ಪ್ರೀತಿಸುವವರು ಬೇಕಾಗಿದ್ದಾರೆ
ನಿಜಕ್ಕೂ ಪ್ರೀತಿಯೆಂಬುದರ ಆಯಸ್ಸು ಈಗೀಗ ತೀರಾ ಕಡಿಮೆಯಾಗುತ್ತಿದೆ. ಪ್ರೇಮವು ಉಸಿರು ಕಟ್ಟುವ ವಾತಾವರಣದಲ್ಲಿದೆ. ಒಟ್ಟಾರೆಯಾಗಿ ಹೇಳುವುದಾದರೆ ಇಡೀ ಸಮಾಜದ ಮೇಲಿನ ಹಾಗೂ ಸಂಬಂಧಗಳ ಪ್ರೀತಿ ಕ್ಷೀಣಿಸುತ್ತಿದೆ. ಮೊದಲಿನಿಂದ ಪ್ರೇಮಿಸುವುದನ್ನು ಹೇಳಿಕೊಡುವವರು ಬೇಕಾಗಿದ್ದಾರೆ.
ಸರಿ.... ಕಲಿಯುವ ತಾಳ್ಮೆ, ಪ್ರೇಮಿಸುವ ಸಹನೆ ಈಗೀನವರಿಗೆ ಇದೆಯೇ ?
ಉಹೂಂ...! ತಲೆ ಮೇಲೆ ತಲೆ ಬಿದ್ರೂ ಮೊಬೈಲ್ ಬಿಟ್ಟು ಅಲುಗಾಡದ ಮಂದಿಗೆ ಇದಕ್ಕೆಲ್ಲಿದೆ ಸಮಯ ?
ಓಕೆ.. ಹಾಗಾದರೆ ಆನ್ಲೈನ್ನಲ್ಲಿಯೇ ಹೇಳಿಕೊಡೋಣವೆಂದರೆ ಟಣ್ ಟಣ್ ಟಣ್ ಎಂದು ಒಂದೇ ಸಮನೇ ಪ್ರೈವೇಟ್ ಬಸ್ಸಿನ ಹಾರ್ನಂತೆ ವಂಯ್ ಗುಡುವ ಸಂದೇಶಗಳು..! ಅಲ್ಲಿಗೆ ಪೂರ್ಣ ವಿರಾಮ.
ಎಲ್ಲಿಯೂ ಬೇರುಗಳನ್ನು ಬಿಡದೇ ಮೇಲ್ಮೈಯಲ್ಲಿ ಬೆಳೆಯುವ ಕಳೆಗಳಂತಾಗಿದೆ ಸಂಬಂಧಗಳು. ಪ್ರೀತಿಯ ವಿಷಯ ಬಿಡಿ ಸರಿಯಾಗಿ ದ್ವೇಷಿಸುವುದಕ್ಕೂ ಕಾರಣಗಳಿಲ್ಲದಂತಾ ಬದುಕು..!
ಪಬ್ ಜೀಯಾ ಚಿಕನ್ ಡಿನ್ನರಿಗೂ, ಟ್ರೋಲ್ ಮೀಮೀಗಳಿಗೂ, ಆನ್ಲೈನ್ ಶಾಪಿಂಗಳಿಗೂ ಅಂಟಿಕೊಂಡಿರುವ ಜನಗಳಿಗೆ ಸಾಕ್ಷಾತ್ ಭಗವಂತ ಪ್ರತ್ಯಕ್ಷನಾದರೂ ನೋಡುವುದಿಲ್ಲ. ಇನ್ನೂ ಜನಗಳನ್ನು ನೋಡುತ್ತಾರೆಯೇ ? ಅದಿರಲಿ, ಎಷ್ಟೋ ವೇಳೆ ಪ್ರೀತಿಸಿದ ವ್ಯಕ್ತಿಗಳು ಕಣ್ಮುಂದೆ ಬಂದರೂ ಕರೆ ಮಾಡಿ ಖಚಿತಪಡಿಸಿಕೊಳ್ಳವ ಪ್ರೇಮಿಗಳಿದ್ದಾರೆ.
ಬೆಲೆ ಗೊತ್ತಿಲ್ಲದ ವ್ಯಕ್ತಿ ಬೆಲೆ ಕಟ್ಟಲಾರ ಹಾಗೇ ಪ್ರೀತಿಯ ಸವಿಯನ್ನು ಅನುಭವಿಸದವರು ಹೇಗೆ ತಾನೇ ಪ್ರೇಮಿಸಲು ಸಾಧ್ಯ....!?
ಈಗೆಲ್ಲಾ ನಾನು ನಿಂಗೋಸ್ಕರ ಪ್ರಾಣ ಕೊಡ್ತೀನಿ ಅಂದ್ರೆ, ಅಯ್ಯೋ ಪುಣ್ಯಾತ್ಮ ನಿನ್ನ ಪ್ರಾಣ ಯಾರಿಗಯ್ಯಾ ಬೇಕು. ಕ್ರೆಡಿಟ್ ಕಾರ್ಡೋ, ಡೆಬಿಟ್ ಕಾರ್ಡೋ ಇದ್ರೆ ಕೊಡು ನಾವಾದ್ರೂ ನಾಲ್ಕು ದಿನ ಖುಷಿಯಾಗಿ ಬದ್ಕೋತೀವಿ ಅಂತಾರೆ. ಇಲ್ಲಿ ಯಾರಿಗೂ ಲೈಫ್ ಟೈಮ್ ವ್ಯಾಲಿಡಿಟಿ ಬೇಕಾಗಿಲ್ಲ.. ಅಲ್ಲೇ ಡ್ರಾ ಅಲ್ಲೇ ಬಹುಮಾನ ಸಿಗ್ಬೇಕು. ಯಾವುದೇ ವಸ್ತು ಆಗ್ಲೀ ವ್ಯಕ್ತಿ ಆಗಿರಲಿ ನೀವ್ ಬಯಸಿದ ತಕ್ಷಣ ಸಿಕ್ಬಿಟ್ರೆ. ಅಷ್ಟೇ ವೇಗವಾಗಿ ಅದರ ಮೇಲಿನ ಪ್ರೀತಿ, ಆಸೆ, ಗೌರವಾನೂ ಹೋಗ್ಬಿಡತ್ತೆ..
ಕಾಡಿಸದೇ, ಸತಾಯಿಸದೇ ಇದ್ರೆ ಅದು ಒಂದು ಪ್ರೀತಿ ಏನ್ರೀ.? ನಾವು ಎಷ್ಟೇ ಬಡ್ಕೊಂಡ್ರು ಕಲ್ಲಾಗಿ ನಿಂತಿರೋ ದೇವ್ರು ತರ ಮೌನವಾಗಿ ಪ್ರೀತ್ಸೋ ಹುಡ್ಗಿ ಆಡ್ತಿದ್ರೇನೇ ಚೆಂದ.. ಪ್ರೀತಿ ಪ್ರೊಗ್ರಾಮ್ ಮಾಡ್ದಂಗೆ ರೋಬೋಟಿಕ್ ಆಗ್ಬಾರ್ದು ಹಾಗೇನಾದರೂ ಆದರೆ ಪ್ರೀತಿ ಸತ್ತೋಗುತ್ತೆ. ಸತ್ತೋಗಕ್ಕೆ ಹುಟ್ಟಿದ್ರೆ ಅಲ್ವಾ ?
ನೀವು ಏನೇ ಹೇಳಿ ಕಾದು ಕಾದು ಒಂದು ಸಲ ಮಾತಾಡ್ಸೋ ಪ್ರೇಮಕ್ಕೂ, ಓಯೋ ರೂಮ್ ಪ್ರೀತಿಗೂ ಬಹಳ ವ್ಯತ್ಯಾಸ ಇದೆ.. ಪ್ರೀತಿ ವ್ಯಭಿಚಾರ ಆಗಬಾರದು. ಕಾಮಕ್ಕೆ ಪ್ರೀತಿಯ ಅಂಗಿಯನ್ನು ತೋಡಿಸೋಕೆ ಹೋಗ್ಬಿಡಿ. ಅದಕ್ಕೆ ಬಟ್ಟೆ ಇಲ್ಲದಿದ್ದರೂ ನಡೆಯುತ್ತದೆ. ಕ್ಷಮಿಸಿ ತೀರಾ ಕಠೋರವಾಗಿ ಹೇಳಿದ್ರೆ.
ಛಲೋ...! ಮೊಬೈಲ್ ಪಕ್ಕಕ್ಕಿಟ್ಟು ಒಂದ್ಸಲ ಪ್ರಪಂಚ ನೋಡಿ.. ನಿಮ್ಮ ಸಂಗಾತಿ ರಸ್ತೆ ತುದಿಯ ಐಸ್ ಕ್ರೀಂ ಪಾರ್ಲರಿನಲ್ಲಿ ಐಸ್ ಕ್ರೀಮೋ ಅಥವಾ ಆಚೆ ಬದಿಯ ಫುಟ್ಪಾತಿನಲ್ಲಿ ಪಾನಿಪುರಿಯನ್ನೋ ಸವಿಯುತ್ತಿರಬಹುದು. ನಿಮ್ಮ ಪ್ರೀತಿ ಸಿಗಬಹುದು. ಕೊನೆಯ ಪಕ್ಷ ಪ್ರಪಂಚವನ್ನಾದರೂ ಕೌತುಕದಿಂದ ನೋಡಬಹುದು. ಒಂದಂತೂ ಸತ್ಯ.. ಇಂಥಾ ಹೈಸ್ಪೀಡ್ ಪ್ರಪಂಚದಲ್ಲೂ ಪ್ರೀತಿಗಾಗಿ ಪ್ರಾಣ ಕೊಡೋ ಪ್ರೇಮಿಗಳಿದ್ದಾರೆ.. ಯಾಕೆ ಹೇಳಿ..!? ಪ್ರೀತ್ಸೋರಿಗೆ ಮಾತ್ರ ಪ್ರೀತಿ ಅಂದ್ರೇನೂ ಗೊತ್ತು...! ಅರೆ ಕ್ಷಣಕಾದರೂ ಅವಳನ್ನ ಒಮ್ಮೆ ಕದ್ದು ಕದ್ದು ನೋಡಿ.. ಕಣ್ಣು ಹೊಡೆದು ನೀನಂದ್ರೆ ನಂಗಿಷ್ಟ, ಐ ಲವ್ ಯೂ ಅಂತೇಳಿ. ನಾಚಿ ನೀರಾಗಿ ಗಂಗಾಮಾತೆ ತರಹ ಹರಿದು ಬಿಡ್ತಾಳೆ. ಇಷ್ಟೇ.. ಒಂದು ನಿಷ್ಕಲ್ಮಶವಾದ ನಗು, ಮನಸ್ಸು ಇದ್ರೆ ಪ್ರೀತಿ ತಾನಾಗಿಯೇ ಆಗುತ್ತದೆ... ಅಷ್ಟೇಯಾ...!! Happy Valentine's Day.
Comments
Post a Comment