ವರುಣ
ಭರ್ರೋ ಎಂದು ಗಾಳಿ ಅತ್ತಿಂದಿತ್ತ ಅಸಡಾಬಸಡಾ ಬೀಸುತ್ತಿತ್ತು. ಜೋರು ಗಾಳಿಗೆ ಅಡಿಕೆ ಮರಗಳು ಕುಡಿದವರ ಹಾಗೇ ವಾಲಾಡುತ್ತಿದ್ದವು. ಸಮುದ್ರದ ಅಲೆಗಳು ತೀರದಲ್ಲಿನ ಕರಿ ಬಂಡೆ ಕಲ್ಲುಗಳನ್ನು ತಬ್ಬಿಕೊಳ್ಳಲು ವ್ಯರ್ಥ ಪ್ರಯತ್ನ ಮಾಡುತ್ತಿತ್ತು. ತರಗೆಲೆಗಳು ಧೋಳಿನ ಜೊತೆಗೆ ಲೋಕ ಸಂಚಾರಕ್ಕೆ ಹೊರಟವು. ವರುಣ ಭುವಿಗೆ ಮುತ್ತಿಕ್ಕುವುದು ಮಾತ್ರ ಬಾಕಿಯಿತ್ತು.
ಇನ್ನೇನು ಬಿದ್ದೋಗುತ್ತದೆ ಎನ್ನುವ ಗುಡಿಸಲಿನಿಂದ ಬಗ್ಗಿ ಆಕಾಶ ನೋಡಿದ ಶಾರದಕ್ಕ "ಮೋಡ ಹೆಪ್ಪುಗಟ್ಟಿದೆ. ಮಳೆ ಸರಿಯಾಗಿ ಬರ್ತದೆ" ಎಂದು ಬಸಯ್ಯನ ಕಡೆಗೆ ತಿರುಗಿ ಹೇಳಿದಳು. "ಮಗನಾದ್ರೂ ಬರ್ಲಿಲ್ಲ, ಮಳೆಯಾದ್ರೂ ಬರ್ಲಿ ಬಿಡು. ನಮ್ಗೆ ಅಂತ ಇವಾಗ ಇರೋದು ಅದು ಒಂದೇ ಅಲ್ವ" ಎಂದು ಗಾಢವಾಗಿ ನುಡಿದರು.
ಗುಡಿಸಲಿನ ಒಳಗೆ ಹಚ್ಚಿಟ್ಟ ದೀಪ ಕೊನೆಯುಸಿರೆಳೆಯುತ್ತಿತ್ತು. ಹೊರಗಡೆ ಕರಿ ಮೋಡದ ಚಪ್ಪರ, ಭೋರ್ಗರೆವ ಸಮುದ್ರ. ಬಸಯ್ಯ ಮತ್ತು ಶಾರದಕ್ಕನ ಮನದಲ್ಲಿ ಅವರ ಮಗನಾಡಿದ ಮಾತುಗಳು ಅನುರಣಿಸುತ್ತಿತ್ತು. ಇರುವ ಮಗನೊಬ್ಬನನ್ನು ಕಷ್ಟ ಪಟ್ಟು ಓದಿಸಿದರು. ಮಗ ಓದಿ, ದೊಡ್ಡವನಾಗಿ ನೋಡಿಕೊಳ್ಳುತ್ತಾನೆ ಎನ್ನುವ ಸಣ್ಣ ಬಯಕೆಗೆ ಕೊಳ್ಳಿ ಇಟ್ಟನು. ಅವನಿಗೆ ಪೇಟೆಯ ಹುಚ್ಚು. ಇವರಿಗೆ ಹಳ್ಳಿಯ ಮೋಹ. ಮಗ ಸಿಟಿಗೆ ಸೇರಿಕೊಂಡ ಹೊಸತರಲ್ಲಿ ಇವರು ಹೋಗಿ ಇರುವ ಪ್ರಯತ್ನ ಮಾಡಿದರು. ಆದರೆ ಹಳ್ಳಿಯ ಜೀವನಕ್ಕೆ ಹೊಂದಿಕೊಂಡಿದ್ದ ಜೀವಗಳು ಕಾಂಕ್ರಿಟ್ ಕಾಡಿಗೆ ಒಗ್ಗಿಸಿಕೊಳ್ಳಲು ಆಗದೇ ಮತ್ತೇ ಊರು ಸೇರಿದರು.
ಕೆಲಸ ಸಿಕ್ಕ ನಂತರ ಇನ್ನೇನಿದೆ ಪ್ರೀತಿ, ಪ್ರೇಮ, ಮದುವೆ ಎಂಬ ಸಿದ್ಧ ಸೂತ್ರಕ್ಕೆ ಒಳಗಾಗಿ ರಾಕೇಶ ಒಂದು ಸುಂದರವಾದ ಹುಡುಗಿಯನ್ನು ಆರಿಸಿಕೊಂಡನು. ಪ್ರೀತಿ ಶುರುವಾಗಿ ವಾರ ಮುಗಿಯುವುದರೊಳಗೆ ಕಾಮದಲ್ಲಿ ಮುಕ್ತಾಯವಾಯಿತು. ಆ ಹುಡುಗಿ ನಾನು ಗರ್ಭಿಣಿ ಎಂದೇಳಿ ಒಂದಷ್ಟು ಹಣ ಪೀಕಿಸಿದಳು. ಅಲ್ಲಿಯವರೆಗೂ ಓದು, ಅಪ್ಪ, ಅಮ್ಮ ಅಂದುಕೊಂಡಿದ್ದವನಿಗೆ ಅದೇ ಮೊದಲ ಸಲ ಹೆಣ್ಣಿನ ಸಖ್ಯ ಬೆಳೆಸಿದ್ದ. ಅದೆಷ್ಟು ಅವಳ ಅಮಲೇರಿಸಿಕೊಂಡಿದ್ದ ಅಂದರೆ ಪ್ರತಿ ತಿಂಗಳ ಸಂಬಳವನ್ನೂ ಅವಳಿಗೆ ಧಾರೆ ಎರೆಯುತ್ತಿದ್ದ. ಮನೆಗೂ ದುಡ್ಡು ಕೊಡುವುದನ್ನು ನಿಲ್ಲಿಸಿದ್ದ. ಕೇಳಿದರೆ, "ನಿಮ್ಮನ್ನ ಸಾಕ್ತೀನಿ ಅಂತ ಅಗ್ರೀಮೆಂಟ್ ಬರೆದು ಕೊಟ್ಟಿದ್ದೀನಾ" ಎಂದು ಹೇಳಿದ. ಅವನ ಜೊತೆ ಮಾತಾಡಿನೇ ಮೂರ್ನಾಕು ತಿಂಗಳಾಯಿತು. ಬಸ್ಸ್ ಡ್ರೈವರ್ ರಂಗಣ್ಣ ಆಗಾಗ ಮಗನ ಸಮಾಚಾರ ತಿಳಿಸುತ್ತಿದ್ದ. "ನಿಮ್ಮ ಮಗ ಯಾವ್ದೋ ರಂಡೇ ಸಹವಾಸಕ್ಕೆ ಬಿದ್ದೋನೆ" ಅಂತ ಕೇಳಿದ್ದೆ ಕೊನೇ. ಆಮೇಲೆ ಅವನ ಸುದ್ದಿಯೇ ಇಲ್ಲ. ಶಾರದಕ್ಕ ಮಗನ ಚಿಂತೆಯಲ್ಲಿ ಅನ್ನ ನೀರು ಬಿಟ್ಟು ವಾರವಾಯಿತು.
ಭೂಮಿಯನ್ನೇ ಸೀಳುತ್ತೇನೆ ಎಂದು ವರುಣ ಪೃಥ್ವಿಗೆ ಅಪ್ಪಳಿಸಿದ. ಎಡಬಿಡದೇ ಮಳೆ ಒಂದೇ ಸಮನೇ ಸುರಿಯುತ್ತಿತ್ತು. ಬಾನು ತೂತಾಗಿರುವುದಕ್ಕೆ ಯಾವುದೇ ಸಂದೇಹವಿರಲಿಲ್ಲ. ಮಣ್ಣಿನ ವಾಸನೆಗೆ ಮತ್ತೇರಿಸಿಕೊಂಡಂತೆ ಮಳೆ ಜಾಸ್ತಿಯಾಯಿತು. "ಈ ಬೇವರ್ಸಿ ಮಳೇಲಿ ನನ್ನ ಕಂದ ಎಲ್ಲಿದ್ದದ್ದೋ, ಎಲ್ಲಿದ್ರೂ ಚೆನ್ನಾಗಿರಲಿ" ಎಂದು ಶಾರದಕ್ಕ ಕೈ ಮುಗಿದಳು. ಮನೆಯಲ್ಲಿ ಅಲುಗಾಡುತ್ತಿದ್ದ ದೀಪ ಆರಿತು. ಶಾರದಕ್ಕ "ಗೋಳೋ" ಎಂದು ಅಳುತ್ತಿದ್ದಳು. ಹೊರಗಡೆ ಮಳೆಯ "ಧೋ" ಎನ್ನುವ ಶಬ್ಧ ಶಾರದಕ್ಕನ ಧ್ವನಿಯನ್ನು ನುಂಗುತ್ತಿತ್ತು.
ಮಹೇಶ್.ಆರ್
08/06/2017
amaheshr@gmail.com
Comments
Post a Comment