ಮೌನದಲ್ಲೂ ನೀನೆ...

ಅವಳು ಮಾತಾಡದೇ ಇರುವ ದಿನಗಳಲ್ಲಿ 
ನನ್ನೊಳಗೆ ತುಂತುರು ಮಳೆಯಾಗುತ್ತದೆ 
ಮನಸೆಲ್ಲಾ ನೆನಪಿನಿಂದ ರಾಡಿಯಾಗುತ್ತದೆ 

ಅವಳ ಬರುವಿಕೆಗಾಗಿ ಕಾಯುವ ನಾನು 
ಈ ಮಳೆಯನ್ನು ಶಪಿಸುತ್ತೇನೆ, 
ಕೊಂಚ ಬಿಡುವು ಕೊಡು ನನ್ನವಳು ಬರುವಳು 

ನನ್ನಾಕೆ ಈ ಕೆಸರಲ್ಲಿ ಕಾಲಿಟ್ಟು ಬರುವಾಗ 
ಸತಾಯಿಸುವ ಮಣ್ಣನ್ನು ನೋಡಿ ಈರ್ಷ್ಯೆಯಾಗುವುದು 
ಛೆ, ಈ ಕ್ಷಣಕ್ಕೆ ನಾನು ಆ ಮಣ್ಣಾಗಬಾರದಿತ್ತೇ..?
ನನ್ನವಳ ಪಾದವನ್ನು ತುಸು ಅಪ್ಪಬಹುದಿತ್ತಲ್ಲವೇನು 

ನಿನ್ನೊಂದಿಗೆ ಮಾತಾಡಿದ ಸಮಯವಷ್ಟೇ ಅಲ್ಲ,
ನಿನ್ನೊಂದಿಗೆ ಮೌನವಾಗಿ ಕಳೆವ ಕ್ಷಣಗಳು ಕೂಡ 
ಒಲವಿನ ಇನ್ನೊಂದು ಮಜಲು ಅಲ್ಲವೇನು ?

ಈಗೀಗ ಪ್ರೀತಿ ಹೆಚ್ಚಾದಂತೆ 
ಮಾತು ಸವಕಲಾಗುತ್ತಿದೆ
ಅವಳ ಮೌನವೇ ಸಾಕಲ್ಲವೇನು..!?

ಒಮ್ಮೊಮ್ಮೆ ಸಿಟ್ಟಲ್ಲಿ ಅವಳು 
ದೂರ ನಿಂತರೂ, ನನ್ನ ಹೃದಯ 
ಅವಳಲ್ಲಿಯೇ ಇಲ್ಲವೇನು..!?

ಅವಳ ಗಾಢವಾದ ಮೌನದಲ್ಲೂ 
ಪ್ರೀತಿಯ ಪಿಸು ಮಾತು ಕೇಳಬಲ್ಲೇನು 

ಅವಳ ಜಮದಗ್ನಿಯಂತ ಕೋಪದಲ್ಲೂ 
ತಾಯಿಯಂತ ಪ್ರೀತಿ ನೋಡಬಲ್ಲೇನು 

ಹೇ ಸಖಿ,

ಈ ಘಳಿಗೆ ಕಣ್ಣಲ್ಲಿ ನೀರು ಬಂದರೇನು…
ನಮ್ಮ ಪ್ರೀತಿ ಎಂದಿಗೂ ಜೀವಂತ ಅಲ್ಲವೇನು…

ದೂರ ಹೋಗುವ ಮಾತು ಬಂದರೇನು…
ಪ್ರೀತಿ ದೂರವಾಗುವುದೇನು…!?

ನಿನ್ನ ನಗುವೇ ನನ್ನ ಜೀವವಾಗಿರುವಾಗ 
ನಿನ್ನ ಸಾನಿಧ್ಯವೇ ನನ್ನ ಲೋಕವಾಗಿರುವಾಗ 

ತೊರೆದು ಜೀವಿಸುವುದು ಹೇಗೆ ಸಾಧ್ಯ ?

ಎಷ್ಟೇ ಜಗಳವಾದರೂ ಮತ್ತೆ ಮತ್ತೆ ಒಂದಾಗುವ 
ನಮ್ಮ ಪ್ರೀತಿ ಪ್ರಪಂಚಕ್ಕೆ  ಅರ್ಥವಾಗದಿದ್ದರೇನು!?

ನನಗೆ ನೀನು…
ನಿನಗೆ ನಾನು…
ಇಷ್ಟೇ ಸಾಕಲ್ಲವೇನು…

ನನ್ನ ಉಸಿರು ಸದಾ ನಿನ್ನ ಹೆಸರನ್ನೇ ಜಪಿಸುತ್ತಿದೆ. 
ಹ್ಞಾ, ನಿನ್ನ ಮೌನದಲ್ಲೂ ಮಿಡಿಯುವ ಪ್ರೀತಿಯ 
ಧ್ವನಿಯನ್ನು ನಾನು ಸ್ಪಷ್ಟವಾಗಿ ಕೇಳಬಲ್ಲೆನು..

Comments

Popular Posts