ಮಹೇಶ್...ಪುಲಿಕೇಶಿಯಾದ ಕಥೆ.
ನನಗೆ ಹೆಸರಿನ ಮುಂದೆ ಇನಿಶಿಯಲ್ ಸೇರ್ಸೋದು ಅಥವಾ ಹೆಸ್ರು ಹಿಂದೆ ಒಂದು "ಎ" ಎಕ್ಸ್ಟ್ರಾ ಸೇರ್ಸೋ ಈ ನ್ಯೂಮರಾಲಜಿ ಎಲ್ಲಾ ಇಷ್ಟ ಇಲ್ಲ, ಗೊತ್ತೂ ಇಲ್ಲ. ಮೊದಲನೇಯದಾಗಿ ಸಿನಿಮಾ ಇಂಡಸ್ಟ್ರಿಲೀ ತುಂಬಾ ಜನ ಮಹೇಶ್ ಇದಾರೆ. ಹಾಗಾಗಿ ಗುರುತು ಸಿಗೋಕೆ ಸುಲಭವಾಗಲಿ ಅಂತ ಹೆಸರಿನ ಪಕ್ಕ ಏನಾದರೂ ಸೇರ್ಸೋಣ ಎಂದುಕೊಂಡೆ. ಪಕ್ಕದಲ್ಲಿ ಅಪ್ಪನ ಹೆಸ್ರು ಸೇರ್ಸೋಣ ಅಂದ್ರೆ ಅವರ ಹೆಸರು ರಮೇಶ್ ಅಂತ ಆಮೇಲೆ ಜಾಹೀರಾತಿನ ಥರಾ ಅರೇ.. ಮಹೇಶ್ ಅರೇ... ರಮೇಶ್ ಅಂತ ಅಧ್ವಾನ ಆಗ್ಬಾರ್ದು ಅಂತ ಮನಸ್ಸನ್ನ ಬದಲಾಯಿಸಿದೆ. ನಾನು ಜ್ಯಾತ್ಯಾತೀತ ಆಗಿರೋದರಿಂದ ಜಾತಿಕ ಸೂಚಕ ಹೆಸರನ್ನು ಇಟ್ಟುಕೊಳ್ಳಲು ಇಷ್ಟವಿಲ್ಲ... ಪಂಪ ಹತ್ತನೇ ಶತಮಾನದಲ್ಲಿ "ಮನುಷ್ಯ ಜಾತಿ ತಾನೊಂದೇ ವಲಂ" ಎಂಬ ಮಾತನ್ನು ಹೇಳಿದ್ದಾನೆ, ಅದನ್ನು ನಂಬಿರುವವನು ನಾನು ಹಾಗಾಗಿ ಅದೂ ನಿಷಿದ್ಧ. ಇನ್ನೂ ಮೈಸೂರು ಮಹೇಶ್ ಅಂತ ಇಟ್ಕೋಳೋಣಾಂದ್ರೆ ಕೇಳೋದಕ್ಕೆ "ಮೈಸೂರ್ ಪಾಕ್" ಥರಾ ಇರುತ್ತೆ ಅದೂ ಬೇಡ ಅನಿಸ್ತು. ಅಷ್ಟಕ್ಕೂ ಈ ಅವಾಂತರ ಶುರುವಾಗಿದ್ದೇ "ಫ್ರೀ"ಯಾಗಿದ್ದ ನಮ್ಮ ತಂದೆಯ ಸ್ನೇಹಿತರು ಹಾಗೂ ನಮ್ಮ ಫ್ಯಾಮಿಲಿ ಡಾಕ್ಟರಿಂದ, ಪುಣ್ಯಾತ್ನ್ಮ ಫೋನು ಮಾಡಿದ್ಮೇಲೆ, ಉಂಡ, ಹುಯ್ಯಾದ ಅಂತ ಕೇಳಿ ಫೋನು ಇಡದೇ ನನ್ನ ಬಗ್ಗೆ ವಿಚಾರ್ಸಿದ್ದಾರೆ. ನಮ್ಮಪ್ಪ " ಏಯ್, ಅವ್ನ್ ಬಿಡಿ ಸಿನಿಮಾ, ಬರೆವಣಿಗೆ ಅನ್ಕೊಂಡು ಓಡಾಡ್ತಾ ಇದಾನೆ" ಅಂದರು. ಡಾಕ್ಟರ್, "ಹೌದಾ..! ನಂಗೊಂದು ಪಾರ್ಟ್ ಕೊಡ್ಸಿ, ಅಂದಹಾಗೇ ನಿಮ್ಮ ಮಗನ ಹೆಸ್ರು ಏನೂ ?" ಎಂದು ಕೇಳಿದ್ದಾರೆ. "ಮಹೇಶ್ ಅಂತ ನಿಮ್ಗೂ ಅವ್ನ್ ಆರ್ಟಿಕಲ್ಸ್ನ ಕಳ್ಸಿದ್ದೀನಿ" ಎಂದರು. ಆ ಡಾಕ್ಟರ್ ತಲೆಲೀ ಅದೇನೂ ಹೊಳೀತೋ ಏನೋ, ಏನ್ರೀ ಅದು ಖಾಲಿ ದೋಸೆ ಥರಾ ಬರೀ ಮಹೇಶ್... ಪಕ್ಕದಲ್ಲಿ ಏನಾದರೂ ಇಟ್ಕೋಳೋದಲ್ವ" ಎಂದಿದ್ದಾರೆ. ಅದನ್ನ ನಮ್ಮಪ್ಪ ಅಲ್ಲಿಗೆ ಬಿಟ್ಟಿದ್ರೆ ಸರಿ ಹೋಗಿರೋದು, "ಏನ್ ಇಟ್ಕೋಬೋದು ಸಾರ್" ಎಂದು ಕೇಳಿದ್ದಾರೆ. ಡಾಕ್ಟರ್ ಇದ್ದಕ್ಕಿದಂತೆ ಜ್ಯೋತಿಷಿ ಆದವರಂತೇ, " ಹ್ಞಾ... ಮಹೇಶ್ ಪುಲಿಕೇಶಿ ಅಂತ ಇಟ್ಬಿಡಿ, ಒಂದು ವರ್ಷದಲ್ಲಿ ಹೆಂಗ್ ಮಿಂಚ್ತಾನೇ ನೋಡಿ" ಎಂದರು. ಇದನ್ನ ನಮ್ಮಪ್ಪ ನನ್ನ ಕಿವಿಗೆ ಹಾಕ್ತು, ನಾನು ಕೇಳಿಸಿದರೂ ಕೇಳಿಸದವನ ಥರಾ ಇದ್ದೆ. ಅದಾದ್ಮೇಲೆ, ಕೋರೋನಾ ಶುರುವಾಯಿತು. ನಮಗೆ ಮಾಮೂಲಿ ಟೈಮಲ್ಲಿ ಕೆಲ್ಸ ಇರೋದೆ ಹೆಚ್ಚು ಇನ್ನೂ ಲಾಕ್ ಡೌನ್ ಟೈಮಲ್ಲಿ ಯಾವ ಘನಂದಾರಿ ಕೆಲ್ಸ ಇರುತ್ತೆ. ಆಗ ಹೆಸ್ರು ಬದಲಾಯಿಸ್ಕೊಂಡು ನೋಡೋಣ ಅಂದುಕೊಂಡೆ. ಅದೇ ಸಮಯಕ್ಕೆ ಸಿಕ್ಕ ನನ್ನ ಶಿಷ್ಯನೊಬ್ಬ, "ಭಯ್ಯಾ, ಏನ್ ಭಯ್ಯಾ ನಿಮ್ಮ ಏರಿಯಾ ಯಾವಾಗ್ಲೂ ಜನ ಕಚ್ಚಾ ಪಿಚ್ಚಿ ಅಂತ ಓಡಾಡ್ತಾನೇ ಇರ್ತಾರೆ" ಅಂತ ಕೇಳಿದ. ನಾನಾಗ, "ಕೆಸರಲ್ಲೇ ಕಣಯ್ಯಾ ಕಮಲ ಹುಟ್ಟೋದು, ಜನ ಜಾಸ್ತಿ ಇರೋ ಕಡೆ ಬದುಕು ಗೊತ್ತಾಗೋದು" ಎಂದೆ. ಆಮೇಲೆ ಯಾಕೆ ನಮ್ಮ ರೋಡ್ ಹೆಸರನ್ನೇ ಇಟ್ಕೋಬಾರ್ದು ಅಂತ ಮನಸ್ಸಿಗೆ ಬಂತು. ಅಂದಹಾಗೇ ನಮ್ಮ ಮನೆ ಇರೋ ರಸ್ತೆ ಹೆಸರು "ಪುಲಿಕೇಶಿ". ಇವೆಲ್ಲದಕ್ಕಿಂತ ಮುಖ್ಯ ಕಾರಣ ನಮ್ಮ ಮೇಡಂ, "ಅಟ್ಲಿಸ್ಟ್, ಹೆಸ್ರು ಚೇಂಜ್ ಮಾಡ್ಕೊಂಡ್ಮೇಲಾದ್ರೂ ಉದ್ಧಾರ ಆಗ್ತೀಯಾ ನೋಡೋಣ" ಎಂದು ಅವಳೇ ಒಳ್ಳೆ ದಿನ ನೋಡಿ ಈ ಹೆಸ್ರು ಇಟ್ಳು. ನಗು ತರಿಸೋದು ಏನೂಂದ್ರೆ, "ಈ ವಯಸ್ಸಲ್ಲಿ ನಮ್ಮ ಹುಡ್ಗಿ ನನಗೆ ನಾಮಕರಣ" ಮಾಡಿದ್ಲಲ್ಲ.
Comments
Post a Comment