“ಎಷ್ಟು ಪಕಳೆಯುಂಟು ಹೇಳು ಸೇವಂತಿಗೆ”

ಅಷ್ಟೆ ಬಗೆಯ ಸೆಳೆತ ನನಗೆ ನಿನ್ನೊಂದಿಗೆ, 

ಜಯಂತ್ ಕಾಯ್ಕಿಣಿಯವರ ಈ ಸಾಲುಗಳು ಅವಳು ಪ್ರೀತಿಸುವ ಪರಿಯನ್ನು ಅರಿತೇ ಬರೆದಂತಿದೆ.  ಅವಳ ಒಲವೇ ಹಾಗೆ ದೇವನೊಬ್ಬ ನಾಮ ಹಲವಿನಂತೆ ಗೆಳೆತಿ, ಒಡತಿ, ಪ್ರೇಯಸಿ, ರಕ್ಕಸಿ ಎಲ್ಲವೂ ಆಕೆಯೇ. ಇಡೀ ಬ್ರಹ್ಮಾಂಡವನ್ನೇ ಬಾಯಲ್ಲಿ ಹುದುಗಿಸಿಕೊಟ್ಟಿಕೊಂಡ ಬಾಲಕೃಷ್ಣನಂತೆ ಕಾಣುವಳು. ಅವಳ ಮನಸ್ಥಿತಿಗೆ ತಕ್ಕಂತೆ, ಪರಿಸ್ಥಿತಿಗೆ ತಕ್ಕಂತೆ ಒಂದೊಂದೇ ಪಾತ್ರವಾಗುವಳು. ಎಲ್ಲಾ ಪಾತ್ರಕ್ಕೂ ಜೀವ ತುಂಬುವಳು. ಬೇಕೆಂದಾಗ ಜೀವ ತೆಗೆಯುವಳು. ಅವಳಿಲ್ಲದೇ ಏನೂ ಇಲ್ಲ. ನಾನು ಎನ್ನುವುದು ಕೂಡ ಭ್ರಮೆ. ಅವಳ ಪ್ರೀತಿಯ ಪ್ರಪಂಚದಲ್ಲಿ ನಾನು ಅವಳ ಕಾಲಿಗಂಟಿದ ಸಣ್ಣ ಧೂಳಷ್ಟೇ. ನಾನಾಗೇ ಅವಳ ಮುಡಿಗೇರಲು ಯುಗಗಳೇ ಬೇಕು. ಆದರೆ ಅವಳು ನನ್ನನ್ನು ರಸ್ತೆಯಲ್ಲಿ ಬಿದ್ದ ಸೂಜಿ ಮಲ್ಲಿಗೆಯಂತೆ ಮೆಲ್ಲನೆ ಅಷ್ಟೇ ಮೃದುವಾಗಿ ಎತ್ತಿ ಮುಡಿವಳು. ನನ್ನನ್ನು ಇನ್ನಷ್ಟು ಆಪ್ತನನ್ನಾಗಿಸುವಳು.

ನನಗಾಗಿಯೇ ಒಂದು ಜಗತ್ತನೇ ಸೃಷ್ಟಿಸಿದ್ದಾಳೆ. ಅವಳ ಅನುಮತಿ ಇಲ್ಲದೆ ಅಲ್ಲಿ ನನಗೂ ಪ್ರವೇಶವಿಲ್ಲ. ಗಾಳಿ ಬೇಕೆಂದಾಗ ಕಿಟಕಿ ತೆರೆದಂತೆ ಮೆಲ್ಲನೆ ಒಳಗೆಳೆದುಕೊಳ್ಳುವಳು . ಪ್ರೀತಿ ಹೆಚ್ಚಾಗಿ ಪಿತ್ತ ನೆತ್ತಿಗೇರಿದರೆ ಅನಾಮತ್ತಾಗಿ ಆಚೆ ಎಸೆದು ಕದವನ್ನು ಮುಚ್ಚಿ, "ಮತ್ತೆ ಬಾಗಿಲು ಬಡಿಯಲಿ" ಎಂದು ಬಯಸುವಳು. ಇದು ಎಂದೂ ಮುಗಿಯದ ಮುಗಿಲಿನಂತೆ.

ನನ್ನೆದೆಯ ಗರ್ಭಗುಡಿಯಲ್ಲಿ ವಿರಾಜಮಾನವಾದ "ದೇವಿ" ಅವಳು. ಅವಳನ್ನ ಹೊತ್ತು ಮೆರೆಸೋ ರಥದಂತೆ ನಾನು. ಆಕೆ ಶಕ್ತಿಗೆ, ಯುಕ್ತಿಗೆ, ಕೋಪಕ್ಕೆ, ಮುಲಾಜಿಗೆ ಒಂದಿಂಚೂ ಜಗ್ಗುವುದಿಲ್ಲ. ಪ್ರೀತಿಯಿಂದ ಕೈ ಸೋಕಿದರೆ ಸಾಕು, ತಾನೇ ಉರುಳುವಳು. ಉಗಿಬಂಡಿಯಂತಾಗುವಳು.

ನಿಜಕ್ಕೂ ಅವಳು ಎಲ್ಲಾ ನೋವನ್ನು ಮರೆಸೋ "ಮಾಯಾವಿ". ಹೇಗೆ ಅಂತೀರಾ, ಅದನ್ನು ಮೀರಿಸುವಂಥ ಹುಳವೊಂದು ತಲೆಗೆ ಬಿಡುವಳು ಅಥವಾ ಊರು-ಕೇರಿ ಒಂದಾಗುವಂತ ಜಗಳ ತೆಗೆಯುವಳು. ಇದರ ಮುಂದೆ ಮಿಕ್ಕೆಲ್ಲ ನೋವು ತೃಣಕ್ಕೆ ಸಮ ಎನಿಸುವುದು.

ಅವಳು ಪ್ರೀತಿ ಕೊಡಲು ಶುರು ಮಾಡಿದರೆ ದೇವ ಗಂಗೆಯಂತೆ  ಸದಾ ಹರಿಯುವಳು. ಸಿಟ್ಟಿಗೆದ್ದರೆ ಸ್ತಬ್ಧವಾಗದ ಸುನಾಮಿಯಾಗುವಳು. ಮುಖದಲ್ಲಷ್ಟೇ ಮುಗ್ಧ ಮುದ್ದು ಸುಂದ್ರಿ, ಪತ್ತೇದಾರಿ ಪ್ರತಿಭಾನಂತೆ ಪತ್ತೆ ಮಾಡಿ, ಸ್ಕೆಚ್ ಹಾಕಿ ಖೆಡ್ಡಾಗೆ ಬೀಳಿಸುವುದರಲ್ಲಿ ಖತರ್ನಾಕ್ ಕಿಲಾಡಿ. ಹಳ್ಳಕ್ಕೆ ಬಿದ್ದ ಮೇಲೆ ಒಂದಷ್ಟು ಕಲ್ಲು ಸುರಿದು ಸಿಟ್ಟು ಇಳಿದ ಮೇಲೆ, "ನಾನೇನು ಮಾಡ್ದೆ" ಎಂದು ಏನೂ ಅರಿಯದ "ಮುದ್ದು ರಾಕ್ಷಸಿ"ಯಂತೆ ಪಿಳಿ ಪಿಳಿ ಕಣ್ಣು ಬಿಡುವಳು.

ಒಮ್ಮೊಮ್ಮೆ ಅವಳು ಹಿಮಾಲಯದಲ್ಲಿ ಧ್ಯಾನಕ್ಕೆ ಕೂತ ಸಾಧು-ಸಾಧ್ವಿಗಳಿಗಿಂತ ಸಾವಿರ ಪಟ್ಟು ಒಳ್ಳೆ ಮನಸ್ಸು ಇರುವಂತ ಪರಿಪೂರ್ಣ ಆತ್ಮ. ಮೂಡ್ ಸ್ವಿಂಗ್ ಆಗಿ ರಾಂಗ್ ಆದರೆ ನರ ಮನುಷ್ಯನನ್ನು ತಿನ್ನುವ "ನಾಗಾಸಾಧುವಿನಂತೆ" ಇಂಚಿಂಚೂ ಮೆದುಳಿಗೆ ಮಾತಿನ ಚಾಟಿ ಏಟು ಕೊಟ್ಟು, ದಯವಿಟ್ಟು ನನಗೆ ದಯಾಮರಣ ಪಾಲಿಸು ಎನ್ನುವಂತೆ ರೌರವ ನರಕ ದರ್ಶನ ಮಾಡಿಸುವಳು. 

ಆದರೂ ಅವಳು "ನನ್ನಮ್ಮನಂತೆ", ಕೊಲ್ಲುವಷ್ಟು ಕೋಪವಿದ್ದರೂ, ಸಮುದ್ರದಷ್ಟು ಪ್ರೀತಿ ಕೊಡುವಳು. ಸಿಟ್ಟಿಗೆದ್ದರೇ ಶೋಲೆ ಫಿಲಂನ ಅಮಿತಾಬ್ನಂತೆ ಎದೆಗೆ ಜಾಡಿಸಿ ಒದೆಯಲು ಹೋಗಿ ಹೊಟ್ಟೆಗೆ ಹೊಡೆದು, ಮತ್ತೆ ಛಲ ಬಿಡದ ತಿವಿಕ್ರಮನಂತೆ ಒದೆಯುವಳು. ಅರೆಕ್ಷಣಕ್ಕೆ ಅಮ್ಮನಂತೆ, "ನೋವಾಯ್ತಾ  ಚಿನ್ನಿಮರಿ" ಎಂದು ಕೇಳಿ, ಆದ್ರೂ ಆಗ್ಲಿ ಬಿಡು" ಎನ್ನುವಳು ನನ್ನ ಮುದ್ದಿನ ಮೂರಡಿ ಬಚ್ಚನ್(ದಯವಿಟ್ಟು ಇದಕ್ಕೆ ಸೇಡು ತೀರಿಸ್ಕೊಬೇಡ).

ಶುರುವಾತಿನಲ್ಲಿ ಅವಳು ಅಮ್ಮನಂತಿದ್ದವಳು, ಈಗೀಗ ಅವಳೇ "ಮಗುವಾಗಿರುವಳು". ಪುಟ್ಟ ವಿಷಯಕ್ಕೂ ಮಗುವಿನಂತೆ ರಚ್ಛೆ ಹಿಡಿಯುವಳು. ಬಾಳೆ ತೋಟಕ್ಕೆ ನುಗ್ಗಿ ದಾಂಧಲೆ ಮಾಡುವ ಸಲಗದಂತೆ, ಕೈಗೆ ಸಿಕ್ಕೆದ್ದೆಲ್ಲ ಎಸೆಯುವ ಕಂದಮ್ಮನಾಗಿರುವಳು. ಎಂದಿಗೂ ನೀ ಬೇಡವೇ ಬೇಡ ಎಂದು ತಿರುಗಿ ನೋಡದೇ ಹೋಗುವಳು. ಪುನಃ ಅಮ್ಮನ ನೆನಪಾದ ಮಗುವಿನಂತೆ ಓಡಿ ಬಂದು ಅಪ್ಪಿ ಮುದ್ದುಗರೆವಳು. 

ಮೈಯಲ್ಲಿ ಮುಕ್ಕೋಟಿ ದೇವರಿರುವ ಕಾಮಧೇನಿನಂತೆ ಅವಳು. ಅವಳ ತುಂಬ ಬರೀ ಪರಿಶುದ್ಧ ಪ್ರೇಮವೇ ಕೂಡಿದೆ.

"ಎಷ್ಟು ಪಕಳೆಯುಂಟು ಹೇಳು ಸೇವಂತಿಗೆ                                  ಅಷ್ಟೆ ಬಗೆಯ ಸೆಳೆತ ನಮ್ಮಿಬ್ಬರಿಗೆ" 

“Happy Valentine’s Day ಮುದ್ದುಮರಿ”

Comments

Popular Posts