ಮೌನ, ಧ್ಯಾನ ಮತ್ತು ಪ್ರೀತಿ
ಅವಳಿಗೆ ಕಾಡಿನಲ್ಲಿ ಒಂಟಿಯಾಗಿ ಹೋಗಿ ಧ್ಯಾನ ಮಾಡುವ ಮನಸ್ಥಿತಿ.
ಇವನಿಗೆ ಅವಳ ಧ್ಯಾನವನ್ನು ಭಂಗ ಮಾಡುವ ಪರಿಸ್ಥಿತಿ.
ಮೌನವನ್ನು ಮಗುವಿನಂತೆ ಪ್ರೀತಿಸುವ ಅವಳು.
ಅವಳನ್ನೇ ಮಗುವಿನಂತೆ ಪ್ರೀತಿಸುವ ಇವನು.
ಪ್ರೀತಿ ಎಂದರೆ ಅವಳಿಗೆ ನಿರ್ಲಿಪ್ತ ಮನಸ್ಸಿನಲ್ಲಿ ಮೂಡುವ ಓಂಕಾರ.
ಇವನಿಗೆ ಪ್ರೀತಿ ಎನ್ನುವುದು ಹೂವು.
ಅವಳು ಪ್ರೀತಿಯನ್ನು ಮಾರಲು ಸಿದ್ಧವಿಲ್ಲ.
ಹೂವಿನ ಮೇಲೆ ಗಿಡಕ್ಕಿರುವಷ್ಟು ಹಕ್ಕು ಕೊಂಡವರಿಗಿಲ್ಲ ಅನ್ನುವುದು ಅವಳ ಭಾವ.
ಹೂವು ಇರುವುದೇ ಕೊಳ್ಳುವುದಕ್ಕೆ, ಪೂಜಿಸುವುದಕ್ಕೆ, ಸವಿಯುವುದಕ್ಕೆ, ಪ್ರೀತಿಸುವುದಕ್ಕೆ. ಅಷ್ಟಕ್ಕೂ ಹೂವನ್ನು ಹಾಗೇ ಬಿಟ್ಟರೂ ಹಾಳಾಗುತ್ತದೆ ಎನ್ನುವುದು ಇವನ ವಾದ.
ಹತ್ತಿರ ಬಂದರೆ ಸುಟ್ಟು ಬಿಡುವೆ ಎಂದು ಕಣ್ಣು ಬಿಡುವ ಅವಳು.
ನಾನೇ ಹಿಮದಂತೆ ನಿನಗೆ ಕರಗುತ್ತಿರುವಾಗ ನಿನ್ನ ಬೆಂಕಿ ಏನು ಮಾಡಲು ಸಾಧ್ಯ ಅನ್ನುವ ಜಂಭ ಇವನಿಗೆ.
ಪರಿಶುದ್ಧವಾದ ಪ್ರೀತಿ ನೀರಿನಂತೆ ನಿಷ್ಕಲ್ಮಶ ಎನ್ನುವ ಅವಳು.
ನೀರಿಗೆ ಕಲ್ಲು ಎಸೆದು ಅವಳ ಚಿತ್ತವನ್ನು ಕಲುಕುವ ಇವನು.
ನಿರಾಳ ಮನಸ್ಸಿನ ಸದಾ ಗಜ ಗಾಂಭೀರ್ಯದ ಬದುಕು ಅವಳದು.
ತೆರೆದಿಟ್ಟ ಹಲಸಿನ ಹಣ್ಣಿನಂತೆ ಖುಲ್ಲಂಖುಲ್ಲಾ ಜೀವನ ಇವನದು.
ದಿನಕ್ಕೆ ಹೆಚ್ಚೇಂದರೇ ಹದಿನಾಲ್ಕು ಮಾತುಗಳನ್ನು ಆಡುವ ಅವಳು.
ದಿನವಿಡೀ ಅಲಾರಂ ಇಟ್ಟಂತೆ ವಟಗುಡುವ ಇವನು.
ಪ್ರೇಮವೆಂದರೇ ಅವಳಿಗೆ ದೇವರು. ಅಹಂ ಬ್ರಹಾಸ್ಮೀ ಎನ್ನುವ ಇವನು.
ಮಾತನಾಡಿದರೇ ಸೋಲಬಹುದು ಅನ್ನುವ ಆತಂಕ ಅವಳಿಗೆ.
ಅವಳ ಮನಸ್ಸನ್ನು ಗೆಲ್ಲದೆ ಹೋದರೆ ಎನ್ನುವ ಭಯ ಇವನಿಗೆ.
ಎಡಬಿಡದೆ ಸುರಿಯುವ ಜಡಿ ಮಳೆಯ ಹಾಗೇ ಅವಳನ್ನು ಪ್ರೀತಿಸುತ್ತಲೇ ಇದ್ದನು.
ಜಡಿ ಮಳೆಗೆ ಹೆದರದ ಸಮುದ್ರದ ಹಾಗೇ ಅವನನ್ನು ದ್ವೇಷಿಸುತ್ತಲೇ ಇದ್ದಳು.
ಇದ್ದಕಿದ್ದಂತೆ ಅವನು ಕಾಣೆಯಾದ.
ಒಂದು ಸಂಜೆ ಸೂರ್ಯ ಬಾನಿನಲ್ಲಿ ರಕ್ತ ಕಾರುವುದನ್ನು ನೋಡುತ್ತಿದ್ದ ಅವಳಿಗೆ ಅದೇನು ಅನಿಸಿತೋ ಏನೋ ಮೌನಕ್ಕೆ ಕೊಳ್ಳಿ ಇಟ್ಟು ಅವನನ್ನು ಮಾತನಾಡಿಸಲು ಹುಡುಕಿದಳು.
ಅವನು ಅಲ್ಲೆಲ್ಲೂ ಇಲ್ಲ.
ಅವನಿಗೆ ಮಾತು ಸಾಕೆನಿಸಿ. ದೂರದ ಕಾಡಿನಲ್ಲಿ ಧ್ಯಾನದ ಮೊರೆ ಹೋಗಿದ್ದ.
ಅವನ ತಪಸ್ಸಿಗೆ ಭಂಗ ತರಲು ಇವಳು ಅವನನ್ನೇ ಹುಡುಕುತ್ತಾ ಕಾಡು ಸೇರಿದಳು.
©ಮಹೇಶ್.ಆರ್
28/06/2017
amaheshr@gmail.com
Comments
Post a Comment