ಇರ್ಫಾನ್ ಎಂಬ ಹಸನ್ಮುಖಿ

ಇರ್ಫಾನ್ರನ್ನು ಮೊದಲಿಗೆ ನೋಡಿದ್ದು ಸ್ನೇಹಿತ ತೋರಿಸಿದ ದೇಸಿ ವಿಡಿಯೋ ಡಾಟ್ ಕಾಮ್ನ ವಿಡಿಯೋ ಒಂದರಲ್ಲಿ.  ನಮ್ಮ ಗೆಳೆಯರ ಬಳಗದವರಿಗೆಲ್ಲಾ ಆಶ್ಚರ್ಯ ! ಇಂಥಾ ಫಿಲ್ಮನಲ್ಲಿ ಇವ್ರು ಆ್ಯಕ್ಟ್ ಮಾಡ್ತಾರ ಅಂತ ಯಾಕಂದ್ರೆ ಆಗ ನಾನು ಸಿನೆಮಾಗಳನ್ನು ನೋಡಿದ್ದೇ ಕಡಿಮೆ ಅದರಲ್ಲೂ ಹಿಂದಿ ಸಿನೆಮಾಗಳು ವಿರಳಾತಿವಿರಳ. ಅಲ್ಲಿಯವರೆಗೂ ನೋಡಿದ್ದ ಒಂದೇ ಒಂದು ಹಿಂದಿ ಸಿನೆಮಾವೆಂದರೆ ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ( DDLJ ). ಆಮೇಲೆ ಆಮೇಲೆ ಸಿನೆಮಾಗಳ ರುಚಿ ಹತ್ತ ತೊಡಗಿತ್ತು. ಒಂದೊಂದೇ ಸಿನೆಮಾಗಳನ್ನು ( ಎಲ್ಲಾ ಭಾಷೆಯ ) ನೋಡುತ್ತಾ ಹೋದಂತೆ ಸಿನೆಮಾಗಳಲ್ಲಿ ಮುಳುಗಿ ಹೋದೆ. ಎಷ್ಟೋ ವರ್ಷಗಳ ನಂತರ ನಾವು ನೋಡಿದ ವಿಡಿಯೋ ಕ್ಲಿಪ್ "ರೋಡ್ ಟು ಲಡಾಕ್" ಎಂಬ ಕಿರುಚಿತ್ರದ್ದು ಎಂದು ತಿಳಿಯಿತು. ಇರ್ಫಾನ್ರನ್ನ ಮತ್ತೆ ಕಂಡದ್ದು ಸ್ಲಂ ಡಾಗ್ ಮಿಲಿಯನೇರ್, ಲೈಫ್ ಆಫ್ ಪೈ ಚಿತ್ರಗಳಲ್ಲಿ. ಅವರ ಅಭಿನಯ ಇಷ್ಟವಾಗಿತ್ತು. ತದನಂತರ ಬಂದ ಲಂಚ್ ಬಾಕ್ಸ್, ಪೀಕು, ತಲ್ವಾರ್, ಬ್ಲಾಕ್ ಮೇಲ್ ಸಿನಿಮಾಗಳಲ್ಲಿನ ನೈಜ ಅಭಿನಯ ಕಂಡು ನಿಬ್ಬೆರಗಾಗಿ ಹೋಗಿದ್ದೆ. ಕರೀಬ್ ಕರೀಬ್ ಸಿಂಗಲ್, ಕರ್ವಾನ್ ಚಿತ್ರಗಳಲ್ಲಿನ ನಟನೆ ನೋಡಿ ಕಳೆದು ಹೋಗಿದ್ದೆ. ನಟನೆ ಅನ್ನೋದಕ್ಕಿಂತ ಆ ಪಾತ್ರಗಳಲ್ಲೇ ಜೀವಿಸಿದ್ದಾರೆ. ಕರೀಬ್ ಕರೀಬ್ ಸಿಂಗಲ್ ಸಿನೆಮಾದಲ್ಲಿ ಇರ್ಫಾನ್ ಖಾನ್ ಮತ್ತು ಪಾರ್ವತಿ ತಿರುವೊಟ್ಟು ಜಿದ್ದಿಗೆ ಬಿದ್ದವರಂತೆ ನಟಿಸಿದ್ದಾರೆ. ಒಬ್ಬ ಬರಹಗಾರನಿಗೆ ಅಥವಾ ನಿರ್ದೇಶಕನಿಗೆ ಇರ್ಫಾನ್ರಂತ ನಟ ಸಿಕ್ಕರಂತು ಹಬ್ಬ. ಪಾತ್ರಕ್ಕೆ ಇನ್ನಷ್ಟು ತೂಕ, ಆಳವಾದ ವ್ಯಕ್ತಿತ್ವ ಕಟ್ಟಿಕೊಡಬಲ್ಲರು. ಅವರ ಜೊತೆ ಕೆಲಸ ಮಾಡಿದವರೆ ಅದೃಷ್ಟವಂತರು. ನಿಮ್ಮ ಜೊತೆ ನಾವು ಕೆಲಸ ಮಾಡಲಿಲ್ಲವಲ್ಲ ಎನ್ನುವ ಬೇಸರ ಒಂದು‌ ಕಡೆಯಾದರೆ.. ನೀವು ನಟಿಸಿರುವ ಸಿನೆಮಾಗಳನ್ನು ಚಿತ್ರಮಂದಿರಗಳಲ್ಲಿ ನೋಡಿರುವುದೇ ನಮ್ಮ ಪುಣ್ಯ. ಮತ್ತೆ ಇಂತಹ ನಟ ಸಿಗೋದು ಅಪರೂಪ. ಇಂದು ನೀವು ನಮ್ಮಿಂದ ಭೌತಿಕವಾಗಿ ದೂರವಾಗಿರಬಹುದು. ಆದರೆ ನಿಮ್ಮ ಪಾತ್ರಗಳು, ನಿಮ್ಮ ಅಭಿನಯ ಸದಾ ನಮ್ಮನ್ನು ಕಾಡುತ್ತಲೇ ಇರುತ್ತವೆ. ಈಗಲೂ ಕಣ್ಣು ಮುಚ್ಚಿದರೆ ನಿಮ್ಮ ನಗು ಮುಖವೇ ಕಣ್ಮುಂದೆ ಬರುತ್ತದೆ.


Comments

Popular Posts