ಪ್ರೀತಿಯೆಂಬ ಅನಿರ್ವಚನೀಯ ಮೋಹಕತೆ

ಹರಿವ ತೊರೆಗಳ ನೀರಿನಂತೆ ಸ್ವಚ್ಛ, ಶುಭ್ರ ಆಕೆಯ ಮನಸ್ಸು. ಸದಾ ಗಿಜಿಗುಡುವ ಹೂವಿನ ಸಂತೆಯಂತೆ ಅವಳ ಹೃದಯ. ಪ್ರತಿದಿನ ಮುಂಜಾವಿನಲ್ಲೂ, ಇರುಳಲ್ಲಿಯೂ ಕನ್ನ ಹಾಕುವ ಚೋರ ಆತ.. ನೊಣ ಹೊಡೆಯುವ ದಬ್ಬೆಯಲ್ಲಿ ಬಾರಿಸುವಂತ ಕೋಪಿಷ್ಠೆ ಅವಳು.. ಆದರೂ ಕಿವಿಯ ಬಳಿ ಹೋಗಿ ಗುಂಯ್ ಗುಡುವ ಸೊಳ್ಳೆಯ ರೀತಿ ಅವಳನ್ನು ಛೇಡಿಸುವುದೇ ಚೆಂದ.. ಎಲ್ಲಿ ಅವಳ ಕೈಗಳ ಚಪ್ಪಾಳೆಯ ಮಧ್ಯೆ ಸಿಲುಕುವೆನೋ ಎಂಬ ಭಯದ ನಡುವೆಯೂ ಅವಳನ್ನು ಕಾಡುವುದಿದೆಯಲ್ಲ ಅದಕ್ಕಿಂತ ಖುಷಿ ಮತ್ತೊಂದಿಲ್ಲ..

ಉಪ್ಪು ತಿಂದವರು ಹೇಗೆ ನೀರು ಕುಡಿಯುವರೋ ಹಾಗೇ ಪ್ರೀತಿಸಿದ ಹುಡುಗಿಯನ್ನು ಕೆಣಕಿದ ಮೇಲೆ ಅವಳ ಕೆಂಗಣ್ಣಿನ ಜಮದಗ್ನಿಯ ಕೋಪಕ್ಕೆ ಸಿದ್ಧರಿರಬೇಕು.. ಸರಿಯಾದ ಸಮಯ ನೋಡಿ, ರಣರಂಗದಲ್ಲಿ ನಿಶಸ್ತ್ರನಾಗಿದ್ದ ಕರ್ಣನ ಮೇಲೆ ಅರ್ಜುನ ಬಾಣ ಬಿಡುವಂತೆ.. ಅಸ್ತ್ರಗಳನ್ನು ಪ್ರಯೋಗಿಸುವಳು. ಆಗಾಗ ಅವಳ ಮನಸ್ಸು ಶ್ರೀಕೃಷ್ಣನಂತೆ ಯುದ್ಧ ಮಾಡಲು ಇವಳನ್ನು ಸಜ್ಜುಗೊಳಿಸುವುದು. ಇದ್ದಕಿದಂತೆ ಛೂ ಮಂತರ್ ಕಾಳಿ ಎಂದು ಬ್ಲಾಕ್ ಮಾಡಿ ಮಾಯಾವಾಗಿ ಬಿಡುವಳು.

ಆಗ ಮತ್ತೇ ವಿರಹವೆಂಬ ಉರಿ ಬಿಸಿಲು..
ಅವಳ ಸಿಟ್ಟೆಲ್ಲವೂ ಮತ್ತೇರಿಸುವ ಮುಸ್ಸಂಜೆಯಂತೆ..
ಉದುರಿದ ಎಲೆಗಳು ಮತ್ತೇ ಚಿಗುರುವಂತೆ ಅವಳ ಮೇಲೆ ಶುರುವಿನಿಂದ ಪ್ರೀತಿಯಾಗುವುದು.
ಜಯಂತ್ ಕಾಯ್ಕಿಣಿಯವರ ಸಾಲುಗಳಂತೆ..
"ನಾನು ನೀನು ಸೇರಿ ಕಂಡ ತೇರು ಅಲ್ಲಿ ನಿಂತಿದೆ.
ಊರ ಜಾತ್ರೆಯಲ್ಲಿ ಈಗ ಬೇರೆ ವೇಷ ಬಂದಿದೆ"

ಇಬ್ಬರು ಕೂತಿದ್ದ ಮಾಲ್ನ ಬೆಂಚುಗಳು ಮತ್ತೇ ಅವಳ ಪಿಸುಮಾತನ್ನು ಕೇಳಲು ಹಾತೊರೆಯುತ್ತಿವೆ.
ಅವಳು ಎಡವಿದ ಮೆಟ್ರೋದಲ್ಲಿನ ಮುಂಭಾಗದ ಕಲ್ಲು ಪುನಃ ಅವಳದೇ ಕಾಲುಗಳನ್ನು ಹುಡುಕುತ್ತಿವೆ.
ಅವಳು ತಿಂದು ಬಿಸಾಡಿದ ಚಾಕಲೇಟಿನ ಕವರ್ ರಸ್ತೆಯ ತಿರುವಿನಿಂದ ಅವಳನ್ನೇ ಇಣುಕುತ್ತಿವೆ.
ನಡು ರಸ್ತೆಯಲ್ಲಿ ಅವನನ್ನು ಕ್ಯಾಬಿಂದ ಹೊರದಬ್ಬಿದ ಜಾಗದಲ್ಲಿನ ಬೀದಿ ದೀಪಗಳು ಅವಳಿಗಾಗಿ ಕಾಯುತ್ತಿವೆ.
ಪಾರ್ಕು, ಬೆಂಚು, ರಸ್ತೆ, ಮೆಟ್ಲು, ಕ್ಯಾಬು, ಮೆಟ್ರೋ, ಆಟೋ, ಕಾಫಿ ಡೇ ಕಪ್ಪುಗಳಿಗೆ ಅವಳ ನೆನಪು ಕಾಡುತ್ತಿವೆ ಅಂದರೆ ಇನ್ನೂ ಮನುಷ್ಯರು ಯಾವ ಲೆಕ್ಕ..!
ಪ್ರೇಮ ಹೀಗೆಯೇ... ಕೆರೆದಷ್ಟು ನೆವದ ರೀತಿ ..!
ಅನುಕ್ಷಣ ನಮ್ಮನ್ನು ಪ್ರೀತಿಸುವ ಹಾಗೇ ಮಾಡುತ್ತದೆ.
ಮತ್ತೇ ಮತ್ತೇ ನಮ್ಮನ್ನು ಕವಿಯಾಗಿಸುತ್ತದೆ.

"ಹೊಳೆವ ನಿನ್ನ ಕಣ್ಣುಗಳು ಬಂಗಾರದ ಕೊಲ್ಮಿಂಚಂತೆ..
ಹೊಯ್ದಾಡುವ ನಿನ್ನ ಕೂದಲು ಸಾಗರದ ಅಲೆಗಳಂತೆ..
ಗಿಳಿಯನ್ನು ನಾಚಿಸುವ ನಿನ್ನ ನಾಸಿಕವು ಸಂಪಿಗೆಯಂತೆ..
ಮೇನಕೆಗೂ ಸಡ್ಡು ಹೊಡೆವ ನಿನ್ನ ಮೈ ಸಾರಂಗದಂತೆ..

ಆಕಾಶ ತಾರೆಗಳನ್ನು ತಂದು ನಿನ್ನ ಹೆರಳನ್ನು ಹೆಣೆಯಬೇಕು..
ಗಂಧವನ್ನು ತಿದ್ದಿ ತೀಡಿ ನಿನ್ನ ಕಾಲಿಗೆ  ಪಾದುಕೆ ಮಾಡಬೇಕು..
ಪರಿಶುದ್ಧ ಗುಲಾಬಿಯ ಗೊರಂಟಿಯನ್ನು ನಿನ್ನ ಅಂಗೈಗೆ ಹಚ್ಚಬೇಕು..
ಕಾರ್ಮುಗಿಲ ಕಪ್ಪನ್ನು ತಂದು ನಿನ್ನ ಕಣ್ಣಿಗೆ ಕಾಡಿಗೆ ಇಡಬೇಕು..
ಇಂಥಾ ಚೆಲುವಿಗೆ ದೇವಾನು ದೇವತೆಗಳ ಕೈಯಲ್ಲೇ ದೃಷ್ಟಿ ತೆಗಿಸಬೇಕು.."

ಎಂದು ಅವಳ ನೆನಪಿನಲ್ಲಿ ನಾಲ್ಕು ಸಾಲನ್ನು ಬರೆದರೆ.. ಧುತ್ತನೆ ಪ್ರತ್ಯಕ್ಷವಾಗಿ ನಾನು ಇಲ್ಲದೇ ಕವಿತೆ ಬರೆದುಕೊಂಡು ಹಾಯಾಗಿದ್ದೀಯ ಅಲ್ವ.. ನಿನ್ನ ಸಂತೋಷ ಹಾಳು ಮಾಡೋಕಾದ್ರೂ ನಿನ್ನ  ಜೊತೆಗೆ ಇರುವೆ ಎಂದು ಕಣ್ಣು ಹೊಡೆಯುವಳು.

ಕೊರೆಯುವ ಚಳಿಯಲ್ಲಿ ತಣ್ಣೀರು ಸ್ನಾನ ಮಾಡಿದಂತೆ ಅವಳ ಸಿಟ್ಟು...
ಬಿರು ಬೇಸಿಗೆಯಲ್ಲಿ ತಂಪನ್ನೆರೆಯುವ ಸಂಜೆ ಮಳೆಯಂತೆ ಅವಳ ಮೃದು ಮಾತುಗಳು..
ತುಂತುರು ಮಳೆ ಹನಿಗಳು ಹಸಿರು ಎಲೆಗೆ ಮುತ್ತಿಕ್ಕುವ ಸೌಂದರ್ಯ ಅವಳ ಕಣ್ಣಲ್ಲಿದೆ.
ಈ ಅನುಭವವೇ ಚೆಂದ.. ಪ್ರೀತಿಸುವವರು ಸಿಗುವರೋ ಇಲ್ಲವೋ.. ಆದರೆ ಅವರೊಂದಿಗಿನ ಅಮೂರ್ತ ಸಂಬಂಧವೇ ಸುಂದರ.. ಪುಟ್ಟ ಮಗುವೊಂದು ಚಿತ್ರ ಬಿಡಿಸಿದಂತೆ..ಸದಾ ಜೀವಂತ.. ನಿಷ್ಕಲ್ಮಶ..

"Happy Valentine's Day Muddu"

Comments

Popular Posts