ಮೇನಕೆ

ಅವಳಿಗೇನೋ ರೋಗ, ದಿನಾ ನನ್ನ ಹತ್ರಾನೇ ಜಗಳ ಮಾಡ್ತಾಳೇ.
ಅವಳ ಕೆಲಸ ಅವಳು ಮಾಡಿಕೊಂಡು ಹೋಗಬೇಕು.
ನನ್ನ ನೋಡಿದರೇ ಸಾಕು ಉರಿದು ಬೀಳ್ತಾಳೆ.
ಅವಳನ್ನೇನೋ ಭಾರೀ ಸುಂದ್ರಿ ಅನ್ಕೋಂಡಿದಾಳೆ.
ನೋಡೋಕೆ ಒಳ್ಳೇ ಜಾಂಡೀಸ್ ಬಂದಿರೋ ಹೆಗ್ಗಣ ತರ ಇದಾಳೆ.
ತೆಗ್ದು ಒಂದು ಕಪಾಳಕ್ಕೆ ಬಾರಿಸೋಣ ಅನ್ಸುತ್ತೆ.
ಆದರೆ ಅವಳನ್ನ ನೋಡಿದರೆ ಹೊಡಿಯೊಕೆ ಧೈರ್ಯ ಇಲ್ಲ.
ಧೈರ್ಯ ಇಲ್ವೋ ಅಥವಾ ಮನಸ್ಸಿಲ್ಲವೋ.
ಸುಂದ್ರಿ ಅಲ್ಲದೇ ಇದ್ದರೂ, ಪರವಾಗಿಲ್ಲ ಸುಮಾರಾಗಿದಾಳೆ.
ದಿನಾ ಬೈಯೋದು ಹೋಗೋದು. ದೊಡ್ಡ ಬಜಾರಿ.
ಸೂರ್ಯ ಹುಟ್ಟೋಕೆ ಮುಂಚೇನೇ ಮಲ್ಲಿಗೆ ಮುಡಿತಾಳೆ. ಅಷ್ಟು ಬೇಗ ಎಲ್ಲಿ ಸಿಗುತ್ತೆ ?
ಅವಳನ್ನೇ ಕೇಳಬೇಕು. ಥೂ...! ನನಗೇಕೆ ಅವಳ ಚಿಂತೆ.
ನಿಮಗೇನು ಗ್ಯಾನ ನೆಟ್ಗೆ ಇಲ್ವಾ ಅಂತ ಕೇಳ್ತಾಳೆ.
ನನ್ನ ಹಾವು ಅನ್ಕೋಂಡಿದಾಳ ಮುಂಗುಸಿ ಮುಂಡೇದು.
ಆದರೂ ಅವಳ ಕಣ್ಣು ಚಂದ. ಇನ್ಮೇಲೆ ಗಾಂಧಾರಿ ಹಾಗೇ ಕಣ್ಣಿಗೆ ಬಟ್ಟೆ ಕಟ್ಟಿಕೋ ಅನ್ನಬೇಕು.
ಸುಮ್ ಸುಮ್ನೇ ಬೈತಾಳೆ. ಇದನ್ನ ಹೇಳಿದರೇ ಸಿಗಿದು ತೋರಣ ಕಟ್ಟು ಬಿಡ್ತಾಳೆ.
ಮತ್ತೇಕೆ ಬೀದಿ ಕೊನೆಗೆ ಹೋಗಿ ತಿರುಗಿ ನೋಡುತ್ತಾಳೆ.
ನೋಡ್ಕೋಂಡು ಶಾಪ ಹಾಕಬಹುದು.
ಅವಳನ್ನು ನೋಡಬಾರದು ಎಂದು ಎಷ್ಟೇ ಗಟ್ಟಿ ತೀರ್ಮಾನ ತೆಗೆದುಕೊಂಡರೂ,
ಮತ್ತೇ ಅದೇ ಕಥೆ.! ನಾನು ವಿಶ್ವಾಮಿತ್ರ ಅವಳು ಮೇನಕೆ!
ಫ್ರ್ರ್ರ್ರ ಅಂತ ಸೀಟಿ ಶಬ್ಧ ಕೇಳೋದೇ ತಡ,
ಅವಳನ್ನೇ ನೋಡುತ್ತಾ ಡಬ್ಬದಲ್ಲಿರೋ ಕಸವನ್ನೆಲ್ಲಾ ಸುರಿಯೋದು.
ರೀ ಹಸಿ ಕಸ, ಪ್ಲಾಸ್ಟಿಕ್ ಒಟ್ಟಿಗೇ ಹಾಕ್ಬೇಡಿ ಅಂತ ಎಷ್ಟು ಸಲ ಉಗಿಯೋದು.
ನಾನು ಹ್ಮ ಎಂದು ಗುರಾಯಿಸಿ ಬರೋದು.
ನಾಳೆಯಿಂದ ‘ಬೇಕೂ’ ಅಂತಲೇ ಪ್ಲಾಸ್ಟಿಕ್  ಒಟ್ಟಿಗೆ ಹಾಕಲ್ಲ
ಬರಲಿ ಅವಳಿಗೆ ಗಾಚಾರ ಬಿಡಿಸ್ತೀನಿ.
ಆದರೂ ಒಳಗೆ ಮನಸ್ಸು ಅವಳನ್ನೇ ಧ್ಯಾನಿಸುತ್ತಿತ್ತು.

                                    ******
ಮಹೇಶ್.ಆರ್
20/04/2017
amaheshr@gmail.com

Comments

Popular Posts