ಮೆಟ್ರೋ ಎಂಬ ಮಾಡ್ರನ್ ಗಾಣದ ಎತ್ತು..!
ಬೆಳಗ್ಗಿನಿಂದ ರಾತ್ರಿಯ ತನಕ ಓಡುತ್ತಲೇ ಇರುವ ಮೆಟ್ರೋ ರೈಲು.. ಅದರೊಳಗೆ ಜೀವನದಲ್ಲಿ ಓಡುತ್ತಿರುವ ನಾವು.. ಇದೊಂಥಾರ ಕನಕದಾಸರ ಕೀರ್ತನೆ ರೀತಿ,
"ನೀ ಮಾಯೆಯೊಳಗೊ
ನಿನ್ನೊಳು ಮಾಯೆಯೊ"
ಪ್ರತಿ ನಿಲ್ದಾಣದಲ್ಲೂ ಇಳಿಯುವ ಮತ್ತು ಹತ್ತುವ ಪ್ರಯಾಣಿಕರು. ಸೈಡಿನಲ್ಲಿ ಮಾಸ್ಕ್ ಹಾಕಿ ನಿಂತಿರುವ ಎಪ್ಪತ್ತರ ಯುವಕ.. ಸೀಟಿನಲ್ಲಿ ಹೆಡ್ಫೋನ್ ಹಾಕಿ ನಿದ್ರೆ ಹೋಗಿರುವ ಇಪ್ಪತ್ತರ ಮುದುಕ.. ಪ್ರತಿ ಐದು ನಿಮಿಷಗಳಿಗೊಮ್ಮೆ, "ಮುಂದಿನ ನಿಲ್ದಾಣ, ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್. ರೈಲು ಈಗ ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್ಗೆ ತಲುಪಲಿದೆ. ಬಾಗಿಲುಗಳು ಎಡಕ್ಕೆ ತೆರೆಯಲಿವೆ. ಹಸಿರು ಬಣ್ಣದ ಮಾರ್ಗಕ್ಕೆ ರೈಲನ್ನು ಬದಲಾಯಿಸಿ" ಅಂತ ಅನೌನ್ಸ್ಮೆಂಟ್ ಆಗಿ ಬಾಗಿಲು ಮುಚ್ಕೋಳೋ ಸಮಯದಲ್ಲಿ ಬರೋ, ಟಿ.. ಟಿ.ಟಿ.. ಟಿ. ಟಿ.. ಸೌಂಡ್ ಕೇಳ್ತಿದ್ರೆ, ಎಲ್ಲೋ ಐ.ಸಿ. ಯು ಒಳಗೆ ಇದ್ದೀನೇನೋ..ಎಲ್ಲಿ ನಂಗೆ ಹಾರ್ಟ್ ಅಟ್ಯಾಕ್ ಆಗ್ತಿದಿಯೇನೋ ಅನ್ಸತ್ತೆ.
ಇದರ ನಡುವೆ ಅಲ್ಲಲ್ಲಿ ಕಾಣ ಸಿಗುವ ಕಣ್ಣಿನ ಬೇಟೆಗಳು.. ನಟ್ಟ ನಡುವೆ ಹಿಡಿಕೆಯನ್ನು ಹಿಡಿದು ಸ್ಟ್ಯಾಚುವಿನಂತೆ ನಿಂತಿರುವ ಹುಡುಗಿ. ಇನ್ನೇನು ತಿಂದೆ ಬಿಡುವ ಹಾಗೇ ಮೂಲೆಯಲ್ಲಿ ನಿಂತು ನೋಡುತ್ತಿರುವ ರೋಮಿಯೋ. ಅಮ್ಮನ ಚೂಡಿದಾರ್ ಹಿಡಿದು ಜಗ್ಗುತ್ತಿರುವ ಪುಟ್ಟ ಮಗು. ನಿನ್ನೆ ರಾತ್ರಿ ನಡೆದ ರಂಗ ಶಂಕರದ ನಾಟಕದ ಬಗ್ಗೆ ಮಾತಾಡುತ್ತಿರುವ ಸಹಪಾಠಿಗಳು. ಪಕ್ಕದಲ್ಲೇ ಕೂತಿರುವವ, "ನೆಕ್ಸ್ಟ್ ಟೈಮ್ ನಂಗೂ ಹೇಳಿ" ಎಂದು ಕೇಳುತ್ತಿರುವ ಪ್ರಯಾಣಿಕ.
"ಈ ಸಲ ಕಪ್ ನಮ್ದೇ" ಎನ್ನುತ್ತಿರುವ ಕಾಲೇಜಿನ ಯುವಕರು. ಇವರನ್ನು ನೋಡಿ ಮುಸಿ ಮುಸಿ ನಗುತ್ತಿರುವ ಚೆನ್ನೈ ಅಭಿಮಾನಿ. "ಮೊದ್ಲು ಚೆನ್ನಾಗಿ ಓದ್ರೋ ಹುಚ್ಚ್ ಸೂಳಿ ಮಕ್ಳ"ಎಂದು ಮನಸ್ಸಲ್ಲಿ ಬಯ್ಯುತ್ತಿರುವ ಧಾರವಾಡದ ಮೇಷ್ಟು. ಅವರ ಪಕ್ಕದಲ್ಲಿ ಕೂತಿರುವ ಹೆಂಗಸಿನ ತೊಡೆ ಮೇಲೆ ಮಲಗಿರುವ ಹಸುಗೂಸುವಿನ ಕಣ್ಣಲ್ಲಿ ಕಾಣುತ್ತಿರುವ ದೇವರು.
ಸತ್ತ ಹೆಣದಂತೆ ನಿಂತಿರುವ ಇನ್ನೊಂದಷ್ಟು ಮಂದಿ.
ಯಾರಿಗ್ ಗೊತ್ತು, ಈಗಾಗಲೇ ನಾವೆಲ್ಲಾ ಸತ್ತಿರಬಹುದು. ಒಟ್ಟಾರೆ ಈ ಭೂಮಿಯೇ ನರಕವೇನೋ ಅನಿಸುತ್ತದೆ. ಮನುಷ್ಯರನ್ನು ಇಹಲೋಕದಿಂದ ಕುರಿಗಳನ್ನು ಕಸಾಯಿಖಾನೆಗೆ ತೆಗೆದುಕೊಂಡು ಹೋಗುವ ಟ್ರೇಕ್ಕಿನಂತೆ ಕಾಣಿಸುವ ಮೆಟ್ರೋ ರೈಲು...!
ಒಟ್ಟಿನಲ್ಲಿ ಸತ್ತಂತೆ ಬದುಕುತ್ತಿರುವದಂತೂ ನಿಜ.
Comments
Post a Comment