ಶ್ರುತಿ ಕರೆದಾಗ

ಶ್ರುತಿ ಮತ್ತೆ ಕರೆ ಮಾಡಿದಾಗ, ವಿಧಿಯಿಲ್ಲದೆ ಚಂದನ್ ಫೋನನ್ನು ಎತ್ತಿದ.

"ಎಷ್ಟು  ಸಲ  ಫೋನ್ ಮಾಡಬೇಕೋ ಕಿವುಡ" ಎಂದು ಶ್ರುತಿ ಎಂದಿನಂತೆ ಬಡಬಡಿಸಿದಳು.
"ಮಲಕೊಂಡಿದ್ದೇ ಶ್ರೂ"ಮಗ್ಗಲು ಬದಲಿಸುತ್ತಾ ಪಿಸುಗುಟ್ಟಿದ. 
"ಲೋ ಸೋಂಬೇರಿ, 5ಗಂಟೆಗೇ ಬಂದು ಲಾಂಗ್ ಡ್ರೈವ್ ಕರಕೊಂಡು ಹೋಗ್ತೀನಿ ಅಂದೊನು, 6.15 ಆದ್ರೂ ಪತ್ತೇನೇ ಇಲ್ವಲೋ" ಎಂದು ಫೋನಿನಲ್ಲೇ ಉಗಿದಳು.
"ಇಲ್ಲಾ ಶ್ರೂ.... ಮಧ್ಯಾನ್ಹ ಬೀಗರ ಊಟಕ್ಕೆ ಹೋಗಿದ್ದೆ,ಬಂದು ಸುಮ್ನೆ ಕೂತಿದ್ದು ಅಷ್ಟೇ, ನಿದ್ರೆ ಬಂದಿದ್ದೆ ಗೊತ್ತಾಗಿಲ್ಲ" ಎಂದು ಫೋನಲ್ಲೇ ಸಮಾಧಾನ ಮಾಡಲು ಪ್ರಯತ್ನುಸುತೀದ್ದ.
"ಚೆನ್ನಾಗಿ ದನ ತಿಂದಂಗೇ ತಿಂದ್ರೆ, ಕುಂಭಕರ್ಣನ ನಿದ್ರೆ ಬರದೇ ಇನೇನಾಗುತ್ತೆ"
"ಶ್ರೂ ಸಾರಿ.... 10ಮಿನಟ್ಸ್ ನಿಮ್ಮ ಮನೆ ಮುಂದೆ ಇರ್ತೀನಿ"
"ನೋಡ್ತಿನಿ... ಅದೆಷ್ಟೊತ್ತಿಗೆ ಬರ್ತೀಯ" ಎಂದು ಫೋನನಿಟ್ಟಳು.
"ಸರಿ ಸರಿ ಬೈ " ಎಂದು ಫೋನಿಟ್ಟು, ಮುಖ,ಮುಸುಡಿ ತೊಳೆದು, ಬಟ್ಟೆ ಬದಲಿಸಿಕೊಂಡು ಗಿರಿನಗರದ ಅವಳ ಮನೆ ಮುಂದೆ ಬರೋದಿಕ್ಕೆ 35 ನಿಮಿಷ ತಗೊಂಡ. ಗೇಟಿನ ಹತ್ತಿರ ಕಾದು ಕಾದು ಸಾಕಾಗಿದ್ದ ಶ್ರುತಿ, ಹಾರ್ನ್ ಶಬ್ದ ಕೇಳಿದ ತಕ್ಷಣ ಕಾರ್ ಡೋರ್ ತೆಗ್ದು ಒಳಗೆ ಕೂತು ಬಟ್ಟೆ ಸರಿ  ಮಾಡಿಕೊಂಡಳು. ಕೋಪದಲ್ಲಿ ಅವಳ ಮುಖ ಕೇಂಪೇರಿತ್ತು. ಇವನಿಗೂ ಮಾತನಾಡಲೂ ಅಂಜಿಕೆ, ಅಂತೂ ಇಂತೂ ಇವನೇ ಮೌನ ಮುರಿದ, 
"ವೈಟ್ ಚೂಡಿದಾರಲ್ಲಿ ನಮ್ಮ ಹುಡ್ಗಿ ಅಪ್ಸರೇ" ಅನ್ನೋಕೆ ಬಾಯಿ ತೆಗೆದು ಎಡಕ್ಕೆ ತಿರುಗಿದ.
"ಬಾಯಿ ಮುಚ್ಚ್ಕೋಂಡು ಮುಂದೆ ನೋಡು ಅನ್ಯಾಯವಾಗಿ ಆ ಮುದುಕನ ಸೈಕಲ್ಗೆ ಗುದ್ದು ಬಿಡ್ತಿದ್ದಲ" ಎಂದು ಗದರಿದಳು. ಬಿಳಿ ಕೊಳೆ ಬಟ್ಟೆಯ ಮುದುಕ ಇವನನ್ನೇ ದಿಟ್ಟಿಸಿ ನೋಡಿ ಸೈಕಲ್ ಪೆಡಲ್ ಅನ್ನು ತುಳಿದ.
"ಆಯ್ತಮ್ಮ ಮುಂದೆ ನೋಡ್ಕೋಂಡೆ ಹೇಳ್ತೀನಿ, ತುಂಬಾ ಚೆನ್ನಾಗಿ ಕಾಣ್ತಿದೀಯ, ನಂದೇ ದೃಷ್ಟಿ  ಬೀಳಬಹುದು. ಯಾವುದಕ್ಕೂ ಈ ಹೊಸ ಮನೆ ಕಟ್ಟೋವಾಗ ಒಂದು ದೃಷ್ಟಿ ಗೊಂಬೆ(ಊರ್ಧ್ವರೋಮ) ಹಾಕೀರ್ತರಲ್ಲ, ಆ ತರ ನೀವು ಒಂದು ಹಾಕೋ ಬಿಡಿ".
"ಹ್ಹ ಹ್ಹ, ಸಾಕು ಸಾಕು ಈ ತರ ಮಾತಾಡಿನೇ ಅಲ್ವಾ ಹಳ್ಳಕ್ಕೆ ಬೀಳಿಸಿದ್ದು" ಎಂದು ನಗು ಮತ್ತು ನಾಚಿಕೆ ಮಿಶ್ರಣದಲ್ಲಿ ಹೇಳಿದಳು.
"ಎರಡು ಕಣ್ಣಲ್ಲಿ 60-60 ಅಡಿ ಹಳ್ಳ ತೆಗ್ದು ಓಡಾಡ್ತಿದ್ರೆ, ವಯಸ್ಸಿಗೇ ಬಂದಿರೋ ಗಂಡು ಮಕ್ಕಳು ಬೀಳದೆ ಎಷ್ಟೊತ್ತು ಅಂಥ ತಡ್ಕೋಳೊದು" ಎಂದು ಕಿಚಾಯಿಸಿದ.
"ಹಳ್ಳನ ಹೆಣ ಹೂತಾಕಕ್ಕೂ ತೆಗದಿರ್ತಾರೆ" ಎಂದು ಅವನ ಕಾಲೆಳೆದಳು.
"ಹ್ಹ ಹ್ಹ ಹೌದೌದು" ಎಂದು ಇವಳತ್ತ ತಿರುಗಿ ನೋಡಿ.
"ಹೇ ಲಾರಿ ಬರ್ತಿದೆ" ಎಂದು ಅವನ ಟೀ-ಶರ್ಟುನ್ನು ಹಿಡಿದು ಜಗ್ಗಿದಳು. ಅಷ್ಟೇ ವೇಗದಲ್ಲಿ ಕಾರ್ ಸ್ಟಿಯರಿಂಗನ್ನು ಎಡಕ್ಕೆ ಎಳೆದು ಕೂದಲೆಳೆಯಲ್ಲಿ ಪಾರಾದರು. ಲಾರಿ ಹಳದಿ,ಹಸಿರು,ಕೆಂಪು ಮಿಶ್ರಿತ ಯಮನಂತೆ ಕಾಣಿಸಿದ.
"ಏನ್ ಜನಗಳೋ ಮೈ ಮೇಲೆ ಬರ್ತಾರೆ" ಎಂದು ಮುಖ ಒರೆಸಿಕೊಂಡ.
"ಚಂದೂ ನಿಧಾನಕ್ಕೆ ಹೋಗೋ" ಶ್ರುತಿ ಗಾಬರಿಯಿಂದ.
"ಸರಿ ನಿಧಾನಕ್ಕೆ ಹೋಗ್ತಿನಿ, ಡೋಂಟ್ ವೆರಿ" ಅವಳ ದುಗುಡವನ್ನು ದೂರ ಮಾಡಲು ಹೇಳಿದ.
"ಸರಿ, ಎಲ್ಲಿಗೆ ಕರ್ಕೋಂಡು ಹೋಗ್ತೀದ್ಯ.... ?"
"ತಾವರೇಕೆರೆ  ಹತ್ರ, ಇಲ್ಲಿಂದ ಇನ್ನೂ 7km"
"ಚಂದೂ ಸಾಕು ಮನೆಗೆ ಹೋಗೋಣ್ವಾ, ಯಾಕೋ ಭಯ ಆಗ್ತೀದೆ"
"ಶ್ರೂ.... ಇವತ್ತು ಬಿಟ್ರೇ ಇನ್ನೂ 2 ತಿಂಗಳು ನಾವು ಎಲ್ಲೂ ಈ ತರ ಲಾಂಗ್ ಡ್ರೈವ್ ಹೋಗೋಕೆ ಆಗೋಲ್ಲ, ಮದುವೆ ಬಿಜ಼ೀಲೀ"
"ಅಮ್ಮ, ಹೋಗಬೇಡ ಹಸಿ ಮೈ ಅಂತಿದ್ರೂ, ನಾನು ನಿಮ್ಮ ಮನೆಗೆ ಅಂತ ಸುಳ್ಳು ಹೇಳ್ದೆ.
"ನಾನು ಅದೇ ಸುಳ್ಳು ಹೇಳಿರೋದು"
"ಅದ್ಸರೀ, ತಾವರೇಕೆರೆಗೆ ಯಾಕೇ ?"
"ಅಲ್ಲೋಂದು 500 ವರ್ಷದ ಹಳೇ ಬಂಗ್ಲೆ ಇದೆ... ನಿಂಗೇ PhD ಪಾಸ್ ಮಾಡೋಕೆ ಅದೇನೋ ಹಳೇ ಸಾಮಾನು -ಹಳೇ ಪಾತ್ರೆ, ಖಾಲಿ ಸೀಸ,ತಗಡು ಕೇಳ್ತಿದಲ್ಲ ಇಷ್ಟು ದಿನ, ಅದೆಲ್ಲಾ ಸಿಗುತ್ತೆ ಅಲ್ಲಿ" 
"ಲೋ ಬೆಳಿಗ್ಗೆ ಬರ್ಬೋದಿತ್ತು ಅಲ್ವಾ"
"ಆ ಬಂಗ್ಲೆನ ಒಬ್ಬ ಘಾಟಿ ಮುದುಕ ನೋಡಿಕೊಳ್ಳೋದು, ಬೆಳಿಗ್ಗೆ ಹೊತ್ತು ಸತ್ರೂ ಬಿಡಲ್ಲ, ರಾತ್ರಿ ಹೊತ್ತು ಅವನೇ ಕುಡಿದು ಸತ್ತೋಗೀರ್ತಾನೆ" 
"ಥಾಂಕ್ಸ್ ಕಣೋ, ನಂಗೋಸ್ಕರ ಏನೆಲ್ಲಾ ಮಾಡ್ತಿಯ ಅಲ್ವಾ"
"ಮಾಡ್ಲೇಬೇಕಲ್ಲಾ, ಇಲ್ಲಾಂದ್ರೇ ಮದ್ವೆ ಆದ ಮೇಲೆ ಬಿಡ್ತೀಯಾ"
"ಹ್ಹ ಹ್ಹ" ಶ್ರುತಿ ಮುಗುಳ್ನಕ್ಕು ಅವನನ್ನು ನೋಡಿದಳು.
"ಶ್ರೂ.... ಐ ಲವ್ ಯೂ" ಎಂದು ಅವಳನ್ನೇ ನೋಡುತ ಕೈ ಹಿಡಿದ.
ದಡಕ್ಕನೆ ಕಾರು ರಸ್ತೆ ಮೇಲಿದ್ದ ಒಂದು ಗುಂಡಿಗೆ ಇಳಿಯಿತು, ಕಾರ್ ಚಕ್ರ ಕೀತ್ಥೋಗೋ ಅಷ್ಟು ಸದ್ದು ಮಾಡಿತ್ತು. 
"ನಿಧಾನಕ್ಕೆ ನೋಡಿಕೊಂಡು ಹೋಗು" ಶ್ರುತಿ  ಭಯದಿಂದ
"ಬಂತು, ಅಲ್ಲಿ ನೋಡು ಆ ಬೋರ್ಡ್ ಕಾಣ್ತಿದೀಯೆಲ್ಲ, ಅಲ್ಲಿಂದ ಬಲಕ್ಕೆ ತಿರುಗಿ 1km ಒಳಗೆ ಹೋದ್ರೆ ಬಂಗ್ಲೆ ಸಿಗುತ್ತೆ" ಎನ್ನುತ್ತಲೇ ಕಾರನ್ನು ಬಲಕ್ಕೆ ತಿರುಗಿಸಿದ.
ದಾರಿಯಲ್ಲಿ ಬೀದಿ ದೀಪಗಳೆ ಇಲ್ಲದೆ ಬಿಕೋ ಎನ್ನುವದನ್ನು ಕಂಡು ಶ್ರುತಿ "ಲೋ ಬೇಡ ಮನೆಗೆ ಹೋಗಣಾ"
"ಡೋಂಟ್ ವೆರೀ ಶ್ರೂ ನಾನಿಲ್ವಾ..."
ಒಂದು 200 ಮೀಟರ್ ಮುಂದಕ್ಕೇ ಹೋದ ಕಾರು ದಸ್ ಎಂದು ನಿಂತಿತು. 
"ಚಂದೂ ಏನಾಯಿತು..?" 
ಅವಳನ್ನು ಹೆದರಿಸಲು "ಹ್ಹ ಹೆಹ್ಹೆ ಹ್ಹೆ" ಎಂದು ಹುಚ್ಚನಂತೆ ನಗುತಿದ್ದನು.
ಶ್ರುತಿ ಭಯದಿಂದ "ಲೋ ಪ್ಲೀಜ಼ ಹಂಗೆಲ್ಲಾ ನಗಬೇಡ್ವೂ ನಂಗೆ ಭಯ ಆಗುತ್ತೆ" ಆತಂಕದಿಂದ.
"ಶ್ರೂ ನಾನ್ ಏನಾದ್ರೂ ದೆವ್ವ ಆಗಿದ್ರೆ ಏನ್ ಮಾಡ್ತೀಯ" ಎಂದು ಕಾರ್ ಕೀ ತಿರುಗಿಸಿದ. ಶ್ರುತಿ ಏನು ಮಾತನಾಡುವುದಿಲ್ಲ, ಕಾರಿನಲ್ಲಿ ಈವಾಗ ಮೌನ, ಸ್ವಲ್ಪ ಗಂಭೀರದಿಂದ ಶ್ರುತಿ" ನಾನಗೀದ್ರೇ..?"
ಚಂದನ್  ನಗುತ್ತಾ "ಹೀಹೀಹೀ ನಿಂಗೆ ಕಿಸ್ಸ್ ಕೋಟ್ಟುಬಿಡ್ತಿನಿ, ದೆವ್ವ ಮುಂದಕ್ಕೇ ಏನಾದ್ರೂ ಮಾಡ್ಬಿಡ್ತಾನೇ ಅಂತ ಎಸ್ಕೇಪ್ ಆಗುತ್ತೆ" ಕಾರು 50 ಹೆಜ್ಜೇನೂ ಹೋಗಿಲ್ಲ... ಈ  ಸಲ ಕಾರು ತಾನಾಗೇ ನಿಂತಿತು. ಚಂದನ್ ಕಾರನ್ನು ಸ್ಟಾರ್ಟ್ ಮಾಡುತಿದ್ದಾನೆ, ಪಕ್ಕದಿಂದ ಒಂದು ವಿಚಿತ್ರವಾದ ನಗು, ಗಾಬರಿಯಿಂದ ಚಂದನ್ ಶ್ರುತಿಯತ್ತ ನೋಡಿದ, ಶ್ರುತಿ ಹಾಕಿದ್ದ ಬಿಳಿ ಚೂಡಿದಾರ್, ಬಿಳಿ ಸೀರೇಯಾಗೀತ್ತು, ಮುಖ ದೃಷ್ಟಿ ಗೊಂಬೆಯಂತೆ ಅಗಲವಾದ ಕಣ್ಣುಗಳು, ಕೆಂಪು ಮುಖ,ನಾಲಿಗೆಯನ್ನು ಹೊರ ಚಾಚಿ ನಗುತೀದ್ದಳು. ಚಂದನ್ ಭಯದಲ್ಲಿ ಕಿರುಚುತ್ತಾ ಕಾರ್ ಡೋರ್ ತೆಗೆಯಲು ಪ್ರಯತ್ನುಸುತೀದ್ದ. ಡೋರ್ ಲಾಕ್ ಆಗಿತ್ತು, ಎಷ್ಟೇ ಪ್ರಯತ್ನಪಟ್ಟರು, ಕಾರ್ ಡೋರ್ ಓಪೆನ್ ಆಗಲಿಲ್ಲ.
"ಏನೋ ಬೋಳಿ ಮಗನೇ ಕಿಸ್ಸ್ ಕೊಡ್ತೀಯಾ, ದೇವ್ವಾನೇನೂ ನಿನ್ನ ಹೆಂಡ್ತೀ ಅನ್ಕೊಂಡಿದಿಯ...?"
ಇವನು ಕೈ ಮುಗಿಯುತ್ತ "ಪ್ಲೀಜ಼ ನನ್ನ ಕ್ಷಮಿಸುಬಿಡು, ನಂಗೆ ತಲೆ ಕೆಟ್ಟು ಹಂಗೆ ಮಾತಾಡಿದೆ, ಇದೊಂದು ಸಲ ನನ್ನ ಬಿಟ್ಟುಬಿಡು" ಎಂದು ಕಾಲು ಹಿಡಿದುಕೊಳ್ಳಲು ಬಗ್ಗಿದ ಕಾಲು ಇಲ್ಲ, ಎದ್ದು ನೋಡುತಾನೇ ದೇಹಾನು ಇಲ್ಲ.. ಯಾರು ಇಲ್ಲ... ಕಾರ್ ಒಳಗೆ ಉರಿತಿದ್ದ ಲೈಟ್ ಕೂಡ ಆಫ್ಫಾಗೀತ್ತು. ಚಂದನ್ ಜಂಘಾಬಲವೇ ಕುಸಿಯಿತು. ಭಯದಿಂದ ದೇವರ ಮಂತ್ರ  ಹೇಳುತ್ತಲೇ ಕಾರ್ ಕೀ ಆನ್ ಮಾಡಿದ "ಪೂಜ್ಯಾಯ ರಾಘವೇಂದ್ರಾಯ" ಅನ್ನುವಷ್ಟರಲಿ ಕಾರ್ ಸ್ಟಾರ್ಟ್ ಆಗಿತ್ತು. ಕಾರಿನ ಒಳಗೂ ಒಬ್ಬನೇ,ಹೊರಗೂ ಕೂಡ. ಕಾರನ್ನು U ಟರ್ನ್ ತೆಗೆದುಕೊಳ್ಳೋಣ ಅಂದ್ರೆ ಒಂದು ಕಾರ್ ಹೋಗುವಸ್ಟು ಮಾತ್ರ ಜಾಗ, ರಿವರ್ಸ ಬರೋಣ ಅಂದ್ರೆ ಕಾಣದ ಕಗ್ಗತ್ತಲು, ಮುಂದೆ ಎಲ್ಲಾದ್ರೂ ಹೋಗಿ ಟರ್ನ್ ಮಾಡಿಕೋಳೊಣ ಎಂದು ಭಯದಿಂದಲೇ ಕಾರನ್ನು ಓಡಿಸಿದ. 750 ಮೀಟರ್ ಮುಂದಕ್ಕೇ ಹೋಗ್ತೀರೋ ಹಾಗೇನೇ ಒಂದು ದೊಡ್ಡ ಬಂಗ್ಲೆ,ಬಂಗ್ಲೆ ಗೇಟ್ ಒಳಗೆ ಒಂದು ಲಡಕಾಸಿ ಸೈಕಲ್ ಹಾಗೂ ಲಾರಿ, ಬಂಗ್ಲೆ ಸುತ್ತ ರಸ್ತೆ, ಅಲ್ಲಿ ಟರ್ನ್ ಮಾಡಿಕೊಳೊಣ ಎಂದು ಹೋದ.. ಒಂದು ಸುತ್ತು ಬಂದಾ ಆದರೆ ಬಂದ ರಸ್ತೆಯೇ ಇರಲಿಲ್ಲ. ಮೈ ನಡುಗಿಸುತ್ತಾ ಮಂತ್ರ ಹೇಳುತ್ತಲೇ ಇನ್ನೂ 3-4 ಸಲ ಸುತ್ತಿದ ಆದ್ರೆ ಬಂದ ರಸ್ತೆಯಿಲ್ಲ, ಮೈದಾನದಂತೆ ವೃತ್ತಾಕಾರ ಅಷ್ಟೇ. ಬದುಕಿದರೆ ಸಾಕು ಎಂದು ಕಾರನ್ನು ಬಿಟ್ಟು ಓಡಿಹೋಗೋಣ ಎಂದು ತೀರ್ಮಾನಿಸಿ ಕಾರ್ ಡೋರ್ ಅನ್ನು ತೆಗೆದ ಇವನ ಅದೃಷ್ಟಕ್ಕೆ ಡೋರ್ ಓಪನ ಆಯಿತು. ಅಲ್ಲಿಂದ ಬದೂಕ್ತೂ ಬಡ ಜೀವ ಅಂತ ಗದ್ದೆ,ಹಳ್ಳ,ಮುಳ್ಳು,ಕಲ್ಲು, ನೋಡದೆ ಓಡಿದ, ಯಾರೋ ಹಿಂಬಾಲೀಸುತೀದ್ದಾರೆ ಅಂತ ಸ್ವಲ್ಪ ಅನುಮಾನ ಬಂದು ಹಿಂದೆ ತಿರುಗಿ ನೋಡ್ತಾನೆ, ಯಮರೂಪಿ ಲಾರಿ ಹಾಗೂ ಲಡಕಾಸಿ ಸೈಕಲ್ನಲ್ಲಿ ಆ ಮುದುಕ ಬೆನ್ನು ಹತ್ತಿದ್ದಾರೆ. ಇನ್ನುಸ್ಟು ಮತ್ತಸ್ಟು ಜೋರಾಗಿ ಓಡಿದ, ಎದ್ದು  ಬಿದ್ದು ಮೈಯಿಂದ ರಕ್ತ ತೊಟ್ಟಿಕ್ಕುತ್ತಿದ್ದರು ಓಡಿದ, ರಸ್ತೆ,ದೀಪ,ಜನಗಳು  ಕಾಣಿಸಿಕೊಂಡರು ಓಡಿದ, ಮನೆಯ ಗೇಟನ್ನು ತೆಗೆಯದ ಸೀದಾ ಕಂಪೋಂಡ್ ಹಾರಿ ಬಾಗಿಲು ಬಡಿದ, ಬಾಗಿಲು ಮೊದಲೇ ಓಪನ ಆಗಿತ್ತು, ಒಳಗೆ ಹೋಗಿ ರೂಮಿನಲ್ಲಿ ಮಂಚದ ಮೇಲೆ ಅಂಗಾತ ಮಲಗಿಕೊಂಡು ಸ್ತಬ್ದವಾಗಿದ್ದ ಫಾನ್ನ್ನು ದಿಟ್ಟಿಸುತ್ತಾ ಕಣ್ಣು ಮುಚ್ಚಿದ, ಒಂದೇ ಸಮನೇ ಫೋನ್ ರಿಂಗ್ ಆಗುತ್ತಿತ್ತು. ನಿಧಾನವಾಗಿ ಕಣ್ಣು ತೆರದ ಫಾನ್ ತಿರುಗುತಿತ್ತು. ಪಟ್ಟನೆ ಎದ್ದು ಕೂತು ಮೈ ಕೈ ನೋಡುತಾನೇ ರಕ್ತವು ಇಲ್ಲ,ಕಲೆಯು ಇಲ್ಲ. ಇನ್ನೂ ಫೋನ್ ರಿಂಗಾಗುತಿತ್ತು, ಯಾರಿರಬಹುದು ಎಂದು ಫೋನ್ ನೋಡಿದ " Shruthi calling" ಅಂತ ಹೆಸರು ನೋಡಿ ದಂಗಾದ.. ಸ್ವಲ್ಪ ಸಾವರಿಸಿಕೊಂಡು " ಹೆ  ಹೆ ಹೆಲ್ಲೋ " ಎಂದ.
ಆ ಕಡೆಯಿಂದ "ಎಷ್ಟು  ಸಲ  ಫೋನ್ ಮಾಡಬೇಕೋ ಕಿವುಡ" ಎಂದು ಶ್ರುತಿ ಎಂದಿನಂತೆ ಬಡಬಡಿಸಿದಳು.

                                *****

ಮಹೇಶ್ ಪುಲಿಕೇಶಿ

18/04/2016


Comments

Popular Posts