ಬೀದಿ ಬದಿಯಲ್ಲಿ ಸಿಕ್ಕ ನೀಲಕುರಂಜಿ

ಆಷಾಢದ ಮಳೆ ಬಿದ್ದು ನೆಲವೆಲ್ಲ ಮನಸಾರೆ ನಗುತ್ತಿತ್ತು. ಮುಂಜಾವಿನ ಚಾಕರಿ ಮರೆತು ಸೂರ್ಯ ಕಾರ್ಮೋಡಕ್ಕೆ ಸೆರೆಯಾಗಿದ್ದ. ಅವಳ ಪರಿಚಯವಾಗಿ ವರ್ಷದ ಮೇಲೆ ತಿಂಗಳಾಗಿತ್ತು. ಅವಳನ್ನು ಭೇಟಿಯಾಗೋ ದಿನ ಯಾವಾಗ ಬರುತ್ತೋ ಎಂದು ಎಷ್ಟೋ ರಾತ್ರಿ ಗೂಬೆಗಣ್ಣಿಂದ ನಿದಿರೆಗೆಟ್ಟು ಕಾದಿದ್ದುಂಟು. ಆ ಘಳಿಗೆ ಬಂದೇ ಬಿಟ್ಟಿತ್ತು. ಆಕಸ್ಮಿಕವಾಗಿ ದೇವಲೋಕದಿಂದ ಭೂಮಿಗೆ ಜಾರಿ ಬಿದ್ದ ದೇವ ಕನ್ನಿಕೆಯಂಥಾ ಸುಂದರಿ ಅವಳು. ಮಜ್ಜನಕ್ಕೆ ಒಲ್ಲದ ಮನಸ್ಸು ಆವತ್ತು ಮಾತ್ರ ಮಾಡಲೇಬೇಕೆಂದು ತೀರ್ಮಾನಿಸಿದೆ. ನನ್ನ ದಿವ್ಯಗಂಧಕ್ಕೆ ಅವಳು ಮನಸೋತು ಮಾತು ಅರ್ಧಕ್ಕೆ ಬಿಟ್ಟು ಹೋದರೆ ಎಂಬ ಭಯದಿಂದ ಹತ್ತು ಗಂಟೆಯ ಭೇಟಿಗೆ ಬೆಳಗ್ಗೆ ಐದು ಮುಕ್ಕಾಲಿಗೆ ಸ್ನಾನ ಮುಗಿಸಿದ್ದೆ. ನನಗೆಷ್ಟು ಅವಳ ಹುಚ್ಚು ಎಂದರೆ. ಅವಳು, "ನೋಡು, ನನ್ನ ಫ್ರೆಂಡ್ ಮೀಟ್ ಮಾಡಿ ಮಧ್ಯಾಹ್ನ ಸಿಗೋಣ ಆರಾಮಾಗಿ ಪಟ್ಟಾಂಗ್ ಹೊಡೀಬೋದು" ಅಂದಿದ್ಲು. ನನಗಂತೂ ಬಿಲ್ಕುಲ್ ಒಪ್ಪಿಗೆ ಇರ್ಲಿಲ್ಲ. ಅಲ್ಲಿವರೆಗೂ ಕಾಯೋ ತಾಳ್ಮೆನೂ ಇರಲಿಲ್ಲ. "ನಾನೇ ಮೊದ್ಲು ಸಿಗಬೇಕು" ಎಂದು ರಚ್ಛೆ ಹಿಡಿದಿದ್ದೆ. "ಆಮೇಲೆ ಲೇಟ್ ಮಾಡು ನಿನಗೆ ಇದೆ ಕಣೋ" ಎಂದು ಗದರಿದ್ದು ಈಗಲೂ ಕಿವಿಯಲ್ಲಿ ರಿಂಗಣಿಸುತ್ತಿದೆ. ಅವಳ ನೋಡೋ ಖುಷಿಯಲ್ಲಿ ಹಸಿವೇ ಮಾಯವಾಗಿತ್ತು. ಚಡಪಡಿಕೆ ಮಿತಿಮೀರಿತ್ತು. ಆಟೋದಲ್ಲಿ ಹೋಗೋವಾಗ ಅವಳು ಫೋನ್ ಮಾಡಿದಳು, "ಎಲ್ಲಿದ್ಯಾ ನಾನು ಆಲ್ಮೋಸ್ಟ್ ಬಂದೆ" ಎಂದಳು. ನನ್ನ ಹೃದಯದ ಬಡಿತ ಆಟೋ ಸದ್ದಿಗೆ ಪೈಪೋಟಿ ಕೊಡುವಷ್ಟು ಜೋರಾಗಿತ್ತು. ಅಂದೇ ನಾನು ಮೊದಲ ಬಾರಿಗೆ ದೇವರನ್ನು ಪ್ರಾರ್ಥಿಸಿದ್ದು, "ದೇವರೇ ಅವಳನ್ನು ನೋಡೋವರೆಗೂ ಯಾವ್ದೇ ಅವಘಡ, ಅಪಘಾತ ಸಂಭವಿಸದೇ ಇರಲಿ.. ಅಲ್ಲಿವರೆಗೂ ನನ್ನನ್ನು ಬದುಕಿಸು". ನನ್ನ ಪ್ರೀತಿಯ ಬೇಡಿಕೆ ಭಗವಂತ ತಥಾಸ್ತು ಎಂದಿದ್ದ. 

ಮಲ್ಲೇಶ್ವರದ ರಸ್ತೆಯಲ್ಲಿ ಆಟೋ ನಿಲ್ಲಿಸಿದಾಗ ಅವಳಿಗಾಗಿಯೇ ಬೀದಿ ಬದಿಯ ತುಂಬಾ ಗುಲ್ ಮೊಹರ್ ಚೆಲ್ಲಿ ಅವಳ ಬರುವಿಕೆಗೆ ಪ್ರಕೃತಿಯೇ ಸ್ವಾಗತ ಕೋರಿತ್ತು. ಅವಳಿನ್ನೂ ಬಂದಿರಲಿಲ್ಲ. ಅವಳ ಹುಟ್ಟು ಹಬ್ಬ ಮುಗಿದು ಹದಿಮೂರು ದಿನವಾಗಿತ್ತು. ಆದರೂ ಕೇಕ್ ಕಟ್ ಮಾಡಿಸೋಣ ಎಂದು ಮೊದಲೇ ನನ್ನ ಕಿಡಿಗೇಡಿ ಮನಸ್ಸು ತೀರ್ಮಾನಿಸಿತ್ತು. ಅದು ನನ್ನ ಜೀವಮಾನದ ಶ್ರೇಷ್ಠ ನಿರ್ಧಾರ ಅನಿಸಿದ್ದು, ಕೇಕ್ ತಿನಿಸುವಾಗ ಅವಳ ಅಧರ ಸೋಕಿ ನನಗೆ ಮತಿ ಭ್ರಮಣೆಯಾದಾಗ. ಮತ್ತೆ ನನಗೆ ಪ್ರಜ್ಞೆ ಬಂದಿದ್ದೆ, ಅವಳು "ಕೇಕ್ ಯಾಕ್ ಶಾಪ್ ಅಲ್ಲಿರೋ ಹುಡುಗಿಗೆ ಕೊಟ್ಟೆ, ಚೆನ್ನಾಗಿತ್ತು ಇನ್ನೂ ಸ್ವಲ್ಪ ತಿನ್ಬೇಕಿತ್ತು" ಎಂದು ಜಗಳ ತೆಗೆದಾಗ, ವಿಪರ್ಯಾಸ ಅಂದರೆ ಕೊಡು ಅಂತ ಹೇಳಿದ್ದೆ ಅವಳು. 

ಅವಳಿನ್ನೂ ಬಂದಿರಲಿಲ್ಲ ಅಷ್ಟ್ರಲ್ಲಿ ಪಕ್ಕದಲ್ಲಿಯೇ ಇದ್ದ ಅಮ್ಮಾ ಪೇಸ್ಟ್ರೀಸ್ ಅಂಗಡಿಗೆ ನುಗ್ಗಿದೆ. ಅವಳಿಷ್ಟದ ಚಾಕೊಲೇಟ್ ಕೇಕ್ ಆರ್ಡರ್ ಕೊಡುವಾಗ ಫೋನ್ ರಿಂಗಾಗುತ್ತಿತ್ತು. ನಾನು ಮಗುವಿನಂತೆ ಕುಪ್ಪಳಿಸುವುದು ಒಂದು ಬಾಕಿ ಇತ್ತು ಯಾಕಂದ್ರೆ ಅದು ಅವಳದೇ ಕರೆಯಾಗಿತ್ತು. "ಎಲ್ಲಿದ್ಯೋ ನಾನು ಇಲ್ಲೇ ಇದ್ದೀನಿ" ಅಂದಳು. ನಾನು "ಎಲ್ಲಿ" ಅಂತ ಕೇಳಲೂ ಇಲ್ಲ. ಎಡಕ್ಕೆ ತಿರುಗು ಅಂತ ಇಡೀ ಭೂಮಂಡಲವೇ ಹೇಳುತ್ತಿತ್ತು. ಎದೆ ಬಡಿತ ನೂರ್ಮಡಿಯಾಗಿತ್ತು. ಗಟ್ಟಿ ಮನಸ್ಸು ಮಾಡಿ ತಿರುಗಿದೆ. ಅಲ್ಲೇ ಹೋಗುತ್ತಿದ್ದಳು, ಹಿಂದಿನಿಂದಲೇ ಗುರುತು ಸಿಕ್ಕಿತ್ತು. ನನಗಿರುವ ಒಲವಿಗೆ ಅವಳ ಹೆಜ್ಜೆ ಗುರುತಲ್ಲೆ ಕಂಡು ಹಿಡಿಯಬಲ್ಲೆ. ಅಂಗಡಿಯಿಂದ ಆಚೆ ಬಂದು,"ಮುದ್ದು" ಎಂದು ಪಿಸುದನಿಯಲ್ಲಿ ಕರೆದೆ, ನಾ ಕರೆಯದಿದ್ದರೂ ಅವಳು ತಿರುಗಿ ನೋಡುತ್ತಿದ್ದಳು, ಅಂಥಾ ದೈವಿಕ ಪ್ರೇಮ ಅವಳದ್ದು. ಅವಳ ಮುಂಗುರಳನ್ನು ಗಾಳಿಗೆ ತೇಲಿ ಬಿಟ್ಟ ಚಿಟ್ಟೆಯಂತೆ ತಿರುಗಿ ನೋಡಿ ತುಟಿಯಂಚಲಿ ಕಿರು ನಗೆ ನಕ್ಕಳು. ಹೋಗ್ ಅತ್ಲಾಗೆ, ಸಿನೆಮಾ, ಕತೆಗಳಲ್ಲಿ ತೋರಿಸೋ ಯಾವ ನಾಯಕಿಯ ಪಾತ್ರ ಪರಿಚಯಕ್ಕೂ ಕಮ್ಮಿ ಇಲ್ಲದ ಇಂಟ್ರೊಡಕ್ಷನ್ ಅವಳದ್ದು. ಅವಳು ನೋಡಿದ ರೀತಿಗೆ ನಾನು ಬದುಕಿದ್ದೇ ಹೆಚ್ಚು. ಇಡೀ ದೇಹಕ್ಕೆ ಮಂಜು ಸುರಿದ ಅನುಭವ. ಮೈ ನಡುಗುತ್ತಿತ್ತು. ಪ್ರಪಂಚದ ಅರಿವೇ ಇಲ್ಲದೇ ಅವಳನ್ನು ಆಲಂಗಿಸಿದೆ. ಜಾತ್ರೆಯಲ್ಲಿ ಕಳೆದು ಹೋದ ಮಗುವಿಗೆ ಅಮ್ಮ ಸಿಕ್ಕಿದಂತ ಖುಷಿ. ಅವಳು ಜನರ ಭಯದಿಂದ ಒಂದು ಹೆಜ್ಜೆ ಹಿಂದೆ ಸರಿದು ನೋಡಿದಳು. ಅವಳು ನಿಜಕ್ಕೂ ಫೋಟೋಗಿಂತಲೂ ಚೆಂದ, ನೀಲಕುರಂಜಿ ಹೂವಿನಂತೆ. ಕನಸಿನಲ್ಲಿ ಬಂದ ದೇವತೆಯಂತೆ. ಅರೆ ಕ್ಷಣ ಇದು ಕನಸೋ ನನಸೋ ತಿಳಿಯದೇ ಮಬ್ಬಾಗಿದ್ದೆ. ಎಲ್ಲೆಲ್ಲೂ ಹೊಂಬೆಳಕು, ಸೂರ್ಯ ಮೋಡದ ಮರೆಯಿಂದ ಹೊರ ಬಂದನೋ ಅಥವಾ ಇವಳ ಪ್ರಭಾವಳಿಯೋ ನಾನರಿಯೇ. "ಅಬ್ಬಾ, ದೇವ್ರೇ ಈಗ ಬೇಕಿದ್ರೆ ನನ್ನ ಕರ್ಕೋ" ಎಂದು ಮನಸ್ಸು ಗಾಳಿಯಲ್ಲಿ ತೇಲುತ್ತಿತ್ತು.


Comments

Popular Posts