ಮಳೆ, ಕಾಡು ಮತ್ತು ಬೆಳದಿಂಗಳ ಚಂದಿರ
ಮುಂಜಾನೆ ಶುರುವಾದ ಜಡಿ ಮಳೆಗೆ ಹಿಡಿ ಶಾಪ ಹಾಕುತ್ತಾ ವೈದೇಹಿ ಆಫೀಸಿಗೆ ಹೋಗಲು ಸ್ಕೂಟಿಗೆ ಕಿಕ್ಕ್ ಹೊಡೆದು ಹೊಡೆದು ಸಾಕಾಗಿ, " ಥತ್ತ್ ಹಾಳಾದ್ ದೇವ್ರು ನನ್ನ ಕತ್ತೆನೋ, ಕುದುರೆನೋ ಮಾಡ್ಬೇಕಿತ್ತು. ಆಗ್ಲಾದ್ರೂ ಈ ಸ್ಕೂಟಿ ಸ್ಟಾರ್ಟ್ ಆಗ್ತಿತ್ತೇನೋ " ಎಂದು ಗೊಣಗಿಕೊಂಡಳು. ಹಾಗೇ ಅಂದುಕೊಳ್ಳುತ್ತಿದ್ದಂತೆ ಪಟ್ಟನೇ ಸ್ಕೂಟಿ ಚಾಲೂ ಆಯಿತು. ಮನೆಯತ್ತ ಒಮ್ಮೆ ತಿರುಗಿ ನೋಡಿ ಬೀಗ ಹಾಕಿರುವುದನ್ನು ಖಾತರಿ ಪಡಿಸಿಕೊಂಡ ಮೇಲೆ ಹೊರಟಳು.
ದಾರಿಯುದ್ದಕ್ಕೂ ಮಳೆಗೆ ಬೈಯುತ್ತಲೇ ಇದ್ದಳು. " ಈ ಮಳೆ ಪಿಚ್ಚರಲ್ಲಿ, ಬುಕ್ಕಲ್ಲೀ ಮಾತ್ರ ಚೆಂದ, ಅದ್ಯಾಕ್ ನಿಜ ಜೀವನದಲ್ಲಿ ಇಷ್ಟು ಕಾಟ ಕೊಡ್ತಾವೋ " ಎಂದು ಸಿಗ್ನಲ್ನಲ್ಲಿ ನಿಲ್ಲಿಸಿದಳು. ಪಕ್ಕದಲ್ಲಿ ನಿಂತಿದ್ದ ಕಾರಿನ್ನು ನೋಡುತ್ತಿದ್ದಂತೆ, ಸಿಕ್ಕಿಂನ ಕಾಡಿನಲ್ಲಿ ವೈದೇಹಿ, ಸುಜ್ಞಾನ್ ಕೈ ಹಿಡಿದುಕೊಂಡು, " ಈ ಮಳೆ, ಕಾಡು, ಹುಣ್ಣುಮೆಯ ಚಂದ್ರ ಎಲ್ಲಾ ಎಷ್ಟು ಚೆಂದ ಅಲ್ವಾ ? " ಎಂದು ಸುಜ್ಞಾನ್ ಕೈಗೆ ಮುತ್ತನ್ನಿಕ್ಕಿದಳು. ಸುಜ್ಞಾನ್ ಕಾಡಿನಲ್ಲೂ ನಾಚಿ ನೀರಾಗುತ್ತಾ, " ಹುಷಾರು, ಹೊಟ್ಟೆಯೊಳಗಿಂದ ಮಗು ನೋಡ್ತಿದ್ರೆ ಕಷ್ಟ " ಎಂದು ಛೇಡಿಸಿದನು.
" ಅಯ್ಯೋ ನೋಡಿದ್ರು ನೋಡ್ಕೋಳ್ಳಿ ಬಿಡಿ. ಅವ್ರಪ್ಪಂಗೆ ತಾನೆ ಕೊಟ್ಟಿದ್ದು. " ಎಂದು ಪ್ರತ್ಯುತ್ತರ ನೀಡುತ್ತಾ ಹುಸಿ ಮುನಿಸಿನಿಂದ ಮೂರ್ನಾಲ್ಕು ಹೆಜ್ಜೆ ಮುಂದೆ ಹೋದಳು. ಸುಜ್ಞಾನ್ ಕೂಡ ಕಾಡಿಸಲು, " ಈಗ ನಿಂತ್ಕೋಳ್ಲಿಲ್ಲಾ ಅಂದ್ರೆ ಹೀಗೇ ವಾಪಸ್ಸು ಓಡಿ ಹೋಗ್ತೀನಿ " ಎಂದು ಬೆದರಿಸುತ್ತಾ ಹಿಂದಿಂದೆ ಹೆಜ್ಜೆ ಹಾಕಿದನು.
ವೈದೇಹಿ, " ನಾನೇನೂ ಹೆದ್ರುಕೋತೀನಾ.. ಹೋಗ್ರಿರ್ರೀ " ಎನ್ನುತ್ತಾ ಮುಂದೆ ಸಾಗಿದಳು. ದೊಪ್ಪನೇ ಧೂಮಕೇತುವೊಂದು ನೆಲಕ್ಕಪ್ಪಳಿಸಿದಂತೆ ಭಾರೀ ಸದ್ದಾಯಿತು. ವೈದೇಹಿ ಹಿಂತಿರುಗಿ ನೋಡಿದರೆ ಯಮ ಗಾತ್ರದ ಮರವೊಂದು ಸುಜ್ಞಾನ್ ಮೇಲೆ ತಣ್ಣನೆ ಮಲಗಿತ್ತು. ನೋಡಿದ್ದಷ್ಟೇ ನೆನಪು.. ಕಾಡಿನಲ್ಲಿ ಎಷ್ಟು ದಿವಸ ಬಿದ್ದಿದ್ದಳೋ, ಆಸ್ಪತ್ರೆಯಲ್ಲಿ ಕಣ್ಣು ಬಿಟ್ಟಾಗ ವೈದೇಹಿ ಎಲ್ಲರನ್ನು ಕಳೆದುಕೊಂಡು ಒಂಟಿಯಾಗಿದ್ದಳು.
ಪೋಂಮ್ ಪೊಂಮ್..... ಎಂದು ಹಿಂದಿನಿಂದ ಹಾರ್ನಗಳ ಶಬ್ಧದ ಕೇಳಿದಾಗಲೇ ವೈದೇಹಿ ವಾಸ್ತವಕ್ಕೆ ಬಂದಿದ್ದು. ಕಾರಿನಲ್ಲಿದ್ದ ವ್ಯಕ್ತಿ, ಮಗುವನ್ನು ನೋಡಿ ಒಂದು ಕ್ಷಣ ಸುಜ್ಞಾನ್, ಮಗುವನ್ನು ನೆನಪಿಸಿಕೊಂಡು ಮಳೆಯಲ್ಲೇ ಕಣ್ಣೀರು ಹಾಕಿದಳು. ಕಾರು ವೃತ್ತವನ್ನು ಬಳಸಿಕೊಂಡು ಬಲಕ್ಕೆ ಹೋಯಿತು. ವೈದೇಹಿ ಮಾತ್ರ ಎಡಕ್ಕೆ ಹೋಗಲೇ ಬೇಕಿತ್ತು, ಆಫೀಸ್ ಇರುವುದೇ ಅಲ್ಲಿ.
" ಮಳೆ, ಕಾಡು, ಬೆಳದಿಂಗಳು ಎಲ್ಲರ ಬದುಕಲ್ಲೂ ಖುಷಿ ಕೊಡಲ್ಲ ಅಲ್ವಾ " ಎಂದುಕೊಂಡು ಮತ್ತೆ ಮಳೆಗೆ ಬೈದಳು.
*****
ಮಹೇಶ್. ಆರ್
೨೩-೦೯-೨೦೨೯
Comments
Post a Comment