ಬೆಳದಿಂಗಳ ರಾತ್ರಿಲಿ ರಸ್ಮಲೈ ಹುಡುಗಿ ಜೊತೇಲಿ
ಅದು ಇಡೀ ಊರೇ ಅಂಗಾತ ಕಾಲು ಚಾಚಿ ಮಲಗಿದ ಸಮಯ. ಗಾಡಿ ಹಾರ್ನ್ಗಳು, ಬೀದಿ ರಂಪಾಟಗಳೆಲ್ಲಾ ದೀರ್ಘ ಕೋಮಾಗೆ ಜಾರಿದ ಹೊತ್ತು. ಎಲ್ಲೆಡೆ ಸ್ಮಶಾನ ಮೌನ, ಈ ಜಗದೊಳಗೆ ನಾವಿಬ್ಬರೇ ಜೀವಂತ ಜಂತುಗಳು. ಮಿಕ್ಕೆಲ್ಲವೂ ಗರ ಬಡಿದಂತಾಗಿದ್ದವು. ಮೇಲೆ ನೀಲಿ ಆಕಾಶ, ನಡುವೆ ಲೆಕ್ಕವಿಲ್ಲದಷ್ಟು ನಕ್ಷತ್ರಗಳು, ಕೆಳಗೆ ಕೊರೆಯುವ ಕಾಂಕ್ರೀಟ್ಟು, ಪಕ್ಕದಲ್ಲಿ ಭುಜಕ್ಕೊರಗಿದ ನನ್ನಾಕೆ. ಸಾಕಲ್ಲವೇ ಸ್ವರ್ಗಕ್ಕೆ ಕಿಚ್ಚು ಹಚ್ಚಲು.
ಹರಿಯುವ ಜೋಗದ ಹಾಗೆ ನನ್ನ ಮೇಲೆ ಬಿದ್ದ ಅವಳ ನದಿಯಂತ ಕೂದಲು, ಅಲ್ಲೊಂದು ಇಲ್ಲೊಂದು ಗಾಳಿಯನ್ನು ಛೇಡಿಸುತ್ತಿತ್ತು. ಉಳಿದವು ನನ್ನ ಸುಪರ್ದಿಯಲ್ಲಿದ್ದವು. ನಕ್ಷತ್ರಗಳು ಕೂಡ ಅವಳನ್ನು ಕದ್ದು ನೋಡುತ್ತಿದ್ದವು ಎಂಬ ಗುಮಾನಿ ನನಗೆ. ಅವಳು ತೋಳಿಗಂಟಿದ ಕೂಡಲೇ ಮೈಯಲ್ಲಿ ಸಂಚಲನ. ಅವಳ ಎದೆ ಬಡಿತವನ್ನು ನಾನೀಗ ಕೂತಲ್ಲೇ ಕೇಳಬಲ್ಲೆ ಅನಿಸಿದ್ದು ಸುಳ್ಳಲ್ಲ. ಅಂಧಕಾರದಲ್ಲೂ ಹೊಳೆಯುವ ಅವಳ ಮೂಗುತಿ ಕಂಡು ಅವಳನ್ನು ನೇವರಿಸಲು ಕೈ ಹಿಡಿದ ಕ್ಷಣ ನಾನೇ ದಿಕ್ಕು ತಪ್ಪಿದಂತಾಯಿತು. ಅಸ್ತಮಾ ಬಂದವರಂತೆ ಉಸಿರಾಡಲು ತಿಣುಕಾಡಿದೆ. ಅದನ್ನರಿತ ಅವಳು ಇನ್ನೂ ಗಟ್ಟಿಯಾಗಿ ನನಗೆ ಒರಗಿದಳು. ಆಹ್ಹಾ, ಹಗಲಿಗೆ ಸಾವಾಗಿ ಈ ರಾತ್ರಿ ಹೀಗೆ ಇರಬಾರದೇ, ತೀರವೇ ಸಿಗದ ಸಮುದ್ರದಂತೆ.
ಅವಳು ಹತ್ತಿರವಿದ್ದಾಗ ಆಕಾಶವೂ ಚಿಕ್ಕದಾಗಿ ಕಾಣುತ್ತಿತ್ತು. ಜಗತ್ತೂ ಸರಳವಾಗಿತ್ತು. ನನ್ನ ಎದೆಯೊಳಗಿನ ಎಷ್ಟೋ ಗೊಂದಲಗಳಿಗೆ ಅವಳ ಕುಡಿ ನೋಟವೇ ಉತ್ತರ. ಅವಳ ಒಂದು ಸಣ್ಣ ಸ್ಪರ್ಶದಲ್ಲಿ ಭವಿಷ್ಯದ ಎಷ್ಟೋ ವಾಗ್ದಾನಗಳು ಬೆಚ್ಚನೆ ಮಲಗಿದ್ದವು. ಒಂದಂತೂ ಸತ್ಯ ಈ ರಾತ್ರಿಯಲ್ಲಿ ನನ್ನ ಇಡೀ ಜೀವಮಾನದ ಒಂದು ಅಮೂಲ್ಯ ಅಧ್ಯಾಯವನ್ನೇ ಬರೆಯುತ್ತಿರುವೆ.
ಆಕಾಶವನ್ನು ನೋಡುವ ನೆಪದಲ್ಲಿ ಒಬ್ಬರೊಳಗೊಬ್ಬರು ತೂರಿಕೊಂಡಿದ್ದವು. ಚುಕ್ಕಿ ತಾರೆಗಳೆಲ್ಲಾ ನಮ್ಮ ಮಾತು ಕೇಳಲು ನೆರೆದ ಪ್ರೇಕ್ಷಕರಂತೆ ಕಾಣುತ್ತಿದ್ದವು. ಈ ಕ್ಷಣ ಎಲ್ಲವನ್ನು ಮರೆಸಿತ್ತು. ಅವಳೊಂದಿಗಿನ ಈ ಮೌನದ ಸಂಭಾಷಣೆ ಇನ್ನೆಂದಿಗೂ ಮುಗಿಯದಿರಲಿ, ಬ್ರಹ್ಮನ ಒಂದು ರಾತ್ರಿ ಮನುಷ್ಯನಿಗೆ ಒಂದು ವರ್ಷವಿದ್ದಂತೆ, ಈ ಇರುಳು ನಾನೂ ಬ್ರಹ್ಮನಾಗಿ ಬಿಟ್ಟರೆ ಇನ್ನೊಂದಷ್ಟು ಸಮಯ ಅವಳೊಟ್ಟಿಗೆ ಕಳೆಯಬಹುದಲ್ಲ ಎಂಬ ದುರಾಸೆ. ಅಷ್ಟಕ್ಕೂ ಅವಳೊಂದಿಗೆ ನನಗೆ ಅಷ್ಟು ಅಗಾಧವಾದ ಸಂಬಂಧ ಇದೆ ಅಂತ ಅರಿವಾಗಿದ್ದೇ ನನ್ನದೆಗೆ ಅವಳ ನೆತ್ತಿ ಸೋಕಿದಾಗಲೇ. ಅದೊಂತರ ದಿವ್ಯ ಅನುಭವ. ತಪಸ್ಸಿಗೆ ಕೂತ ವಿಶ್ವಾಮಿತ್ರನನ್ನು ಭಂಗ ಮಾಡುವಷ್ಟು ಸೆಳೆತ ಉಂಟು. ನಾವಾಡದ ಎಷ್ಟೋ ಮಾತುಕತೆಗಳು ಆಗಲೇ ಗೊತ್ತಾಗಿದ್ದು, ಹೇಳ್ಬೇಕುಂದ್ರೆ ಆಗ್ಲೂ ಅವಳು ಮಾತನಾಡಲಿಲ್ಲ. ಬರೀ ಕಣ್ಣಿನ ಸಂಭಾಷಣೆ ಅಷ್ಟೇ. ಅವಳೆಲ್ಲಾ ಪ್ರಶ್ನೆಗಳಿಗೂ ನನ್ನ ನಗುವೇ ಉತ್ತರ. ನನ್ನೆಲ್ಲಾ ಪ್ರಶ್ನೆಗಳಿಗೂ ಅವಳ ಮೌನವೇ ಪ್ರತ್ಯುತ್ತರ. ಉಳಿದೆಲ್ಲವೂ ಮೌನ ಸಂವಾದ.
ಕಡೆಗೂ ಮೌನ ಮುರಿದೆ, "ಅಂಬರದಲ್ಲಿರುವ ಪ್ರತಿಯೊಂದು ನಕ್ಷತ್ರವು ನಿನಗೆ ಹೇಳಲಾಗದ ಮಾತುಗಳಂತೆ" ಎಂದು ಅವಳ ಕಿವಿಯಲ್ಲಿ ಪಿಸುಗುಟ್ಟಿದೆ. ಅವಳು ಕಣ್ಣು ಮುಚ್ಚಿ ನನ್ನ ಕಡೆ ವಾಲಿದಳು. ಆ ಕ್ಷಣ ನಾನವಳನ್ನ ಚುಂಬಿಸಲಿಲ್ಲ. ಅವಳು ಕೂಡ ಧ್ಯಾನಸ್ಥ ಸ್ಥಿತಿಯಲ್ಲಿ ನನ್ನೊಳಗಿನ ಎಲ್ಲಾ ಭಾವನೆಗಳನ್ನು ದೋಚಿದಳು. "ಈ ಕ್ಷಣಕ್ಕೆ ಸಾವು ಬಂದರು ನಾನು ನಿಶ್ಚಿಂತೆಯಿಂದ ಕಣ್ಣು ಮುಚ್ಚುವೆ, ಏಕೆಂದರೆ ನಾನೀಗ ಪ್ರೀತಿಯ ಪರಿಪೂರ್ಣತೆಯಲಿದ್ದೇನೆ. ಸಂಪೂರ್ಣವಾಗಿ ಅವಳ ತೆಕ್ಕೆಯಲಿದ್ದೇನೆ. ಇಷ್ಟು ಸಾಕಲ್ಲವೇ ಈ ಬದುಕು ಸಾರ್ಥಕವಾಗಲು. ನನ್ನ ಮೋಕ್ಷವೇ ಅವಳು."
ಅಬ್ಬೊ ಕಣ್ಣು ಮುಚ್ಚಿ ಸುಮ್ಮನೆ ಇದ್ದರೆ ಎಷ್ಟು ಸೊಗಸಾಗಿ ಕಾಣುವಳು. ಅವಳ ಮಾತುಗಳು ಚೆಂದ ಆದರೆ ಅವಳ ಮೌನ ಅದಕ್ಕಿಂತಲೂ ಅಂದ. ಗಾಂಧಾರಿಯಂತೆ ಇವಳ ಬಾಯಿಗೂ ಬಟ್ಟೆ ಕಟ್ಟುವ ಮನಸ್ಸು... ಗೊತ್ತಾದರೆ ಮುಲಾಜಿಲ್ಲದೇ ಕೊಂದು ಬಿಡುವಳು. ಪ್ರೀತಿಯಂದರೆ ಹೇಳುವುದಲ್ಲ, ನಾನೆಲ್ಲೇ ದಾರಿ ತಪ್ಪಿದರೂ ತೊರೆಯ ಜಾಡು ಹಿಡಿದು ಊರು ಸೇರಿದಂತೆ, ಪುನಹಃ ಅವಳನ್ನೇ ಸೇರುವುದು.
ಆಕಾಶದಲ್ಲಿ ಸಾವಿರಾರು ತಾರೆಗಳು ಹೊಳೆಯಬಹುದು ಆದರೆ ಅವಳ ಕಣ್ಣಲ್ಲಿನ ಜ್ಯೋತಿ ಎಲ್ಲವನ್ನೂ ಮೀರಿಸುವಂತದ್ದು. ನನ್ನೆಲ್ಲಾ ಕನಸುಗಳನ್ನು ಅವಳ ಮಡಿಲಲ್ಲಿಟ್ಟು ಆ ಬೆಳದಿಂಗಳ ರಾತ್ರಿ ಜೀವಿಸಿದೆ. ಅದೊಂತರ "ಪ್ರೇಮದ ಆರಾಧನೆ" ದೇವಿಯ ಪಾದಕ್ಕೆ ತಲೆಯನ್ನಿಟ್ಟು ತನ್ನನ್ನು ತಾನು ಅರ್ಪಿಸಿಕೊಂಡಂತೆ. ನಿನ್ನೊಂದಿಗಿನ ಪ್ರತಿಯೊಂದು ಇರುಳು ನನಗೆ ಹೊಸ ಪದ್ಯದಂತೆ. ಅವು ಓದದೇ ಬಿಸಾಡಬಲ್ಲ ಕಾಗದಗಳಲ್ಲ. ಅವೆಲ್ಲವೂ ಹೃದಯದ ಲಿಪಿಯಲ್ಲಿ ಬರೆದ ಅಮರವಾದ ಸಂಭಾಷಣೆ. ನೀನೇ ನನ್ನ ಆಕಾಶ, ನಿನ್ನ ಮಾತೇ ಪ್ರತಿ ತಾರೆ.
ನೀವು ಎಂದಾದರೂ ಮಂದಹಾಸ ಬೀರುವ ನಕ್ಷತ್ರವ ಕಂಡೀರಾ? ಇಲ್ಲವಾದರೆ ಪ್ರೀತಿಸುವ ಹುಡುಗಿಯನ್ನೊಮ್ಮೆ ಬೆಳದಿಂಗಳ ರಾತ್ರೀಲಿ ನಗಿಸಿ ನೋಡಿ, ನಕ್ಷತ್ರಗಳ ಪುಂಜವೇ ನಕ್ಕಂತೆ ಭಾಸವಾಗುತ್ತದೆ. ಅಯ್ಯೋ ನಾನೆಂಥಾ ಮೂಢ ಹೇಳಲು ಬಂದ ವಿಷಯವೇ ಮರೆತೇ ಹೋಯಿತು. ಇಂದು ನಮ್ಮ "ರಸ್ಮಲೈ ಹುಡುಗಿ" ಹುಟ್ಟಿದ ದಿನ. ಬೇಜಾರಿನ ಸಂಗತಿ ಏನುಂದ್ರೆ ಇವತ್ತು ಅವಳು ನನ್ನ ಜೊತೇಲಿ ಇಲ್ಲ. ದೂರದೂರಿನಲ್ಲಿ ಹೆಣ್ಮಕ್ಳು ಗ್ಯಾಂಗ್ ಜೊತೆ ಸೆಲೆಬ್ರೆಟ್ ಮಾಡ್ತಿದಾಳೆ. ಆದರೂ ಈ ಹೊತ್ತಿಗೆ ನಾನು ಆಕಾಶ ನೋಡಿ ಅವಳ ಜೊತೆ ಮಾತಾಡ್ತಿದ್ದೀನಿ. ನನಗೂ ದೃಢವಾದ ನಂಬಿಕೆ ಇದೆ, ಅವಳೂ ಹೃದಯವಿಟ್ಟು ಕೇಳಿಸ್ಕೋತಿದ್ದಾಳೆ.
"ಹುಟ್ಟಿದ್ದಕ್ಕೆ, ಸಿಕ್ಕಿದ್ದಕ್ಕೆ ಅನಂತ ಧನ್ಯವಾದಗಳು"
"Happy Birthday Muddumari” 😘😘😘😘😘😘😘🤗🤗🤗🤗🤗🤗🤗
Comments
Post a Comment