ಸೋಷಿಯಲ್ ಮೀಡಿಯಾ ಎಂಬ ಸಂತೆಯೊಳಗೆ
ಭಾವನಾಲೋಕದಿ ವಿಹರಿಸಿ ಪ್ರೀತಿಯ ಕಡಲೊಳಗೆ ಮುಳುಗಿದ ಬಹಳಷ್ಟು ಮಂದಿಯಲ್ಲಿ ಪ್ರೇಮವೆಂಬ ಮುತ್ತನ್ನು ಹುಡುಕಿದವರು ವಿರಳಾತಿವಿರಳ.
ವಾಟ್ಸಪ್ಪು, ಸೋಷಿಯಲ್ ಮೀಡಿಯಾಗಳ ನಡುವೆ ಪ್ರೀತಿಯು ಸಂಜೆ ಹೊತ್ತು ಸಿಗುವ ಹೂವಿನಂತೆ, ಬೆಲೆಯೂ ಕಡಿಮೆ, ಸುಗಂಧವು ಅಷ್ಟರಲ್ಲೇ. ಅಂದವಾಗಿರುವುದನ್ನು, ಉತ್ತಮ ಗುಣಮಟ್ಟದ್ದನ್ನು ಆರಿಸಿಕೊಳ್ಳುವ ಜವಾಬ್ದಾರಿ ನಿಮ್ಮದು.
ತಂತ್ರಜ್ಞಾನದ ಹಾಗೂ ಮೊಬೈಲ್ ಬಳಕೆ ಹೆಚ್ಚಾದಂತೆಲ್ಲ ಪ್ರೀತಿಸುವ ವಿಧಾನವೂ ಬದಲಾಗಿದೆ. ಮೊದಲಿನ ಹಾಗೇ ಒಮ್ಮೆ ನೋಡಲು, ಮಾತಾಡಲು ದಿನವಿಡೀ ಕಾಯುವ ಪರಿಸ್ಥಿತಿ ಇಲ್ಲ. ಬೇಕೆಂದಾಗ ಟಣ್ಣನೇ ವಾಟ್ಸಪ್ಪಿನಲ್ಲಿಯೋ, ಇನ್ಸ್ಟಾಗ್ರಾಮಿನಲ್ಲಿಯೋ ಅಥವಾ ಮತ್ತೊಂದು ಸೋಷಿಯಲ್ ಮೀಡಿಯಾ ವೆಬ್ ಸೈಟುಗಳಲ್ಲಿ ಫೋಟೋಗಳನ್ನು ಹಂಚಿಕೊಳ್ಳಬಹುದು.
ತಂತ್ರಜ್ಞಾನ ಬೆಳೆದು ಪ್ರೀತಿಗೆ ಎಷ್ಟು ಪೂರಕವಾಗಿದೆಯೋ ಅಷ್ಟೇ ಮಾರಕ ಕೂಡ. ತಕ್ಷಣವೇ ತಮ್ಮ ಭಾವನೆಗಳನ್ನು ಹಂಚಿಕೊಳ್ಳುವುದು, ಇಷ್ಟ, ಕಷ್ಟಗಳನ್ನು ಹೇಳಿಕೊಂಡು ಆನ್ಲೈನಲ್ಲಿ ಮುದ್ದಿಸುವುದು ಎಷ್ಟು ಸಲಿಸೋ.... ಹಾಗೆಯೇ ಕೋಪ ಬಂದಾಗ ನೀನು ನನಗೆ ಬೇಡ, ಐ ಹೇಟ್ ಯೂ-ಗಳು, ಗೆಟ್ ಲಾಸ್ಟುಗಳು, *ಕ್ ಆಫ್ಗಳು ಕೂಡ ಹೆಚ್ಚಾಗುತ್ತಿವೆ. ಭಾವನೆಗಳನ್ನು ವ್ಯಕ್ತಪಡಿಸುವುದಕ್ಕಿಂತ ಮುಂಚೇ ಒಮ್ಮೆ ಪೂರ್ವಾಪರ ಯೋಚಿಸಿದರೆ ಒಳಿತು.
ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನದ ಬಳಕೆ, ಮೊಬೈಲುಗಳ ಉಪಯೋಗ ಜಾಸ್ತಿ ಆದಂತೆ ಪ್ರೀತಿಸಿ ಮದುವೆಯಾದವರು ಹೆಚ್ಚು. ಪ್ರೇಮ ವಿವಾಹಗಳು ಅತಿಯಾಗಿ ಒಂದಷ್ಟು ಜಾತಿ, ಮತ, ಧರ್ಮಗಳನ್ನು ದಾಟುತ್ತಿರುವುದು ಉತ್ತಮ ಸಮಾಜಕ್ಕೆ ಸಜ್ಜಾಗುತ್ತಿರುವ ಯುವ ಪೀಳಿಗೆಗಳ ಸೂಚಕವೆನ್ನಬಹುದು. ಇದರ ಜೊತೆಗೆ ದುರದೃಷ್ಟಕರ ಸಂಗತಿ ಎನಿಸುವುದು ಹೆಚ್ಚಾಗುತ್ತಿರುವ ಡೈವೋರ್ಸ್ ಪ್ರಕರಣಗಳು. ಪ್ರೀತಿಸುವುದು, ಪ್ರೀತಿಸಿ ಮದುವೆಯಾಗುವುದು ದೊಡ್ಡ ಸಂಗತಿಯಲ್ಲ. ಪ್ರೀತಿಯನ್ನು, ಪ್ರೀತಿಸಿದವರನ್ನು ಉಳಿಸಿಕೊಳ್ಳುವುದು ಮುಖ್ಯ... ಅನ್ಯೋನ್ಯತೆ, ನಂಬಿಕೆ ಮತ್ತು ಹೊಂದಾಣಿಕೆ ಈ ಮೂರು ಗುಣಗಳನ್ನು ತಿಳಿದು ಮದುವೆ ಆದರೆ ಅದು ಸುಖಿ ಸಂಸಾರ. ಇಲ್ಲದ್ದಿದ್ದರೆ ಯಾಂತ್ರಿಕ ಜೀವನ.
ಪ್ರೀತಿಸುವ ರೀತಿ ಹಾಗೂ ಪ್ರೀತಿಗೆ ಇರುವ ನಂಬಿಕೆಗಳು, ಒಂದಷ್ಟು ವಿಚಾರಗಳು ಕಾಲ ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಬಂದಿದೆ. ಸ್ವಾರ್ಥವಿಲ್ಲದೆ ಪ್ರೀತಿಸುವುದು, ಗಾಳಿ ಇಲ್ಲದೇ ಬದುಕಿದಂತೆ. ಅನಾದಿ ಕಾಲದಿಂದಲೂ ಪ್ರೇಮದ ನೆಪವಿಟ್ಟುಕೊಂಡು ಬದುಕಿನ ಒಂಟಿತನ, ಆಸೆ, ಕಾಮ, ಎಲ್ಲವನ್ನೂ ನೀಗಿಸಿಕೊಂಡವರೇ ಹೆಚ್ಚು. ಪ್ರೀತಿಗೆ ಮಹತ್ವ, ಸಮಯ ಕೊಟ್ಟಷ್ಟೂ ಆ ಪ್ರೀತಿ ಮಾಗುವುದು. ಬಹುಕಾಲ ಉಳಿಯುವುದು. ಪ್ರೇಮಿಸಿದವರು ಅರ್ಥವಾಗಿ ಅವರೊಟ್ಟಿಗೆ ಜೊತೆಯಾಗಿ ಬದುಕುವುದರೊಳಗೆ ಬೇರೆಡೆ ಆಕರ್ಷಣೆಯಾಗಿ ಇರುವ ಪ್ರೀತಿಯನ್ನು ಕಳೆದುಕೊಳ್ಳುವವರೇ ಜಾಸ್ತಿ. ಪ್ರೇಮವೆಂಬುದು ಸಸಿ ಇದ್ದಂತೆ ಗಾಳಿ, ನೀರು, ಬೆಳಕು, ಸರಿಯಾದ ಜಾಗವಿಲ್ಲದಿದ್ದರೆ ಬಾಡುವುದು ಖಚಿತ. ನಿರಂತರ ಪೋಷಣೆ ಬೇಕು. ಪ್ರತಿಕ್ಷಣ ಪ್ರೀತಿಸಿ.
ಯಾವುದೇ ರೀತಿ-ರಿವಾಜುಗಳು, ಚೌಕಟ್ಟುಗಳನ್ನು ಹಾಕಿಕೊಳ್ಳದೆ ಇರುವುದನ್ನು ಇರುವ ಹಾಗೆಯೇ ಪ್ರೀತಿಸುವುದು ಸೂಕ್ತ. ಎಲ್ಲವೂ ಸರಿ ಹೊಂದಿದರೇನೇ ಪ್ರೇಮ ಎಂದೇನೂ ಇಲ್ಲ. ಮಿಸ್ ಮ್ಯಾಚುಗಳೇ ಜಾಸ್ತಿ. "Opposite Pole attract each other" ಅನ್ನುವ ಹಾಗೇ ಬಹುತೇಕ ಬಾರಿ ವಿರುದ್ಧ ವ್ಯಕ್ತಿತ್ವದ ವ್ಯಕ್ತಿಗಳೇ ಇಷ್ಟವಾಗುವರು. ಇತ್ತೀಚಿಗೆ ಪ್ರೀತಿಸುವ ತಾಳ್ಮೆಯೇ ಇಲ್ಲ. ಲಾಭವೇನು ಎಂದು ನೋಡುವವರೇ ಹೆಚ್ಚು. ಪ್ರೀತಿ ಎನ್ನುವುದು ಬೆಟ್ಟ ಕಡಿದು ತಂದುಕೊಡುವುದು ಅಲ್ಲ, ಹಿಮಾಲಯಕ್ಕೆ ಹೋಗಿ ಪ್ರೇಮಿ ನೆನಪಿನಲ್ಲಿ ಧ್ಯಾನ ಕೂರುವುದು ಅಲ್ಲ. ಒಲವು ಎನ್ನುವುದು ಸಣ್ಣ ಸಣ್ಣ ಕಡ್ಡಿಗಳಿಂದ ಹಕ್ಕಿಗಳು ಗೂಡು ಕಟ್ಟಿದಂತೆ. ಒಂದು ಸಣ್ಣ ಕಿಡಿ ಸಾಕು ಪ್ರೀತಿಯ ಜ್ವಾಲೆ ಹತ್ತಿಸಲು. ಅವಳ ಜೊತೆ ಸೇರಿ ಗಿಡ ನೆಡಬೇಕೆಂಬುದು ಅವನ ಆಸೆಯಾದರೇ, ಅವಳಿಗೆ ಬೆಳದಿಂಗಳ ರಾತ್ರಿಯಲ್ಲಿ ಅವನೊಟ್ಟಿಗೆ ನಕ್ಷತ್ರಪುಂಜಗಳನ್ನು ಎಣಿಸಿಬೇಕೇಂಬ ಖಯಾಲಿ. ಹೀಗೆ ಒಂದೊಂದು ಕಿಡಿ ಸಾಕು.
ಪ್ರೀತಿ ಬದಲಾಗಿಲ್ಲ, ಪ್ರೀತಿಸುವವರು ಬದಲಾಗಿದ್ದಾರೆ. ಪ್ರೀತಿಸುವ ರೀತಿ ಬೇರೆಯಾಗಿದೆ ಅಷ್ಟೇ......!
ತೀರದ ಮೌನ.. ಅಲೆಗಳ ಆರ್ಭಟ.. ಹಕ್ಕಿಗಳ ಹಾರಾಟ.. ಹೆಜ್ಜೆ ಗುರುತುಗಳು.. ರಸ್ತೆ ಬದಿಯಲ್ಲಿ ಸಾಲಾಗಿ ಇಟ್ಟಿರುವ ಗುಲಾಬಿ ಹೂವುಗಳು.. ಅಂಗಡಿಯೊಳಗೆ ಧೂಳು ಹಿಡಿಯುತ್ತಿರುವ ಗ್ರಿಟಿಂಗ್ ಕಾರ್ಡುಗಳು.. ಎಲ್ಲವೂ ಪರಿಶುದ್ಧ ಪ್ರೀತಿಗಾಗಿ ಕಾಯುತ್ತಿದ್ದಾವೆ. ನೆಟ್ಟಗೆ ಶುರುವಿನಿಂದ ಮತ್ತೇ ಪ್ರೇಮಿಸಿ... ಪ್ರೀತಿಯ ಮಳೆಯಲ್ಲಿ ನಿಮ್ಮ ಸಂಗಾತಿ ತೊಯ್ದು ತೊಪ್ಪೆಯಾಗುವಂತೆ, ರಾಡಿಯಾಗಿರುವ ಮಣ್ಣಿನಲ್ಲಿ ಕಾಲುಗಳನ್ನೇತ್ತಿ ಇಡಲು ಆಗದಂತೆ ಅಂಟಿಕೊಂಡಿರುವಂತೆ... ಮತ್ತೇ ಪ್ರೀತಿಯೊಳಗೆ ಬೆರೆತು ಹೋಗಿ. ಬಿಗುಮಾನ, ಅನುಮಾನ, ಸ್ವಾರ್ಥ, ಅಹಂ, ಅಂತಸ್ತು, ಬಣ್ಣ, ಜಾತಿ, ಧರ್ಮ ಎಲ್ಲವನ್ನೂ ಬದಿಗಿರಿಸಿ ಪ್ರೀತಿಸಿ. ಹ್ಯಾಪಿ ವ್ಯಾಲೇಂಟೇನ್ಸ್ ಡೇ.
******
- ಮಹೇಶ್.ಆರ್
02/02/2018
amaheshr@gmail.com
Comments
Post a Comment