ಮೊಂಡು ಹುಡುಗ ಸಾಣೆ ಹಿಡಿಯುವ ಹುಡುಗಿ
ಅದೇಕೋ ಕಾಣೆ ಇಷ್ಟು ದಿನ ಎಷ್ಟೇ ಕಿರಿಕಿರಿಯಾದರೂ ಜೊತೆಯಲ್ಲೇ ಇದ್ದು ಒದ್ದು ಬುದ್ಧಿ ಕಲಿಸುತ್ತಿದ್ದ ಹುಡುಗಿ ದಿಢೀರನೇ ಮಾಯವಾದಳು. ನಿನ್ನಿಂದ ಬಿಡುಗಡೆ ಬೇಕು ಎಂದು ಸಾರಾಸಗಟಾಗಿ ಉಗಿದು ಹೋದಳು. ಅವನಿಗೆ ಎಂದಿನಂತೆ ಇವಳು ಮತ್ತೆ ಬರುವಳು ಎಂಬ ನಂಬಿಕೆ. ಅವಳಿಗೆ ಪ್ರೀತಿ ಬಂಧನವೆನಿಸಿದೆ. ಎಲ್ಲಿ ತನ್ನನ್ನು ತೊರೆದು ಹೋಗುವಳೋ ಎನ್ನುವ ಭಯದಿಂದ ಅವಳನ್ನು ಮತ್ತಷ್ಟು ಬಿಗಿಯಾಗಿ ಅಪ್ಪಿ ಹಿಡಿದ್ದಿದಾನೆ. ಇವನ ಬಿಸಿ ಉಸಿರಿನ ಶಾಖವು ಅವಳನ್ನು ಜ್ವಾಲಾಮುಖಿಯಂತೆ ಸುಡುತ್ತಿದೆ. ಅವಳು ಬಿಡಿಸಿಕೊಳ್ಳಲು ಒದ್ದಾಡುತ್ತಿರುವುದು ಇವನಿಗೆ ಮುದ್ದಾಡುತ್ತಿರುವಂತೆ ಅನಿಸುತ್ತಿದೆ. ಅವಳಿಗೆ ಪ್ರೀತಿ ಹುಣ್ಣಂತೆ.. ಇವನಿಗೆ ಸರ್ವ ರೋಗಕ್ಕೂ ಪ್ರೀತಿಯೇ ಮುಲಾಮು.. ಇವನು ಇರದಿದ್ದರೆ ನಾನು ಆರಾಮು ಎನ್ನುತ್ತಿದ್ದಾಳೆ ಅವಳು. ಇವನನ್ನು ಬ್ಲಾಕ್ ಮಾಡಿ ನೆಮ್ಮದಿಯೆಂಬ "ಮೋಡ್" ನಲ್ಲಿದ್ದಾಳೆ. ಎಲ್ಲೇ ಹೋದರು ಮನಸ್ಸೆಂಬ ವಾಲ್ಪೇಪರಿನಲ್ಲಿ ಸದಾ ಅವಳ ಚಿತ್ರವನ್ನೇ ಕಡಿದಿಟ್ಟುಕೊಂಡಿದ್ದಾನೆ...!
ಪ್ರೀತಿಯ ತುಲಾಭಾರ ಮಾಡಿದರೆ...ಪ್ರಪಂಚವೆಲ್ಲಾ ತಕ್ಕಡಿಯ ಒಂದು ಕಡೆ ಹಾಕಿದರೆ, ಇನ್ನೊಂದು ಕಡೆ ಅವಳ ಬೊಗಸೆಯಷ್ಟು ಪ್ರೀತಿ ಸಾಕು.. ಎಲ್ಲವನ್ನೂ ಮೀರಲು...! ಆಷಾಢ ಮಾಸದ ಜಿಟಿ ಜಿಟಿ ಮಳೆಯಂತೆ ಅನುಕ್ಷಣವೂ ನೀ ನನ್ನೆದೆಗೆ ತಂಪನ್ನೆರೆಯುವೆ..
ಹೂವೊಂದು ಮಕರಂದದ ದಾಳಿಯನ್ನು ಅಪೇಕ್ಷಿಸುವಂತೆ. ಕೆಸರಲ್ಲಿ ಅರಳಿದ ಕಮಲ ವಿಷ್ಣುವಿನ ಪೂಜೆಗೆ ಸಲ್ಲುವಂತೆ..! ನನ್ನದೆಯ ಹೊನಲು ದೀಪಕ್ಕೆ ಅವಳ ಪ್ರೀತಿಯೇ ತೈಲದಂತೆ..!
ಮನಸ್ಸೆಂಬ ಕೊಳವನ್ನು ಸ್ವಚ್ಛ ಮಾಡಬೇಕು.. ಅವಳ ಕರಗಳು ನೀರನ್ನು ಸೋಕುವ ಮುನ್ನ...!
ಎದೆಯ ಹಾದಿಯಲ್ಲಿ ಕೆಂಡಸಂಪಿಗೆಯನ್ನು ಚೆಲ್ಲಿಬೇಕು.. ಅವಳ ಪಾದಗಳು ತಾಗುವ ಮುನ್ನ...!
ಕತ್ತಲ್ಲನ್ನೂ ದೂರ ಮಾಡಲು ಜ್ಯೋತಿ ಬೇಕು. .! ಬೆಳಕನ್ನು ಚೆಲ್ಲಿದ ಅದೇ ದೀಪಕ್ಕೆ ಪತಂಗವೊಂದು ಸಿಲುಕಿ ಸುಟ್ಟು ಹೋಯಿತು..! ಪ್ರೇಮವೆಂದರೆ ಇದೇ ಅಲ್ಲವೇ ಬೆಳಕಿನ ಜೊತೆ ಲೀನವಾಗುವುದು. ಅಹಂ, ನಾನತ್ವ ಪತನವಾಗಿ ಅವಳ ಆತ್ಮದೊಂದಿಗೆ ಲೀನವಾಗಬೇಕು. ಅವಳ ಮನದ ಪಿಸುಮಾತಿಗೆ ದನಿಯಾಗಬೇಕು.
ಆದರೂ ಆಗಾಗ ಅವಳ ಮನಸ್ಸು ಸಾಣೆ ಕಲ್ಲಿನಂತೆ ಗರಗರನೇ ತಿರುಗುತ್ತದೆ. ಹತ್ತಿರ ಹೋದಷ್ಟು ಬೆಂಕಿಯ ಕಿಡಿಯನ್ನು ಉಗುಳುತ್ತಾಳೆ. ಮತ್ತೆ ಮತ್ತೆ ಅವನನ್ನು ತಿದ್ದಿ ತೀಡುತ್ತಾಳೆ. ಅತಿಯಾಗಿ ಸಾಣೆ ಹಿಡಿಯಬೇಡ ಚೆಲುವೆ.. ಮೊಂಡಾದ ಆಯುಧ ತುಂಡಾದೀತು.
ಹೇ ಹುಡುಗಿ..! ನೀನೆಷ್ಟೇ ನನ್ನನ್ನು ದ್ವೇಷಿಸಿದರು.. ನಾನು ಮತ್ತಷ್ಟು ಮೋಹಿಸುವೆ.. ಇನ್ನಷ್ಟು ವಶವಾಗುವೆ.. ನೀನೆಷ್ಟೇ ನನ್ನನ್ನು ತೊರೆದು ದೂರ ಹೋದರು.. ನಾನು ಇನ್ನೂ ಹತ್ತಿರವಾಗುವೆ. ಸಂವಹನ ಇಲ್ಲದಿದ್ದರೇನೂ ಮೌನದಲ್ಲೇ ನಿನ್ನ ಧ್ಯಾನ ಮಾಡುವೆ.. ನಿನ್ನ ಗುಂಗಿನಲ್ಲೇ ಕಾಲಹರಣ ಮಾಡುವೆ.. ಈ ಜನ್ಮ ಕಳೆಯಲು 'ಸಾಯದ ಸಾವಿರಾರು ನಿನ್ನ ನೆನಪುಗಳಿವೆ'..! ಈ ನೆನಪುಗಳೇ ನನ್ನನ್ನು ಸದಾ ನಿನ್ನೆಡೆಗೆ ದೂಡುತ್ತವೆ.
ಹ್ಞಾ.. ಆದರೂ ಇಲ್ಲಿಯವರೆಗೂ ನಿನ್ನ ನೆನಪಾಗಿಲ್ಲ.. ಏತಕ್ಕೆ ಗೊತ್ತೆ ? ಮರೆತಿದ್ದರೆ ಅಲ್ಲವೇ ನೆನಪಾಗಲು..!
ನಿನ್ನನ್ನು ಪ್ರತಿ ಕ್ಷಣ ಜೀವಿಸುತ್ತಿದ್ದೇನೆ.. ದೂರವಿದ್ದು ರಾಧೆಯನ್ನು ಜಪಿಸಿದ ಕೃಷ್ಣನಂತೆ. ಜೊತೆಗಿರದ ಜೀವ ಎಂದಿಗಿಂತ ಜೀವಂತ..!
ಹ್ಯಾಪಿ ಬರ್ತ್ ಡೇ ಮುದ್ದಮುರಿ 😘😘😘🤗🤗🤗
Comments
Post a Comment