಿದ್ದ ನಾಲ್ಕು ಮಾತುಗಳನ್ನ ಬಯ್ಯೋಕೆ ಫೋನ್ ಮಾಡಿದ್ಲಾ ಅಂತ ಯೋಚನೆ ಮಾಡುತ್ತಲೇ ಕರೆಯನ್ನು ಸ್ವೀಕರಿಸಿದೆ. " ನೀನು ಹೆಂಗೆ ಇದ್ರೂ.. ಎಲ್ಲೇ ಇದ್ರೂ ನಮ್ಮ ಮನೆ ಹತ್ರ ಬೇಗ ಬಾ " ಎಂದು ಫೋನ್ ಇಟ್ಟಳು. ನನಗೆ ತಲೆಯಲ್ಲಿ ಮುಳ್ಳು ಹಂದಿ ಬಿಟ್ಟಂಗೆ ಆಯ್ತು.. ಹಲೋನೂ ಹೇಳಿಲ್ಲ.. ಬಾಯ್ನೂ ಹೇಳಿಲ್ಲ... ಯಾರಿಗೋ ಫೋನ್ ಮಾಡೋಕೆ ಹೋಗಿ ನನಗೆ ಮಾಡಿದಳಾ ಅಂತ ಗಂಭೀರವಾದ ಚಿಂತನೆ ಶುರುವಾಯಿತು.
ಎಷ್ಟೇ, ಏನೇ ಯೋಚಿಸಿದರು... ಮಾಜಿ ಪ್ರೇಯಸಿ ಕರೆ ಮಾಡಿದ್ದಾಳೆ ಅಂದ್ರೆ ಎಲ್ಲಾ ಬಿಟ್ಟು ಹುಡುಗರು ಮಾಡುವುದೇ ಅವಳು ಹೇಳಿದ್ದನ್ನು.. ನಮ್ಮ ಮನಸ್ಸು ಆರ್ತಿಗಳಿಂದ ಭೀಕರ ಬರ ಪರಿಸ್ಥಿತಿ ಇದ್ದರಿಂದ  ಹಿಂದು, ಮುಂದು ನೋಡದೆ. ಅವಳ ಮನೆಯತ್ತ ಹೊರಟೇ..

ಪೊಲೀಸ್ ಕ್ವಾಟ್ರಸಲ್ಲೀ ಅಪರಿಚಿತರು ಬೆಳಗ್ಗೆ ಹೊತ್ತು ಓಡಾಡಿದರೂ ಕಳ್ಳನ್ ತರ ನೋಡ್ತಾರೆ. ಇನ್ನೂ ಕತ್ತಲೆಯಲ್ಲಿ ಬಿಡ್ತಾರ.. ಹೋಗೋ ಬರೋರು ಎಲ್ಲಾ ದುರುಗುಟ್ಟಿ ನೋಡಿದ್ದೆ ನೋಡಿದ್ದು.. ನಾನು ಮೂರನೇ ಸಲ ಕರೆ ಮಾಡಿದ ಮೇಲೆ ಸ್ಪರ್ಶ ಫೋನ್ ಎತ್ತಿ, " ಎರಡು ನಿಮಿಷ, ಗಾಡಿ ಸ್ಟಾರ್ಟ್ ಮಾಡಿಟ್ಟಿರು " ಅಂದು ಪೋನ್ ಇಟ್ಟಳು. ಏನೋ‌ ಭಾರಿ ಗ್ರಹಚಾರನೇ ಕಾದಿದೆ ಅಂದ್ಕೊಂಡೆ. ಸರಿಯಾಗಿ ಎರಡು ನಿಮಿಷಕ್ಕೆ ಸ್ಪರ್ಶ ಅವರ ಮನೆಯಿಂದ ಓಡಿ ಬರ್ತಿದಾಳೆ. ನಾನು ಫುಲ್ ದಿಲ್ಖುಷ್. ಅವಳ ಹಿಂದೆ ಅವರಮ್ಮ ಸಾವಿತ್ರಮ್ಮ ಕೂಡ ಬರ್ತಿದಾರೆ.. " ಲೇಯ್.. ಸ್ಪರ್ಶ ನಿಂತ್ಕೋಳೆ " ಎಂದು ಇಡೀ ಏರಿಯಾಗೆ ಕೇಳುವಂತೆ ಕೂಗಿಕೊಂಡು ಬರುತ್ತಿದ್ದಾರೆ. ಇವತ್ತು ಏಟು ಬೀಳೋದು ಗ್ಯಾರಂಟಿ ಅಂತ ಮನಸ್ಸಿನಲ್ಲಿ ಅಂದ್ಕೊಂಡೆ. ಅಷ್ಟರಲ್ಲಿ ಸ್ಪರ್ಶ ಬಂದು ಹಿಂದೆ ಕೂತು, " ತೆಗಿಯೋ ಬೈಕ್ನಾ " ಎಂದಳು. ನಾನು ಅವಳ ಮುಖ ನೋಡಿ, " ಏಯ್ ನಿಮ್ಮಮ್ಮ ಕೂಗ್ತಿದಾರೆ... ಹೋಗಿ ಏನ್‌ ಕೇಳು " ಅಂದೆ. " ಮುಚ್ಕೊಂಡು ಹೋಗ್ತಿಯೋ.. ಇಲ್ವೋ " ಎಂದು ಅರಚುವ ಸಮಯಕ್ಕೆ ಅವರಮ್ಮ ಬೈಕ್ ಮುಂದೆ ಬಂದು ನಿಂತಾಗಿತ್ತು. " ಯಾಕೆ ಆಂಟಿ ಓಡೋಡಿ ಬರ್ತಾ ಇದ್ದೀರಾ " ಎಂದು ಕೇಳಿದೆ. " ನಾನ್ ಓಡಿ ಬರ್ಲಿಲ್ಲ ಅಂದಿದ್ರೆ ನೀವಿಬ್ರು ಓಡೋಗ್ತಿದ್ರಲ್ಲಪ್ಪ " ಎನ್ನುತ್ತಾ ಏದುಸಿರು ಬಿಡುತ್ತಲೇ ಇದ್ದರು. ನನಗೆ ಏನೂ ಅರ್ಥವಾಗದೆ ಸ್ಪರ್ಶ ಮುಖ ನೋಡಿದೆ. ಅವಳು ಗಾಡಿಯಿಂದ ಸಟ್ಟಕ್ಕನೇ ಇಳಿದಳು. " ಏನ್ ವಿಷ್ಯಾ ಆಂಟಿ " ಎಂದು ಗದ್ದೆ ಗುಮ್ಮನಂತೆ ಕೇಳಿದೆ. " ಇವರಕ್ಕ ಲವ್ ಮಾಡಿ‌ ಮದ್ವೆ ಆಗಿರೋದು ನಿಂಗೆ ಗೊತ್ತಲ್ಲಪ್ಪ, ಅವಳ ಜೊತೆ ಮಾತಾಡಿದ್ರೆ ಇವಳಿಗೆ ಕೋಪ, ಓಡಿ ಹೋದೋಳ ಜೊತೆ ಮಾತಾಡೋ ಹಾಗಿದ್ರೆ ನಾನು ಓಡಿ ಹೋಗ್ತೀನಿ ಅಂತ ನಿನ್ನನ್ನ ಕರ್ಸಿದಾಳೆ " ಅಂದರು.
ಈಗ ನಮಗೆ ಬಿಸಿ ತುಪ್ಪ ಬಾಯಿಗೆ ಹಾಕಿದ ಹಾಗೆ, ಇವಳನ್ನ ಕರೆದುಕೊಂಡು ಹೋಗೋದೋ.. ಇಲ್ಲ ಇವಳಿಗೆ ಸಮಾಧಾನ ಮಾಡಿ ದೇವತಾ ಮನುಷ್ಯ ಆಗೋದಾ ಅಂತ ಫುಲ್ ಕನ್ಫ್ಯೂಷನ್.. ಆಗ, ಅವರಮ್ಮ, " ನೀನಾದ್ರೂ ಒಂಚೂರು ಹೇಳಪ್ಪ " ಎಂದರು. ನಾನು ವಿಧಿ ಇಲ್ಲದೇ, " ಸ್ಪರ್ಶ ಹೋಗು ಮನೆಗೆ " ಅಂದೆ. " ಈಗೇನೂ ಕರ್ಕೊಂಡು ಹೋಗ್ತಿಯೋ ಇಲ್ವೋ ? " ಎಂದು ನೇರವಾಗೆ ಕೇಳಿದಳು. " ನಿಮ್ಮಮ್ಮ‌ ಹೇಳ್ತಿಲ್ವ ಹೋಗು ಮನೆಗೆ " ಅಂತ ಸ್ವಲ್ಪ ಖಾರವಾಗೇ ಹೇಳಿದೆ. " ನೀನು ನನ್ನ ಲವ್ ಮಾಡ್ತಿದ್ಯಾ ಇಲ್ಲ ನಮ್ಮಮ್ಮನ್ನ ಲವ್ ಮಾಡ್ತಿದ್ಯಾ ? " ಎಂದು ಪ್ರಶ್ನೆ ಮಾಡಿದಳು. ಅವರಮ್ಮ ನನ್ನ ಮುಖ ನೋಡಿದರು. ನನಗೆ ಏನೂ ಹೇಳಲು ತೋಚದೆ ತಲೆ ತಗ್ಗಿಸಿದೆ. " ಎಲ್ರೂ ಡುಬಾಕ್ ನನ್ ಮಕ್ಳು.. ಬಂದ್ರೆ ಕರ್ಕೋಂಡು ಹೋಗ್ತಿನಿ.. ರಾಣಿ ಹಂಗೆ ನೋಡ್ಕೋತಿನಿ ಅನ್ನೋದೆಲ್ಲಾ ಸುಳ್ಳು.. ಥೂ... ಈ ದರಿದ್ರ ಹುಡುಗ್ರೇ ಇಷ್ಟು " ಎಂದು ಗೊಣಗಿಕೊಂಡು ಹೋದಳು.. ಅದೇ ಕೊನೆ, ಆದಾದ ನಂತರ ಅವಳೂ ಸಿಗ್ಲಿಲ್ಲ.. ಅವರಮ್ಮಾನೂ ಸಿಗ್ಲಿಲ್ಲ..
ಅವತ್ತೂ ಅವರಿಬ್ರೂ ಸೇರಿ ನನ್ನ ಬಕ್ರಾ ಮಾಡಿದ್ರಾ ಅಥವಾ ಪ್ರೀತ್ಸಿರೋ ಹುಡುಗಿನ ಕರ್ಕೊಂಡು ಹೋಗದೇ ನಾನು ಬಕ್ರಾ ಆದ್ನಾ ಒಂದು ತಿಳೀತಿಲ್ಲ.. ಆದರೂ ಇಡೀ ಕ್ವಾಟ್ರಸ್ ಅವರು ನನ್ನನ್ನ ನೋಡಿದ್ದ ರೀತಿ ನೆನಸ್ಕೊಂಡ್ರೆ ನಾನೇ ಬಕ್ರಾ ಅನ್ಸತ್ತೆ...

                                *****
ಮಹೇಶ್. ಆರ್
೧೬/೦೩/೨೦೧೯

Comments

Popular Posts