ಪಾಂಚಾಲಿಪುರದಲ್ಲಿ ಸೀತೆ

ಕಾಲ್ಪನಿಕ ಕಥೆ..

ಒಂದಾನೊಂದು ಕಾಲದಲ್ಲಿ ಪಾಂಚಾಲಿಪುರ ಎಂಬ ಊರಿನಲ್ಲಿ ಒಂದು ಪದ್ಧತಿ ಇತ್ತು.
ಪದ್ಧತಿ ಏನಪ್ಪಾ ಅಂದ್ರೆ, ಒಂದು ಹೆಣ್ಣು ಐದು ಗಂಡಸರನ್ನು ಮದುವೆ ಆಗಬೇಕು. ಒಂದೇ ಸಲ ಐದು ಜನರನ್ನ ಮದುವೆ ಆಗಬೇಕು ಅಂತೇನೂ ಇಲ್ಲ. ಒಟ್ನಲ್ಲಿ 24ವರ್ಷ ತುಂಬೋದರಲ್ಲಿ ಐದು ಗಂಡಸರನ್ನ ವರಿಸಬೇಕು..
ಎಲ್ಲದರಲ್ಲೂ ಉಳುಕು ಹುಡುಕುತಿದ್ದ ಊರಿನ ಹಿರಿಯಕರು ಈ ವಿಷ್ಯದಲ್ಲಿ ಮಾತ್ರ ತೆಪ್ಪಗಿದ್ದರು. ಅದಕ್ಕೆ ಕಾರಣವೂ ಇತ್ತು. ಅದೇನು ಅಂದ್ರೆ ಹೆಣ್ಣು 24 ವರ್ಷಕ್ಕೆ ಐದು ಗಂಡಸರನ್ನ ಕಟ್ಟ್ಕೋಬೇಕು ಆದರೆ ಗಂಡಸ್ರಿಗೆ ಯಾವುದೇ ವಯೋಮಿತಿ ಇರಲಿಲ್ಲ ಹಾಗೂ ಒಂದು ಗಂಡಸು ಮದುವೆಯಾಗಿದ್ದರು, ಇನ್ನೊಂದು ಬೇಕಿದ್ದರೆ ಮತ್ತೊಂದು ಹೀಗೆ ಹೆಣ್ಣನ್ನು ವರಿಸಬಹುದಾಗಿತ್ತು.
ಊರಿನ ಗಂಡಸರಂತು ಹೆಣ್ಣು ಮಕ್ಕಳು ಪ್ರೌಡಾವಸ್ಥೆಗೆ ತಲುಪುವುದನ್ನೇ ಕಾಯುತ್ತಿದ್ದರು. ಈ ಊರಿಗೆ ಇಂಥ ಮೂಢ ಪದ್ಧತಿ ಬರಲು ಕಾರಣ, ಅಜ್ಞಾತವಾಸದಲ್ಲಿ ಪಾಂಡವರು ಇಲ್ಲಿ ತಂಗಿದ್ದರಂತೇ, ಆ ಸಮಯದಲ್ಲಿ ಅಲ್ಲಿನ ಊರಿನ ಅರಳಿಕಟ್ಟೆಯಲ್ಲಿ ದ್ರೌಪದಿ ಐದು ಗಂಡಸರನ್ನು ವರಿಸಿದ್ದನ್ನು ಕೇವಲವಾಗಿ ಮಾತಾಡಿದ್ದನ್ನು ಕೇಳಿ ದ್ರೌಪದಿಯು ಈ ಊರಿನಲ್ಲಿರುವ ಹೆಣ್ಣು ಮಕ್ಕಳು ಕೂಡ ಐದು ಜನರನ್ನು ಮದುವೆಯಾಗಲಿ, ನನ್ನಂತೆಯೇ ಈ ಊರಿನವರಿಗೂ ಅವಮಾನವಾಗಲಿ ಎಂದು ಶಾಪವಿಟ್ಟಳಂತೆ. ಅಂದಿನಿಂದ ಈ ಊರಿಗೆ ಪಾಂಚಾಲಿಪುರ ಎಂಬ ಹೆಸರು. ಇದು ಎಷ್ಟು ನಿಜವೋ ಏನೋ ಗೊತ್ತಿಲ್ಲ. ಊರಿನಲ್ಲಿ ಈ ಮೂಢನಂಬಿಕೆ ವಿರುದ್ಧ ಧ್ವನಿ ಎತ್ತಿದರೆ, ದ್ರೌಪದಿಯ ಶಾಪ, ಮುರಿದರೆ ನರಕಕ್ಕೆ ಹೋಗುತ್ತಾರೆ, ಊರೇ ಭಸ್ಮ ಆಗುತ್ತೆ ಅಂತೆಲ್ಲಾ ಹೆದರಿಸುತ್ತಿದ್ದರು.

ಈ ಊರಿನಲ್ಲಿ ವೈಕುಂಠ ಶಾಸ್ತ್ರಿಗಳ ಮೊದಲನೇ ಮಗ ರಾಮಾಶಾಸ್ತ್ರಿಗೆ ಹೆಣ್ಣು ಹುಡುಕುತಿದ್ದರು. ಮಗ ನಿಮಿತ್ತ ಅಷ್ಟೇ. ವೈಕುಂಠ ಶಾಸ್ತ್ರಿಗಳ ಹೆಂಡತಿ ತಿರೀಕೊಂಡು ಸುಮಾರು ಎರಡು ವರ್ಷ ಆಗಿತ್ತು. ಹಾಗೇ ವಯಸ್ಸಿಗೇ ಬಂದ ಇನ್ನೂ ಮೂರು ಗಂಡು ಮಕ್ಕಳು ಇದ್ದರು. ಊರಿಲ್ಲೇ ಹುಡುಕಿದರೂ ಮದುವೆ ಆಗದ ಒಂದು ಹುಡುಗಿ ಸಿಗಲ್ಲಿಲ್ಲ. ಎಲ್ಲಾ ಎರಡು-ಮೂರು ಮದುವೇಯಾದವರೇ. 
ವೈಕುಂಠ ಶಾಸ್ತ್ರಿಗಳು ತಮ್ಮಷ್ಟಕ್ಕೆ ತಾವೇ "ಈ ಊರಿನಲ್ಲಿ ಬರ್ತಾ ಬರ್ತಾ ಹೆಣ್ಣು ಮಕ್ಕಳೇ ಗತಿ ಇಲ್ಲ" ಎಂದು ಹಣೆ ಚಚ್ಚಿಕೊಂಡು ಪಕ್ಕದ ಹಳ್ಳಿಗೆ ಹೊರಟರು. ಸುತ್ತಾಮುತ್ತ ನಲವ್ತೈದೂ ಹಳ್ಳಿಗಳಲ್ಲೂ  ಪಾಂಚಾಲಿಪುರಕ್ಕೇ ಮಾತ್ರ ಹೆಣ್ಣು ಕೊಡುವುದಿಲ್ಲ ಎಂದು ಮುಖಕ್ಕೆ ಹೊಡೆದಂತೆ ಹೇಳಿ ಕಳಿಸಿದರು.
ವಿಧಿಯಿಲ್ಲದೆ ಶಾಸ್ತ್ರಿಗಳು ಪಕ್ಕದ ನರಸೀಪುರದ ಹತ್ತಿರ ನೋಡಿಕೊಂಡು ಬರೋಣ ಎಂದು ಪ್ರಯಾಣ ಮುಂದುವರಿಸಿದರು.
ಕರ್ಕಶ ಶಬ್ದ ಮಾಡುತ್ತಾ ಮೋಟಾರ್ ವಾಹನ  ನರಸೀಪುರಕ್ಕೇ ಬರೋಷ್ಟರಲ್ಲೀ ಶಾಸ್ತ್ರಿಗಳು ಬಿಸಿಲ ಬೇಗೆಗೆ ಹಾಗೂ ನೆನ್ನೆಯಿಂದ ಸ್ನಾನ ಮಾಡದೆ ಮೈ ವಾಸನೆ ಬರುತಿತ್ತು. ಬಸ್ಸು ಇಳಿದವರೇ ಸೀದಾ ಹೊಳೆ ದಂಡೆಗೆ ಹೋಗಿ ನಿತ್ಯಕರ್ಮದ ಜೊತೆಗೆ ಸ್ನಾನವನ್ನು ಮುಗಿಸಿ, ಪೇಟೆ ಬೀದಿಗೆ ನಡೆದು ಬಂದು  ಅಲ್ಲಿದ್ದ ಪೆಟ್ಟಿ ಅಂಗಡಿಯವನಿಗೆ "ನಮಸ್ಕಾರ" ಎಂದು ಕೈ ಮುಗಿದರೂ.
ನೊಣ ಹೊಡೆಯುತ್ತಿದ್ದ ಅಂಗಡಿಯವನು ಕೈ ಬಿಡುವಿಲ್ಲದೆ ಹಾಗೆ "ನಮಸ್ಕಾರ" ಅಂದ.
"ನಾನು ವೈಕುಂಠ ಶಾಸ್ತ್ರಿ ಅಂತ, ಪಾಂಚಾಲಿಪುರದಿಂದ ಬಂದಿದ್ದೇನೆ" ಎಂದು ಶಲ್ಯ ಸರಿ ಮಾಡಿಕೊಂಡರು.
"ಅದಕ್ಕೆ ನಾನೇನು ಮಾಡ್ಲಿ ಸ್ವಾಮಿ" ಎಂದು ಅಂಗಡಿಯವ ಗೊಣಗಿದ.
ಶಾಸ್ತ್ರಿಗಳು ಸ್ವಲ್ಪ ಆ ಕಡೆ ಈ ಕಡೆ ನೋಡಿ "ನನ್ನ ಮಗ ರಾಮಾಶಾಸ್ತ್ರಿಗೆ ಹೆಣ್ಣು ನೋಡ್ತಾ ಇದೀನಿ, ನಮ್ಮ ಜಾತಿಯ ಹೆಣ್ಣು ಈ ಊರಿನಲ್ಲಿ ಉಂಟೇ....?"
ಅಂಗಡಿಯವನು ರೇಗಿ "ರೀ ಶಾಸ್ತ್ರಿಗಳೇ ನಾನೇನು ನಿಮಗೆ ಹೆಣ್ಣು ವ್ಯಾಪಾರಿ ತರ ಕಾಣ್ತೀನಾ, ಬೆಳಿಗ್ಗೆಯಿಂದ ವ್ಯಾಪಾರ ಇಲ್ಲದೆ ನಾನೇ ನೊಣ ಹೊಡಿತಿದ್ದಿನಿ, ಅದರಲ್ಲೀ ನೀವು ಬೇರೆ" ಎಂದು ಮುಖ ತಿರುಗಿಸಿದ.
ಶಾಸ್ತ್ರಿಗಳು "ಅಷ್ಟೇ ಏನಪ್ಪಾ, ನಾನೇ ಬೋಣಿ ಮಾಡ್ತೀನಿ ಒಳ್ಳೆ ವ್ಯಾಪಾರ ಆಗುತ್ತೆ. ತಗೋ ಹನ್ನೆರಡು ಆಣೆಗೆ ಮೈಸೂರ ಪಾಕ ಕೊಡು" ಎಂದು ಕೈ ಚಾಚಿದರು.
"ಶಾಸ್ತ್ರಿಗಳೇ, ಇಲ್ಲಿ ಒಳ್ಳೆ ಹೆಣ್ಣುಗಳು ಸಿಗಲ್ಲ, ಇಲ್ಲಿಂದ   ನೇರಕ್ಕೆ ಹೋಗಿ ಬೀದಿ ಕೊನೆಗೆ ಎಡಕ್ಕೆ ತಿರುಗಿ ಮೂರು ಮೈಲಿ ಹೋದರೆ 'ಜನಕಾಪುರ' ಹಳ್ಳಿ ಸಿಗುತ್ತೆ, ಅಲ್ಲಿ ನೋಡಿ ಸುಸಂಸ್ಕ್ರುತ ಹೆಣ್ಣು ಮಕ್ಳು ಸಿಗ್ತಾರೆ" ಎಂದು ಕೈಗೆ ಮೈಸೂರು ಪಾಕದ ಪೊಟ್ಟಣವಿಟ್ಟ.
ಅಂಗಡಿ ಮರೆಯಾಗುತ್ತಲೇ ಶಾಸ್ತ್ರಿಗಳು ಎಡಗೈಲ್ಲಿದ್ದ ಪೊಟ್ಟಣವನ್ನು ಬಿಸಾಕಿ ಹೆಜ್ಜೆ ಹಾಕಿದರು.
ಶಾಸ್ತ್ರಿಗಳು ಊರು ತಲುಪುವಷ್ಟರಲ್ಲಿ ಸೂರ್ಯ ನೆತ್ತಿ ಮೇಲೆ ಬಂದಿದ್ದ.
ಊರಿನ ಹೆಬ್ಬಾಗಿಲು ಹತ್ತಿರ ಕುರಿ ಕಾಯುತಿದ್ದ ಕುರಿಗಾಯಿಗಳಿಗೆ ಬಂದ ವಿಷಯವನ್ನು ತಿಳಿಸಿದರು.
"ಬುದ್ದಿ ಹಿಂಗೇ ಮುಂದಕ್ಕೇ ಹೋದರೆ ಎರಡನೇ ಓಣಿ ಹತ್ತಿರ ಹದಿನಾರು ಕಂಬದ ಹಟ್ಟಿ ಅದೆ, ಅದು ನಮ್ಮ ಜನಕಶಾಸ್ತ್ರಿಗಳ ಮನೆ ಅವ್ರಿಗೆ ಚಿನ್ನದಂತ ಮಗಳು ಅವ್ಳೇ, ಸಾನೇ ವಿದ್ಯಾವಂತೆ. ಕೊಡ್ತಾರ ಕೇಳಿ ನೋಡಿ" ಎಂದು ಕೂರಿಗಾಯಿಗಳು ಕುರಿ ಹೊಡೆಯುತ್ತಾ ಮುಂದೆ ಸರಿದರು.
ಪಡಸಾಲೆಯ ಮೇಲೆ ಕೂತಿದ್ದ ವ್ಯಕ್ತಿಯನ್ನು ದೂರದಿಂದಲೇ ಗಮನಿಸಿದ ವೈಕುಂಠ ಶಾಸ್ತ್ರಿಗಳು, ಇವರೇ ಜನಕಶಾಸ್ತ್ರಿಗಳು ಇರಬೇಕು ಎಂದು ಕೊಂಡರು. ಶಾಸ್ತ್ರಿಗಳು ಬರುತ್ತಲೇ "ನಮಸ್ಕಾರ ಜನಕಶಾಸ್ತ್ರಿಗಳಿಗೆ" ಎಂದು ಕೈ ಮುಗಿದರು.
ತಬ್ಬಿಬಾದ ಜನಕಶಾಸ್ತ್ರಿಗಳು "ಯಾರು, ತಿಳಿಯಲ್ಲಿಲ ಕ್ಷಮಿಸಬೇಕು" ಎಂದು  ಕೈ ಮುಗಿದರು.
"ನಾನು ವೈಕುಂಠ ಶಾಸ್ತ್ರಿ ಅಂತ" ಎಂದು ತಮ್ಮ ಪರಿಚಯ ಮಾಡಿಕೊಂಡರು.
"ಬನ್ನಿ, ಒಳಗೆ ಕೂತು ಮಾತನಾಡುವರಿಯಂತೆ" ಎಂದು ಜನಕಶಾಸ್ತ್ರಿಗಳು ಒಳಗೆ ಹೊರಟರು.
ವೈಕುಂಠ ಶಾಸ್ತ್ರಿಗಳು ಬಂದ ವಿಚಾರವನ್ನು ಹೇಳಿ, ಮಗನ ಜಾತಕವನ್ನು ಮುಂದೆ ಇಟ್ಟರು.
ಜನಕಶಾಸ್ತ್ರಿಗಳು ಸ್ವಲ್ಪ ಯೋಚಿಸುತ್ತಾ "ನೀವು ಅಷ್ಟು ದೂರದಿಂದ ಬಂದಿದ್ದಿರಾ, ಯಾಕೇ ನಿಮ್ಮ ಊರಿನ ಅಕ್ಕ ಪಕ್ಕ ಯಾವುದೇ ಹೆಣ್ಣು ಇಲ್ಲವೇ" ಎಂದರು.
ವೈಕುಂಠ ಶಾಸ್ತ್ರಿಗಳು ಸ್ವಲ್ಪ ತಡವರಿಸುತ್ತಾ "ಹಾಗೇನೂ ಇಲ್ಲ, ನರಸೀಪುರದಲ್ಲೀ ನಮ್ಮ ಹತ್ತಿರದ ಸಂಬಂಧಿಯೊಬ್ಬ ಅಂಗಡ ಇಟ್ಟುಕೊಂಡಿದ್ದಾನೆ, ಅವನು ನಿಮ್ಮ ಬಗ್ಗೆ ತುಂಬಾ ಹೇಳುತಿದ್ದ ನೀವು ಎಷ್ಟು ಉದಾರಿಗಳು, ಎಷ್ಟು ಸುಸಂಸ್ಕ್ರುತರು ಎಂದು ಹಾಗಾಗಿ ನಿಮ್ಮ ಮಗಳನ್ನೇ ತಂದುಕೊ ಬೇಕು ಅಂದುಕೊಂಡಿದ್ದೇನೆ. ಮಿಕ್ಕಿದ್ದು ಪಾಂಡುರಂಗನ ಇಚ್ಛೆ" ಎಂದರು.
ಜನಕಶಾಸ್ತ್ರಿಗಳು ಹೆಂಡತಿ ಕಡೆಗೆ ತಿರುಗಿ "ಸೀತೆಯ ಜಾತಕವನ್ನು ತೆಗೆದುಕೊಂಡು ಬಾ" ಎಂದರು 
ಲಕ್ಷ್ಮಿಮ್ಮ ಜಾತಕದ ಜೊತೆಗೆ ಶಾಸ್ತ್ರಿಗಳಿಗೆ ಒಂದು ಲೋಟ ಮಜ್ಜಿಗೆಯನ್ನು ಕೊಟ್ಟರು.
ಜನಕಶಾಸ್ತ್ರಿಗಳು ಎರಡು ಜಾತಕವನ್ನು ನೋಡಿ ಪರಿಶೀಲಿಸಿ "ಅದ್ಭುತವಾದ ಜಾತಕ, ಇಪ್ಪತ್ತೋಂಭತ್ತು ಗಣಗಳು ಕೂಡುತ್ತೆ" ಎಂದು ಸಂತಸ ಪಟ್ಟರು.
ವೈಕುಂಠ ಶಾಸ್ತ್ರಿಗಳು ನಗುತ್ತಲೇ "ಹಾಗೇ, ಲಗ್ನದ ದಿನಾಂಕವನ್ನು ಗೊತ್ತು ಮಾಡಿಬಿಡಿ" ಎಂದರು.
ಜನಕಶಾಸ್ತ್ರಿಗಳು ಸ್ವಲ್ಪ ಮುಖವನ್ನು ತಗ್ಗಿಸಿ "ಸ್ವಸ್ತೀಶ್ರೀ ಶಾಲಿವಾಹನ ಶಕ: ಶ್ರೀ ಖರನಾಮ ಸಂವತ್ಸರ ವರ್ಷ ಋತು ಶ್ರಾವಣ ಬಹುಳ ಸಪ್ತಮಿ ರವಿವಾರ ಬಿಟ್ಟರೆ, ಇನ್ನೆಲ್ಲಾ ಮುಂದಿನ ವರ್ಷವೇ ಜಾತಕಕ್ಕೇ ಹೊಂದಿಕೆಯಾಗೋ ಅಂತ ಲಗ್ನ ಇರೋದು".
"ಹಾಗಿದ್ದರೆ ಶ್ರಾವಣ ಮಾಸದಲ್ಲೇ ಮುಗಿಸೋಣ" ಎಂದು ಉತ್ಸಾಹ ತೋರಿದರು.
"ಊರಿನವರಿಗೆಲ್ಲಾ ಹೇಳಬೇಕು, ಊರಿನ ಮುಖ್ಯಸ್ಥನಾಗಿ ಒಬ್ಬರನ್ನ ಬಿಟ್ಟರು ತೊಂದರೆ" ಎಂದು ಜನಕಶಾಸ್ತ್ರಿಗಳು ಅವಲತ್ತುಕೊಂಡರು.
"ಶಾಸ್ತ್ರಿಗಳೇ ಎಷ್ಟು ಜನಕ್ಕೆ ಆಗುತ್ತೋ ಅಷ್ಟು ಜನಕ್ಕೆ ಹೇಳಿ, ಮಿಕ್ಕಿದವರಿಗೆ ನಾಮಕರಣಕ್ಕೆ ಹೇಳಿ ಕಳಿಸಿದರಾಯಿತು" ಎಂದು ಆತುರ ತೋರಿದರು.
"ನೀವಿಷ್ಟು ಒತ್ತಾಯ ಮಾಡುತ್ತಿದಿರಿ,ಇಲ್ಲ ಅನ್ನಲು ಆಗುತಿಲ್ಲ" ಎಂದರು.
"ಸರಿ, ಹಾಗಿದ್ದರೆ ನಿಮ್ಮ ಮಗಳನ್ನು ಕರೆಸಿ ನಾನೇ ನೋಡುತ್ತೇನೆ, ಮದುವೆಯ ಹಿಂದಿನ ದಿನ ದಿಬ್ಬಣವನ್ನು ಹೊರಡುಸುತ್ತೇವೆ".
ಲಕ್ಶ್ಮಮ್ಮ ಸೀತೆಯನ್ನು ಕರೆತಂದರು.
"ಕುರಿಗಾಯಿಗಳು ಹೇಳಿದ್ದು ನಿಜ ದಂತದ ಬೊಂಬೇಯೇ" ಎಂದು ವೈಕುಂಠ ಶಾಸ್ತ್ರಿಗಳು ಒಳಗೊಳಗೇ ಖುಷಿಪಟ್ಟರು.
"ಹೊರಡುತ್ತೇನೆ. ಬಹಳ ಹೊತ್ತು ಆಯ್ತು" ಎಂದು ವೈಕುಂಠ ಶಾಸ್ತ್ರಿಗಳು ಎದ್ದು ನಿಂತರು.
"ಹೋಗಿ ಬನ್ನಿ" ಎಂದು ಜನಕಶಾಸ್ತ್ರಿಗಳು ಗಾಡಿ ಕಟ್ಟಿಸಿ ಮೋಟಾರು ನಿಲ್ದಾಣದವರಗೂ ಕಳುಹಿಸಿದರು.
"ಜನಕಶಾಸ್ತ್ರಿಗಳು ಎಷ್ಟು ಒಳ್ಳೆಯವರೋ, ಅಷ್ಟೇ ಕೆಟ್ಟವರು" ಎಂದು ಗಾಡಿ ಹೊಡೆಯುವನಿಂದ ತಿಳಿದುಕೊಂಡರು.

ವೈಕುಂಠ ಶಾಸ್ತ್ರಿಗಳು ಅಂತೂ ಮೂರು ದಿನ ಮದುವೆಯನ್ನು ಶಾಸ್ತ್ರೋಕ್ತವಾಗಿ ಮುಗಿಸಿಕೊಂಡು, ಮದುಮಗಳನ್ನು ಊರಿಗೆ ಕರೆತಂದರು.
ಊರಿನಲ್ಲಿ ಸಣ್ಣದೊಂದು ಆರತಕ್ಷತೆ ಮಾಡಿದರು. ಜೋಡಿ ನೋಡುವುದಕ್ಕಿಂತ ಹೆಚ್ಚಾಗಿ, ಹೆಣ್ಣನ್ನು ನೋಡಲು ಊರಿನ ಜನ ಮುಗಿಬಿದ್ದರು.
ಮುಂದಿನ ಶಾಸ್ತ್ರಗಳನ್ನು ಶಾಸ್ತ್ರಿಗಳು ಮಾಡಿ ಮುಗಿಸಿದರು. ರಾಮಾಶಾಸ್ತ್ರಿ ಅಪ್ಪನಿಗೆ ಹೆದರುವ ಮಗ ಎನ್ನುವುದಕ್ಕಿಂತ ಹೆಚ್ಚಾಗಿ, ತಂದೆಯ ಮಾತಿಗೆ ಗೌರವ ಕೊಡುತ್ತಿದ್ದ, ಉಳಿದ ಮಕ್ಕಳು ಕೂಡ.
ಸ್ವಲ್ಪ ದಿನದ ನಂತರ ವೈಕುಂಠ ಶಾಸ್ತ್ರಿಗಳು ತಮ್ಮ ವರಸೆಯನ್ನು ತೋರಿಸಲು ಶುರು ಮಾಡಿದರು.
ಮೊದ ಮೊದಲು ಏನೋ ತಿಳಿಯದೆ ಮೈ ಕೈ ಮುಟ್ಟುತ್ತಿದ್ದಾರೆ ಅಂದು ಕೊಂಡಳು.
ಆದರೆ ಕೆರೆ ಹತ್ತಿರ ಪಾತ್ರೆ ತೊಳೆಯಲು ಹೋದಾಗ ಊರಿನ ಇತರೆ ಹೆಂಗಸರಿಂದ ಊರಿನಲ್ಲಿದ್ದ ಅನಿಷ್ಟ ಪದ್ಧತಿಯ ಬಗ್ಗೆ ತಿಳಿದುಕೊಂಡಳು ಹಾಗೂ ಮಾವನವರು ಬೇಕುಂತಲೇ ಹೀಗೆ ಮಾಡಿದ್ದರೆ ಎಂಬ ಅನುಮಾನ ಮೂಡಿತು.
"ಶಾಸ್ತ್ರಿಗಳು ಮರು ದಿನ ಸೀತೆಯನ್ನು ಮುಟ್ಟಲು ಹೋದಾಗ "ನಮ್ಮಪ್ಪನ ತರ ಇದೀರಾ ಹಿಂಗೇ ನಡೆದುಕೊಳೋಕ್ಕೆ ನಾಚಿಕೆ ಆಗಲ್ವಾ, ಇನ್ನೊಂದು ಸಲ ನನ್ನ ಹತ್ತಿರ ಈ ಹೀಗೆ ನಡೆದುಕೊಂಡರೆ ಜೈಲಿಗೆ ಹಾಕಿಸ್ತೀನಿ" ಎಂದು ಹೆದರಿಸಿದಳು. 
ಅದೇ ಕೊನೆ ಶಾಸ್ತ್ರಿಗಳು ಮತ್ತೆ ಅವಳ ತಂಟೆಗೆ ಬರಲ್ಲಿಲ.
ಸೀತೆ ವಿದ್ಯಾವಂತೆ, ತಿಳುವಳಿಕೆಯುಳ್ಳವಳು ಆ ಕಾರಣದಿಂದ ಕೆರೆ ಹತ್ತಿರ ಬರುವ ಹೆಂಗಸರು ಅವಳ ಮಾತುಗಳನ್ನ ಕೇಳುತ್ತಿದ್ದರು ಹಾಗೆ ಸೀತೆ ಕೂಡ ಅವರಿಗೆ ಬುದ್ಧಿ ಮಾತುಗಳನ್ನ ಹೇಳುತಿದ್ದಳು.
ಕೆಲವು ತಿಂಗಳುಗಳ ನಂತರ ಸೀತೆ ಬಸುರಿಯಾದಳು. 
ಈಗಾಗಲೇ ಸೀತೆ ಮೇಲೆ ಕೋಪವಿದ್ದ ವೈಕುಂಠ ಶಾಸ್ತ್ರಿಗಳು ತನ್ನ ಇತರ ಮುವರು ಮಕ್ಕಳನ್ನು ನೀನು ವರಿಸಬೇಕು ಎಂದು ಪಂಚಾಯ್ತಿ ತೆಗೆದ, ಸೀತೆ ಮೂರು ತಿಂಗಳ ಗರ್ಭಿಣಿ ಆಗಿದ್ದರೂ ಸಹ " ಇತರ ಮುವರು ಮಕ್ಕಳನ್ನ ಕಟ್ಟಿಕೊ ಬೇಕು ಎಂದು ಪಂಚಾಯ್ತಿ ತೀರ್ಮಾನ ಕೊಟ್ಟಿತ್ತು.
ಅಪ್ಪನ ಭಯಕ್ಕೊ, ಗೌರವಕ್ಕೊ ಇದಕ್ಕೆ ರಾಮಾಶಾಸ್ತ್ರಿ ಕೂಡ ಉಸಿರು ಎತ್ತಲಿಲ್ಲ.
ಸೀತೆ ಗಾಬರಿಯಿಂದ ಕೆರೆಯ ಹತ್ತಿರ ಇದ್ದ ಹೆಂಗಸರಿಗೆ, "ನರಸೀಪುರದಿಂದ ಮೆಣಸು ತರುವ ಕೆಂಪಣ್ಣನಿಗೆ ತನ್ನ ಸುದ್ದಿಯನ್ನು ರಾಮಾಪುರಕ್ಕೆ ಮುಟ್ಟಿಸಬೇಕು ಹಾಗು ಮುಂದಿನ ಸೋಮುವಾರವೇ ಒಟ್ಟಿಗೇ ಮದುವೆ ನಿಶ್ಚಯಿಸಿದ್ದಾರೆ" ಎಂದು ತಿಳಿಸಲು ಹೇಳಿದಳು.
ಸೀತೆಯ ಅದ್ರುಷ್ಟಕ್ಕೆ ಮಾರನೇ ದಿನವೇ ಕೆಂಪಣ್ಣ ಗಾಡಿಯಲ್ಲಿ ಬಂದನು,ಕೆರೆಯ ಹೆಂಗಸರು ವಿಷಯವನ್ನು ಮುಟ್ಟಿಸಿದರು.

ನಾಲ್ಕನೇ ದಿನಕ್ಕೆ ಜನಕಶಾಸ್ತ್ರಿಗಳು ಪೊಲೀಸರ ಸಮೇತಾ ಪಾಂಚಾಲಿಪುರಕ್ಕೆ ಬಂದರು.
ಪೊಲೀಸನವರು ತೀರ್ಪು ಕೊಟ್ಟ ಊರಿನ ಮುಖಂಡರು ಹಾಗು ವೈಕುಂಠ ಶಾಸ್ತ್ರಿಗಳನ್ನ ಬಂಧಿಸಿದರು. ಇನ್ನೋಂದು ಸಲ ಯಾರಾದರು ಈ ದರಿದ್ರ ಪದ್ಧತಿಯನ್ನು ಅನುಸರಿಸಿದರೆ, ಎಲ್ಲರನ್ನು ಬಂದೀಖಾನೆ ಹಾಕುವುದಾಗಿ ಬೆದರಿಸಿದರು.
ಪೊಲೀಸರು ಸೀತೆಯ ಧೈರ್ಯವನ್ನು ಹೊಗಳಿದರು.
ಇದೇ ಸಂದರ್ಭವನ್ನು ಉಪಯೋಗಿಸಿಕೊಂಡು ಸೀತೆ, ಊರಿನ ಹೆಂಗಸರು,ಗಂಡಸರು ಎಲ್ಲರನ್ನು ಕರೆಸಿ ಕೆಲವು ವಿಷಯಗಳನ್ನು ಹೇಳುವುದಿದೆ ಎಂದಳು. ಅಷ್ಟೊತ್ತಿಗಾಗಲೇ ಊರಿನ ಜನರು ಜಮಾಯಿಸಿದ್ದರು.
ಸೀತೆ ಹತ್ತಿರದಲ್ಲೇ ಇದ್ದ ಕಲ್ಲಿನ ಮೇಲೆ ನಿಂತು, "ಒಂದು ಹೆಂಗಸಿನ ಜೊತೆ ಐದೈದು ಜನ ಕೂಡಿದರೆ ಅಂಟು ರೋಗಗಳು ಬರುತ್ತವೆ, ಹಾಗೇ ಹೆಣ್ಣು ಮಕ್ಕಳು ಹುಟ್ಟಿದರೆ ಐದು ಜನಕ್ಕೆ ಕಟ್ಟಬೇಕಲ್ಲ ಅಂತ ಹೆಣ್ಣು ಮಕ್ಕಳು ಹುಟ್ಟುತ್ತಿದಂತೆ ಮನೇಯಲ್ಲೇ  ಸಾಯಿಸುತ್ತಿದ್ದಾರೆ(ಈ ವಿಷಯವನ್ನು ಕೆರೆ ಹೆಂಗಸರಿಂದ ತಿಳಿದುಕೊಂಡಿದ್ದಳು) ಅದಕ್ಕೇ ಊರಿನಲ್ಲಿ ಹೆಣ್ಣಿಗೆ ಬರ, ಈ ಅನಿಷ್ಟ ಪದ್ಧತಿ ಬಿಟ್ಟು ಹೆಣ್ಣು ಮಕ್ಕಳನ್ನು ಉಳಿಸಬೇಕು" ಎಂದು ಕೇಳಿಕೊಂಡಳು.
ಪೊಲೀಸರು ಕೂಡ ಈ ಮಾತಿಗೆ ತಲೆಯಾಡಿಸಿದರು, ಹಾಗೇ, ಇನ್ನೊಂದು ಬಾರಿ ಹೀಗೆ ಮಾಡಿದವರನ್ನು ಪಾಶಿಗೇ ಹಾಕುವುದಾಗಿ ಹೆದರಿಸಿದರು.
ಊರಿನ ಜನಗಳಿಗೆ ಸೀತೆಯ ಮಾತಿನಲ್ಲಿ ಸತ್ಯ ಇರುವುದನ್ನು ಅರಿತು, ಸೀತೆಗೆ ಜೈ, ಸೀತಮ್ಮನಿಗೆ ಜೈ ಎಂದು ಜೈಕಾರ ಹಾಕಿದರು.
ಆಗಿನಿಂದ ಪಾಂಚಾಲಿಪುರದಲ್ಲಿ ಆ ಅನಿಷ್ಟ ಪದ್ಧತಿ ನಿಂತಿತು. ಹೆಣ್ಣು ಮಕ್ಕಳ ಸಂತತಿ ಕೂಡ ಹೆಚ್ಚಿತು.
ಸೀತೆಯ ನೆನಪಿಗಾಗಿ ಊರಿಗೆ "ಸೀತಾಪುರ" ಎಂದು ಹೆಸರಿಟ್ಟರು.

                             *****
04/05/2016


Comments

Popular Posts