ಪ್ರಕೃತಿಯೆಂಬ ತಾಯಿಯು ಹಾಗೂ ರಚ್ಚೆ ಹಿಡಿದ ಮಗುವು
ನಾವೆಷ್ಟೇ ತಂತ್ರಜ್ಞಾನದಲ್ಲಿ ಮುಂದುವರೆದಿದ್ದರೂ ಪ್ರಕೃತಿಯ ಎದುರು ತೃಣಕ್ಕೆ ಸಮ. ಇಡೀ ಪ್ರಪಂಚವೇ ಕೊರೊನಾ ಹೊಡತಕ್ಕೆ ತತ್ತರಿಸುತ್ತಿದೆ. ಕಾರ್ಖಾನೆಗಳು, ಮಾಲ್ಗಳು, ಸಿನೆಮಾ ಥಿಯೇಟರ್ಗಳು, ಖಾಸಗಿ ಕಂಪನಿಗಳು ಮುಚ್ಚಿವೆ. ಆಹಾರ ಪದಾರ್ಥಗಳು, ತರಕಾರಿ, ಔಷಧಿ ಬಿಟ್ಟು ಬೇರೆಲ್ಲವೂ ನಿಮಿತ್ತ. ಅದೆಲ್ಲವೂ ಇರದೇ ಮನುಷ್ಯ ಬದುಕಬಲ್ಲ ಎಂಬುದನ್ನು ಪ್ರಕೃತಿ ತೋರಿಸಿಕೊಡುತ್ತಿದೆ. ನದಿಗಳು, ರಸ್ತೆಗಳು ಸ್ವಚ್ಚವಾಗುತ್ತಿವೆ. ಇದರರ್ಥ ಪ್ರಕೃತಿಗೆ ನೀವೇನೂ ಮಾಡಬೇಕಾಗಿಲ್ಲ.. ತಮಗೆಷ್ಟು ಬೇಕೋ ಅಷ್ಟನ್ನು ಉಪಯೋಗಿಸಿ ಉಳಿದದ್ದನ್ನು ಹಾಗೆಯೇ ಬಿಟ್ಟರೆ ಪ್ರಕೃತಿ ತನ್ನಷ್ಟಕ್ಕೆ ತಾನೇ ಶುಧ್ಧವಾಗುತ್ತದೆ. ಪೂರ್ಣಚಂದ್ರ ತೇಜಸ್ವಿಯವರು ಹೇಳುವಂತೆ, "ನಮ್ಮ ಪಾಲಿಗೆ ಭೂಮಿ ಹಾಳಾಗುತ್ತದೆಯೇ ಹೊರತು ಅದರ ಪಾಲಿಗಲ್ಲ" ಎನ್ನುವುದು ಮತ್ತೆ ಸಾಬೀತಾಗುತ್ತಿದೆ. ಭೂಮಿ ತನ್ನಲ್ಲಿರುವ ತ್ಯಾಜ್ಯಗಳನ್ನು ಹೊರ ಹಾಕುತ್ತಿದೆ. ಇಷ್ಟೆಲ್ಲಾ ಆದರೂ ಮನುಷ್ಯ ಮಾತ್ರ ತನ್ನ ಕೊಳ್ಳುಬಾಕು ಸಂಸ್ಕೃತಿಯನ್ನು ಬಿಡುತ್ತಿಲ್ಲ. ಅಗತ್ಯಕ್ಕಿಂತ ಹೆಚ್ಚಿಗೆ ದಾಸ್ತಾನು, ದಿನಸಿ ಪದಾರ್ಥಗಳನ್ನು ಶೇಖರಿಸಿಟ್ಟುಕೊಳ್ಳುತ್ತಿದ್ದಾನೆ. ಇದರಿಂದ ಇನ್ನೊಬ್ಬರಿಗೆ ಸಿಗದೇ ಗ್ರಾಹಕ ( ಬಡವ ) ಕಂಗಾಲಾಗಿದ್ದಾನೆ. ಸಾವು ಬಂದು ಮನೆಯ ಬಾಗಿಲಲ್ಲಿ ನಿಂತಿದ್ದರೂ, ಮನುಷ್ಯ ತನ್ನ ದುರಾಸೆಯನ್ನು ಬಿಡುತ್ತಿಲ್ಲ.. ಆಧುನೀಕರಣಕ್ಕೆ ಮಾರು ಹೋಗಿ ಊರುಗಳನ್ನು ಬಿಟ್ಟು ಹೋಗಿದ್ದ ಜನರು ಬಿಲಗಳನ್ನು ಸೇರುವ ಇಲಿಗಳಂತೆ ಮತ್ತೆ ತಮ್ಮ ಹಳ್ಳಿಗಳಿಗೆ, ಊರುಗಳಿಗೆ ದಾಪುಗಾಲು ಹಾಕುತ್ತಿದ್ದಾರೆ. ಜೀವ ಭಯ ಎನ್ನುವುದಕ್ಕಿಂತ ಸತ್ತರೆ ಬೀದಿ ಹೆಣವಾಗುವುದರ ಬದಲು ತನ್ನವರ ಮುಂದೆಯೇ ಸಾಯುವುದು ವಾಸಿ ಎಂದು. ಈಗ ಜನಗಳಿಗೆ ಅಪ್ಪನ ಮಂಡಿ ಚಿಪ್ಪಿನ ಗಾಯ, ಅಮ್ಮನ ಹರಿದ ಸೆರಗು, ಹೆಂಡತಿಯ ಕೆಲಸದ ಹೊರೆ, ತಂಗಿಯ ವಾತ್ಸಲ್ಯ ತಿಳಿಯುತ್ತಿದೆ. ಹಣ, ಆಸ್ತಿ, ನಾನು ಎನ್ನುವುದು ಕೇವಲ ಭ್ರಮೆ ಅಷ್ಟೇ.. ದುಡ್ಡಿದರೆ ಆಸ್ಪತ್ರೆಯನ್ನು ಖರೀದಿಸಬಹುದು, ಸಾವನ್ನು ಖರೀದಿಸಲು ಸಾಧ್ಯವೇ ? ಪ್ರಕೃತಿಯ ಮಡಿಲಲ್ಲಿ ಮನುಷ್ಯ ಯಾವಾಗಲೂ ಮಗುವೇ.. ಅಮ್ಮ ಗದರಿಸಿದರೇ ಅಳುವ ಕಂದಮ್ಮಗಳಾಗಿದ್ದೇವೆ... ಸ್ವಲ್ಪ ಹೊತ್ತಿನ ಬಳಿಕ ಅದೇ ತಾಯಿ ಮುದ್ದಿಸುವಳು. ಅಲ್ಲಿಯವರೆಗೂ ತಾಳ್ಮೆಯಿಂದ ಇರಬೇಕು. ರಚ್ಚೆ ಹಿಡಿದರೆ ಇನ್ನೂ ನಾಲ್ಕು ಪೆಟ್ಟು ಬೀಳುವುದು ಖಚಿತ. ಒಣಗಿದ ಎಲೆಗಳು ಉದುರಿದ ಮೇಲೆ ಹೊಸ ಎಲೆಗಳು ಚಿಗುರೊಡೆಯಲೆ ಬೇಕು. ಅದರ ನಿರೀಕ್ಷೆಯಲ್ಲೇ, ನಂಬಿಕೆಯಲ್ಲೇ ಮಾನವೀಯ ಮೌಲ್ಯಗಳೊಂದಿಗೆ, ಅಸಹಾಯಕ ಸ್ಥಿತಿಯಲ್ಲಿರುವವರ ನೋವಿಗೆ ಸ್ಪಂದಿಸುತ್ತಾ, ಪ್ರೀತಿಸುತ್ತಾ, ಈ ಕೆಟ್ಟ ಕ್ಷಣಗಳನ್ನು ದೂಡುತ್ತಾ ಹೊಸ ಬೆಳಕಿಗೆ ಅರಸುತ್ತಾ ಜೀವಿಸೋಣ.
*****
ಮಹೇಶ್ ಆರ್
06/04/2020
Comments
Post a Comment