ಆತ್ಮಕ್ಕಂಟಿದ ಜೀವ


ಅನವರತವಾಗಿ ಪ್ರೀತಿಸುವ ಹೃದಯಕ್ಕೆ ಇದಕ್ಕಿಂತ ಸೂಕ್ತವಾದ ಹೆಸರಿಲ್ಲ. ಉಸಿರು ಬಿಟ್ಟು ದೇಹ ಹೇಗಿರಲು ಸಾಧ್ಯ.. ಪ್ರೀತಿ ಇರದೇ ಬದುಕು ಹೇಗೆ ಸಾಧ್ಯ. ರೂಮಿ ಹೇಳಿದಂತೆ, ಒಂದು ಪರಿಪೂರ್ಣ ಪ್ರೇಮ ನಿನ್ನದಾಗಲು ಸಾವಿರಾರು ಅರೆಬರೇ ಪ್ರೇಮವನ್ನು ತೊರೆಯಬೇಕು. ನಿಜ, ಪ್ರೀತಿ ಅರಿಯುವುದಕ್ಕಿಂತ ಮುಂಚೆ ಆಗುವುದು. ತಿಳಿಯುವುದಕ್ಕೂ ಮೊದಲೇ ತಿಳಿಯಾಗುವುದು. ಇದೇ ನನ್ನ ಬದುಕಿಗೆ ಅರ್ಥ ಕೊಟ್ಟ ಪ್ರೀತಿ ಎಂದು ಗೊತ್ತಾಗುವ ಹೊತ್ತಿನಲ್ಲೂ ನೀವು ಪ್ರೀತಿಸಿದ ವ್ಯಕ್ತಿ ನಿಮ್ಮ ಜೊತೆ ಇದ್ದರೆ ನೀವು ಅದೃಷ್ಟವಂತರೇ ಮತ್ತು  ನಿಜವಾದ ಪ್ರೀತಿಯ ಸವಿರುಚಿ ಕಂಡು ಕೊಂಡಂತೆ. ಪ್ರೇಮಿಸುವುದು ಸುಲಭ, ಕೆರೆಯಂಚಿನಲ್ಲಿ ಇಳಿಸಂಜೆ ನಡೆದಂತೆ. ಅದೇ ಇಬ್ಬರಿಗೂ ಪ್ರೀತಿಯಾದ ಮೇಲೆ ಬದುಕಿದೆಯಲ್ಲ ಅದು ಕೆರೆಯಲ್ಲಿ ತೂತಾದ ದೋಣಿಯಲ್ಲಿ ಸಾಗಿದಂತೆ ಜೀವನ ಪೂರಾ ದೋಣಿಯಿಂದ ನೀರು ತೆಗೆದು ಹಾಕಬೇಕು. ಪ್ರೀತಿ ಅರೆಕ್ಷಣ ಕಣ್ಣು ಹೊಡೆದಂತಲ್ಲ. ಕಣ್ಣಲ್ಲಿ ಕಣ್ಣಿಟ್ಟು ಕೊನೆಯವರೆಗೂ ಕಾಯುವುದು. ಪ್ರೀತಿಸಿದ ಜೀವವೇ ಯಮರೂಪಿಯಾಗಬಹುದು ಆಗಲೂ ತಾಳ್ಮೆ ಕಳೆದು ಕೊಳ್ಳದೆ. ಪ್ರೀತಿಸಿದವರ ಜೊತೆ ನಿಲ್ಲುವುದು ಇದಿಯಲ್ಲ ಅದು ಗ್ರೇಟ್. ಅವಳು ಅತಿಯಾದ ಮುಂಗೋಪಿ ಪ್ರೇಮ ಹೆಚ್ಚಾದರೆ ಕಚ್ಚುವಳು. ಪ್ರೀತಿ ಕಡಿಮೆಯಾದರೇ ಚುಚ್ಚುವಳು.. ಅಪ್ಪಿ ತಪ್ಪಿ ಕಾರಣ ಕೇಳಿದರೆ ಉಗ್ರ ನರಸಿಂಹ ಅವತಾರವೆತ್ತಿ ಬಗಿಯುವಳು. ನಂತರ ಏನು ಅರಿಯದ ಮಗುವಿನಂತೆ ಪಿಳಿಪಿಳಿ ಕಣ್ಣು ಬಿಡುವಳು. "ಛೇ" ಇಂಥಾ ಕಂದಮ್ಮನ್ನ ಮೇಲೆ ಸಿಟ್ಟು ಮಾಡಿಕೊಂಡ್ನಾ ಅಂತ ನಮಗೆ ಅನಿಸುವುದು. ಇದೇ ಅಲ್ಲವೇ ನಿಷ್ಕಲ್ಮಶ ಪ್ರೇಮ.. 

ಪ್ರೇಮ ನಿರಂತರ ಭೂಮಿ ಪರಭ್ರಮಿಸುವಂತೆ.

ಅವಳಿಗೆ ಬಿಟ್ಟು ಹೋಗುವುದು ಚಾಳಿ ಇದ್ದಂತೆ... ಕೋಪ ತಣ್ಣಗಾಗುವರೆಗೂ ಹತ್ತಿರ ಸುಳಿಯಬಾರದು. ಇವನಿಗೆ ಆಗಲೇ ಪ್ರೀತಿ ಉಕ್ಕಿ ಬರುವುದು. ಅವಳು ಭೋರ್ಗರೆವೆ ಅಲೆಯಂತೆ ಅಪ್ಪಳಿಸುವಳು.. ಕಲ್ಲುಬಂಡೆಯಂತೆ ಬಡಿಸಿಕೊಳ್ಳುವ.. ಸ್ವಲ್ಪ ಹೊತ್ತಿನ ನಂತರ ಅವಳೇ ಗಂಗಾ ಮಾತೆಯಂತೆ ಶಾಂತವಾಗುವಳು. ಮತ್ತೆ ಭೂಮಿಯಂತೆ ಸುತ್ತುವಳು.

ಮಣ್ಣಿನಂತೆಯೇ ಮಾತೃ ಸ್ವರೂಪಿ ಈ ಪ್ರೀತಿ 

ಆಗಾಗ ಗದರುವುದು, ಹೆದರಿದಾಗ ಮಡಿಲಿನಲ್ಲಿ ಮಲಗಿಸಿ ತಲೆ ನೇವರಿಸುವುದು. ಮಗುವಿಗಿರುವ ಮುಗ್ದತೆ ನಮ್ಮಲ್ಲಿದ್ದರೆ ಸಾಕು. ಮಿಕ್ಕೆಲ್ಲವೂ ತನ್ನಿತಾನೆ ಹೂವಿನಂತೆ ಅರಳುವುದು. ಎಷ್ಟೇ ಪ್ರಬುದ್ಧವಾಗಿ ಯೋಚಿಸಿದರು ಪುಟ್ಟ ಮಗುವಿನಂತೆ ಪ್ರೇಮಿಸಬೇಕು ಆಗಲೇ ಸಂಪೂರ್ಣ ಒಲವು ನಮ್ಮದಾಗುವುದು. ಹಣ, ಆಸ್ತಿ, ದೇಹ, ಸೌಂದರ್ಯ, ವಯಸ್ಸು ಇದೆಲ್ಲವೂ ಮೀರಿ ಮಣ್ಣಿಗಂಟಿದ ಬೇರಿನಂತಿರುವುದೇ ಅಸಲಿ ಪ್ರೇಮ.  
“ಗುರು, ಈಗೆಲ್ಲಾ ಯಾರ್ ಈ ತರಾ ಲವ್ ಮಾಡ್ತಾರೆ ? ಆ ಕಾಲ ಮುಗಿತು" ಅನ್ನುವವರು ಕೂಡ ಅವರ ಪ್ರೇಮವನ್ನು ತಿರಸ್ಕರಿಸಿದ ಹೃದಯವನ್ನು ಗುಟ್ಟಾಗಿ ಶಪಿಸುವರು. ಪ್ರೇಮವೆಂಬುದು ದೇಹಕ್ಕಂಟಿದ ಚರ್ಮದಂತೆ, ದೇವರ ಮೇಲಿನ ಹೂವಿನಂತೆ ಎಷ್ಟೇ ಕಾಲ ಉರುಳಿದರು ಶಾಶ್ವತ. 
"ಲೋಕದ ಚಿಂತೆ ನಮಗೆ ಯಾಕೆ?" ನಮ್ಮನ್ನು ನಂಬಿದ ಹೃದಯ ಚಿಂತೆಗೀಡಾಗದಂತೆ ನೋಡಿಕೊಳ್ಳುವುದೇ ಪರಿಶುದ್ಧ ಪ್ರೇಮ.

ಪ್ರೇಮ ಪರೀಕ್ಷೆ 
ಎಷ್ಟೇ ಗಾಢವಾಗಿ ಪ್ರೀತಿಸುತ್ತಿದ್ದರೂ , ಹಚ್ಚಿಕೊಂಡಿದ್ದರೂ ಆ ಪ್ರೀತಿಯ ಬೆಲೆ ಗೊತ್ತಾಗುವುದೇ ದೂರಾದಾಗ ಅಲ್ಲಿಯವರೆಗೂ "ಏ ಈ ಜೀವ ನನ್ನದೇ.. ಅವ್ಳ್ ಎಲ್ಲೂ ಹೋಗಲ್ಲ" ಎನ್ನುವ ಅಹಂನಿಂದ ಇರುತ್ತೇವೆ. ಒಂದು ಸಲ ಅವಳಿಲ್ಲ ಎಂದಾಗಲೇ ನಡುಗುವ ಚಳಿಯಲ್ಲಿ ಛಢೀ ಏಟು ತಿಂದಂಗೆ ಆಗುತ್ತದೆ. ಅಷ್ಟಕ್ಕೂ ನೈಜ ಪ್ರೇಮಕ್ಕೆ ಇರುವ ಶಕ್ತಿಯೇ ಅಂತದ್ದು.. ಇದ್ದಗಲ್ಲ ಪ್ರೀತಿಸುವುದು. ದೂರಾದ ಮೇಲು "ಬೇಕೇಬೇಕು" ಎಂದು ಹಾತೊರೆಯುವುದೇ ಒಲವು.

ತಾಳ್ಮೆ ಪ್ರೀತಿಯ ಬಹುಮುಖ್ಯ ಅಂಗ 
ಕೇಳುವ ತಾಳ್ಮೆ ಇಲ್ಲದಿದ್ದರೇ ಯಾವ ಪ್ರೇಮವೂ ಉಳಿಯುವುದಿಲ್ಲ. ಪ್ರೀತಿಗೆ ಬಾಯಿಗಿಂತ ಕಿವಿ ಮುಖ್ಯ. ನಿನ್ನೆಲ್ಲಾ ಸಿಟ್ಟುಗಳನ್ನು ನನ್ನ ಮುಂದೆ ಪ್ರದರ್ಶನ ಮಾಡು. ನಾನೇನಿದ್ದರೂ ಮುಖ ಪ್ರೇಕ್ಷಕ. ನಿನ್ನೊಡನೆ ಜಗಳವಾಡಿ ಗೆಲ್ಲುವುದು ಮುಖ್ಯವಲ್ಲ. ನಿನ್ನ ಜಗಳದಲ್ಲಿ, ಕೋಪದಲ್ಲಿ ನನಗೂ ಜಾಗ ಇದಿಯಲ್ಲ ಎಂಬುದೇ ಆತ್ಮ ತೃಪ್ತಿ. ಇದು ಅತಿಶೋಯಕ್ತಿ ಅಲ್ಲ, ಕಣ್ಣು ಮುಚ್ಚಿಕೊಂಡು ದೇವರನ್ನು ನೆನಪಿಸ್ಕೊಂಡರೆ ಒಂದು ಚಿತ್ರಣ ಕಣ್ಣ ಮುಂದೆ ಬರುತ್ತದೆ. ಅದೇ ರೀತಿ ಪ್ರೀತಿ ಎಂದಾಕ್ಷಣ ನನ್ನವಳು ಎಂದಾಕ್ಷಣ ಹುಡುಗಿ ಎಂದಾಕ್ಷಣ ಕಣ್ಣ ಮುಂದೆ ನೀನೆ ರೂಪ ತಾಳುವೆ. ನನ್ನೊಳಗೆ ಎಂದಿಗೂ ನೀ ಅಜರಾಮರ.

ನೀ ನನ್ನ ಜೊತೆ ಇದ್ದರೂ, ನನ್ನಿಂದ ದೂರಾದರೂ ನಿನ್ನ ಮೇಲಿರುವ ಪ್ರೀತಿ ಕಿಂಚಿತ್ತೂ ಕಡಿಮೆಯಾಗದು ಅದು ಸದಾ ಜೀವಂತವಾಗಿರುವ ಜ್ವಾಲಾಮುಖಿಯಂತೆ. ಆತ್ಮಕ್ಕಂಟಿದ ಜೀವ ನೀನು.. ನಿನ್ನಿಂದ ದೂರಾಗಿ ಇರಲಾರೇನು. ನಮ್ಮದೇ META WORLDನಲ್ಲಿ ಎಂದಿಗೂ ನಿನ್ನ ಸಾತಿಯಾಗಿರುವೇ. 
ಇಂತಿ ನಿನ್ನ ಸನ್ನಡೆತೆಯ ಖೈದಿ..














Comments

Popular Posts