ಮೊದಲ ಬರಹ

ಬಸ್ಸು ಚಿಕ್ಕಮಗಳೂರಿಂದ ಹೊರಟಾಗ ರಾತ್ರಿ ೮.೩೦ ಆಗಿತ್ತು. ನನ್ನ ಮೊದಲ ಕಿರುಚಿತ್ರದ ಎಡಿಟಿಂಗ್ ಮುಗಿಸಿದ್ದ ಖುಷಿಯಲ್ಲಿದ್ದೆ. ಅದೇ ಖುಷಿಯಲ್ಲಿ ನನ್ನ ಗೆಳೆಯರೊಂದಿಗೆ ಫೋನಿನಲ್ಲಿ ಸಿನೆಮಾಗಳ ಬಗ್ಗೆ ಮಾತನಾಡಿದ ಮೇಲೆ, ಪಕ್ಕದಲ್ಲಿರುವ ವ್ಯಕ್ತಿ ನನ್ನ ಜೊತೆ ಸಿನೆಮಾಗಳ ಬಗ್ಗೆ ಮಾತನಾಡಲು ಶುರು ಮಾಡಿದರು. ಮಾತು ಹೀಗೇ ಸಾಹಿತ್ಯದ ಕಡೆಗೆ ಹೊರಳಿತ್ತು. ನಾನಾಗಲೇ ಒಂದು ಶ್ರೇಷ್ಟವಾದ ಕಾದಂಬರಿಯನ್ನು ಓದಿ ತಲೆಗೆ ಹುಳ ಬಿಟ್ಟುಕೊಂಡಿದ್ದೆ, ನಂಗೋ ಅರ್ಧಂಬರ್ಧ ಅರ್ಥ ಆಗೋ ವಯಸ್ಸು. ಪಕ್ಕದಲ್ಲಿರೋ ವ್ಯಕ್ತಿಗೆ ಈ ಸಾಹಿತ್ಯದ ಸಹವಾಸವೇ ಬೇಡ ಅಂತ ಅಂದಿದ್ದೆ. ಆಗ ಆ ವ್ಯಕ್ತಿ ಪೂರ್ಣಚಂದ್ರ ತೇಜಸ್ವಿಯವರು ಗೊತ್ತಾ ಅಂತ ಕೇಳಿದರು. ನನಗೆ ಆಗ ಅವರು ಕುವೆಂಪು ಅವರ ಮಗ ಹಾಗೂ ಒಬ್ಬ ಲೇಖಕ ಅಂತ ಗೊತ್ತಿತ್ತು ಅಷ್ಟೆ. ಅವರ ಪುಸ್ತಕಗಳನ್ನು ಓದಲು ಹೇಳಿದರು. ನಾನು ಯಾವ ಬುಕ್ ಅಂತ ಕೇಳಿದಕ್ಕೆ, ತೇಜಸ್ವಿಯವರ ಯಾವ ಬುಕ್ ಆದ್ರೂ ಓದಿ ಅಂದರು. ಮೊದಲಿಗೆ ಮಿಲೆನೀಯಮ್ ಸೀರೀಸ್ನಿಂದ ಶುರು ಮಾಡಿದೆ, ಕುತೂಹಲಕಾರಿ ಸಂಗತಿಗಳನ್ನು ತಿಳಿಸುತ್ತಿದ್ದಾ ತೇಜಸ್ವಿಯವರು ಇಷ್ಟ ಆದ್ರು, ನಂತರ ಪಾಪಿಲ್ಲಾನ್, ಮಹಾ ಪಲಾಯಾನ, ಕಾಡಿನ ಕಥೆಗಳು, ಇದೆಲ್ಲ್ಲಾ ಓದಿದ ಮೇಲೆ ತೇಜಸ್ವಿಯವರ ಪಕ್ಕಾ ಫ್ಯಾನ್ ಆಗಿಬಿಟ್ಟೆ. ನಂತರ ಅವರ ಕಿರಗೂರಿನ ಗಯ್ಯಾಳಿಗಳು, ಚಿದಂಬರ ರಹಸ್ಯ, ಹುಲಿಯೂರಿನ ಸರಹದ್ದು, ಅಬಚೂರಿನ ಪೋಸ್ಟಾಫೀಸು, ಮಿಸ್ಸಿಂಗ್ ಲಿಂಕ್ ಓದಿದ ಮೇಲಂತೂ ಫ್ಯಾನ್ ಆಗಿದ್ದೋನು, ಜೊತೆಗೆ ಏ.ಸೀ, ಬೀಸಣಿಗೆ ಎಲ್ಲಾ ಆಗಿಬಿಟ್ಟೆ, ಅವತ್ತು ಬಸ್ಸಲ್ಲಿ ಸಿಕ್ಕಿದ್ದ ಪುಣ್ಯಾತ್ಮನ ಹೆಸರು ಮರೆತು ಹೋಗಿದೆ, ಆ ವ್ಯಕ್ತಿ ನನಗೆ ಸಿಗದಿದ್ದರೆ ನಾನು ಪುಸ್ತಕಗಳನ್ನು ಓದ್ತಾನೆ ಇರಲಿಲ್ಲವೇನೊ, ಏನೂ ಬರಿತೀರಲಿಲ್ಲವೇನೊ ಅವರಿಗೊಂದು ದೊಡ್ಡ ಸಲಾಮು. ಹೌದು, ತೇಜಸ್ವಿಯವರ ಯಾವ ಪುಸ್ತಕವಾದರೂ ಓದಬಹುದು ಅವರ ಪುಸ್ತಕಗಳು ಒಂದು ಒಳ್ಳೆ ಕಮರ್ಶಿಯಲ್ ಸಿನಿಮಾ ನೋಡಿದ ಹಾಗೇ, ಎಲ್ಲೂ ಬೋರು ಹೊಡಿಸಲ್ಲ, ಅವರ ಬರವಣಿಗೆಯ ಧಾಟಿ ಹಾಗೂ ಅವರ ಭಾಷೆಯೇ ಅದ್ಭುತ. ನಾನೀಗ ಎಲ್ಲಾ ತರಹದ ಹಾಗೂ ಎಲ್ಲಾ ಲೇಖಕರ ಪುಸ್ತಕಗಳನ್ನು ಓದ್ತೀನಿ. ಎಂಥಾ ವೇಸ್ಟ್ ಬುಕ್ ಆದ್ರೂ ಒಂದ್ಸಲ ಓದ್ತೀನಿ. ನನ್ನಂಥ ಎಷ್ಟೋ ಜನಗಳನ್ನು ಸಾಹಿತ್ಯ ಲೋಕಕ್ಕೆ ಬರಸೆಳದ ತೇಜಸ್ವಿ ಅವರಿಗೆ ನಾನು ಯಾವಾಗಲೂ ಚಿರಋಣಿ.
                                    ****
೦೯/೦೪/೨೦೧೬
ಮಹೇಶ್.ಆರ್ . .

Comments

Popular Posts