ಏನೆಂದು ಹೆಸರಿಡಲಿ ಈ ಚಂದ ಅನುಭವಕೆ ?

ಹೌದು, ಅವಳ ಪ್ರೀತಿಗೆ ಯಾವ ಹೆಸರಿಟ್ಟರು ಅದು ಕಡಿಮೆಯೇ. ಏಕೆಂದರೆ ಒಂದೇ ಭಾವನೆ ಇದ್ದರೆ ಅದಕ್ಕೊಂದು ಹೆಸರು ಕೊಡಬಹುದು. ಆದರೆ ಅವಳ ಪ್ರೀತಿ ಒಂದೇ ಭಾವನೆಯಲ್ಲ. ಅದು ಕ್ಷಣಕ್ಕೊಂದು ರೂಪ ತಾಳುವ ಅನೇಕ ಬಣ್ಣಗಳ ಲೋಕ. ಒಂದೇ ಪ್ರೀತಿಯಲಿ ಸಾವಿರ ರೂಪ. ಕೆಲವೊಮ್ಮೆ ಪ್ರೇಯಸಿಯಂತೆ ಮುದ್ದುಗರೆವಳು, ಒಮ್ಮೊಮ್ಮೆ ಬೊಲೆರೋ ಜೀಪ್ನಂತೆ ಹೃದಯದ ಮೇಲೆ ಹರಿದು ಬಿಡುವಳು. ಕೆಲವೊಮ್ಮೆ ದಾರಿಹೋಕಳಂತೆ ತಿರುಗಿ ನೋಡದೆಯೂ ಹೋಗುವಳು. ಕೆಲವು ಬಾರಿ ಅಮ್ಮನಂತೆ ಕಣ್ರೆಪ್ಪೆಯಲಿ ಕಾಪಾಡುವಳು. ಒಮ್ಮೊಮ್ಮೆ ಅದೇ ರೆಪ್ಪೆಯನ್ನು ಕೀಳುವೆ ಎಂದು ಮಗುವಿನಂತೆ ಹಠ ಹಿಡಿಯುವಳು. ಏಳು ಬಣ್ಣ ಸೇರಿ ಬಿಳಿಯ ಬಣ್ಣವಾದಂತೆ ಎಲ್ಲಾ ಭಾವನೆಗಳು ಸೇರಿದರೆ "ಅವಳು"

ಅವಳೊಂದು ಅಕ್ಷಯ ಪಾತ್ರೆಯಂತೆ, ಅವಳಲ್ಲಿ ಪ್ರೇಮಕ್ಕಾಗಲಿ, ಸಿಟ್ಟಿಗಾಗಲಿ, ಕೋಪಕ್ಕಾಗಲಿ ಬರವೇ ಇಲ್ಲ. ಯಥೇಚ್ಚವಾಗಿ ಕೊಡುವಳು. ಒಲವು ಬಂದರೆ ತಂಗಾಳಿಯಂತೆ ಮನಸ್ಸನ್ನು ಚುಂಬಿಸುವಳು. ಕೋಪ ಬಂದರೆ ಸುನಾಮಿಯಂತೆ ಇಡೀ ಊರನ್ನೇ ನಿರ್ನಾಮ ಮಾಡುವಳು. ಅವಳೇ ಹಾಗೆ ಯಾವುದರಲ್ಲಿಯೂ ಕಮ್ಮಿ ಇಲ್ಲ. ಅವಳು ಸಂಪೂರ್ಣ.

ನಾನು ಮೊದಲೇ ಹೇಳಿರುವಂತೆ, "ಅವಳ ಸಿಟ್ಟೆಲ್ಲವೂ ಮುಸ್ಸಂಜೆಯಂತೆ ಎನಗೆ" (ಸಿಟ್ಟಲ್ಲೂ ಎಷ್ಟು ಸುಂದರವಾಗಿ ಕಾಣ್ತಿಯೇ ಸುಂದ್ರಿ) ಆದರೆ ಅದು ತಣ್ಣಗಾಗೋವರೆಗೂ ಯಮ ಯಾತನೆ. "ಯಾಕಾದ್ರೂ ಬದುಕಿಸಿದೆಯೋ ಭಗವಂತ" ಎಂದು ಬೇಡಿಕೋಬೇಕು ಹಾಗೆ ಮಾಡುವಳು. ಅದೊಂತರ ಸಿಹಿ ಸಂಕಟ, ಹೇಳಿದ್ರೆ ನಿಮ್ಮ ಅನುಭವಕ್ಕೆ ದಕ್ಕಲ್ಲ ಬಿಡಿ. ಉದಾಹರಣೆಗೆ, ಬ್ಲಾಕ್ ಮಾಡಿರುವಾಗ ಅನ್ಬ್ಲಾಕ್ ಮಾಡಿ ಒಂದಷ್ಟು ಫೋಟೋಸ್ ಕಳುಹಿಸಿ ಮತ್ತೆ ಬ್ಲಾಕ್ ಮಾಡುವಳು. ಬ್ಲಾಕ್ ಮಾಡೋವಾಗ ಸುಮ್ನೆ ಮಾಡಲ್ಲ, “I think I don’t love you” ಎಂದು ಉರಿಸಿ ಬ್ಲಾಕ್ ಮಾಡುವಳು. ನನ್ನ ಮನಸ್ಸಿನ ಸಮಾಧಾನಕ್ಕೆ "ಅವಳಿಗೆ ಕೋಪ ಕಡಿಮೆ ಆಗಿಲ್ಲ ಅದಕ್ಕೆ ಇನ್-ಡೈರೆಕ್ಟ್ ಆಗಿ love you" ಹೇಳ್ತಿದಾಳೆ ಅನ್ಕೋತೀನಿ. ಆದರೂ ಅವಳು ಜಗಳವಾಡುವ ಪರಿಯೇ ಚೆಂದ. ತನಗೆ ಅನಿಸಿದ್ದೆಲ್ಲವನ್ನು ಹೇಳಿ, ನನ್ನ ಉತ್ತರಕ್ಕೂ ಕಾಯದೆ ಬ್ಲಾಕ್ ಮಾಡುವಳು. ಎಲ್ಲಾ ಕಡೆಯೂ ಅಷ್ಟದಿಗ್ಬಂಧನ ಮಾಡ್ಕೊಂಡ್ರೆ, ಈ ಕಡೆಯಿಂದ ನಮ್ಮ ಟಾಮಿಪಾಡು ಯಾರಿಗೇಳೋದು ಸ್ವಾಮೀ ? ಹುಚ್ಚು ಹಿಡಿಯೋದು ಏನಕ್ಕೆ ಅಂದ್ರೆ "ಅಯ್ಯೋ ಮಾರಾಯ್ತಿ ನಾನು ಹೇಳೋದನ್ನ ಕೇಳಿಸ್ಕೊಂಡ್ಮೇಲಾದ್ರು ಬ್ಲಾಕ್ ಮಾಡು" ಅಂತ ಬಡ್ಕೋತಿದ್ರು ಉಹೂ ಎಂದು ರಪಕ್ಕನೆ ಹೊರಟುಬಿಡುವಳು. ಬಡವನ ಕೋಪ ದವಡೆಗೆ ಮೂಲ ಅನ್ನೋ ಹಾಗೆ, ಯಾರಿಗೂ ಹೇಳಂಗಿಲ್ಲ, ಬಿಡಂಗಿಲ್ಲ.. ಹೇಳಿದ್ರೆ ಮತ್ತೆ ಬಂದು ಹೊಡಿತಾಳೆ.. ಹೋಗ್ಲಿ ಆಚೆ ಹೋಗಿ ಒಂಚೂರು ಸಮಾಧಾನ ಮಾಡ್ಕೊಳೋಣ ಅಂದ್ರೆ ಜೇಬಲ್ಲಿ ನಯಾಪೈಸೆ ಇರಲ್ಲ. ಒಮ್ಮೊಮ್ಮೆ ಎಷ್ಟು ಸಿಟ್ಟು ಅಂದ್ರೆ ನನ್ನ ಮೆಟ್ಟು ತಗೊಂಡು ನಾನೇ ಹೊಡ್ಕೋಬೇಕು ಅನ್ಸತ್ತೆ. ಯಾಕಾದ್ರೂ ಅವಳನ್ನ ಕೆಣಕಿದ್ನೋ, ಮುಚ್ಕೊಂಡು ಸ್ವಲ್ಪ ಹೊತ್ತು ಇದ್ದಿದ್ರೆ ಅವಳೇ ಸರಿ ಹೋಗಿರೋಳು ಅಂತ. ಒಂದಂತೂ ನಾನು ಹೇಳಲೇಬೇಕು. ನಾವೆಷ್ಟೇ ಏನೇ ಹೇಳಿದರು, ಹೇಳದಿದ್ದರೂ, ಪ್ರಪಂಚದಲ್ಲಿ ಪ್ರೀತ್ಸೋ ಹುಡುಗಿಗೆ ನಿಮ್ಮ ಬಗ್ಗೆ ಗೊತ್ತಿರೋಷ್ಟು. ಸ್ವತಃ ನಿಮಗೂ ಗೊತ್ತಿರಲ್ಲ, ಅಷ್ಟೇ ಯಾಕೆ ಹಣೆ ಬರಹ ಬರೆದ ಬ್ರಹ್ಮನಿಗೂ ಅರೆಕ್ಷಣ ಅನುಮಾನ ಬರುತ್ತೆ, "ಈ ನನ್ಮಗನ್ ಹಣೆಲಿ ಇವತ್ತು ಜಗಳ ಬರ್ದಿರ್ಲಿಲ್ವಲ್ಲ" ಆಮೇಲೆ ಪಕ್ಕದಲ್ಲಿರುವ ಪ್ರೇಯಸಿ ನೋಡಿ ತೆಪ್ಪಗಾಗುವನು. 

ನೀವು ಎಷ್ಟೇ ಏನೇ ಬಡ್ಕೊಂಡ್ರು ಅವಳ ಮನಸ್ಸಿಗೆ ಸಮಾಧಾನ ಆದ್ಮೇಲೆ ಬರೋದು. ಅಲ್ಲಿವರೆಗೂ ನಾವು ಭಗೀರಥನಂತೆ ಕಾಯಬೇಕು ಅಷ್ಟೇ. 

ಅವಳು ಬಂದೇ ಬರುವಳು. 

ಮತ್ತೆ ಮುದ್ದುಗರೆವಳು.

ಮತ್ತೆ ಪ್ರೀತಿ..

ಆಮೇಲೆ ಇನ್ನೊಂದು ಜಗಳ 

ಮತ್ತೆ ಮಗುವಿನಂತೆ ರಚ್ಛೆ ಹಿಡಿವಳು.

ಇದೊಂತರ ಮುಗಿಯದ ಬಂಧ. ಸೂರ್ಯನ ಸುತ್ತ ಭೂಮಿ ಸುತ್ತುವ ಹಾಗೆ ನಾನು ಅವಳ ಸುತ್ತ ಪರಿಭ್ರಮಿಸುವುದೇ "ನಿಜವಾದ ಪ್ರೀತಿ"

ನಾನು ಇಷ್ಟೊತ್ತು ಅವಳ ಬಗ್ಗೆ ತಕರಾರು ಹೇಳಲಿಲ್ಲ. ನಮ್ಮ ಪ್ರೀತಿ ಇಷ್ಟು ವರ್ಷ ಜೀವಂತವಾಗಿರಲು ಕಾರಣವೇ ಅವಳು ಮಗುವಿನಂತೆ ಮನಸಿಗೆ ಬಂದಿದ್ದು ಮಾಡುವುದರಿಂದಲೇ. ಪ್ರೀತಿ ಉಕ್ಕಿದಾಗ ಪ್ರೀತಿ, ಕೋಪ ಬಂದಾಗ ಕೋಪ.. ಮುನಿಸು ಮತ್ತೆ ಒಲವು. ಒಂದು ಸತ್ಯ ಹೇಳ್ಲಾ? ಅವಳು ಹೀಗಿರುವುದೇ ನನಗು ಚೆಂದ. ನಾನು ಸಾಯೋವರೆಗೂ ಅವಳು ನನ್ನ ಸಾಯಿಸ್ತಾನೆ ಇರ್ಬೇಕು.

ಏಕೆಂದರೆ 

ಎಲ್ಲಾ ಜಗಳಗಳು ಹಳೆಯದಾಗಿ 

ಎಲ್ಲಾ ಸಿಟ್ಟುಗಳು ಮೌನವಾಗಿ 

ನಾವಿಬ್ಬರು ಟೆರೇಸ್ ಮೇಲೆ ಮಿನುಗುವ ನಕ್ಷತ್ರಗಳನ್ನ ನೋಡುತ್ತಿರುವಾಗ, "ಕ್ಷಮಿಸಿದ್ದೀನಿ" ಎನ್ನುವಂತೆ ಅವಳು ನನ್ನ ಭುಜಕ್ಕೊರಗಿದಾಗ ಆಗುವ ನೆಮ್ಮದಿ ಇದಿಯಲ್ಲ. ಅದು ಸಾವಿರ ಕೋಟಿ ಕೊಟ್ಟರು ಸಿಗದು.

ದಿನಾ ಸಾಯೋರಿಗೆ ಅಳೋರು ಯಾರು ಎನ್ನುವಂತೆ. ಪ್ರತಿಕ್ಷಣ ಪ್ರೀತಿಸುವವರಿಗೆ ಈ ಪ್ರೇಮಿಗಳ ದಿನ ಯಾವ ಲೆಕ್ಕ. ಆದರೂ ಇದನ್ನ ಹೇಳಲೇಬೇಕು. ಒಂದ್ಸಲ ಹೀಗೆ ಎಗರಾಡ್ತಿದ್ದೆ, ಹ್ಯಾಪಿ ವ್ಯಾಲೆಂಟೈನ್ಸ್ ಡೇ.. ಹ್ಯಾಪಿ ವ್ಯಾಲೆಂಟೈನ್ಸ್ ಡೇ ಅಂತ, ಅದಕ್ಕೆ ಪುಣ್ಯಾತಗಿತ್ತಿ ಏನ್ ಮಾಡಿದ್ಲು ಗೊತ್ತಾ? "ಈಗ ನೀನು ಒಂದು ಕೇಕ್ ತಗೊಂಡು ಹ್ಯಾಪಿ ವ್ಯಾಲೆಂಟೈನ್ಸ್ ಡೇ ಅಂತ ಬರೆಸಿ, ಕೇಕ್ ಕಟ್ ಮಾಡಿ ವಿಡಿಯೋ ಮಾಡಿ ಕಳ್ಸು ಅನ್ನೋದಾ"? ನಾನು ಸಾರಿ ಸಾರಿ ತಪ್ಪಾಯ್ತು ಅಂದ್ರು ಕೇಳ್ತಾನೆ ಇಲ್ಲ. ಉಹು. ಮೇಡಂ ಜಗ್ತಾನೆ ಇಲ್ಲ. ಎಂದಿನಂತೆ ಅವಳ ಬ್ರಹ್ಮಾಸ್ತ್ರ, "ಮಾಡ್ತೀಯೋ ಇಲ್ಲ ಬ್ಲಾಕ್ ಮಾಡ್ಲಾ ಅಂದ್ಲು". ನಾನು ಜೀವ ಒಂದು ಕೈಯಲ್ಲಿ ಹಿಡ್ಕೊಂಡು, ಯಾರಿಗೂ ಕಾಣದೇ ಇರೋ ಜಾಗಕ್ಕೆ ಹೋಗಿ ಸುತ್ತಾಮುತ್ತಾ ನೋಡಿ ಕೇಕ್ ಮಾಡಿ ವಿಡಿಯೋ ಮಾಡಿ ಕಳಿಸ್ದೇ. ನನಗೆ ಭಯ ಎಲ್ಲಿ ಬೇರೆಯವರು ನನ್ನ ವಿಡಿಯೋ ಮಾಡ್ಕೊಂಡು ಹಾಕ್ಬಿಟ್ಟು ಹುಚ್ಚ ಅಂತಾರೋ ಅಂತ. ಆವತ್ತೇ ಲಾಸ್ಟ್  ಮೇಡಂಗೆ ಜಾಸ್ತಿ ವಿಶ್ ಮಾಡಲ್ಲ.. ಜಾಸ್ತಿ ಎಗರಾಡಲ್ಲ ಯಾಕಂದ್ರೆ ಹೀಗೆ ಇನ್ನೊಂದು ಸಲ ಅವಳು ಟ್ರಿಪ್ಗೆ ಹೋಗಿ ಬಂದಿರೋ  ಫೋಟೋಸ್ ಎಲ್ಲಾ  ವಾಟ್ಸಾಪ್ ಸ್ಟೇಟಸ್ಗೆ ಹಾಕಿದ್ಲು, ನಾನು ಸಿಕ್ಕಾಪಟ್ಟೆ ಲವ್ ಇಂದ ಎಲ್ಲಾ ಫೋಟೋಸ್ಗು ಹಾರ್ಟ್ ಕೊಟ್ಬಿಟ್ಟೆ. ಅಷ್ಟೇ, ಒಂದೇ ಸಮನೆ ನೋಟಿಫಿಕೇಶನ್ ಬಂದು ಇರಿಟೇಟ್ ಆಗ್ತಿದೆ ಅಂತ ಬ್ಲಾಕ್ ಮಾಡ್ಬಿಡೋದ ? ಜಗತ್ತಲ್ಲಿ ನಾನೊಬ್ಬನೇ ಇರ್ಬೇಕು ಪ್ರೀತ್ಸೋ ಹುಡ್ಗಿಗೆ ಹಾರ್ಟ್ ಕೊಟ್ರು ಬ್ಲಾಕ್ ಆಗೋದು, ಕೊಡದೆ ಇದ್ರೂ ಬ್ಲಾಕ್ ಆಗೋದು.

ಆದರೂ ಒಂದಂತೂ ಸತ್ಯ..

ಪ್ರಪಂಚದ ಮುಂದೆ ಹೋರಾಡಬೋದು. ಆದ್ರೆ ಪ್ರೀತ್ಸೋಳ್ ಜೊತೆ ಕೂಗಾಡೋಕ್ಕೂ ಧೈರ್ಯ ಬರಲ್ಲ. ಜಗತ್ತಿಗೆ ಮೊಂಡ ಆದ್ರೂ ನಿನ್ನ ಮುಂದೆ ನೀನು ಹೇಳಿದ್ದನ್ನು ಚಾಚು ತಪ್ಪದೇ ಕೇಳ್ಕೊಂಡು ಇರ್ತೀನಿ. 

ನಾನೆಂದಿಗೂ ನಿನ್ನ ಸನ್ನಡತೆಯ ಖೈದಿ 

“Happy Valentine’s Day Muddumari”😘😘😘😘😘😘😘🤗🤗🤗🤗🤗🤗



Comments

Popular Posts