ಕರಾಳ ರಾತ್ರಿ

ಟಳ್..... ಟಳಾರ್......ಟಳ್....ಟಳಾರ್ ಎನ್ನುವಂತೆ ಸಿದ್ದಣ್ಣ ಹಾರೆಯನ್ನು ಎತ್ತಿ ಹಳ್ಳ ತೆಗೆಯುತ್ತಿದ್ದ.
ಅದನ್ನು ತೆಗೆಯುವಾಗ ಮನೆಯೊಳಗೆ ಯಾರು ಇರಕೂಡದು ಎಂದು ಮೊದಲೇ ತಾಕೀತು ಮಾಡಿದ್ದ.
ಅಮಾವಾಸೆಯ ಕತ್ತಲಲ್ಲಿ, ಮಾಘ ಮಾಸದ ಚಳಿಯಲ್ಲೀ ಮನೆಯವರೇಲ್ಲಾ ನಡುಗುತ್ತಾ ನಡು ಬೀದಿಯಲ್ಲಿ ನಿಂತಿದ್ದರು. ಗೀತಾ ಒಬ್ಬಳು ಮಾತ್ರ ಮನೆಯ ಮುಂದೇಯೇ ಕಟ್ಟೆಯನ್ನೊರಗಿ ಕುಳಿತಿದ್ದಳು. ಕೈನ್ನಿಡಿದು ಪಕ್ಕದಲ್ಲೇ ಅವಳ ಗಂಡ ವೆಂಕಟೇಶ ಕೂತಿರುವನು. ವೆಂಕಟೇಶನ ಸಣ್ಣ ಮಗು ದೊಡ್ಡಕ್ಕನ ಮಗಳಾದ ಸುಮನ ಬಳಿ ಇತ್ತು, ಅಕ್ಕಂದಿರು, ಭಾವಂದಿರು, ತಮ್ಮ, ಅಕ್ಕನ ಮಕ್ಕಳು, ಎಲ್ಲರೂ ಗುಸು ಗುಸು ಮಾತನಾಡುತ್ತಾ ಕಾಲವನ್ನು ತಳ್ಳುತ್ತಿದ್ದರು.

"ಕತ್ಲಲ್ಲಿ ಯಾರ್ಗೂ ಕಾಣಕಿಲ್ಲ ಅಂತ ಬಡ್ಡೈದ ಇವತ್ತು ಪೂಜೆ ಮಡಿಕಂಡವ್ನೇ" ಎಂದು ವೆಂಕಟೇಶನ ದೊಡ್ಡಕ್ಕ ಜಯಮ್ಮ ಸಿದ್ದಣ್ಣನ ಪುರಾಣ ಬಿಚ್ಚಿಟ್ಟಳು.
"ಸುಮ್ನಿರವ್ವ ಕೇಳಿಸ್ಕಂಡು ಏನಾರ ಎಚ್ಚೂ-ಕಮ್ಮೀ ಮಾಡ್ಬಿಟ್ಟಾನೂ ಮುಂಡೇಮಗ" ಎಂದು ತಂಗಿ ಅನುಸೂಯ ಎಚ್ಚರಿಸಿದಳು.
ಇದಕ್ಕೂ ತನಗೂ ಸಂಬಂಧವೇ ಇಲ್ಲವೆನ್ನುವಂತೆ ಜಯಮ್ಮನ ಗಂಡ ಬೆಟ್ಟಪ್ಪ ಬೀಡಿ ಸೇದುತ್ತಲೇ "ಅಟ್ಟಿ ಒಳ್ಕೇ ಅದೇನೋ ತಂದು ಉತ್ಕಾಬುಟ್ಟೋರೇ ಅಂತ ಈ ಕುಡ್ಕ ನನ್ಮಗನ್ನ ಕರ್ಸಿ ಅಟ್ಟಿಯೆಲ್ಲಾ ಹಳ್ಳ ಕೆತ್ತಿಸ್ತೀದ್ದೀರಲ್ಲ. ನಿಮ್ಗೆನಾದ್ರೂ ಗ್ಯಾನ ನೆಟ್ಗೆ ಇದ್ದದ" ಎಂದು ಹೇಳಿ ಮತ್ತೊಮ್ಮೆ ಹೊಗೆಯನ್ನು ಮೂಗಿನಿಂದ ಬಿಟ್ಟ.
ಪಕ್ಕದಲ್ಲೇ ಕೈ ಕಟ್ಟಿಕೊಂಡು ನಿಂತಿದ್ದ ಅವನ ಸಟ್ಗ ಪ್ರಕಾಶ " ಸುಮ್ನೇ ಇರು ಬೆಟ್ಟಪ್ಪ. ಮನೆ ಅಂದ್ಮೇಲೆ ಇಂಥದ್ದೆಲ್ಲಾ ಜನಗಳು ಮಾಡ್ಸಿರ್ತಾರೆ ಅದನ್ನೆಲ್ಲಾ ಸರಿ ಮಾಡ್ಕೊಳೋದು ಬ್ಯಾಡ್ವೇ" ಎಂದು ಸಲಹೆಯನ್ನು ನೀಡುತ್ತಾ ಹೆಂಡತಿಯ ಕಡೆ ನೋಡಿದ.
"ನೋಡದ ಇರು ಮಾವ ಇದೂ ಒಂದು ಆಗೇ ಬಿಡ್ಲಿ. ಇವೆಲ್ಲಾ ಬ್ಯಾಡ ಅಂತ ಹೇಳಿದ್ರು ಇವ್ರಿಬ್ರು ಕೇಳ್ಬೇಕಲ್ಲ" ಅಂತ ಅಕ್ಕಂದಿರ ಕಡೆ ನೋಡಿದ ಪ್ರದೀಪ.
"ಅಲ್ಲ ಕಣ್ಲಾ ನಿಮ್ಗೆನೋ ವಳ್ಳೇದಾಗ್ಲಿ ಅಂತ ನಾವು  ಹೇಳಿದ್ರೆ ಅದೇ ತಪ್ಪು. ಯಾಕಾದ್ರೂ ಹೇಳಿದ್ನೋ ಹಾಳ್ಮುಂಡೆ" ಅಂತ ಅಂದು ಒಬ್ಬಳೇ ಬೀದಿ ಕೊನೆಯಲ್ಲಿರುವ ತಿರುವಿನ ಹತ್ತಿರ ಕಟ್ಟೆಯ ಮೇಲೆ ಹೋಗಿ ಕೂತಳು ಜಯಮ್ಮ.
"ಇವಾಗ ಮಾಡ್ಸಿತಿರೋದು ಮಾಡ್ಸಿತಿದ್ದೀರ ಮಿಕ್ಕಿದ್ದೆಲ್ಲಾ ಮಾದಪ್ಪಂಗೇ ಬುಟ್ಟಿದ್ದು" ಅಂತ ಹೇಳಿ ಅನಸೂಯ ದೇವರಿಗೆ ಕೂತಲ್ಲಿಂದಾನೇ ಕೈ ಮುಗಿದಳು.

ಇತ್ತ ವೆಂಕಟೇಶನ ಅಕ್ಕನ ಮಕ್ಕಳು ತಾವುಗಳು ಕೇಳಿದ, ಅನುಭವಿಸಿದ ದೆವ್ವದ ಕತೆಗಳನ್ನು ಹೇಳುತ್ತಿದ್ದರು.
ಅತ್ತ ಸಿದ್ದಣ್ಣ ಉಸ್, ಪಸ್, ಏಯ್, ಬುಡಲ್ಲ ನಿನ್ನ, ಯಾರ್ ಮಾಡ್ಸಿರೋದು ಗೊತ್ತು ನಂಗೆ, ನಿನ್ನ ತೆಗ್ದು ಹಾಕೋವರೆಗೂ ನಾನಿಲ್ಲಿಂದ ವೋಗಲ್ಲ" ಎಂದು ಕೂಗಾಡುತ್ತಿದ್ದನು.
ಕರೆಂಟಿಲ್ಲದ ಕಾರಣ ಎಲ್ಲರಿಗೂ ಕೇಳುತ್ತಿತ್ತೆ ವಿನಹಃ ಏನೊಂದು ಕಾಣುತ್ತೀರಲಿಲ್ಲ.
ಬೀದಿ ಕೊನೆಯಿಂದ ಜಯಮ್ಮ ಅನುಸೂಯಳತ್ತ ನಡೆದು ಬಂದು, " ವಸಿ ಬಾ ಇಲ್ಲಿ" ಎಂದು ಪಕ್ಕಕ್ಕೆ ಕರೆದುಕೊಂಡು ಹೋದಳು
"ಯಾಕ್ಲೇ ತಿಪ್ಪೆಗೆ ಹೋಗ್ಬೇಕಾ" ಎಂದು ಅನುಸೂಯ ಕೇಳಿದಳು.
"ಅದಲ್ಲ ಕನಾ. ಮ್ಯಾಗ್ಲಟ್ಟಿ ಬೋರಣ್ಣನ  ಮನೆ ತವಿಂದ ಮಲ್ಲೇಸ ಈಗ್ ತಾನೆ ವೊದ...!" ಎಂದು ಏನೋ ಕಂಡು ಹಿಡಿದವಳಂತೆ ಪಿಸುಧ್ವನಿಯಲ್ಲೀ ಹೇಳಿದಳು.
ಅಷ್ಟೇ ಗುಟ್ಟಿನಲ್ಲಿ ಏನನ್ನೋ ಮುಚ್ಚಿಡುವಂತೇ ಮೆಲುದನಿಯಲ್ಲಿ ಅನುಸೂಯ " ಯಾವ ಮಲ್ಲೇಸ" ಅಂತ ಕಣ್ಣರಳಿಸಿ ಕೇಳಿದಳು.
"ಯೇ ಕೇಯ್ಬಿ ಮಲ್ಲೇಸ, ಕರೆಂಟು ಆಕೋನು" ಎಂದು ತಂಗಿಗೆ ಜಯಮ್ಮ ಬಿಡಿಸಿ ಹೇಳಿದಳು.
"ಅವ್ನ್ಯಾಕೇ ಇಷ್ಟೊತ್ತಲ್ಲಿ ಬೋರಣ್ಣ ಮನೆ ತವು ಬಂದಿದ್ದನೂ ?" ಬೋರಣ್ಣನ ಹೇಣ್ತಿ ಮಡಿಕಂಡಿದ್ದನ ಎಂಗೆ ?" ಎಂದು ತನ್ನ ಕಲ್ಪನಾ ಕಥೆಯೊಂದರ ಎಳೆಯನ್ನು ಬಿಟ್ಟಳು.
"ಅವ್ನ್ಯಾಕೇ ಆ ಮುದ್ಕಿ ಮಡಿಕಂಡನೂ. ಸಾತನೂರು ತವ ಹಾಲಕೋಳ್ನ ಇಟ್ಕಂಡವ್ನಂತೆ. ಇವ್ನೇ ಮನೆ ನಡಿಸ್ತಿರೋನೂ" ಎಂದು ಮಲ್ಲೇಶನ ಜೀವನ ಚರಿತ್ರೆಯನ್ನು ಬಿಚ್ಚಿಟ್ಟಳು.
"ಮತ್ತೇ ಇಟ್ಟೊತ್ನಲ್ಲಿ ಇಲ್ಯಾಕೇ ಬಂದವ್ನೇ ?" ಎಂದು ಅಕ್ಕ ಜಯಮ್ಮಳನ್ನು ಪ್ರಶ್ನೆ ಮಾಡಿದಳು ಅನಸೂಯ.
"ಈ ಸಿದ್ದಣ್ಣನೇ ಕಾಸು-ಗೀಸು ಕೊಟ್ಟಿ ಇವತ್ತು ಕರೆಂಟು ಕಿತ್ತಾಕೂ ಅಂದು, ಮನೆಯೊಳಕ್ಕೇ ಈ ರಂಡೆಮಗಾನೇ ಏನಾದ್ರೂ ತಂದು ಆಕ್ಬಿಟ್ರೆ" ಎಂದು ತನ್ನ ಅನುಮಾನವನ್ನು ವ್ಯಕ್ತಪಡಿಸಿದಳು.
ಇದನ್ನೆಲ್ಲಾ ಪಕ್ಕದಲ್ಲೇ ನಿಂತು ಕೇಳಿಸ್ಕೋಳ್ಳುತ್ತಿದ್ದ ಅನುಸೂಯಳ ಮಗ ಕಿರಣ "ದೊಡ್ಡಮ್ಮ ನಾನ್ ಬ್ಯಾಗೆಲ್ಲಾ ನೋಡ್ದೆ ಅವ್ದು. ಏನು ತಂದಿಲ್ಲ" ಎಂದು ತನ್ನ ವರದಿಯನ್ನು ಒಪ್ಪಿಸುವಂತೆ ಹೇಳಿದನು.
"ತಿಕ್ಕಾ ಮುಚ್ಕೊಂಡು ವೊಲಾ ಅತ್ತಗೆ, ಸಂಗ್  ಬೋರ್ನಂಗೆ ಬಂದೋನೇ ಇಲ್ಲಿ ಎಂಗ್ಸ್ರು ಮಾತು ಕೇಳಕೆ" ಎಂದು ಉಗಿದು ಅಟ್ಟಿದಳು.
"ಏನ್ ಸಾಯ್ತಾಳೇ ಬೇವರ್ಸಿ" ಅಂತ ಮನಸಿನೊಳಗೆ ಬೈಯ್ದುಕೊಂಡು ಕಿರಣ ಮಾವ ವೆಂಕಟೇಶನ ಬಳಿ ಬಂದು ನಿಂತ.
ಇವರೆಲ್ಲರೂ ಹೊರಗೆ ನಿಂತಿರುವುದನ್ನು ವಾರೆಗಣ್ಣಿಂದ ನೋಡುತ್ತಲೇ ಕೊನೆ ಮನೆಯ ಸೋಮಣ್ಣ ಕಂಬಳಿ ಹೊದ್ದು, ಟಾರ್ಚ್ ಹಿಡಿದುಕೊಂಡು ಕೆರೆಯ ದಿಕ್ಕಿಗೆ ಹೋದ.

ಒಳಗೆ ಸಿದ್ದಣ್ಣ, "ಲೇ ಇವತ್ತು ಬುಟ್ಟನ ನಾನೂ ನಿನ್ನ" ಎಂದು ಕಿರುಚಾಡುತ್ತಲೇ ಹಾರೆಯ ಶಬ್ಧ ಮಾಡುತಿದ್ದ ಸಿದ್ದಣ್ಣ ಮೇಲೆ ದೇವರು ಬಂದು ಅರ್ಧ ಗಂಟೆಗೂ ಹೆಚ್ಚಾಗಿತ್ತು.
"ರೀ ಇಷ್ಟೊತ್ತು ದೇವ್ರು ಬಂದ್ರೆ ಮೈಮೇಲೆ ತಡ್ಕೊಳ್ಳೋದು ಕಷ್ಟ. ಹಂಗಿದ್ರು ಈವಣ್ಣ ಅವ್ನೆ ಅಂದ್ರೆ ಇವನೇನು ಕಮ್ಮೀ ಆಳಲ್ಲ" ಅಂತಗೀತಾ ತನ್ನ ಗಂಡನ ಬಳಿ ಸಿದ್ದಣ್ಣ ಬಗ್ಗೆ ಹೇಳುತ್ತಿದ್ದಳು.
"ಹ್ಞೂ" ಎಂದಷ್ಟೇ ಹೇಳಿ ವೆಂಕಟೇಶ ಕತ್ತಲಲ್ಲಿ ಕಾಣದ ದೀಪವೊಂದನ್ನು ಕಂಡಂತೆ ಎಲ್ಲೋ ದೃಷ್ಟಿ ನೆಟ್ಟಿ ಕೂತ.

ಒಂದು ಕಟ್ಟು ಬೀಡಿಯನ್ನು ಮುಗಿಸಿ, ಎರಡನೇ ಬೀಡಿಯ ಪೊಟ್ಟಣವನ್ನು ತೆಗೆಯುತ್ತಲೇ ಬೆಟ್ಟಪ್ಪ, "ಇಷ್ಟೋತ್ತಂಕ ತರಿತಿದ್ದನ ಕುಡ್ಕ ನನ್ ಮಗ. ಯಾರು ಕುಡ್ದು ಪೂಜೆಗೆ ಬರಂಗಿಲ್ಲ ಅಂದೂ, ತಾನೇ ಎಲ್ಡು ಪಾಕೆಟ್ ಆಕಂಡು ಬಂದವ್ನೇ ಮಿಂಡ್ರಿ ಮಗ" ಎಂದು ಬೆಟ್ಟಪ್ಪ ತನ್ನ ಅಸಮಾಧಾನವನ್ನು ಹೊರ ಹಾಕಿ ಮನಸ್ಸಿನ ಒಳಗೆ ಏಳುತ್ತಿದ್ದ ಹೊಗೆಗೆ ಬೀಡಿ ಹಚ್ಚಿ ಮತ್ತಷ್ಟು ಹೊಗೆ ಏಳಿಸುತ್ತಿದ್ದ.
"ಸುಮ್ನಿರು ಬೆಟ್ಟಪ್ಪ ಏನಾದ್ರೂ ಕೇಳಿಸ್ಕಂಡ್ರೇ ಅಷ್ಟೇ" ಎಂದು ಅನಸೂಯಳ ಗಂಡ ಪ್ರಕಾಶ ಚಪ್ಪಲಿಯನ್ನು ಬಿಟ್ಟು ಕಲ್ಲಿನ ಮೇಲೆ ಕೂತುಕೊಂಡ.
"ಸುಮ್ನೆ ಇರು ಮಾವ ನಿನ್ನ ಮೇಲೆ ದಯ್ಯ ಗಿಯ್ಯ ಬುಟ್ಬುಟ್ಟನೂ" ಎಂದು ಪ್ರದೀಪ ಕೈಯಲ್ಲಿರುವ ಟಾರ್ಚ್ ಆನ್ ಮಾಡಿ ದೂರದ ಮರಕ್ಕೇ ಬಿಟ್ಟು ಏನೂ ಕಾಣದ ಕಾರಣ ಟಾರ್ಚನ್ನು ಮತ್ತೇ ಆಫ್ ಮಾಡಿದ.

"ಹಹಹ ಕೊನೆಗೂ ಸಿಕ್ಕಾಕಂಡಲ್ಲ ಬಡ್ಡಿ ಮಗಂದೇ. ಬಾಲಕ ಒಳಗೆ ಬಾ" ಎಂದು ಸಿದ್ದಣ್ಣ ಅಶರೀರ ವಾಣಿಯಂತೆ ಕರೆದ. ಆ ಮಾತನ್ನು ಕೇಳಿದ ಕೂಡಲೇ ವೆಂಕಟೇಶ, ಪ್ರದೀಪ, ಜಯಮ್ಮ ಮೊದಲು ಒಳಗೆ ಹೋದರು. ತದನಂತರ ಅನುಸೂಯ ಒಳಗೆ ಹೋಗುತ್ತಿದ್ದಂತೆ ಪ್ರಕಾಶ ಅವಳನ್ನು ಹಿಂಬಾಲಿಸಿದ. ಕಿರಣ ಸೇರಿದಂತೆ ಮಿಕ್ಕವರೂ ಒಳಗೆ ಹೋಗುವುದನ್ನು ಕಂಡು ಬೆಟ್ಟಪ್ಪ, "ವಳಗೇನೂ ನಿಮ್ಗೆ ಸೆಪ್ಪ ಕಿತ್ಕೊಟ್ಟನ ?, ಇಲ್ಲೇ ನಿಂತ್ಕಳಿ" ಎಂದು ಎದ್ದು ನಿಂತು ಪಂಚೆ ಮೇಲೆತ್ತಿ ಕಟ್ಟಿದನು.

ಒಳ ಬಂದ ಪ್ರದೀಪ ಟಾರ್ಚನ್ನು ಹಾಕಿ ಸುತ್ತ ನೋಡಿ ಬಚ್ಚಲ ಮನೆಯ ಹತ್ತಿರ ಹೋದನು. ದೊಡ್ಡ ಕಿಟಕಿಗಳಿಂದ ಸುಳಿಗಾಳಿ ಸುಯ್ಯನೆ ಬೀಸುತ್ತಿತ್ತು. ಒಳಗೆ ನಿಂತಿರುವ ಸಿದ್ದಣ್ಣ ವೆಂಕಟೇಶನಿಗೆ, "ನೋಡು ಬಾಲಕ ಏನ್ ಆಕೋರೆ ನಿನ್ನ ಮನೆಯೊಳಗೆ" ಎಂದು ತನ್ನ ಕೈಯನ್ನು ಕೆಳಗೆ ತೋಡಿರುವ ಹಳ್ಳದತ್ತ ತೋರಿಸಿದನು. ಹಳ್ಳದ ಕಡೆಗೆ ಪ್ರದೀಪ ಟಾರ್ಚ್ ಬೆಳಕನ್ನು ಬಿಟ್ಟನು.
"ಯಪ್ಪಾ....! ಹಂದಿ ತಲೆ...!" ಎಂದು ಅನುಸೂಯಳ ಗಂಡ ಗಾಬರಿಯಿಂದ ಉದ್ಗಾರ ತೆಗೆದನು.
ಮನೆಯವರಿಗೆ ಬೇರೆ ಏನನ್ನು ಮಾತನಾಡಲು ಮಾತೇ ಬರದಾಯಿತು. ಎಲ್ಲರ ಎದೆ ಢವ ಢವ ಎಂದು ಬಡಿದುಕೊಳ್ಳುತ್ತಿತ್ತು. ವಿಕಾರವಾದ ಹಂದಿ ತಲೆ. ಕುಂಕುಮ, ಅರಿಶಿನ ಹಾಕಿದ ತಲೆಗೆ ನೆತ್ತಿಯ ಮೇಲೆ ನಿಂಬೆಹಣ್ಣನ್ನು ಇಟ್ಟು ಮೊಳೆಯಿಂದ ಒಡೆಯಲಾಗಿತ್ತು. ಕೋರೆ ಹಲ್ಲಿನ ಬಾಯಿಗೆ ಕೆಂಪು ದಾರದಿಂದ ಬಾಯನ್ನು ಕಟ್ಟಲಾಗಿತ್ತು. ದೃಶ್ಯ ಬೀಭತ್ಸವಾಗಿತ್ತು. ಶಾಂತಮೂರ್ತಿಯ ವರಾಹವತಾರ ಹಂದಿಯನ್ನು ಈ ರೀತಿ ನೋಡಿ ಮನೆ ಮಂದಿಯೆಲ್ಲಾ ಮೂಕರಾಗಿದ್ದರು.

ಗೀತಾಳಿಗೆ ಕಾಲುಗಳ ನೋವು ಹೆಚ್ಚಾದ್ದರಿಂದ ಅವಳು ಹೊರಗೆ ಕೂತು ಕಿರಣಿನಿಗೆ, "ಅದೇನಂತೇ ಅದೇನಂತೇ" ಎಂದು ಮೆತ್ತಗೆ ಕೇಳುತಿದ್ದಳು.
"ಅದೇನೋ ನಮ್ಮಪ್ಪ ಹಂದಿ ತಲೆ ಅಂತೂ" ಎಂದೇಳಿ ಕಿರಣ ಗಡ ಗಡ ನಡುಗುತ್ತಿದ್ದನು.
"ಏನೂ.. ಹಂದಿ ತಲೆಯಾ..! ಭಗವಂತ" ಎಂದು ತರ ತರ ನಡುಗುತ್ತಾ ಕೂತಲ್ಲೇ ಕಲ್ಲಾದಳು ಗೀತಾ.

"ಬಾಲಕ ಆ ಗೋಣಿ ಚೀಲದೊಳಗೆ ಈ ಅಂದಿ ತಲೆಯನ್ನು ಹಾಕಿ. ಹರಿಯೋ ನೀರಿನಲ್ಲಿ ಬಿಟ್ಟು ಮನೆಯವರೇಲ್ಲಾ ಅದೇ ನೀರಿನಲ್ಲಿ ತಾನ ಮಾಡಿ ಬನ್ನಿ" ಎಂದನು ಸಿದ್ದಣ್ಣ.
ವೆಂಕಟೇಶ ತೊದಲಿಸುವ ಧ್ವನಿಯಲ್ಲಿಯೇ, "ಮಾವ ಚೀಲ ಎತ್ಕೊ" ಎಂದು ಪ್ರಕಾಶನಿಗೆ ಹೇಳಿದನು.
"ಹ್ಞು ಎತ್ಕತೀನಿ" ಎಂದು ಹೆಂಡತಿ ಅನುಸೂಯಳಿಗೆ "ಎಲ್ಲೇ ಚೀಲ" ಎಂದು ಅವಸರದಲ್ಲಿ ಕೇಳಿದನು.
"ಅಲ್ಲಿ ಅಡಿಗೆ ಮನೆತವು ಅದೆ" ಎಂದು ಅನುಸೂಯ ಹೇಳಿದಳು.
"ತತ್ತ ಅದ ಇಲ್ಲಿ" ಎಂದು ಜಯಮ್ಮ ಟಾರ್ಚನ್ನು ತೆಗೆದುಕೊಂಡು ಹೋಗಿ ಗೋಣಿಚೀಲ ತಂದು ಕೊಟ್ಟಳು.
ಪ್ರಕಾಶ ಚೀಲವನ್ನು ಹಿಡಿದುಕೊಂಡಿದ್ದ. ವೆಂಕಟೇಶ ಮತ್ತು ಪ್ರದೀಪ ನಡುಗುತ್ತಲೇ ಹಂದಿಯ ತಲೆಯನ್ನು ಎತ್ತಿ ಗೋಣಿಚೀಲದೊಳಗೆ ಹಾಕಿದರು. ಹಂದಿಯ ತಲೆಯಿಂದ ರಕ್ತ ಇನ್ನೂ ತೊಟ್ಟಿಕ್ಕುತ್ತಿತ್ತು. ಹಳ್ಳದೊಳಗೆ ದಾರ ಸುತ್ತಿದ್ದ ಮಡಿಕೆ, ಅಕ್ಕಿ ತುಂಬಿದ್ದ ಸಣ್ಣ ಮಣ್ಣಿನ ಮಡಿಕೆ, ಮಕ್ಕಳು ಆಟ ಆಡುವ ಮಣ್ಣಿನ ಮಡಿಕೆಯಲ್ಲಿ ಜೇನುತುಪ್ಪ ತುಂಬಿದ್ದರು. ಅದನ್ನು ಎತ್ತಿ ಗೋಣಿಚೀಲದೊಳಗೆ ಹಾಕಿದರು.
ನಿಂಬೆಹಣ್ಣಿಗೆ ಗುಂಡು ಪಿನ್ನುಗಳಿಂದ ಚುಚ್ಚಲಾಗಿತ್ತು ಅದನ್ನು ಎತ್ತಲು ಹೋಗಿ ವೆಂಕಟೇಶನ ಮತ್ತು ಪ್ರದೀಪನ ಕೈಗೆ ಚುಚ್ಚಿ ರಕ್ತ ಬರುತಿತ್ತು. ಕೊನೆಯದಾಗಿ ಒಂದು ಕೆಂಪು ಬಟ್ಟೆ, ಹಸಿರು ಬಳೆ ಹಾಗೂ ಚಿನ್ನದ ತಾಳಿನ್ನು ಹಾಕಲಾಗಿತ್ತು. ಇದನ್ನು ನೋಡಿದ ಎಲ್ಲರೂ ದಿಗ್ಬ್ರಾಂತರಾದರು.
"ಯಾವಳೋ ಚಿನಾಲಿ ನಮ್ಮ ಮನೆ ಪೂರ್ತಿ ನಾಸ್ನ ಮಾಡ್ಬೇಕು ಅಂತ ಸರಿಯಾಗೇ ಮಾಡ್ಸೋಳೆ" ಅಂತ ಜಯಮ್ಮ ಹಿಡಿ ಶಾಪ ಹಾಕಿದಳು. ಅದಕ್ಕೆ ಅನುಸೂಯ ಮತ್ತು ಅವಳ ಗಂಡ ಪ್ರಕಾಶ ಧ್ವನಿಗೂಡಿಸಿದರು.
"ಬಾಲಕಿ ಮಾತು ಸಾಕು" ಎಂದು ಸಿದ್ದಣ್ಣ ಎಚ್ಚರಿಸಿದ.
"ಆಯ್ತು. ನಡೀರಿ" ಎಂದು ಪ್ರದೀಪ ಗೋಣಿಚೀಲವನ್ನು ತೆಗೆದುಕೊಂಡು ಹೊರಗಡೆ ಬಂದ. ಸಿದ್ದಣ್ಣನ ಸಹಿತ ಎಲ್ಲರೂ ಹೊರಗೆ ಬಂದು ಬಾಗಿಲು ಮುಚ್ಚಿದರು.
ಸಿದ್ದಣ್ಣನನ್ನು  ನೋಡುತ್ತಲೇ ಬೆಟ್ಟಪ್ಪ ಬೀಡಿಯನ್ನು ಕೆಳಗೆ ಬಿಸಾಕಿ, ಪಂಚೆಯನ್ನು ಇಳಿಸಿ "ಬುದ್ಧಿ" ಎಂದು ಎರಡು ಕೈ ಮುಗಿದನು.
ಸಿದ್ದಣ್ಣನ ಮೇಲೆ ಇನ್ನೂ ದೇವರಿದ್ದಂತ್ತಿತ್ತು.
"ಹ್ಮ್ ಹ್ಮ್" ಎಂದು ತಲೆಯಾಡಿಸಿದ.
ಸಿದ್ದಣ್ಣ ಮೊದಲು ಹೊಳೆಯ ಕಡೆ ದಾಪುಗಾಲು ಹಾಕಿದ. ಅವನ ಹಿಂದೆ ಬೆಟ್ಟಪ್ಪ ಬೀಡಿ ಹಚ್ಚುತ್ತಾ ಹೊರಟ. ಸುಮಾಳ ಹತ್ತಿರವಿದ್ದ ವೆಂಕಟೇಶನ  ಮಗುವನ್ನು ಅನುಸೂಯ ಎತ್ತಿಕೊಂಡಳು. ಪ್ರದೀಪ ಮತ್ತೇ ಪ್ರಕಾಶ ಗೋಣಿಚೀಲವನ್ನು ಆ ಕಡೆ ಈ ಕಡೆ ಹಿಡಿದುಕೊಂಡು ಹೊಳೆಯತ್ತ ನಡೆದರು. ಜಯಮ್ಮ, ಅನುಸೂಯ ಹಾಗು ಅವರ ಮಕ್ಕಳು ಒಂದು ಗುಂಪು ಹೊರಟಿತು. ನಡೆಯಲು ಆಗದ ಗೀತಾಳನ್ನು ಸೈಕಲ್ಲಿನ ಮೇಲೆ ಕೂರಿಸಿಕೊಂಡು ವೆಂಕಟೇಶ ಹೊಳೆಯತ್ತ ಹೋದ. ಮನೆಯ ಮುಂದೆ ತುಳಸಿ ಗಿಡವೊಂದೆ ಅನಾಥವಾಗಿ ನಿಂತಿತ್ತು.

ಮೈ ಕೊರೆಯುವ ಚಳಿಯಲೀ ಸಿದ್ದಣ್ಣ, ಪ್ರದೀಪ, ಪ್ರಕಾಶ ನೀರಿಗೆ ಇಳಿದರು.
"ಆ ಗೋಣಿಚೀಲದ ಸಮೇತಾ ನೀರ್ನಾಗೆ ಬಿಟ್ಟು, ಸೂರ್ಯ ಉಟ್ಟೋ ದಿಕ್ಕಾಗೇ ಕೈ ಮುಗಿದು ನೀರೆಲ್ಲಿ ಮೂರ್ಸಲ ಮುಳ್ಗೇಳಿ" ಅಂತ ಸಿದ್ದಣ್ಣ ಆಜ್ಞಾಪಿಸಿದನು. ಅಷ್ಟೊತ್ತೀಗಾಗಲೇ ಸಿದ್ದಣ್ಣ ಮೇಲಿದ್ದ ದೇವರು ಹೋಗಿತ್ತು. ಜಯಮ್ಮ, ಅನುಸೂಯ, ವೆಂಕಟೇಶ, ಗೀತಾ, ಮಕ್ಕಳು ಒಬ್ಬೊಬ್ಬರಾಗಿ ನೀರಿಗಿಳಿದರು. ಬೆಟ್ಟಪ್ಪ ವೆಂಕಟೇಶನ ಮಗನನ್ನು ಅನುಸೂಯಳಿಂದ ಇಸ್ಕೋಂಡು ಮುರಿದು ಬಿದ್ದಿದ್ದ ಮರದ ಮೇಲೆ ಕೂತಿದ್ದ.
"ಬಾ ಬೆಟ್ಟಪ್ಪ ಮೈ ತೊಳ್ಕೋ" ಎಂದು ಸಿದ್ದಣ್ಣ ಕರೆದನು.
"ಇಲ್ಲ ಬುದ್ಧಿ ಸಳಿ ಆಗಕಿಲ್ಲ. ಲಕ್ಕ ಗಿಕ್ಕ ಒಡೆದು ಬುಟ್ಟಾದು. ಮಗ ಬೇರೆ ಅದೆ ನೀವ್ ಉಯ್ಕಳಿ" ಎಂದು ಮಗು ತಟ್ಟುತ್ತಾ ಸುಮ್ಮನಾದನು.
"ಸರಿ. ಮಗಾ ನನ್ನ ಚೀಲದೊಳಗೆ ಗಂಗಕಡ್ಡಿ, ಕರ್ಪೂರ, ಪೂಜೆ ಸಾಮಾನು ಅದೆ ಎತ್ಕಳವ್ವ" ಎಂದು ಅನುಸೂಯಳಿಗೆ ಹೇಳಿದನು ಸಿದ್ದಣ್ಣ.
ಸಿದ್ದಣ್ಣನು ಗಂಗೆಗೆ ಅರಿಶಿನ, ಕುಂಕುಮ ಹಾಕಿ ಗಂಧದಕಡ್ಡಿ ಹಚ್ಚಿ ಕರ್ಪೂರ ಹಚ್ಚಿ ಪೂಜೆ ಮಾಡಿದನು. ತದನಂತರ ಎಲ್ಲರಿಗೂ ತಾಯ್ತವನ್ನು ಕಟ್ಟಿದನು.
ಗೀತಾಳಿಗೆ ತಾಯ್ತ ಕಟ್ಟುತ್ತಾ, "ವಾರದೊಳಗೆ ನಿನ್ನ ಕಸ್ಟ ಮಂಗ್ಮಾಯ ಆಯ್ತದೆ ಕಣವ್ವ, ಧೈರ್ಯವಾಗಿರು" ಎಂದು ಸಿದ್ದಣ್ಣ ಹೇಳಿದನು.
ಗೀತಾಳ ಭುಜವನ್ನು ಹಿಡಿದುಕೊಂಡಿದ್ದ ವೆಂಕಟೇಶ, "ಅಂಗಾರೆ ಇವ್ಳು ಇನ್ಮೇಕೆ ಓಡಾಡ್ಬೋದ" ಎಂದು ಸಿದ್ದಣ್ಣನನ್ನು ಕೇಳಿದ.
"ಕುಣಿದಾಡ್ಬೋದು. ವಂದು ವಾರ ತಡ್ಕಳಿ, ನಿಮ್ಮ ನೆಮ್ದಿಗೆ ಬೇಕಾದ್ರೆ ಔಶ್ದಿ ತಗಳಿ" ಎಂದು ಹೇಳಿ ತನ್ನ ಚೀಲವನ್ನು ಎತ್ತಿಕೊಂಡು ಹೋದನು.
ಎಲ್ಲರೂ ನಡುಗುತ್ತ ಮನೆ ಸೇರಿದರು.

ಬೆಳಗ್ಗೆನೇ ಅನುಸೂಯ "ದೇವ್ರ್ ಮನೇಲಿ ಬೆಳ್ಳಿ ದೀಪಾಲೇಕಂಭಗಳು ಕಾಣ್ತಿಲ್ಲ" ಎಂದು ದೋಂಬಿ ಎಬ್ಬಿಸಿದಳು.
"ಆ ಕುಡುಕ್ ಬಡ್ಡಿಮಗನ್ನ ಕರ್ಸಿ ಪೂಜೆ ಮಾಡ್ಸಿದ್ದೀರಲ್ಲ ಅವ್ನು ದೊಡ್ಡ ಕಳ್ಳ. ಕುಡಿಯಕ್ಕೆ ಕಾಸಿಲ್ಲ ಅಂದ್ರೆ ಎಣ್ತಿ ಲಂಗಾನೇ ಬುಡಲ್ಲ ಮಾರ್ಕತನೆ. ಇನ್ನ ದೀಪಾಲೇಕಂಭ ಬುಟ್ಟಾನ. ಇವ್ನು ಪೂಜೆ ಮಾಡಿದರೆ ಕಾಲು ಸರಿ ವೊದವ ಅವೆಣ್ಣಿಗೆ" ಎಂದು ಬೆಟ್ಟಪ್ಪ ಸಿದ್ದಣ್ಣನನ್ನು ಬೈಯಲು ಶುರುಮಾಡಿದ.
ಕಳ್ಳತನದ ಬಗ್ಗೆ ಮನೆಯ ಮಂದಿ ಅಷ್ಟಾಗಿ ತಲೆ ಕೆಡಿಸಿಕೊಳ್ಳಲಿಲ್ಲ. "ಕಳ್ನೊ ಸುಳ್ನೊ ವಾಸಿ ಆದ್ರೆ ಸಾಕು" ಎಂದು ಮನೆಯವರು ಸುಮ್ಮನಿದ್ದರು.

ಆರು ತಿಂಗಳ ಬಳಿಕ ಗೀತಾ ಬೋನ್ ಕ್ಯಾನ್ಸರ್ನಿಂದ ತೀರಿಕೊಂಡಳು. ಎಷ್ಟೇ ಕರ್ಚು ಮಾಡಿದರು ಉಳಿಯಲಿಲ್ಲ. ತಿಥಿಯ ಕಾರ್ಡನ್ನು ಹಂಚಲು ಹೋಗುತ್ತಿದ್ದ ವೆಂಕಟೇಶನಿಗೆ ದಾರಿಯಲ್ಲಿ ಸಿದ್ದಣ್ಣ ಸಿಕ್ಕಿ, "ಇಸ್ಯ ಗೊತ್ತಾಯ್ತು. ಎಲ್ಲ ಹಣೇಲಿ ಬರ್ದಂಗೆ ಆಯ್ತದೆ. ನಾವೇನ್ ಮಾಡಕಾಯ್ತದೇ ಎಳು" ಎಂದು ಸಿದ್ದಣ್ಣ ವಿಧಿಯನ್ನು ಶಪಿಸಿದನು.

ಸಿದ್ದಣ್ಣ ಕೈಯಲ್ಲಿದ್ದ ಚೀಲದೊಳಗೆ ಹಂದಿಯ ತಲೆ ಮೌನವಾಗಿತ್ತು. ಅಷ್ಟೇ ಮೌನವಾಗಿ ವೆಂಕಟೇಶ ಏನನ್ನು ಹೇಳದೇ ತಿಥಿ ಕಾರ್ಡನ್ನು ಕೊಟ್ಟು ಕೈ ಮುಗಿದು ತನ್ನ ಮಗನನ್ನು ಎತ್ತಿಕೊಂಡು ಮುಂದೆ ಹೋದ.

                                  *****
ಮಹೇಶ್.ಆರ್
15/04/2017
amaheshr@gmail.com

Comments

Popular Posts