ಹೋಪ್ ಮತ್ತು ಅನಘ
ಸುಮಾರು ಏಳೆಂಟು ವರುಷದ ಹಿಂದೆ ಚಿತ್ರಕಲಾ ಪರಿಷತ್ನ ಚಿತ್ರಸಂತೆಯಲ್ಲಿ ವೈಖರಿಯ ಸ್ನೇಹಿತೆ ಭಾರ್ಗವಿ ಕೂಡ ಭಾಗವಹಿಸಿದ್ದಳು. ಅವಳ ಮಾತಿಗಿಂತ ಕುಂಚವೇ ಮಾತನಾಡುತ್ತದೆ. ವೈಖರಿ ಹಾಗಲ್ಲ ನಿದ್ರೆಯಲ್ಲೂ ಮಾತಾಡುವ ವಾಚಾಳಿ. ಹಾಗಂತ ಅರ್ಥವಿಲ್ಲದ ಖಾಲಿ-ಪೀಲಿ ಮಾತುಗಳನ್ನಾಡುವ ಹುಡುಗಿಯಲ್ಲ. ಮಾತಾಡಿದರೆ ಅದಕ್ಕೊಂದಷ್ಟು ತೂಕವಂತು ಇರುತ್ತದೆ. ಈ ಕಾರಣಕ್ಕಾಗಿಯೇ ವಾಯ್ಸ್ ಓವರ್ ಆರ್ಟಿಸ್ಟ್ ಆಗಿದ್ದಳು ಅನಿಸುತ್ತದೆ. ಅದೂ ಪಾರ್ಟ್ ಟೈಮ್. ಮಿಕ್ಕಿದ್ದ ಸಮಯದಲ್ಲಿ ಕಾಲೇಜು, ಪಾಠ, ನಾಟಕ, ಧಮ್ಮು, ಎಣ್ಣಿ, ಇತ್ಯಾದಿ ಇತ್ಯಾದಿ ಎಂದು ಸಮಯವನ್ನು ವಿಂಗಡಿಸಿಕೊಂಡಿದ್ದಳು. ಎಂ.ಎ ಇನ್ ಇಂಗ್ಲಿಷ್ ಫಿಲಾಸಫಿ ಓದುತ್ತಿದ್ದಳು. ಇಂಗ್ಲಿಷ್ ಮಾತಾಡುವುದರಲ್ಲಿ ಲೆಕ್ಚರರ್ನ ಕೂಡ ಇವಳ ಮುಂದೆ ನಿವಾಳಿಸಿ ಬಿಸಾಕಬೇಕು ಅಷ್ಟು ಸುಂದರ, ಸ್ಪಷ್ಟ, ನಿಖರ. ಅವತ್ತು ಭಾರ್ಗವಿ ತನ್ನ ಚಿತ್ರಪಟಗಳ ಮುಂದೆ ಇವಳನ್ನು ಕೂರಿಸಿ, ತನ್ನ ಗೆಳೆಯನ ಪೇಂಟಿಂಗ್ಸಗಳನ್ನು ಅರೆಂಜ್ ಮಾಡಲು ಹೋಗಿದ್ದಳು. ವೈಖರಿಗೋ ಸುಮ್ಮನೆ ಕೂರಲು ಆಗುವುದಿಲ್ಲ.. ಕಲರ್ಸ್ ಕೈಗೆ ಅಂಟುತ್ತದೆಯೇ ಎಂದು ಬೆರಳಿನಲ್ಲಿ ಮುಟ್ಟಿ ನೋಡುವುದು. ಹಾಗೂ ಬಣ್ಣದ ವಾಸನೆ ಹೇಗಿದೆ ಎಂದು ಮೂಸುತ್ತಿದ್ದಳು. ಮೈಮೇಲೆ ಮನುಷ್ಯನ ನೆರಳಾಕೃತಿಯೊಂದು ಬಿತ್ತು. ಯಾವುದೋ ಗಿರಾಕಿಯೆಂದು ತಲೆಯೆತ್ತಿ ನೋಡಿ ಸಣ್ಣಗೆ ನಕ್ಕಳು. "ಒಂದ್ಸಲ ಬಣ್ಣದ್ ರುಚಿ ಹತ್ತಿದ್ರೆ ಬಿಡ್ಸೋದು ಕಷ್ಟ" ಎಂದು ನಕ್ಕವನನ್ನು ಮತ್ತೊಮ್ಮೆ ಪರೀಕ್ಷಿಸುವಂತೆ ನೋಡಿದಳು. ಬಾಚಣಿಗೆ ಕಂಡು ಯುಗವಾಗಿದ್ದ ಗುಂಗುರು ಕೂದಲು, ಕತ್ತರಿಸಿಟ್ಟಂತಂಹ ಕಲ್ಲಂಗಡಿ ಮುಖದ ಆಕಾರ, ಪೇಲವ ದೇಹ, ಅದರ ಮೇಲೊಂದು ಬಟ್ಟೆಯ ಜೋಳಿಗೆ, ಕಾಲಿಗೆ ಸೊಲ್ಲಾಪುರದ ಚಪ್ಪಲಿ ಇವೆಲ್ಲವನ್ನೂ ಪರಿಗಣಿಸಿ ಇವನು ಕೂಡ ಆರ್ಟಿಸ್ಟ್ ಎಂದು ಗುರುತಿಸಬಹುದಾಗಿತ್ತು. ಇಷ್ಟೆಲ್ಲದರ ಮಧ್ಯೆ ವೈಖರಿಗೆ ಕಂಡಿದ್ದೇ ಬೇರೆ, 'ನಿಮ್ಮ ಕಣ್ಣು ತುಂಬಾನೇ ಶಾರ್ಪ್ ಆಗಿವೆ ಅಂಡ್ ನೋಡೋಕು ಸುಂದರವಾಗಿವೆ. ನಿಮ್ಮ ಸ್ಪೆಕ್ಸ್ನ ತೆಗೀಬೇಡಿ. ಅಲ್ವೇಸ್ ವೇರ್' ಎಂದು ಅವನನ್ನೇ ನೋಡಿದಳು.
'ಯಾಕೆ' ಎಂದು ಕುತೂಹಲದಿಂದ ಕನ್ನಡಕವನ್ನು ಸರಿಪಡಿಸಿಕೊಳ್ಳುತ್ತಾ ಏಕಾಂತ್ ಕೇಳಿದನು.
'ಬಿದ್ದೋಗ್ತಾರೀ ಹುಡ್ಗೀರು, ಇಷ್ಟೊಂದು ಸೆಳೆತ ಇದ್ರೆ ಹೇಗೆ?' ಎಂದು ಚೂರು ಫ್ಲರ್ಟ್ ಮಾಡಲು ಅಣಿಯಾದಳು. ಹುಡುಗಿಯರನ್ನು ತೀರಾ ಹತ್ತಿರ ಎಂದರೆ ಶಾಲೆಯಲ್ಲಿ ಗಲಾಟೆ ಮಾಡಿದ್ದಕ್ಕಾಗಿ ಅವರ ಪಕ್ಕ ಕೂರಿಸದಾಗಷ್ಟೇ ನೋಡಿದ್ದು. ಮಿಕ್ಕವರು ಅಮ್ಮ, ಅಕ್ಕ, ಅಜ್ಜಿ ಬರೀ ವಾತ್ಸಲ್ಯದಿಂದ ತಲೆ ಸವರಿದವರೆ. ಹಾಗಾಗಿ ತಕ್ಷಣವೇ 'ನಿಜಾನ ? ಬಟ್ ನಂಗ್ ಯಾರೂ ಬಿದ್ದೇ ಇಲ್ಲ. ಮೋರೋವರ್ ನಾನ್ ಯಾವತ್ತೂ ಪ್ರಯತ್ನಿಸಿಲ್ಲ. ಹುಡ್ಗೀರು ನನ್ನ ನೋಡಿದ್ರೆ ಕಡ್ಡಿ ಪೈಲ್ವಾನ್ ಎಂದು ಮೂಗು ಮುರಿಯೋರು ಅಷ್ಟೇ' ಎಂದು ತನ್ನ ಸಂಕಟವನ್ನು ತೋಡಿಕೊಂಡನು.
'ಕತ್ತೆಗಳಿಗೇನ್ರೀ ಗೊತ್ತು ಕಸ್ತೂರಿ ವಾಸ್ನೇ ?' ಎಂದು ಪೇಂಟಿಂಗ್ ಜೋಡಿಸುತ್ತಾ ಹೇಳಿದಳು.
'ಅದು ಸರಿ ಅಲ್ವಾ..! ನಿಮ್ಗ್ ಕಸ್ತೂರಿ ವಾಸ್ನೇ ಗೊತ್ತಾಗುತ್ತಾ ?' ಎಂದು ಕೇಳಿ ಆ ಕಡೆ ಚಿತ್ರಪಟವನ್ನು ನೋಡುವಂತೆ ತಿರುಗಿ ನಿಂತನು.
'ಏನ್ರೀ, ಹೀಗ್ ಕೇಳ್ಬಿಟ್ರೀ. ನಂಗ್ ವಾಸ್ನೇನೂ ಗೊತ್ತಾಗುತ್ತೆ. ಗೊತ್ತಾದ್ಮೇಲೆ ಇಷ್ಟ ಅಂತ ಹೇಳೋಕು ಬರುತ್ತೆ. ನೋಡ್ಕೋಳೋ ಧೈರ್ಯ ಇದೀಯಾ ನಿಮ್ಗೇ ?' ಎಂದು ನೇರಾ ನೇರ ಯುದ್ಧ ನಿಂತವರಂತೆ ಕೇಳಿಯೇ ಬಿಟ್ಟಳು.
'ಅಯ್ಯೋ ನಾನೇನೋ ತಮಾಷೆ' ಎಂದು ನುಣುಚಿಕೊಳ್ಳುಲು ಪ್ರಯತ್ನಿಸಿದನು. ಆದರೆ ವೈಖರಿಗೇಕೋ ಇವನನ್ನು ಬಿಡಲು ಮನಸ್ಸಾಗದೆ ಇನ್ನಷ್ಟು ಗೋಳು ತಿನ್ನುವ ಎಂದು, 'ಎಂಥಾ ತಮಾಷೆ. ನಂಗ್ ನಿಮ್ಮ ಕನ್ನಡಕ, ಅದ್ರೊಳಗಿರೋ ಕಣ್ಣು ಮತ್ತೆ ನಿಮ್ಮ ಬೆಳ್ಳುಳ್ಳಿ ಮೂಗು ಇಷ್ಟ ಆಗಿದೆ' ಅಂತ ಹೇಳಿ ಅವನ ಕಣ್ಣುಗಳನ್ನೇ ದಿಟ್ಟಿಸುತ್ತಾ ಕೂತಳು. ಏಕಾಂತನಿಗೆ ಏನೋ ಎಡವಟ್ಟಾಗುವ ಸಂಭವವಿದೆ ಎನಿಸಿ 'ಟೈಮ್ ಆಯ್ತು. ಮಕ್ಳಿಗ್ ಕ್ಲಾಸ್ ತಗೋಬೇಕು' ಎಂದು ಅಲ್ಲಿಂದ ಹೊರಡಲು ನೆಪ ಹೇಳಿದ.
'ಪೇಂಟಿಂಗ್ಸ್ ತಗೋಳಲ್ವಾ ?' ಎಂದು ಪೇಂಟಿಂಗ್ಸನತ್ತ ನೋಡುತ್ತಾ ಕೇಳಿದಳು. ಏಕಾಂತನ ಮೈಯೆಲ್ಲಾ ತಡಕಾಡಿದರೂ ಐವತ್ತು ರೂಪಾಯಿ ದಾಟುವುದಿಲ್ಲ. ಅಂಥದ್ದರಲ್ಲಿ ಸಾವಿರಾರು ಬೆಲೆ ಬಾಳುವ ಚಿತ್ರಗಳನ್ನು ಕೊಳ್ಳಲು ಸಾಧ್ಯವೇ ಎಂದು ದೇಹದ ಮೇಲೆ ಹಾವೇ ಎರಗಿದಂತಾಗಿ 'ನಾನೂ ಆರ್ಟಿಸ್ಟ್' ಎಂದು ನೆಪವೊಡ್ಡಿ ಹೋಗಲು ಅಣಿಯಾದ.
'ಆರ್ಟಿಸ್ಟ್ ಆದ್ರೆ ಬೇರೆಯವರ ಪೇಂಟಿಂಗ್ಸ್ ತಗೋಬಾರ್ದ ? ಈಗೋ ಏನ್ರೀ ? ನೀವೇ ದೊಡ್ಡ ಆರ್ಟಿಸ್ಟ್ ಅಂತಾನ' ಎಂದು ಸಿಡುಕಿನಲ್ಲಿ ಕೇಳಿದಳು.
ಏಕಾಂತ್ ದಿಕ್ಕು ತೋಚದೆ ಅತೀ ವಿನಯದಿಂದ 'ಹಾಗೇನಿಲ್ಲ, ಬೇರೆಯವರ ಕೆಲ್ಸಾನೂ ನಾನು ಗೌರವಿಸ್ತೀನಿ. ಸಂಜೆ ಬಂದು ತಗೊಂಡು ಹೋಗ್ತೀನಿ' ಎಂದು ಹೇಳಿದ.
'ಯಾಕ್ ದುಡ್ಡಿಲ್ವಾ ?' ಎಂದು ಗುಂಡಿಕ್ಕಿದಂತೆ ಕೇಳಿದಳು .
'ಇಲ್ಲ ಇಲ್ಲ.. ಬೇರೆ ಪೇಂಟಿಂಗ್ಸ್ ಎಲ್ಲಾ ನೋಡಿ, ಆಮೇಲೆ ಬಂದು ತಗೊಂಡು ಹೋಗ್ತೀನಿ' ಎಂದು ಸಬೂಬು ಹೇಳಿದರೂ ವೈಖರಿಗೆ ಇವನ ಮುಖದಲ್ಲಿ ದುಡ್ಡಿಲ್ಲದ ಭಾವನೆ ಸ್ಪಷ್ಟವಾಗಿ ಗೊತ್ತಾಗುತ್ತಿತ್ತು.
'ಸರಿ. ತೊಂದ್ರೆ ಇಲ್ಲ ನಿಮ್ ಅಡ್ರೆಸ್, ನಂಬರ್ ಕೊಡಿ' ಎಂದು ನೋಟ್ಬುಕ್ಕನ್ನು ಕೈಗೆತ್ತಿಕೊಂಡಳು.
'ನಿಜ್ವಾಗ್ಲೂ. ಈವಿನಿಂಗ್ ಬರ್ತೀನಿ' ಎಂದು ಗಂಟಲ ಮೇಲೆ ಕೈ ಇಟ್ಟು ಪ್ರಾಮೀಸ್ ಮಾಡುವಂತೆ ತೋರಿಸಿದನು.
'ಈಗೇನೂ ಕೊಡ್ತೀರೋ, ಇಲ್ವೋ ?' ಎಂದು ಗದರಿ ಅಡ್ರೆಸ್ ಹಾಗೂ ಪೋನ್ ನಂಬರನ್ನು ತೆಗೆದುಕೊಂಡಳು.
ಇದಾದ ನಾಲ್ಕು ದಿನದ ನಂತರ ಏಕಾಂತನಿಗೆ ಪೇಟಿಂಗ್ಸ್ ಪಾರ್ಸಲ್ವೊಂದು ಬಂದಿತ್ತು. ಅದರ ಜೊತೆ ಐದು ರೂಪಾಯಿ ನೋಟಿನ ಅಗಲದಷ್ಟು ಚೀಟಿಯು ಇತ್ತು. ಆಗಷ್ಟೇ ಎದ್ದು ಹಲ್ಲು ಉಜ್ಜದೇ ಪೇಪರ್ ಓದುತ್ತಿದ್ದ ಏಕಾಂತನಿಗೆ ಪತ್ರಿಕೆಯ ದಿನ ಭವಿಷ್ಯ ಕಾಲಂನಲ್ಲಿ 'ಅಡಿಕೆ ಕದ್ದ ಮಾನ ಆನೆ ಕೊಟ್ಟರೂ ಬಾರದು ಎಂಬಂತೆ ವ್ಯಾಪಾರ, ವ್ಯವಹಾರದಲ್ಲಿ ಬಾಯಿ ತಪ್ಪಿ ಆಡಿದ ಮಾತಿನಿಂದ ತೊಂದರೆ ಅನುಭವಿಸುವಿರಿ. ಕುಲದೇವರ ಸ್ಮರಣೆ ಮಾಡಿ' ಎಂದು ಇರುವುದನ್ನು ಓದುವುದಕ್ಕೂ ಪೋಸ್ಟ್ ಮ್ಯಾನ್, "ಪಾರ್ಸಲ್ ಸಾರ್" ಎಂದು ಕರೆಯುವುದಕ್ಕೂ ಒಂದೆ ಆಯಿತು. ಏಕಾಂತನಿಗೆ ಪಾರ್ಸಲ್ ಮೇಲಿನ ವೈಖರಿ ಎಂಬ ಹೆಸರೇ ಅವನನ್ನು ಸೆಳೆಯಿತ್ತಿತ್ತು. 'ಏನಿರಬಹುದು' ಎಂದು ಸ್ವಗತವಾಗಿ ಹೇಳಿಕೊಂಡ. ಇದಕ್ಕೆ ಪ್ರತ್ಯುತ್ತರವಾಗಿ ಪೋಸ್ಟ್ ಹುಡ್ಗ, 'ತೆಗ್ದು ನೋಡಿಲ್ಲ ಸಾರ್. ನೀವು ಹೂಂ ಅಂದ್ರೆ ನೆಕ್ಸ್ಟ್ ಟೈಮಿಂದ ನೋಡ್ಬಿಟ್ಟೆ ತಂದ್ ಕೊಡ್ತೀನಿ' ಎಂದು ಘೋಷಿಸಿದನು. ಏಕಾಂತ ತಕ್ಷಣ, 'ಆ ತರ ಎಲ್ಲಾ ತೊಂದ್ರೆ ತಗೋಬೇಡಪ್ಪ. ನಾನ್ ನೋಡ್ಕೋತೀನಿ' ಎಂದು ಕಳುಹಿಸಿದನು. ಪೇಂಟಿಂಗ್ ಪಾರ್ಸಲ್ ತೆಗ್ದ ಏಕಾಂತನಿಗೆ ಆಶ್ಚರ್ಯಗೊಳಿಸಿದ್ದು ವೈಖರಿ ಕಳಿಸಿದ್ದ ಪೇಂಟಿಂಗ್. ಅದು ಕೃಷ್ಣ-ರಾಧೆ ಬೆತ್ತಲೆಯಾಗಿರುವಂತಾ ಅಮೂರ್ತ ಚಿತ್ರ. ಯಾರೇ ಆದರೂ ಮೊದಲಿಗೆಯೇ ಈ ರೀತಿ ಚಿತ್ರವನ್ನು ಕಳುಹಿಸಲು ಹಿಂಜರಿಯುತ್ತಾರೆ. ವೈಖರಿಯ ವಿಚಾರದಲ್ಲಿ ಹಾಗಿರಲಿಲ್ಲ. ಅವಳಿಗೆ ಅನಿಸಿದ್ದನ್ನು ಮುಕ್ತವಾಗಿ ಹೇಳುತ್ತಿದ್ದಳು. ಒಮ್ಮೆ ಹೀಗೇ, 'You fucked me Four times in my dream' ಅಂದು ಬಿಡೋದಾ ? ಏಕಾಂತನಿಗೆ ಕೂತಿದ್ದಲೇ ಭೂಕಂಪನವಾದಂತೆ ಭಾಸವಾಯಿತು. ಆ ರೀತಿ ನೇರ ಮಾತಿನ ನಿಸ್ಸಂಕೋಚದ ಹುಡುಗಿ. ವೈಖರಿ ಕಳುಹಿಸಿದ್ದ ಚೀಟಿಯನ್ನು ಎಷ್ಟು ಬಾರಿ ಓದಿದರೂ ನನಗಾ ಬರೆದಿರುವುದು ಎನಿಸುತ್ತಿತ್ತು. ಕೊನೆಗೆ ಟಾಯ್ಲೆಟ್ನ ಕಮೋಡ್ ಮೇಲೆ ಕೂತು ಒಂದು ಸಾರಿ ಜೋರಾಗಿ ಓದಲು ಶುರು ಮಾಡಿದನು. 'Hello Mr.ಏಕಾಂತ್, ನಾನು ವೈಖರಿ. ಮೊನ್ನೆ ಚಿತ್ರಕಲಾ ಪರಿಷತ್ನಲ್ಲಿ ಸಿಕ್ಕಿದ್ನಲ್ಲ ಅದೇ ಹುಡುಗಿ. ನೀವು ಏನ್ ಅನ್ಕೊಂಡಿದೀರೋ ಏನೋ ನನಗೆ ಗೊತ್ತಿಲ್ಲ. ನನಗೆ ಜೀವನ ಒಂಟಿ ಅನಿಸ್ತಿದೆ ರೀ.. ಒರಗಿ ಅಳೋಕೆ ಒಂದು ಭುಜ ಬೇಕು. ಮುಖವನ್ನು ಅಡಗಿಸಲು ಒಂದು ಎದೆ ಬೇಕು. ಕೊಡ್ತೀರಾ ? ನಿಮಗೆ ಸಾವಿರ ತಲೆನೋವು ಇರಬಹುದು. ಅದರಲ್ಲಿ ನಾನು ಒಂದು ಅಂತ ಸೇರಿಸ್ಕೋತೀರಾ ? ಅಪ್ಪ, ಅಮ್ಮ, ತಮ್ಮ ಇದ್ದರೂ ನಾನು ಒಂಟಿ. ಗಟ್ಟಿಯಾಗಿ ಅಳ್ಬೇಕು ಅನಿಸ್ತಿದೆ. ಆದಷ್ಟೂ ಬೇಗ ಸಿಕ್ತೀರಾ ? ಹ್ಞಾ ಇನ್ನೊಂದು ವಿಷಯಾನ ಕ್ಲಾರಿಫೈ ಮಾಡ್ಬೇಕು. ಬದುಕಿನ ಶಕ್ತಿ ಪ್ರೀತಿ. ಪ್ರೀತಿಯ ಕೊನೆಯ ಮೂಲ ಕಾಮ. ಅದೊಂಥರ ಸಾಕ್ಷಾತ್ಕಾರವಿದ್ದಂಗೆ ಅದು ಆದ್ಮೇಲೆ ನೀವು ಅದಕ್ಕಿಂತ ಮಿಗಿಲಾಗಿ ಪ್ರೀತ್ಸೋಕೆ ಆಗಲ್ಲ. ಎಲ್ಲೇ ಹೋದರೂ ಅಲ್ಲೇ ಬಂದು ಮುಟ್ತೀರಾ. ಆದರೆ ನನಗೆ ಶುರುವಿನಲ್ಲೇ ನಿಮ್ಮ ಮೇಲೆ ಇದೆಲ್ಲವನ್ನೂ ಮೀರಿದ ಆಕರ್ಷಣೆ ಇದೆ. ನಿಮ್ಮ ಕಣ್ಣಿಗೆ ಬಿದ್ದೋದೆ ರೀ.. ನಿಮ್ಗೂ ನಾನು ಅಲ್ಪ ಸ್ಪಲ್ಪ ಇಷ್ಟ ಆಗಿದ್ರೆ ಕಾಲ್ ಮಾಡಿ' ಎಂದು ತನ್ನ ಮೊಬೈಲ್ ನಂಬರನ್ನು ಹಾಕಿದ್ದಳು. ಏಕಾಂತನ ನರಮಂಡಲಕ್ಕೆ ವಿದ್ಯುತ್ ಸ್ಪರ್ಶವಾಗಿ ಕೋಮಾಕ್ಕೆ ಹೋದವನಂತೆ ಸಜೀವವಾಗಿ ಓಡಾಡುತ್ತಿದ್ದ.
ವೈಖರಿ ಹೀಗೆ ಬರೆಯಲು ಕಾರಣಗಳು ಸುಮಾರಿವೆ. ಅವಳು ಬಯಸಿದ್ದು ಪ್ರೀತಿಯಿಂದ ನೋಡಿಕೊಳ್ಳುವ ತಂದೆ, ಅಕ್ಕರೆಯಿಂದ ಸಾಕುವ ತಾಯಿ, ರಕ್ಷಣೆಗೆ ನಿಲ್ಲುವ ತಮ್ಮ. ಆದರೆ ಇವಳ ವಿಷಯದಲ್ಲಿ ಎಲ್ಲವೂ ತಲೆಕೆಳಗಾಯಿತು. ಬ್ಯಾಂಕ್ ಮ್ಯಾನೇಜರ್ ಆಗಿದ್ದರೂ ದಿನಾ ಕುಡಿದು ಬಂದು ಹೆಂಡತಿಗೆ ಹೊಡೆಯುವ ತಂದೆ. ಅದು ಯಾವುದೋ ಕಾಲದಲ್ಲಿ ಇವರ ಬ್ಯಾಂಕ್ ಸಹೋದ್ಯೋಗಿಯೊಂದಿಗೆ ಅನೈತಿಕ ಸಂಬಂಧವಿತ್ತಂತೆ. ಅದು ಎಷ್ಟು ನಿಜವೋ, ಎಷ್ಟು ಸುಳ್ಳೋ. ವೈಖರಿ ತಾಯಿ ವನಿತಾ ಹೇಳುವುದೆ ಬೇರೆ, 'ಮಗುವನ್ನು ಮುದ್ದಿಸಲು, ಆಟ ಆಡಿಸಲು ಬರ್ತೀದ್ದ. ನನ್ ಹತ್ರ ಏನೂ ಬರ್ತೀರ್ಲಿಲ್ಲ. ಸತ್ತೋದ ಅವನ ಮಗು ವೈಖರಿಯ ರೀತಿ ಇದ್ದಳು' ಎಂದು ಹೇಳಿದರೂ ದಿನವೂ ಈ ಗಲಾಟೆ ತಪ್ಪದು. ಇನ್ನೂ ತಮ್ಮ ವಿಖ್ಯಾತ್ ಎಂಜಿನಿಯರಿಂಗ್ ನೆಪವೊಡ್ಡಿ ಮುಡುಬಿದ್ರೆಯಲ್ಲಿದ್ದ. ಇವರೆಲ್ಲರ ಮಧ್ಯೆ ನಲುಗಿ ಹೋಗುತ್ತಿದ್ದದ್ದೂ ವೈಖರಿ ಮಾತ್ರ. ಹೀಗಾಗಿ ಅವಳೊಂದು ಕಲ್ಬಂಡೆಯಂತಾಗಿ ಬಿಟ್ಟಿದ್ದಳು. ನೇರಾ ನೇರ ಯಾರಿಗೆ ಮನಸ್ಸಿಗೆ ನೋವಾಗುತ್ತದೆ ಎಂದು ಚಿಂತಿಸುತ್ತಿರಲಿಲ್ಲ. ನನಗಾಗಿದ್ದು ಅವರಿಗೂ ಆಗಲಿ ಎನ್ನುವ ಭಾವ. ಅನ್ಯ ಮನಸ್ಸಿನಿಂದಲೇ ಏಕಾಂತನೂ ಜಯನಗರದ ಸಾಯಿಬಾಬಾ ದೇವಸ್ಥಾನದ ಹತ್ತಿರ ಅವಳನ್ನು ಭೇಟಿ ಮಾಡಲು ಬಂದಿದ್ದನು. ಬೆಳಗ್ಗೆ 9ಕ್ಕೆ ಎಂದವಳು ಬಂದಾಗ 10:05 ಆಗಿತ್ತು. ಆಶ್ಚರ್ಯವೆಂದರೆ ಇಬ್ಬರೂ ನೇವಿ ಬ್ಲೂ ಕಲರ್ ಬಟ್ಟೆ ಹಾಕಿದ್ದು. 'ಎಲ್ಲಿದ್ದೀಯಾ' ಎಂದು ಕರೆ ಮಾಡುತ್ತಲೇ ಹತ್ತಿರ ಬಂದ ವೈಖರಿ ಏಕಾಂತನನ್ನು ನೋಡುತ್ತಲೇ ತಬ್ಬಿಕೊಂಡಳು. ಅಲ್ಲಿಯವರೆಗೂ ಒಮ್ಮೆಯೂ ಅಪ್ಪುಗೆಯ ಸುಖ ಕಾಣದ ಏಕಾಂತನಿಗೆ ಗರ ಬಡಿದಿತ್ತು. ಇದೆಲ್ಲಕ್ಕಿಂತ ಅವನಿಗೆ ನಾಚಿಕರ ಎನಿಸಿದ್ದು ತನ್ನ ಮನೆಯ ಬಳಿ ಇರುವ ಗೋಪಾಲ್ಯನ ಮುಂದೆ ತಬ್ಬಿಕೊಂಡದ್ದು. ಗೋಪಾಲಯ್ಯ ನೋಡಿದರೂ ಚಿಂತೆಯಿಲ್ಲ ಏಕೆಂದರೆ ಏಕಾಂತನ ಫ್ಯಾಮಿಲಿ ಇದ್ದದ್ದು ಕಾರ್ಕಳದಲ್ಲಿ. ಹಾಗಾಗಿ ಆತಂಕಕ್ಕಿಂತ ಸಂಕೋಚ. ಮನೆಯಲ್ಲಿ ಎಂ.ಎಫ್.ಹುಸೇನ್ ಆಗುತ್ತೇನೆಂದು ಎಂಟು ವರುಷದ ಹಿಂದೆ ಮನೆ ಬಿಟ್ಟು ಬಂದವನು ಇನ್ನೂ ಒಂದು ಕಡೆ ಸರಿಯಾಗಿ ನೆಲೆಯೂರಿಲ್ಲ. ಮಕ್ಕಳಿಗೆ ಚಿತ್ರಕಲೆ, ಅಭಿನಯ ಹೇಳಿಕೊಡುವುದು, ನಾಟಕಕ್ಕೆ ರಂಗಸಜ್ಜಿಕೆ ಮಾಡುವುದರಿಂದ ಹೊಟ್ಟೆಯನ್ನು ತುಂಬಿಸಿಕೊಳ್ಳುತ್ತಿದ್ದನು.
ಇಂಥಾ ಏಕಾಂತನಿಗೂ ವೈಖರಿಗೂ ಯಾವ ಪರಿಯ ಪ್ರೇಮವಾಯಿತೆಂದರೆ, ಇನ್ನೇನು ಮುಂದಿನ ತಿಂಗಳೇ ಮದುವೆ ಅನ್ನುವ ತನಕ ಹೋಯಿತು. ಏಕಾಂತನೂ ವೈಖರಿಯನ್ನು ಅತಿಯಾಗಿ ಆವರಿಸಿಕೊಂಡಿದ್ದನು. ಎಷ್ಟರಮಟ್ಟಿಗೆ ಎಂದರೆ ಅವಳಿಗೆ ಹಂಪಿಯ ಮೂರು ದಿನದ ಡಾಕ್ಯುಮೆಂಟರಿ ಶೂಟ್ ಕೂಡ ಮಾಡಲು ಆಗದಂತೆ. ಮೊದಲೇ ಎಲ್ಲರಿಂದಲೂ ದೂರವಿದ್ದ ವೈಖರಿಗೆ ಏಕಾಂತ್ ತನ್ನನ್ನು ಹಾಗೂ ತನ್ನೆಲ್ಲಾ ಅಸ್ತಿತ್ವವನ್ನು ಆವರಿಸಿಕೊಂಡು ನಾನು ಅವನಾಗುತ್ತಿದ್ದಾನೆ ಎನಿಸಿತು. ಅವಳಿಗೆ ಇಷ್ಟು ಸಾಕಿತ್ತು ಅವನಿಂದ ದೂರಾಗಲು. ಕಾರಣವೇ ಇರದೇ ಅತಿಯಾಗಿ ಪ್ರೀತಿಸುವುದೇ ನಿನ್ನನ್ನು ದೂರ ಮಾಡಲು ಕಾರಣ ಎಂದಾಗ ಏಕಾಂತನಿಗೆ ಪ್ರೇಮಿಸುವುದು ತಪ್ಪೇ ? ಹಾಗಾದರೆ ಒಂದು ಕ್ಷಣಕ್ಕೆ ಹೇಗೆ ಪ್ರೀತಿಸಬೇಕು ಎಂದು ಅವಳನ್ನು ಕೇಳಿದ್ದು ಉಂಟು. ಇಂಥಾ ನೇರವಂತಿಕಯೇ ಏಕಾಂತನಿಗೆ ಅವಳಲ್ಲಿ ಇಷ್ಟವಾಗಿದ್ದು. ಪ್ರೀತಿಸುವ ಮೊದಲು, 'ನೋಡ್ರೀ, ಈಗಾಗ್ಲೇ ನನಗೆ ಎರ್ಡು-ಮೂರ್ ಅಫೇರ್ಸ್ ಇತ್ತು. ಆಮೇಲೆ ನೀವು ನಾನ್ ವರ್ಜೀನ್ ಹುಡ್ಗಿ ಅನ್ಕೊಂಡು ಮದ್ವೆ ಆದ್ಮೆಲೆ ಜಗ್ಳ ಕಾಯ್ಬೇಡಿ' ಎಂದಿದ್ದಳು. ಏಕಾಂತನಿಗೆ ಇದಾವುದೂ ಲೆಕ್ಕಕ್ಕೆ ಬರಲಿಲ್ಲ. ಅಷ್ಟರಮಟ್ಟಿಗೆ ಅವಳನ್ನು ಪ್ರೇಮಿಸಲು ಶುರು ಮಾಡಿದ್ದ, 'ಬಿಡ್ರಿ ನಿಮ್ಮ ವರ್ಜೀನಿಟಿ ತಗೊಂಡು ಉಪ್ಪಿನಕಾಯಿ ಹಾಕಿ ನೆಕ್ಲಾ ? ಎಂದಾಗ, ವೈಖರಿಯೂ 'ನೆಕ್ಕಲ್ವಾ ?' ಎಂದು ತುಂಟ ಕಣ್ಣುಗಳಿಂದ ನೋಡಿದಾಗ ಏನೆಂದು ಉತ್ತರ ಕೊಡದೆ ನಾಚಿ ತಲೆ ತಗ್ಗಿಸಿದನು.
ವೈಖರಿಗೆ ಆರು ತಿಂಗಳ ಇವನ ಪ್ರೀತಿ ಒಳ್ಳೆಯ ಜೀವನಾನುಭವಾಗಿತ್ತು. ಆದರೆ ಏಕಾಂತನ ವಿಷಯದಲ್ಲಿ ಹಾಗಿರಲಿಲ್ಲ. ಎಲ್ಲರನ್ನೂ ಧಿಕ್ಕರಿಸಿ ನೀನೇ ಸರ್ವಸ್ವ ಎಂದು ಪ್ರೇಮಿಸಿದ್ದನು. ಆದರೂ ಈಗ ಅವನು ಏನೂ ಮಾಡುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಕೊನೆಯದಾಗಿ ಒಂದು ಮಾತು ಹೇಳಿದ, 'ನೀವೇ ಬಂದ್ರಿ, ನೀವೇ ಪ್ರೀತ್ಸಿದ್ರಿ, ನೀವೇ ಮದ್ವೆ ಆಗು ಅಂದ್ರಿ, ಈಗ್ ನೀವೇ ಹೋಗ್ತೀನಿ ಅಂತಿದ್ದೀರಾ. ಇದರಲ್ಲಿ ನನ್ನ ತಪ್ಪೇನೂ ?' ಎಂದು ಕೇಳಿದಾಗ, 'I'm Sorry, Love you' ಎಂದು ಏಕಾಂತನನ್ನು ತಬ್ಬಿ ಬಂದಿದ್ದಳು.
ವೈಖರಿಗೆ ಬಿಡಲು ಕಾರಣಗಳು ಅದೇನೂ ಇದ್ದವೋ ದೇವರೇ ಬಲ್ಲ. ಒಂದು ಸಲ ಅವಳು ಬೇಡ ಎಂದು ತೀರ್ಮಾನಿಸಿದರೆ ಮುಗಿಯಿತು. ಅತೀ ಎನುವುದೆ ಕಾರಣವಾಗಿರಲಿಕ್ಕಿಲ್ಲ. ಬದುಕಿನಲ್ಲಿ ನೆಲೆ ನಿಲ್ಲದೆ ಅಲೆಯುತ್ತಿರುವುದು ಒಂದು ಕಾರಣವಿರಬಹುದು. ವೈಖರಿಗೆ ಚಿಕ್ಕಂದಿನಿಂದಲೂ ಕನಸುಗಳು ಸಾವಿರಾರು. ಕಾಡಿನಲ್ಲಿ ಹೋಗಿ ಅಲ್ಲಿರುವ ಬುಡಕಟ್ಟು ಜನಾಂಗದ ಮಕ್ಕಳಿಗೆ ಪಾಠ ಹೇಳಿಕೊಡಬೇಕು, ಎಲ್ಲರಿಂದಲೂ ದೂರವಾಗಿ ಬೆಟ್ಟದಡಿ ಮನೆ ಮಾಡಿಕೊಂಡು ಇರಬೇಕು. ಒಂದು ಎನ್.ಜಿ.ಓ ಸ್ಥಾಪಿಸಬೇಕು. ಹೀಗೇ ಕನಸುಗಳ ಸರಮಾಲೆ ಇದ್ದ ವೈಖರಿಗೆ ಏಕಾಂತನ ವೃತ್ತಿ ಸಹಕರಿಸುತ್ತಿರಲಿಲ್ಲ. ಮುಂದೊಂದು ದಿನ ಇದು ಮಗ್ಗಲು ಮುಳ್ಳಾಗಬಹುದು ಅನಿಸಿ ಈಗಲೇ ಅವನಿಂದ ದೂರಾದಳು. ವೈಖರಿಯಿಂದ ದೂರಾಗುವ ಮೊದಲು ಏಕಾಂತ್ ಒಂದು ನಾಯಿ ಸಾಕಲು ಹೇಳಿದ್ದ. ಅದು ಸಂಬಂಧಗಳ ಮೌಲ್ಯವನ್ನು ಅರ್ಥ ಮಾಡಿಸಲು. ಅದಾವುದೂ ಕಿವಿಗೆ ಹಾಕಿಕೊಳ್ಳದೆ ಮರೆಯಾದಳು.
ಸರಿಯಾಗಿ ಒಂದು ವರ್ಷದ ನಂತರ ವೈಖರಿ ತನ್ನ ಬಾಲ್ಯದ ಗೆಳೆಯ ಡೇವಿಡ್ನನ್ನು ಕ್ರಿಶ್ಚಿಯನ್ ಸಂಪ್ರದಾಯವಾಗಿ ಚರ್ಚ್ನಲ್ಲಿ ಮದುವೆಯಾದಳು. ಏಕಾಂತನನ್ನು ತೊರೆದ ನಂತರ ವೈಖರಿಯ ಬದುಕಿನಲ್ಲಿ ಬಹಳಷ್ಟು ಘಟನೆಗಳು ನಡೆದವು. ವೈಖರಿಯ ತಂದೆ ವಾಸುದೇವನ ಕುಡಿತಾ, ಗಲಾಟೆಗಳು ಮನೆಯಲ್ಲಿ ಹೆಚ್ಚಾದವು. ಪದೇಪದೇ ಮಗಳಿಗೆ, 'ನೀನು ಹಾದರಕ್ಕೆ ಹುಟ್ಟಿದವಳು' ಎಂದು ಮಗಳನ್ನು ನಿಂದಿಸುತ್ತಿದ್ದನು. ಇದನ್ನು ತಡೆಯಲು ಬಂದ ಹೆಂಡತಿಗೆ ಮನಸೋ ಇಚ್ಛೆ ಥಳಿಸುವುದು. ಇದರಿಂದ ರೋಸತ್ತಿ ಹೋದ ವೈಖರಿ 'ಇನ್ಮೆಲೆ ನಾನು ನಿಮ್ಮೊಂದಿಗೆ ಇರುವುದಿಲ್ಲ' ಎಂದು ಅವತ್ತೇ ಮನೆಯಿಂದ ಹೊರ ನಡೆದಳು. ಒಂದಷ್ಟು ಕಾಲ ಸ್ನೇಹಿತೆ ಭಾರ್ಗವಿಯ ಮನೆಯಲ್ಲಿದ್ದಳು. ಆಗ ಸಿಕ್ಕವನೇ ಬಾಲ್ಯದ ಗೆಳೆಯ ಡೇವಿಡ್.
ಪ್ರೈಮರಿ ಸ್ಕೂಲಿನಲ್ಲಿ ಇದ್ದಾಗ ಡೇವಿಡ್ ಹಾಗೂ ವೈಖರಿ ಇಬ್ಬರೂ ಅಂತರ್ಮುಖಿಗಳೆ. ತರಗತಿಯಲ್ಲಿ ಇವರು ಬಾಯಿ ಬಿಡುತ್ತಿದ್ದದ್ದೇ ಕ್ಲಾಸಿನ ಟೀಚರ್ ಪ್ರಶ್ನೆ ಕೇಳಿದಾಗ. ಅದನ್ನು ಬಿಟ್ಟು ಒಂದು ಮಾತು ಹೆಚ್ಚಾಗೆ ಆಡಿದವರಲ್ಲ. ಅದಾದ ನಂತರ ಡೇವಿಡ್ ತಂದೆಗೆ ಶಿವಮೊಗ್ಗಗೆ ಟ್ರಾನ್ಫರ್ ಆಯಿತು. ಇಬ್ಬರು ಮಾತಾಡಿ ಹತ್ತು ವರ್ಷಗಳಾಗಿತ್ತು. ಪ್ರೈಮರಿ ಶಾಲೆಯ ವಿದ್ಯಾರ್ಥಿಗಳೆಲ್ಲಾ ಫೇಸ್ಬುಕನಲ್ಲಿ ಸಿಕ್ಕಿದಾಗಲೇ ನೋಡಿದ್ದು. 'ಹಾಯ್' ಎಂದು ಮಾತು ಶುರು ಮಾಡಿದ್ದು. ಅದಾಗಲೇ ವೈಖರಿ ಬದುಕಿನ ಏಳುಬೀಳಿನಿಂದ ಬಹಳಷ್ಟು ಬದಲಾಗಿದ್ದಳು. ಹರಳು ಉರಿದ ಹಾಗೆ ಮಾತನಾಡುತ್ತಿದ್ದಳು. ಡೇವಿಡ್ ಈಗಲೂ ಸಹ ಕೊಂಚ ಮೌನಿ. ಫೈವ್ ಸ್ಟಾರ್ ಹೋಟೆಲ್ ಒಂದರಲ್ಲಿ ಮ್ಯಾನೇಜರ್ ಆಗಿರುವ ಡೇವಿಡ್ ತನ್ನ ವಿಸಿಟಿಂಗ್ ಕಾರ್ಡ್ ಕೊಟ್ಟಾಗಲೇ ಇಬ್ಬರ ಮನಸ್ಸು ಬದಲಾಗಿತ್ತು. ಪ್ರೀತಿ ಅನ್ನುವ ರೀತಿಯಲ್ಲ ಬದಲಾಗಿ ಇಬ್ಬರಿಗೂ ಪರಿಸ್ಥಿತಿಯನ್ನು, ದುಃಖವನ್ನು ಹಂಚಿಕೊಳ್ಳಲು ಒಂದು ಮನಸ್ಸು ಬೇಕಾಗಿತ್ತು. ವೈಖರಿಗೆ ಅಪ್ಪನ ಚಿಂತೆಯಾದರೆ, ಡೇವಿಡ್ಗೆ ತನ್ನ ಹೆಂಡತಿಯ ಸಾವನ್ನು ಅರಗಿಸಿಕೊಳ್ಳಲು ಆಗತ್ತಿರಲಿಲ್ಲ. ತೇಜಸ್ವಿನಿ ಸ್ಯಾಮುಯೆಲ್, ಡೇವಿಡನ ಹೆಂಡತಿಯ ಹೆಸರು. ಕಪ್ಪುಗಿದ್ದರೂ ಲಕ್ಷಣವಾಗಿದ್ದ ಯುವತಿ. ಕೇರಳಕ್ಕೆ ಅಪ್ಪನ ಮನೆಗೆ ನಾಲ್ಕು ತಿಂಗಳ ಬಸಿರಿಯಾಗಿದ್ದಾಗ ಹೋಗಿದ್ದು. ಆಮೇಲೆ ಡೇವಿಡ್ ಅವಳನ್ನು ನೋಡಿದ್ದು ಶವವಾಗೆ. ಬರೀ ಜ್ವರ ಅಂತ ಶುರುವಾಗಿದ್ದು, ಹತ್ತು ದಿನ ಕಳೆಯುವದರೊಳಗೆ ನಿಫಾ ವೈರಸ್ಗೆ ಬಲಿಯಾದ ಹನ್ನೊಂದನೇ ಯುವತಿಯಾಗಿದ್ದಳು. ಅಂದಿನಿಂದ ಡೇವಿಡ್ ತೀರಾ ಅಂತರ್ಮುಖಿಯಾಗಿದ್ದನು. ಹ್ಞಾ, ಹ್ಞೂ, ಅಷ್ಟೇ..! ಕೊಂಚ ಸುಧಾರಿಸದ್ದು ಅಂದರೆ ವೈಖರಿಯನ್ನು ನೋಡಿದ ಮೇಲೆನೆ. ಇಬ್ಬರಿಗೂ ಈ ಜಂಜಾಟದ ಬದುಕಿನಿಂದ ಸಣ್ಣ ರಿಲೀಫ್ ಬೇಕಿತ್ತು. ಇಬ್ಬರೂ ದೈಹಿಕ ಸುಖದಲ್ಲಿ ಮುಳುಗೆದ್ದರು. ಮಂಚದ ಮೇಲೆ ಈಗೇ ಅಡ್ಡವಾಗಿರುವಾಗ ಡೇವಿಡ್ ಕೇಳಿದನು, 'ಈ ತಲೆನೋವು ಯಾವ್ದು ಬೇಡ ಎಲ್ಲಾದರೂ ದೂರ ಹೋಗಿ ಇದ್ದು ಬಿಡೋಣ ?, ಹೇಗಿದ್ದರೂ ನಾವಿಬ್ಬರು ಯಾವುದೇ ಜಾತಿ, ಧರ್ಮವನ್ನು ನಂಬುವವರಲ್ಲ, ಆಚರಿಸುವವರು ಅಲ್ಲ' ವೈಖರಿಗೆ ಬದುಕಿನಲ್ಲಿ ಜೊತೆಯಾಗಲು ಒಂದು ಹೆಗಲು ಬೇಕಿತ್ತು. ಆಧಾರ ಸ್ಥಂಭ ಬೇಕಿತ್ತು. ಅದಾಗಲೇ ಕಾಲೇಜು ಕೂಡ ಬಿಟ್ಟಾಗಿತ್ತು. ಮರು ಮಾತಾಡದೇ ಮುಂದಿನ ತಿಂಗಳ ಮೇ 16ರಂದು ಸರಳವಿವಾಹವಾದರು. ಎರಡು ತಿಂಗಳು ಇಬ್ಬರೂ ಸ್ವರ್ಗದಲ್ಲೇ ಇದ್ದಂತೆ ಇದ್ದರು. ಒಂದು ದಿನ ಇಬ್ಬರು ಜೊತೆಯಲ್ಲಿ ಕೂತು ಹಳೆಯ ಕಾಲೇಜ್ ಫೋಟೋಸ್ ನೋಡುವಾಗ ವಿನೀತ್ ಇವಳ ಹೆಗಲ ಮೇಲೆ ಕೈ ಹಾಕಿದ್ದನ್ನು ನೋಡಿ, 'ಯಾರಿದು' ಎಂದು ಪ್ರಶ್ನಿಸಿದನು. ವೈಖರಿ ಎಂದಿನಂತೆ ನೇರವಾಗಿ, 'ನನ್ ಪಿ.ಯೂ ಮೇಟ್, ಸಚ್ ಎ ಜೆಮ್ ಗೊತ್ತಾ, We had fun together, ಸಕ್ಕತ್ ಮಜಾ ಇತ್ತು' ಎಂದು ಖುಷಿಯಿಂದ ಹೇಳಿದಳು. ಡೇವಿಡ್ ಇರಿಸು ಮುರಿಸಿನಿಂದ 'ಫಿಸಿಕಲ್ ರಿಲೇಶನ್ಶಿಪ್ ಇತ್ತಾ ?' ಎಂದು ಕೇಳಿದನು. 'Of course, we slept together for months, he is monster ಗೊತ್ತಾ' ಎಂದು ಅವನನ್ನೇ ನೋಡುತ್ತಾ ಹೇಳಿದಳು. ಅಷ್ಟು ದಿನ ಇದ್ದ ಡೇವಿಡ್ ಅವತ್ತು ನಾಪತ್ತೆಯಾಗಿದ್ದ, 'ಹೌದು, ಊರೋರ್ ಜೊತೆಯೆಲ್ಲಾ ಮಲ್ಗಿದ್ರೆ ಮಾನ್ಸ್ಟರ್ ಅನ್ಸುತ್ತೆ, ಹ್ಯೂಜು ಅನ್ಸತ್ತೆ. ಇನ್ನೂ ಎಷ್ಟು ಜನದ್ ಜೊತೆ ಮಲ್ಗಿದ್ದೆ' ಗದರುವಂತೆ ಪ್ರಶ್ನಿಸಿದನು. ಒಂದು ಕ್ಷಣ ವೈಖರಿ ಇವನಾ ಡೇವಿಡ್ ಎಂದುಕೊಂಡಳು. 'See, ಡೇವಿಡ್ ನಾನ್ ಮೊದ್ಲೇ ನಿಂಗ್ ಹೇಳಿದ್ದೆ. I had 2-3 Relationship ಅಂತ. ಈಗ್, ಎಗ್ರಾಡಿದ್ರೆ ? Nonsense' ಎಂದಳು. ಡೇವಿಡ್ ಛಟೀರನೇ ಕಪಾಲಕ್ಕೆ ಹೊಡೆದನು. ಆಗಿನಿಂದ ವೈಖರಿ ಡೇವಿಡ್ನನ್ನು ಮಾತಾಡಿಸುವುದನ್ನು ಬಿಟ್ಟಳು. ಅಷ್ಟರಲ್ಲಿ ವೈಖರಿ ಬಸುರಿಯಾಗಿದ್ದಳು. ಬಹುಶಃ ಮಗುವಾದ ಮೇಲೆ ಡೇವಿಡ್ ಸರಿಹೋಗಬಹುದು ಎಂದು ಸುಮ್ಮನಿದ್ದಳು. ದಿನಾ ಕುಡಿದು ಮನೆಗೆ ಬರಲು ಪ್ರಾರಂಭಿಸಿದ. ಮನೆಗೆ ಒಂದು ರೂಪಾಯಿ ಕೊಡುತ್ತಿರಲಿಲ್ಲ. ವೈಖರಿ ಸಣ್ಣ ಪುಟ್ಟ ಡಬ್ಬಿಂಗ್ ಮಾಡಿ, ಡಾಕ್ಯುಮೆಂಟರಿ ಬರೆದು ಕೊಟ್ಟರೆ ಉಂಟು ಇಲ್ಲದಿದ್ದರೆ ಅದು ಇಲ್ಲ. ನಾಲ್ಕು ತಿಂಗಳಾದ ಮೇಲೆ ಒಂದು ದಿನ ಡೇವಿಡ್ ಬಾಗಿಲ ಬಳಿ ನಿಂತು, 'ಅದನ್ನ ತೆಗಿಸ್ಬಿಡು' ಎಂದು ತಿರುಗಿ ನೋಡದೆ ಮನೆಯಿಂದ ಹೊರಟು ಹೋಗಿದ್ದ. ನಿನ್ನ ನಂಬ್ಕೊಂಡು ನಾನ್ ಬದ್ಕಿಲ್ವೋ. ನಾನು ನನ್ನ ಮಗ್ಳು ಯಾವತ್ತಿದ್ರೂ ಸ್ವತಂತ್ರವಾಗೇ ಬದುಕ್ತೀವಿ ಎಂದು ಹೇಳಬೇಕು ಎನಿಸಿದರು ಹೇಳದೆ ಕಣ್ಣಲ್ಲಿ ನೀರು ತುಂಬಿಕೊಂಡಳು. ಭಾರ್ಗವಿಗೆ ಕರೆ ಮಾಡಿ ಗೋಳೋ ಎಂದು ಕಣ್ಣೀರಿಟ್ಟಳು. ಅವಳು ಸಮಾಧಾನಿಸಲು ಮಡಿಕೇರಿಗೆ ಬಂದಿದ್ದಳು. ಬರುವಾಗ ಹದಿನೈದು ದಿನದ ಪುಟ್ಟ ನಾಯಿ ಮರಿಯೊಂದನ್ನು ಜೊತೆ ತಂದಿದ್ದಳು. ಮಾತುಕತೆ ಎಲ್ಲಾ ಮುಗಿದ ಮೇಲೆ, 'ಕಷ್ಟಗಳು ಕಳೀಲೇಬೇಕು. ಕೆಟ್ಟ ಸಮಯ, ಧೃತಿಗೆಡಬೇಡ, ಎಲ್ಲಾ ಒಳ್ಳೆಯದು ಆಗುತ್ತದೆ' ಎಂದು ಕೈಗೆ ನಾಯಿ ಮರಿಯನ್ನು ಕೊಟ್ಟಳು. ವೈಖರಿ ಇದ್ಯಾಕೆ ಎನ್ನುವಂತೆ ಅವಳನ್ನೇ ನೋಡಿದಳು. 'ಒಂಟಿಯಾಗಿರಬೇಡ. ಜೊತೆಗೆ ಇರೋಕೆ ಒಂದು ಜೀವ ಆಗುತ್ತೆ ಇಟ್ಕೋ' ಎಂದಳು. ವೈಖರಿಯ ಬಾಯಲ್ಲಿ, 'ನನಗೆ ತಿನ್ನಲು ಸರಿಯಾಗಿ ಅನ್ನ ಇಲ್ಲ' ಎಂದು ಹೇಳಲು ಬಂದು ಸುಮ್ಮನಾದಳು. ಎಷ್ಟಾದರೂ ಗೆಳೆತಿ, ಬಹಳ ದಿನದ ನಂತರ ಬಂದಿದ್ದಾಳೆ. ಬೇಸರಿಸಿಕೊಂಡರೆ ಎಂದು ನಗು ನಗುತ್ತಾ ಮಾತಾಡಿಸಿದಳು. 'ನಾಯಿಗೆ ಏನ್ ಹೆಸ್ರು ಇಡ್ತೀಯಾ' ಎಂದು ಭಾರ್ಗವಿ ಕೇಳಿದಳು. 'This is new hope for my life so, ಹೋಪ್ ಅಂತಾನೇ ಇಡ್ತೇನೆ' ಎಂದು ನಕ್ಕಳು.
ಹೋಪ್ ಮನೆಗೆ ಬಂದು ಇಪ್ಪತ್ತು ದಿನಗಳು ಕಳೆದಿತ್ತು. ಡೇವಿಡ್ ಮನೆಗೆ ಬಂದು ಒಂದು ತಿಂಗಳ ಮೇಲಾಗಿತ್ತು. ಹೋಪ್ಗೆ ಹಾಲು ಹಾಕಲು ಒಂದು ರೂಪಾಯಿ ದುಡ್ಡಿಲ್ಲದ ದಿನ. ವೈಖರಿಯೇ ನಿನ್ನೆಯಿಂದ ಬರೀ ನೀರಿನಿಂದ ಕಾಲ ಕಳೆಯುತ್ತಿದ್ದಾಳೆ. ಈ ನಾಯಿಯ ಗೋಳನ್ನು ಕೇಳಲಾಗದೇ ತೆಗೆದುಕೊಂಡು ಹೋಗಿ ರಸ್ತೆಗೆ ಬಿಟ್ಟರೂ ಬೇರೆಯಲ್ಲೂ ಹೋಗದೆ ಮನೆ ಒಳಗೆ ಬರುತ್ತಿತ್ತು. ವೈಖರಿ ಸಿಟ್ಟಿಂದ, 'ಯಾಕ್ ಬಂದು ಸಾಯ್ತಿದ್ಯಾ. ನನ್ ಹತ್ರ ಹಾಕೋಕೆ ಏನೂ ಇಲ್ಲ. ಮಗು ಆಗಿದ್ರೆ ಎದೆ ಹಾಲಾದ್ರೂ ಬಂದಿರೋದು, ಅದನ್ನೇ ಕೊಡ್ತಿದ್ದೆ' ಎನ್ನುವಾಗ ಕಣ್ಣಲ್ಲಿ ಗೊತ್ತಿಲ್ಲದೆ ನೀರು ಧಳ, ಧಳನೇ ಸುರಿಯುತ್ತಿತ್ತು. 'ಹೋಪ್, I lost my hope, ನಂಗ್ ಕೆಲ್ಸಾನೂ ಇಲ್ಲ, ಯಾರೂ ಸಾಲನೂ ಕೊಡಲ್ಲ. ದಿನಾ ಸಾಯೋರಿಗೆ ಅಳೋರು ಯಾರು ? ದಿನಾ ಕೇಳಿದ್ರೆ ಕೊಡ್ತಾರ ? ಒಂದಿಬ್ರೂ ಮಂಚಕ್ಕೆ ಬಾ ಕೊಡ್ತಿನಿ ಅಂತಾರೆ, ಹೊಟ್ಟೆಲೀ ದೇವ್ರು ಇಟ್ಕೊಂಡು ಹೇಗ್ ಮೈ ಮಾರ್ಕೋಳ್ಳಿ ? ಪ್ರೀತಿಯಿಂದ ಬಟ್ಟೆ ಬಿಚ್ಚೋಕು, ಬಡತನಕ್ಕೆ ಬಟ್ಟೆ ಬಿಚ್ಚೋಕು ತುಂಬಾನೇ ವ್ಯತ್ಯಾಸ ಇದೆ' ಎಂದು ಕಣ್ಣೀರಿಟ್ಟಳು. ಸ್ವಲ್ಪ ಹೊತ್ತಿನ ನಂತರ ಸುಧಾರಿಸಿಕೊಂಡು ಮೊಬೈಲ್ನ ಕಾಂಟ್ಯಾಕ್ಟ್ ಲಿಸ್ಟ್ ಎಲ್ಲಾ ಜಾಲಾಡಿದರೂ ಸಾಲ ಕೇಳದ ಒಬ್ಬನೇ ವ್ಯಕ್ತಿ ಅಂದರೆ ಏಕಾಂತ್ ಮಾತ್ರ. ಏಕಾಂತ್ ಈಗಾಗಲೇ ಒಂದೆರಡು ಬಾರಿ ಅವನ ಪೇಂಟಿಂಗ್ಸ್ ಎಕ್ಸಬಿಷನ್ ಕೂಡ ಮಾಡಿದ್ದ. ಒಂಚೂರು ಹೆಸರು ಬಂದಿತ್ತು. ಮರ್ಯಾದೆಗಿಂತ ಹೊಟ್ಟೆ ಮುಖ್ಯ ಎಂದು ಸೀದಾ ಕರೆ ಮಾಡಿದಳು. ಔಪಚಾರಿಕವಾಗಿ ಒಂದೆರಡು ಮಾತಾಡಿದರೂ ವೈಖರಿಗೆ ದುಡ್ಡು ಕೇಳುವ ಮನಸ್ಸಾಗಲಿಲ್ಲ. ಕೊನೆಯದಾಗಿ ಒಂದು ಮಾತು ಹೇಳಿದಳು, 'ನೀವು ಒಂದು ನಾಯಿ ಸಾಕು, ಜೀವ್ನ ಗೊತ್ತಾಗುತ್ತೆ ಅಂದಿದ್ರಿ. ಈಗ್ ನನಗೆ ಗೊತ್ತಾಗ್ತಿದೆ' ಎಂದು ಏನೂ ಹೇಳದೆ ಕರೆಯನ್ನು ಕಡಿತಗೊಳಿಸಿದಳು. ಒಂದು ಬಾರಿ ದೀರ್ಘವಾಗಿ ಉಸಿರನ್ನು ಎಳೆದುಕೊಂಡು ಮೆಸೇಜ್ ಟೈಪ್ ಮಾಡಿದಳು, ' ಏಕಾಂತ್ ಐನೂರು ರೂಪಾಯಿ ಇದ್ರೆ ಕೊಡೋಕೆ ಆಗುತ್ತಾ ? I'll transfer you in 2days' ಎಂದು ಮೆಸೇಜ್ ಹಾಕಿದಳು. ತಕ್ಷಣವೇ ಗೂಗಲ್ ಪೇನಿಂದ ಸಾವಿರ ರೂಪಾಯಿ ಕಳುಹಿಸಿದ್ದ. ಅವತ್ತು ವೈಖರಿ ಬದುಕಿದ್ದೂ ಸತ್ತು ಹೋಗಿದ್ದಳು.
ವೈಖರಿಗೆ ಮಗುವಾಗಿ ಎರಡು ತಿಂಗಳಾಗಿತ್ತು. ತವರು ಮನೆಗೆ ಹೋಗಲು ಆಗುವುದಿಲ್ಲ. ಡೇವಿಡ್ಗೆ ಅದೇನೂ ಅನಿಸಿತೋ ಏನೋ ತನ್ನ ಅಪ್ಪ, ಅಮ್ಮನ ಜೊತೆ ಶಿವಮೊಗ್ಗೆಯಲ್ಲಿರಲು ಹೇಳಿದ. ಡೇವಿಡ್ ಪೋಷಕರು ಒಳ್ಳೆಯವರು . ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ವೈಖರಿಗೆ ಒಂದೇ ಕಿರಿ ಕಿರಿ ಎಂದರೆ ಚರ್ಚ್ಗೆ ಬಾ ಎಂದು ಕೇಳಿಕೊಳ್ಳುತ್ತಿದ್ದರು. ಆಗುವುದಿಲ್ಲ ಎನ್ನುವ ಬಾಯಿ ಬರುತ್ತಿರಲಿಲ್ಲ ಇದ್ದಿದ್ದೆ ಅವರ ಹಂಗಿನಲ್ಲಿ ಎಂದು. ಮನೆ, ಧರ್ಮ, ಜಾತಿ ಎಲ್ಲವನ್ನೂ ಧಿಕ್ಕರಿಸಿ ಬಂದವಳಿಗೆ ಹೊಸ ಧರ್ಮದ ಆಚರಣೆ ಮಾಡು ಎನ್ನುತ್ತಿದ್ದದ್ದು ನುಂಗಲಾರದ ತುತ್ತಾಗಿತ್ತು. ಇದರ ನಡುವೆ ಮಗಳಿಗೆ ಅನಘ ಎಂದು ಹೆಸರಿಟ್ಟಿದ್ದಳು. ಜೋಲಿಯಲ್ಲಿ ಮಲಗಿದ್ದ ಅನಫ 'ಆ.....' ಎಂದು ಅಳಲು ಶುರು ಮಾಡಿದಾಗ ಮಂಚಕ್ಕೆ ಒರಗಿ ಚಿಂತಿಸುತ್ತಿದ್ದ ವೈಖರಿಗೆ ಎಚ್ಚರವಾಯಿತು. ಮಗಳನ್ನು ಪ್ರೀತಿಯಿಂದ ಎತ್ತಿಕೊಂಡು 'ಯಾಕೋ ಬಂಗಾರ ಅಳ್ತಿದ್ಯಾ.. ಉಮ್ಮಾ..' ಎಂದು ಮುತ್ತಿಟ್ಟಳು. ಈಗ ವೈಖರಿಯ ಬದುಕಿನಲ್ಲಿದ್ದದ್ದು ಎರಡೇ, ಮಂಚದ ಕೆಳಗೆ ಮಲಗಿದ್ದ "ಹೋಪ್ ಮತ್ತು ಅನಘ"
******
©ಮಹೇಶ್ ಆರ್
17-02-2020
amaheshr@gmail.com
Comments
Post a Comment