ಅವಮಾನ
ಪ್ರವೀಣನಿಗೆ ವಯಸ್ಸು ಸುಮಾರು ಹನ್ನೆರಡು ವರ್ಷವಿರಬೇಕು, ಆರನೇ ತರಗತಿ.
ಇಡೀ ಶಾಲೆಯಲ್ಲೇ ಅತಿ ತುಂಟ ವಿಧ್ಯಾರ್ಥಿ. ಎಲ್ಲರನ್ನೂ ಗೇಲಿ ಮಾಡುತ್ತಾ, ಎಲ್ಲರನ್ನೂ ನಗಿಸುತ್ತಾ, ಎಲ್ಲರಲ್ಲೂ ಒಂದಾಗುತ್ತಿದ್ದ ಪ್ರವೀಣ 'ಅವಳು' ಬಂದರೆ ಮಂಕಾಗುತ್ತಿದ್ದ. ಮಾತಾಡದೇ ಮೌನದ ಮೊರೆ ಹೋಗುತ್ತಿದ್ದ.
ಅವಳೇ ಕೃಷ್ಣ ಸುಂದರಿ ಭವ್ಯ.
ಭವ್ಯ ಕೂಡ ಚುರುಕಿನ ಹುಡುಗಿ.
ಎಲ್ಲರೊಂದಿಗೂ ಸಲುಗೆಯಿಂದ ಮಾತನಾಡುತ್ತಿದ್ದಳು.
ಅದೇಕೋ ಇವನನ್ನು ನೋಡಿದರೆ ಮಾತಿಗೆ ಪೂರ್ಣವಿರಾಮ ಹಾಕುವಳು.
ಇಡೀ ಶಾಲೆಗೆ ಶಾಲೆಯೇ ಇವರಿಬ್ಬರೂ ಗುಟ್ಟಾಗಿ ಇಷ್ಟಪಡುತ್ತಿರಬಹುದು ಎಂದು ಗುಲ್ಲೆಬ್ಬಿಸಿದರು. ಎಷ್ಟೇ ಛೇಡಿಸುತ್ತಿದ್ದರೂ ಇಬ್ಬರೂ ಏನೊಂದನ್ನು ಹೇಳುತ್ತಿರಲಿಲ್ಲ.
ಮೌನವೇ ಉತ್ತರ.
ಮೌನವೇ ಪ್ರಶ್ನೆ.
ಆದರೆ ನಿಜ ಸಂಗತಿಯೇ ಬೇರೆ ಇತ್ತು.
ಪ್ರವೀಣನ ತಾಯಿ ಮನೆಕೆಲಸ ಮಾಡುವ ಮನೆ, ಭವ್ಯಳ ಮನೆ ಪಕ್ಕದಲ್ಲೇ ಇತ್ತು.
ರಜಾದಿನಗಳಲ್ಲಿ ಅಮ್ಮನ ಸಹಾಯಕ್ಕೇ ಹೋಗುತ್ತಿದ್ದ ಪ್ರವೀಣನನ್ನು ಕಂಡು ಭವ್ಯ ಸ್ನೇಹಭಾವದಿಂದ ನಗುವಳು. ಅವಮಾನವನ್ನೆಲ್ಲಾ ತನ್ನ ಪುಟ್ಟ ಕಂಗಳಲ್ಲಿ ಬಚ್ಚಿಟ್ಟು ಪ್ರವೀಣ ನಕ್ಕು ಮನೆಯೊಳಗೆ ಹೋಗುವನು.
ಮಹೇಶ್ ಆರ್
10/04/2017
amaheshr@gmail.com
Comments
Post a Comment