ಲವ್ವು ಗಿವ್ವು ನೋವು

ಮಧ್ಯಾಹ್ನದ ನಿದ್ರೆ ಮುಗಿಸಿ ಇಂಟೆರ್ನೆಟ್ ಆನ್ ಮಾಡಿದೆ, Preetam preetu sent you friend request" ಅಂತ ನೋಡಿ, ತಲೇಯಲ್ಲೀ ಸಣ್ಣದೊಂದು ಹುಳ, ಯಾರಿರಬಹುದು ಈ ಪ್ರೀತಮ್ ಎಂದು ಮ್ಯೂಚುಯಲ್ ಫ್ರೇಂಡ್ ನೋಡಿದಾಗ, ನನ್ನ ಬಾಲ್ಯದ ಸ್ನೇಹಿತೆಯೊಬ್ಬಳಿಗೆ ಫ್ರೇಂಡ್ ಆಗಿದ್ದ.
ಯಾವುದಕ್ಕೂ ಅವಳನ್ನ ಕೇಳಿಯೇ ಅಕ್ಸೆಪ್ಟ್ ಮಾಡೋಣ ಅಂತ ಲಾಂಡ್ ಲೈನ್ ಫೋನಿಂದ ಸ್ಮಿತಾಗೆ ಕರೆ ಮಾಡಿದೆ.
"ಹೆಲ್ಲೋ" ಅನ್ನುವಷ್ಟರಲ್ಲೀ,
"ಲೇ ಸೌಮ್ಯ ನಿಂಗೆ 100ವರ್ಷ ಆಯಸ್ಸು ಕಣೇ, ಈವಾಗ ತಾನೇ ಯಾಕೇ ಇನ್ನೂ ಫೋನ್ಮಾಡಿಲ್ಲ ಅಂತ ಅನ್ಕೋತಿದ್ದೇ."
"ಬೆಳಿಗ್ಗೆಯಿಂದ ಹಾಳಾದ್ದು ತಲೆ ನೋವು ಕಣೇ"
"ಮಾತ್ರೆ ತಗೋಬೇಕ್ಕೀತ್ತು" 
"ಹೂ ತಗೊಂಡೇ, ಲೇ ನಿಂಗೆ ಪ್ರೀತಮ್ ಅನ್ನೋನು ಗೊತ್ತಾ ? ಫ಼ೇಸಬುಕ್ಕಲ್ಲೀ ರಿಕ್ವೇಸ್ಟ ಕಳಿಸಿದ್ದಾನೆ"
"ಯಾವ ಪ್ರೀತಮ್" ಎಂದಳು.
"ಪ್ರೀತಮ್ ಪ್ರೀತೂ....?"
"ಹ್ಮ್.... ನನ್ನ ಕ್ಲಾಸ್ಮೆಟ್ ಕಣೇ ಅವ್ನು"
"ಹೇಗೇ ಅವನು.....?" ಎಂದು ಅನುಮಾನಿಸಿದೆ.
"ಹೇ ಸೂಪರ್ ಕಣೇ, ಕಾಲೇಜಲ್ಲಿ ಅವನು ಮಾಡೋ ತರ್ಲೆ ಒಂದಾ-ಎರಡಾ, ಅವನೀದ್ರೇ ಬೇಜಾರೇ ಆಗಲ್ಲ"
"ಸರಿ. ಆಕ್ಸೇಪ್ಟ ಮಾಡ್ಲಾ"
"ನಿನ್ನಿಷ್ಟ, ನೋಡು ಏನ್ ಮಾಡ್ತೀಯೋ"
"ಓಕೆ, ನಾಳೆ ಸಿಗು" 
"ಓಕೆ ಬೈ" ಎಂದು ಫೋನಿಟ್ಟಳು.

ಸ್ವಲ್ಪ ಯೋಚ್ನೆ ಮಾಡೀ ರಿಕ್ವೇಸ್ಟ ಆಕ್ಸೇಪ್ಟ ಮಾಡಿದೆ.
ಒಂದು 10ನಿಮಿಷ ಆಗಿರಬಹುದು...
ಆ ಕಡೇಯಿಂದ "ಹೆಲ್ಲೋ " ಎಂದು ಪ್ರೀತಮ್ ಮೆಸೆಜ್ ಮಾಡಿದ್ದ.
"ಹಾಯ್" 
"ಹೌವ್ ಆರ್ ಯು"
"ಅಯಾಮ್ ಫೈನ್, ಯೂ" 
"ಅಯಾಮ್ ಗುಡ್"
"ಹ್ಮ್ಮ್"
"ವ್ಹಾಟ್ ಯೂ ಡೂಯಿಂಗ್" ಅಂತ ಕೇಳಿದ 
"ಇಂಜಿನಿಯರಿಂಗ್, ಯೂ ?"
"ಹ್ಹ ಹ್ಹ, ಸೇಮ್ ಹೀಯರ್" ಎಂದು ನಕ್ಕಿದ್ದ.
"ವ್ಹಿಚ್ ಈಸ್ ಯುವರ್ ಮದರ್ ಟಂಗ್ ?" ಎಂದು ಮತ್ತೇ ಕೇಳಿದ.
"ಕನ್ನಡ, ಯುವರ್ಸ್ ??"
"ನಮ್ದು ಅದೇ"
"ಹೂ ಸೂಪರ್" ಎಂದೆ 
"ಸಿರಿಗನ್ನಡಂ ಗೆಲ್ಗೆ 
ಸಿರಿಗನ್ನಡಂ ಬಾಳ್ಗೆ, ಜೈ ವಾಟಾಳ್ ನಾಗರಾಜ್" ಅಂದ.
"ಹ್ಹ ಹ್ಹ, ನೀವು ಅವರ ಫಾನ್ ಆಹ್ ?"
"ಕನ್ನಡ ಪ್ರೀತ್ಸೊರೇಲ್ಲಾ ಅವ್ರ ಫಾನ್ಸ್, ಅವರಂತೋರು ಇರೋದ್ರಿಂದಾನೇ ಕನ್ನಡ ಇನ್ನೂ ಉಳಿದುಕೊಂಡಿರೋದು." ಎಂದನು
"ಹೌದು, ಅದು ನಿಜಾನೇ"
"ಹ್ಮ್ಮ್ಮ, ನಿಮ್ಗೆ ಸ್ಮಿತಾ ಗೊತ್ತಾ" ಅಂತ ಕೇಳಿದ.
"ಹು. ನನ್ನ ಚೈಲ್ಡಹುಡ ಫ್ರೇಂಡ್,ನಿಮಗೆ"
"ನಮಗೆ ರೂಮ್ಮೆಟ್"
"ವ್ಹಾಟ್ ?" 
"ಅಂದ್ರೆ, ಅವ್ರು ನಮ್ಮ ಕ್ಲಾಸ್ ರೂಮ್ ಹೇ, ಸೋ ರೂಮ್ಮೆಟ್"
"ಹ಼ ಹ಼ ಸೋ ಫನ್ನೀ"
"ಫನ್ನಿ ಅಲ್ಲಾರೀ, ಫಾಕ್ಟ್" 
"ಓಕೆ ಓಕೆ, ಮತ್ತೇ ?" 
"ಸ್ವಲ್ಪ ದಿನದಲ್ಲಿ ಫ಼ೇಸಬುಕ್ ಕ್ಲೋಸ್ ಮಾಡ್ತಾರಂತೆ ನಿಜಾನ ....?"  ಅಂತ ಹೇಳಿದ.
"ಗೊತ್ತಿಲ್ಲಾ, ಯಾರು ಹೇಳಿದ್ದು"
"ಯಾರೋ ಹೇಳಿದ್ರು"
"ನಂಗೊತ್ತಿಲ್ಲ" 
"ಸರಿ, ಹೋಗ್ಲಿ ನಿಮ್ಮ ಮೊಬೈಲ್ ನಂಬರ್ ಕೊಡಿ"
"ಯಾಕೇ....?"
ಫ಼ೇಸಬುಕ್ ಕ್ಲೋಸ್ ಆದ್ರೆ ಎಲ್ಲಿಗೆ ಮೆಸೆಜ್ ಮಾಡೋದು"
"ಕ್ಲೋಸ್ ಆದಾಗ ನೋಡೋಣ" 
"ಇವಾಗೇನೂ ನಂಬರ್ ಕೊಡ್ತಿರೋ.... ಇಲ್ವೋ ..?" 
"ಕೊಡಲ್ಲ ಅಂದ್ರೆ....?"
"ಕೊಡಲ್ಲ ಅಂದ್ರೆ ಅಳು ಬರುತ್ತೇ.."
"ಹೀಹೀಹೀ" ಅವನ ಮಾತು ಕೇಳಿ ನಗು ಬಂತು.
"ರೀ ಹಲ್ಲು ಬಿಟ್ಟಿದ್ದು ಸಾಕು ನಂಬರ್ ಕೊಡಿ"
ಸ್ವಲ್ಪ ಯೋಚ್ನೆ ಮಾಡೀ, "ಓಕೆ, ಮಿಸ್ ಯೂಸ್ ಮಾಡ್ಬಾರ್ದು" ಅಂತ ಕಂಡೀಶನ ಹಾಕಿದೆ.
"ಮಿಸ್ ಗೆ, ಪೆನ್ನೇ ಕೊಡಲ್ಲ, ಇನ್ನೂ ನಿಮ್ಮ ನಂಬರ್ ಕೋಡ್ತಿನಾ, ಡೋಂಟ್ ವೆರಿ ಮಿಸ್ ಯೂಸ್ ಮಾಡಲ್ಲ"
"ಹ್ಹ ಹ್ಹ, ಸರಿ ನಿಮ್ಮ ನಂಬರ್ ಕಳ್ಸಿ" 
"97385*****" ರಾಕೆಟ್ಗಿಂತ ಸ್ಪೀಡ್ ಆಗಿ ಅವನ ನಂಬರ್ ಬಂತು.
ಅವ್ನ ನಂಬರಿಗೆ ಕಾಲ್ ಮಾಡೀ ಚೆಕ್ ಮಾಡಿದೆ
"ಮಿಸ್ ಕಾಲ್ ಕೊಟ್ಟಿದ್ದು ನೀವಾ" ಎಂದು ಕೇಳಿದ.
"ಹು" ಅವನದೇ ನಂಬರ್ ಅಂತ ಕನ್ಫರ್ಮ ಆಯ್ತು, "ಸರಿ. ನಂಗೆ ಕೆಲ್ಸ ಇದೆ, ಬೈ" 
"ಓಕೇ, ಸೀ ಯೂ ಟೇಕ್ ಕೇರ್" ಅಂದ.

ನಾನು ಮುಖ ತೊಳೆದು, ರೇಕಾರ್ಡ ಬರಿಯೋಕೆ ಹೋದೆ.
ಮತ್ತೇ ನೈಟ್ ಮೆಸೇಜ್ ಮಾಡಿದ, ಸ್ವಲ್ಪ ಮಾತುಕತೆ ಆಯ್ತು.
ನಮ್ಮ ಅಪ್ಪ ಬುಸ್ಸೀನೇಸ್ ಮ್ಯಾನ್ ಎಂದು ಗೊತ್ತಾಗಿ... "ನಂಗೆ ಎಷ್ಟು ದುಡ್ಡು ಕೊಡ್ತೀರಾ ? ನಮ್ಮ ಅಪ್ಪಂಗೆ ಕಾರ್ ಕೊಡಿಸ್ತೀನಿ" ಅಂತ ತಮಾಷೆ ಮಾಡಿದ.
ಹೀಗೇ ಸ್ವಲ್ಪ ದಿನ ಆಯ್ತು, ಸ್ಮಿತಾಳಿಂದ ಇವನ ಬಗ್ಗೆ ಇನ್ನಷ್ಟು ವಿಚಾರ ತಿಳೀತು.
ಕೇಟ್ಟೋನೇನು ಅಲ್ಲ ಆದ್ರೆ ಸಿಕ್ಕಾಪಟ್ಟೆ ತರ್ಲೆ,ಪೋಲಿ ಅಂತ ಗೊತ್ತಾಯ್ತು.
ಅವ್ರ ಅಪ್ಪ ಕಾರ್ ಡ್ರೈವರ್ ಅಂತ ಮಾತ್ರ ಗೊತ್ತು, ಫಾಮಿಲಿ ಬಗ್ಗೆ ಹೆಚ್ಚಿಗೇ ಏನೂ ಗೊತ್ತಿಲ್ಲ ಅಂದ್ಲು ಸ್ಮಿತಾ.

ದಿನಾ ಮೆಸೇಜ್ ಮಾಡ್ತಿದ್ದೊ....
ಅವನು ಮಾತಾಡೋದು ನಂಗೂ ಇಷ್ಟ ಆಗ್ತಿತ್ತು.
ಆಮೇಲೆ ಒಂದ್ಸಲ ನಿಮ್ಮ ವಾಯ್ಸ ಕೇಳ್ಬೇಕು ಅಂದ...
ಸರಿ. ಒಂದ್ಸಲ ಅಂತ ಶುರು ಆಗಿ ಹೆಚ್ಚೂ ಕಮ್ಮೀ ಬೆಳಿಗ್ಗೆಯಿಂದ, ರಾತ್ರಿ ಮಲಗೀಕೋಳ್ಳೋವರಗೂ ಮಾತಾಡ್ತಿದ್ದೋ.
ಬರೀ ಮಾತು ಮಾತು, ಮಾತಿಗೂ ಮೌನ ಬೇಕೆನಿಸುವಷ್ಟು ಮಾತಾಡಿದೋ.
ಅವನೇಷ್ಟು ತರ್ಲೇಯೋ, ಅಷ್ಟೇ ಕೇರಿಂಗ್  ಪರ್ಸನ ಆಗಿದ್ದ.
ಅವನ ಹತ್ರ ದುಡ್ಡಿಲ್ಲ ಅನ್ನೋದು ಬಿಟ್ಟರೇ, ಬೇರೇನೂ ಕಮ್ಮೀ ಇಲ್ಲ ಅನ್ನೋ ಹಾಗೇ ಇದ್ದ.

ತಮಾಷೆಯ ಮಾತುಗಳು, ಪ್ರೀತಿಯ ಮಾತುಗಳಾಗಿ ಬದಲಾಗುತ್ತಾ ಇತ್ತು.
ನಂಗೂ ಗೊತ್ತಾಯ್ತು, ಅವನು ನನ್ನ ಲವ್ ಮಾಡ್ತ ಇದಾನೆ ಅಂತ! ಯಾಕಂದ್ರೆ ನಾನಾಗಲೇ ಅವನಿಗೆ ಸೋತಿದ್ದೆ. ಬಟ್ ಹೇಳ್ಕೋತಿರಲಿಲ್ಲ.
ಕಾರಣಗಳು ಹಲವು ಇದ್ದವು.
ಇನ್ನೂ ಸ್ವಲ್ಪ ದಿನ ಆಗ್ಲಿ ಅಂತ.
ಅಪ್ಪನಿಗೆ ಬಡವ್ರು ಕಂಡ್ರೆ ಆಗ್ತಿರ್ಲಿಲ್ಲ, ನಾವು ಹೈ ಕ್ಲಾಸ್ ಅವ್ರು ಲೋ ಕ್ಲಾಸ್ ಅಂತಿದ್ರು.
ಎಲ್ಲದಿಕ್ಕಿಂತ ಹೆಚ್ಚಾಗಿ ಅಪ್ಪಂಗೆ ಲವ್ ಅಂದ್ರೆ ಕೆಟ್ಟ ಕೋಪ ಬರೋದು.

ಪ್ರೀತಮ್ ಇನ್ಡೈರೇಕ್ಟ ಆಗೀ ಸುಮಾರು ಸಲ ಹೇಳಿದ್ದ, ಫೈನಲೀ ಒಂದು ದಿನ ಕಾಲ್ ಮಾಡೀ.
"ಹೆಲ್ಲೋ ಸೌ" ಅಂದ.
"ಹಾ ಹೇಳು"
"ಎಲ್ಲಿದ್ದಿಯಾ ?"
"ಮನೇಲ್ಲೀದೀನೀ, ಯಾಕೇ ?"
"ಯಾಕೂ ಇಲ್ಲಾ, ಏನೋ ಹೇಳ್ಬೇಕಿತ್ತು"
"ಹಾ... ಹೇಳು"
"ಹೇಳ್ತೀನಿ, ಕೋಪ ಮಾಡ್ಕೋಬಾರ್ದು"
"ಇಲ್ಲಾ, ಏನು ಕೋಪ ತರಿಸೋ ಅಂತ ವಿಚಾರ ?"
"ಅದು......, ಏನೂ ಇಲ್ಲಾ, ನಾನ್ ನಾಳೆ ಫೋನ್ ಮಾಡ್ತೀನಿ"
"ಸುಮ್ನೆ ಅದೇನು ಅಂತ ಹೇಳಿದ್ರೆ ಸರಿ ಇಲ್ಲಾ, ಇನ್ಯಾವತ್ತೂ ಕಾಲ್ ಮಾಡ್ಬೇಡ." 
"ಅದೂ ಸೌಮ್ಯಾ.... ನಾನ್ ನಿನ್ನ ತುಂಬಾ ಲವ್ ಮಾಡ್ತಾ ಇದೀನಿ, ಹೇಳುದ್ರೆ ಎಲ್ಲಿ ಬಿಟ್ಟು ಹೋಗ್ತೀಯೋ ಅಂತ ಇಷ್ಟು ದಿನ ಹೇಳ್ಲಿಲ್ಲ. ಸಾಯೋವರಗೂ ನಿನ್ನ ಕಣ್ಣಲಿ ಕಣ್ಣಿಟ್ಟು ನೋಡ್ಕೋತೀನಿ, ನನ್ನ ಮದುವೆ ಆಗ್ತೀಯಾ....?" ಎಂದು ಒಂದೇ ಉಸಿರಿನಲ್ಲಿ ಹೇಳಿದ.
ನಿಜಕ್ಕೂ ನಂಗೇ ಅವತ್ತು ಮಾತು ಬರ್ಲಿಲ್ಲ, ಮಾತು ಕಲಿತಿದ್ದೇ ಮರೆತು ಹೋಯ್ತು. ಇಷ್ಟು ದಿನ ಬಾಯಿ ಬಿಟ್ರೇ ತರ್ಲೆ ಮಾಡ್ತಿದ್ದೋನು. ಇಷ್ಟೊಂದು ಎಮೋಶನಲ್ ಅಂತ ಗೊತ್ತಿರ್ಲಿಲ್ಲ.
"ನಂಗೆ ಸ್ವಲ್ಪ ಟೈಮ್ ಬೇಕು" ಎಂದು ಫೋನಿಟ್ಟೆ.

ಅವನ ಪರಿಚಯ ಆಗಿ ಎರಡು ತಿಂಗಳು ಆಗಿತ್ತು. 
ಇಷ್ಟು ದಿನ ವಟ ವಟ ಅಂತಿದ್ದೋನು. ಇಷ್ಟು ಸೀರೀಯಸ್ ಆಗಿ ಲವ್ ಮಾಡ್ತಿದಾನ ಅಂತ ಯೋಚ್ನೆ ಬಂತು. 
ಅವತ್ತು ನೈಟ್ ಅವನು ಮೆಸೇಜ್ ಕೂಡ ಮಾಡ್ಲಿಲ್ಲ. 
ನನ್ನೊಳಗೆ ಹೇಳಲಾರದಷ್ಟು ತಳಮಳ. ದಿನಾ ಪೂರ್ತಿ ಆನ್ಲೈನ್ನಲ್ಲಿದ್ದು ಮೆಸೆಜ್ ಮಾಡ್ತಾನೆ ಅಂತ ಕಾಯ್ತಿದ್ದೆ. ಆದರೆ ಅವನು ಎರಡು ದಿನ ಆನ್ಲೈನ್ಗೆ ಬರ್ಲಿಲ್ಲ. ನನ್ನ ಲೂಸ್ ಮಾಡೀ ಇವನು ಆರಾಮಾಗಿದ್ದಾನೆ ಅನಿಸ್ತು., ಏನಾದ್ರೂ ಆಗ್ಲಿ ಅಂತ ಪ್ರೀತಮ್ಗೆ ಕಾಲ್ ಮಾಡಿದೆ.
"ಹೇಳು ಸೌ" 
"ಯಾಕೇ, ಆನ್ಲೈನ್ಗೆ ಬಂದಿಲ್ಲ" 
"ಯಾಕೋ, ಏನ್ ಕೆಲ್ಸ ಮಾಡೋದೀಕ್ಕು ಮನಸಿಲ್ಲ" ಅಂತ ನಿರ್ಜೀವ ಧ್ವನಿಯಲ್ಲೀ ಹೇಳಿದ.
"ನೀನ್ ಹೀಗೆ ಇರಬೇಡ, ಮೊದ್ಲು ತರ ಮಾತಾಡೂ" ನನಗೆ ಅವನು ಹಾಗೀರೋದು ಇಷ್ಟ ಇರಲಿಲ್ಲ.
"ಸರಿ. ನೋಡೋಣ" ಅಂದ
ನನ್ನ ಎದೆ ಬಡಿತ ಸ್ಥಿಮಿತಕ್ಕೆ ಸಿಗದೇ "ನನ್ನ ಚೆನ್ನಾಗಿ ನೋಡ್ಕೋತಿಯ ?" ಅಂದುಬಿಟ್ಟೆ.
"ಹೂ... ರಾಣಿ ತರ ನೋಡ್ಕೋತೀನಿ, ನಿನ್ನ ಕಣ್ಣಿಂದ ಒಂದು ಹನಿ ನೀರು ಬರೀಸಲ್ಲ, ಹಾಗೇನಾದ್ರೂ ಬಂದ್ರೆ ಅವತ್ತು ನಾನ್ ಸತ್ತೋಗೀದೀನೀ ಅಂತ ಅರ್ಥ" ಎಂದು ಧ್ರಡವಾಗಿ ಹೇಳಿದ.
"ಹಾಗೆಲ್ಲಾ ಲೂಸ್ ಲೂಸ್ ಆಗೀ ಮಾತಾಡ್ಬೇಡ"
"ಸರಿ. ಐ ಲವ್ ಯು ಸೌಮ್ಯ" ಅಂತ ಖುಷಿಲೀ ಹೇಳಿದ.
"ಆನ್ಲೈನ್ ಬಾ"
"ಲವ್ ಯೂ ಹೇಳಲ್ವಾ" ಅಂತ ಹುಸಿ ಮುನಿಸಿನಿಂದ ಕೇಳಿದ.
"ಬೆಳಿಗ್ಗೆ 8ಗಂಟೆಗೇ ನಮ್ಮ ಮನೆ ಹತ್ರ ಇರೋ ಬಸ್ ಸ್ಟಾಪ್ಗೆ  ಬಾ" ಎಂದು, ಅವನು ಉತ್ತರ ನೀಡುವಷ್ಟರಲ್ಲೀ ಕಾಲ್ ಕಟ್ ಮಾಡಿದೆ.
ಮನೆಯಲ್ಲಿ ಕಾರುಗಳು ಇದ್ದರೂ, ಕಾಲೇಜ್ಗೆ ಬಸ್ಸಿನಲ್ಲೇ ಹೋಗುತ್ತಿದ್ದೆ.

ಬೆಳಿಗ್ಗೆ 7.30ಕ್ಕೆ ಹೋಗಿ ಬಸ್ ಸ್ಟಾಪಲ್ಲಿ ಕಾಯ್ತಿದ್ದೆ.
ಮಳೆಗಾಲ ಬೇರೇ ಸೋನೆ ಮಳೆ ಬಿಟ್ಟು ಬಿಟ್ಟು ಬರ್ತಿತ್ತು.
8.05ಕ್ಕೇ ಯಾವುದೋ ಲಡಕಾಸಿ ಬೈಕಲ್ಲಿ ಬಂದ..
ಆ ಬೈಕೊ ಊರಿಗೆಲ್ಲಾ ಕೇಳಿಸೊ ಹಾಗೇ ಸೌಂಡ್ ಮಾಡ್ತಿತ್ತು.
ದೂರದಿಂದಲೇ ಅವನನ್ನು ನೋಡಿದೆ, ಹೆಚ್ಚೂ ಕಮ್ಮೀ ಫೋಟೋಲೀ ಇರೋ ಹಾಗೇ ಇದ್ದ..
ಅವನು ನನ್ನನ್ನು ನೋಡಿ, ಹಲ್ಲು ಓಪೆನ್ ಮಾಡದೆ ನಕ್ಕು, ನಾನೇ ಅನ್ನೋ ರೀತಿ ಸಿಗ್ನಲ್ ಕೊಟ್ಟ. ನಾನು ಕೂಡ ಅವನನ್ನು ನೋಡಿ ಮುಗುಳ್ನಗೆ ಬೀರಿದೆ.
ಹತ್ತಿರ ಬಂದು "ಹಾಯ್" ಅಂದ.
ನಾನು ಮರುಮಾತಾಡದೇ, ಬೈಕ್  ಮೇಲೆ ಕೂತು "ನಡಿ" ಎಂದೆ.
ಅವನು ಸ್ವಲ್ಪ ತಬ್ಬಿಬ್ಬಾಗಿ "ಎಲ್ಲಿಗೇ ?" ಅಂದ
"ಕಾಫ಼ಿ ಡೇಗೇ"
"ಅಯ್ಯೋ ನಾನ್ ಪರ್ಸ್ ಮನೇಲೇ ಬಿಟ್ಟು ಬಂದೆ" ಎಂದು ಪ್ಯಾಂಟಿನ ಹಿಂದುಗಡೇ ಜೇಬಿಗೇ ಕೈ ಹಾಕಿದ.
"ಈ ಡವ್ವೇಲ್ಲಾ ಬೇಡ, ನಾನೇ ಬಿಲ್ ಪೇ ಮಾಡ್ತೀನಿ, ನಡಿ".

ತುಂತುರು ಮಳೆ ಶುರು ಆಯ್ತು,
ಆ ಕ್ಲೈಮೇಟ್ಗೋ, ಗಾಡಿ ಸೌಂಡಿಗೋ, ಮಳೆಗೋ, ಭೌತಿಕ ಜಗತ್ತನ್ನು ಮರೆತು, ಅವನ ಸೊಂಟದ ಸುತ್ತ ಕೈ ಬಳಸಿ ಬೆನ್ನಿನ ಮೇಲೆ ತಲೆಯಿಟ್ಟೆ, ನಿಜಕ್ಕೂ ಆಕಾಶದಲ್ಲಿ ಹಾರಾಡ್ತಾ ಇದೀನಿ ಅನಿಸ್ತು. ನಾನ್ ಎಲ್ಲಿದ್ದೆ ಅನ್ನೋದೇ ಮರೆತಿದ್ದೆ.
"ಕಾಫ಼ಿ ಡೇ ಬಂತು" ಅಂದಾಗಲೇ ನನ್ನ ಲೋಕದಿಂದ ಹೊರಬಂದೆ.
"ಹ್ಮ್ಮ್ಮ" ಎಂದು ಕೆಳಗಿಳಿದು, ಅವನ ಮುಖ ನೋಡಲು ನಾಚಿಕೆ ಆಯ್ತು, ಆದರೂ ತಲೆಯೆತ್ತಿ ನೋಡಿದೆ ಅವನು ನಗುತಿದ್ದ.

ಒಳಗೆ ಹೋಗಿ ಕಾರ್ನರ್ ಟೇಬಲ್ನಲ್ಲಿ ಕುತೋ.
ಪ್ರೀತಮ್ ಮೆನು ನೋಡ್ತಿದ್ದ, ನಾನ್ ಅವ್ನ ನೋಡ್ತಿದ್ದೆ.
ವೇಟರ ಬಂದು ನಿಂತ.
"ನಂಗೇನು ಬೇಡ" ಅಂತ ಪ್ರೀತಮ್ ಮೆನು ಪಕ್ಕಕ್ಕೆ ಇಟ್ಟ.
"ಒನ್ ಪೈನಾಪಲ್ ಪೇಸ್ಟ್ರಿ"
"ಮೆಡಮ್ ಬೇರೇ ಏನಾದ್ರೂ, ಸಾಫ್ಟ್ ಡ್ರಿಂಕ್ಸ" ಎಂದು ವೇಟರ್ ಕೇಳಿದ.
"ಹೇಳ್ತೀನಿ".
ವೇಟರ್ ಕೇಕ್ ತಂದು ಇಟ್ಟ.
"ಹಾಗೇ ಒಂದು ಕೋಲ್ಡ್ ಕಾಫ಼ಿ"
"ಓಕೆ ಮೆಡಮ್"ಎಂದು ವೇಟರ್ ಹೊರಟ.
ನಾನ್ ಸ್ವಲ್ಪ ಕೇಕ್ ತಿಂದು ಸುಮ್ನೆ ಆದೇ,
ಅವನು "ಯಾಕೇ, ತಿನ್ನಿ" ಅಂದ.
"ತಿನ್ನಿಸು"
ಚೂರು ಮುಜುಗರ ಪಟ್ಟಿಕೊಂಡು, ನಂಗೆ ಕೇಕ್ ತಿನ್ನಿಸ್ತೀದ್ದ, ಬೇಕೂ ಅಂತಲೇ ಬೆರಳು ಕಚ್ಚಿದೆ.
ಅವನಿಗೆ ಸ್ವಲ್ಪ ನೋವಾಗಿ ಕೈ ಬೆರಳು ಹಿಂದಕ್ಕೇ ಎಳೆದುಕೊಂಡ, ಕೈ ಬೆರಳು ಕೆಂಪಾಗಿತ್ತು. ಅವನ ಕೈಯನ್ನು ನನ್ನ ಕೈಯಲಿಟ್ಟು, ಅವನ ಬೆರಳಿಗೆ ಮುತ್ತುಕೊಟ್ಟೆ. ಅವನು ನನ್ನ ಕಣ್ಣನ್ನೇ ನೋಡ್ತಿದ್ದ, ನಾನು ನೋಡಿದೆ ಒಂಥರಾ ಆಯ್ತು. ಹಾಗೇ ಮುಖ ಹತ್ತಿರ ತಂದು, ತುಟಿಗೆ ತುಟಿ ಇನ್ನೇನು ಟಚ್ ಆಗ್ಬೇಕು ಅನ್ನೋಷ್ಟರಲ್ಲೀ, "ಮೆಡಮ್ ಯುವರ್ ಆರ್ಡರ್" ಎಂದು ವೇಟರ್ ಕೋಲ್ಡ್ ಕಾಫೀ ಇಟ್ಟ.
ಅವತ್ತು ಫರ್ಸ್ಟ ಟೈಮ್ ಇನ್ನಮೇಲೇ ಕೋಲ್ಡ್ ಕಾಫೀನೇ ಕುಡೀಬಾರ್ದು ಅನಿಸ್ತು.
ಇಬ್ಬರು ಖುಷಿ,ನಾಚಿಕೇಯಿಂದ ಮಾತಾಡಿ ಹೊರಬಂದೆವು.
"ನನ್ನ ಫ್ರೇಂಡ್ಗೇ ಬೈಕ್ ಕೊಡಬೇಕು ಟೈಮ್ ಆಯ್ತು" ಎಂದು ಕಾಲೇಜ್ಗೇ ಡ್ರಾಪ್ ಮಾಡೀ ಹೊರಟ.

ಅವತ್ತು ರಾತ್ರಿ ನಂಗೆ ನೆನಪಿದೆ, ನನ್ನ ಜೀವನದ ಅಂತ್ಯಂತ ಖುಷಿಯ ದಿನ ಅದು, ನಾವು ಅವತ್ತು ತುಂಬಾ ಮಾತಾಡಿದೋ. 
ಎಷ್ಟು ಅಂದ್ರೆ ನಮ್ಮಿಬ್ಬರ ಇಷ್ಟ, ಕಷ್ಟ, ಮದುವೆ, ಮಕ್ಕಳು, ಹುಟ್ಟೋ ಮಗುಗೆ ಹೆಸ್ರು ಕೂಡ ಇಟ್ಟೊ.
ಮಧ್ಯರಾತ್ರಿ 3ಗಂಟೇ ಆದ್ರೂ ಮಾತಾಡ್ತ ಇದ್ದೀವಿ. ನಾನ್ ಹಾಗೇ ನಿದ್ರೆ ಮಾಡಿಬಿಟ್ಟೆ.

"ಸೌಮ್ಯಾssssss" ಎಂದು ಅಮ್ಮ ಕಿಟ್ಟಾರನೇ ಕೂಗಿದ ನೆನಪು. ಏನಾಯ್ತು ಎಂದು ರೂಮಿಗೆ ಹೋದೆ, ಅಲ್ಲಿ ಅಮ್ಮ ಅಪ್ಪನ ಎದೆಮೇಲೆ ಒರಗಿ ಗೋಳೋ ಎಂದು ಅಳುತಿದ್ದರು.
"ಅಪ್ಪ ಹೋಗ್ಬಿಟ್ರು" ಎಂದು ಅಮ್ಮ ಗೋಳಾಡುತ್ತಿದ್ದಳು.
ಏನು ಮಾಡಬೇಕು ಎಂದು ಗೊತ್ತಾಗಲಿಲ್ಲ.
ಪ್ರೀತಮ್ಗೇ ಫೋನ್ ಮಾಡಿದೆ, ಅವನು ಬರುಷ್ಟರಲ್ಲೀ. ಒಂದಷ್ಟು ಸಂಬಂಧಿಕರು 
ಬಂದರು. ನಾನು ಅಳು ನಿಲ್ಲಿಸೋವರೆಗೂ ಪ್ರೀತಮ್ ನನ್ನನ್ನು ಸಂತೈಸುತ್ತಲೇ ಇದ್ದ..

ಅಪ್ಪನ ಸಂಸ್ಕಾರ ಮುಗಿಸಿಕೊಂಡು ಮನೆಗೆ ಬಂದೆ.
ಮೌನ, ಮೌನ, ಎಲ್ಲೆಲ್ಲೂ ಸಶ್ಮಾನ ಮೌನ, ಸಂಬಂಧಿಕರು ಅಮ್ಮನಿಗೆ ಸಾಂತ್ವನ ಹೇಳುತಿದ್ದರು.
ಆಳುಗಳು,ಸ್ನೇಹಿತರು,ಸಂಬಂಧಿಕರು ಎಲ್ಲರೂ ಕೇವಲ ವಸ್ತುಗಳಾಗೀ ಕಂಡರು. ಇಡೀ ಪ್ರಪಂಚದಲ್ಲಿ  ನನಗೋಸ್ಕರ ಪ್ರೀತಮ್ ಒಬ್ಬನೇ ಇರೋದು ಅನಿಸ್ತು. ಪ್ರೀತಮ್ಗೆ ಕಾಲ್ ಮಾಡಿದೆ.
ಒಂದೆರಡು ದಿನಗಳಲ್ಲಿ ಅವನಿಂದ ನಾನು ಮತ್ತೇ ನಗೋಕೇ ಶುರು ಮಾಡಿದೆ.
ಅವನು ಒಂದು ನಿಮಿಷ ಮಾತಾಡಿಲ್ಲ ಅಂದ್ರು ಏನೋ ಬೇಜಾರು.
ಅವನು ಯಾವಗ್ಲೂ ಹೀಗೇ ನನ್ನ ಜೊತೆ ಇರಬೇಕು ಅನಿಸೋದು.
ನಾಳೆ ಮನೇಲೀ ಪೇಂಟಿಂಗ್ ಕೆಲ್ಸ ಇರೋದ್ರಿಂದ ಬೇಗ ಮಲಗಿಕೊಂಡೆ.

ಬೆಳಿಗ್ಗೇನೇ ಎದ್ದು ಅಪ್ಪನ ರೂಮಿಗೆ ಹೋಗಿ ಮುಖ್ಯವಾದ ಫೈಲುಗಳನ್ನ ಎತ್ತೀಡಬೇಕಾದ್ರೇ, ಒಂದು ಲೇಟರ್ ಸಿಕ್ತು. 
ಏನು ಅಂತ ತೆಗೆದು ನೋಡಿದಾಗ ದೊಡ್ಡ ಆಘಾತವೇ ಕಾದಿತ್ತು.
ಅದೇನು ಅಂತ ಅಪ್ಪನ ಮಾತಲ್ಲೇ ಕೇಳಿ.

"ಮಗಳೇ ಸೌಮ್ಯ.,
ನಿನ್ನ ಇಷ್ಟು ದಿನ ಚೆನ್ನಾಗಿ ನೋಡಿಕೊಂಡಿದ್ದೀನೀ ಅಂತ ಭಾವಿಸಿದ್ದಿನಿ. ಒಬ್ಬಳೇ ಮಗಳು ಅಂತ ನೀನು ಕೇಳಿದಕ್ಕೇಲ್ಲಾ ಇಲ್ಲಾ ಅಂದಿಲ್ಲ. ಆದರೆ ನೀನು ನನಗೆ ಮೋಸ ಮಾಡಿದೆ.
ಅವತ್ತು ಬೆಳಿಗ್ಗೆ ನೀನು ಒಬ್ಬ ಹುಡುಗನನ್ನು ತಬ್ಬಿಕೊಂಡು ಬೈಕಲ್ಲಿ ಹೋಗುತ್ತಿದ್ದೆ. ನಾನು ನಿಮ್ಮನ್ನ ಹಿಂಬಾಲಿಸಿ ಬಂದೆ. ನೀವು ಕಾಫೀ ಡೇಗೆ ಹೋಗಿ, ಎಲ್ಲರೂ ಮುಂದೇ ಥೂ ಅಸಹ್ಯ. ಅದು ನನ್ನ ಕಾರ್ ಡ್ರೈವರ್ ಮಗನ ಜೊತೆ. ನನ್ನೆದೆಗೆ ಆವಾಗ್ಲೇ ಬೆಂಕಿ ಬಿದ್ದಂಗೇ ಆಯ್ತು. ಸೌಮ್ಯ ನಿನ್ನ ಹತ್ರ ಒಂದು ಮಾತು ಕೇಳ್ತೀನಿ, ದಯವಿಟ್ಟು ನಾನ್ ಸತ್ತೋದ್ರೂ ನೆಡಿಸಿಕೊಡ್ತೀಯಾ.. ಆ ಡ್ರೈವರ್ ಮಗನನ್ನು ಬಿಟ್ಟು, ನಿಮ್ಮ ಅಮ್ಮ ತೋರಿಸಿದ ನಮ್ಮ ಜಾತಿಯ, ನಮ್ಮ ಅಂತಸ್ತಿಗೆ ತಕ್ಕನಾದ ಹುಡುಗನ್ನ ಮದುವೆಯಾಗು. ಇದು ನಿಮ್ಮ ಅಪ್ಪನ ಕೊನೆಯಾಸೆ, ನಮ್ಮ ಮನೆತನದ ಮರ್ಯಾದೇ ಉಳಿಸು.

                                                ಇಂತಿ,
                                       ನಿನ್ನ ಪ್ರೀತಿಯ ಅಪ್ಪ ".

ಓದಿ ಮುಗಿಸಿದ ಮೇಲೆ ಎದೆ ಬಡಿತ ನಿಂತಂತೇ ಅನಿಸಿತು. ಏನಾಗ್ತಿದೆ ಎಂದು ಗೊತ್ತಾಗಲಿಲ್ಲ.
ಪತ್ರ ಹಿಡಿದ ಕೈಗಳು ತರ ತರ ನಡುಗುತಿವೇ.
ನಾಲಿಗೆ ಸೆಟೆದಂತೆ ಆಗಿತ್ತು.
ಮೌನ ನನ್ನನು ಆವರಿಸಿತು, ಮಾತು ಸಾಕಾಗಿತ್ತು.
ಏನು ಮಾಡುದಕ್ಕೂ ತಲೆ ಓಡುತಿಲ್ಲ.
ಮನೆತನದ  ಮರ್ಯಾದೇಗೋಸ್ಕರ ಬೇರೊಬ್ಬನನ್ನು ಮದುವೆಯಾಗಲ, ಇಲ್ಲಾ ನನಗೋಸ್ಕರ ಪ್ರಾಣ ಕೊಡಲು ಸಿದ್ಧವಾಗಿರೋ ಹುಡುಗನ ಕೈ ಹಿಡಿಯಲ ?.
ಪ್ರೀತಮ್ ಕೈ ಹಿಡಿದರೆ ಅಪ್ಪನ ಕೊನೆಯಾಸೆ ದಿಕ್ಕರಿಸಿದಂತೇ, ಬೇರೊಬ್ಬನನ್ನು ಮದುವೆಯಾದರೆ 
ಪ್ರೀತಿಸಿದ ಹುಡುಗನಿಗೆ ಮೋಸ ಮಾಡಿದಂತೇ.
ಎಲ್ಲಾ ನನ್ನಿಂದ, ನಾನೇ ಇಲ್ಲಾ ಅಂದ್ರೆ. ಹೌದು ನಾನು ಸತ್ತರೇ ಅಪ್ಪ, ಪ್ರೀತಮ್ ಇಬ್ಬರಿಗೂ ಮೋಸ ಮಾಡಿದಂಗೆ ಆಗಲ್ಲ, ಮನೆತನದ ಮರ್ಯಾದೇ ಉಳಿಯುತ್ತೆ, ಎಲ್ಲ ಸರಿ ಹೋಗುತ್ತೆ.

ಅಷ್ಟರಲ್ಲೀ ಪ್ರೀತಮ್ ಫೋನ್ ಮಾಡಿದ.
ಎಲ್ಲಾ ವಿಷ್ಯ ಅವನಿಗೆ ತಿಳಿಸಿದೆ.
"ಸೌಮ್ಯ, ನಿಮ್ಮ ಅಪ್ಪನ ಆಸೆ ಈಡೇರಿಸು, ನಮ್ಮ ಪ್ರೀತಿಗಿಂತ, ನಿಮ್ಮ ಅಪ್ಪನ 20ವರ್ಷದ ಕಾಳಜಿ, ಆಸೆ, ಮನೆತನದ ಮರ್ಯಾದೇ ಮುಖ್ಯ, ಇಷ್ಟು ಹೇಳಿದ್ರು ನೀನು ಕೇಳಲ್ಲ ಅಂದ್ರೆ ನಾನು ನಿನ್ನ ಜೊತೆ ಸಾಯೋದೀಕ್ಕೇ ರೆಡಿ" ಅಂತ ಕಣ್ಣೀರಿಟ್ಟ.
"ಯಾರೂ ಸಾಯೋದು ಬೇಡ, ನಮ್ಮ ಅಪ್ಪನೇ ಹುಡುಕಿದರೂ ನಿನ್ನಷ್ಟು ಪ್ರೀತಿ ಮಾಡೋ ಹುಡ್ಗ ಸಿಗ್ತಿರಲಿಲ್ಲ, ನಾವು ಈ ಆಸ್ತಿ,ಊರು ಮಾರ್ಯದೆ, ಎಲ್ಲಾ ಬಿಟ್ಟು ದೂರ ಹೋಗಿ ಇರೋಣ, ಓಡಿಸಿಕೊಂಡು ಹೋಗ್ತೀನಿ ಬರ್ತೀಯಾ ?".
"ಹ್ಮ್ಮ್ " ಎಂದಷ್ಟೇ ಹೇಳಿದ.
"ಸರಿ, ನಾಳೆ ಬೆಳಿಗ್ಗೆ 8ಗಂಟೆಗೇ ನಮ್ಮ ಮನೆ ಹತ್ರ ಇರೋ ಬಸ್ ಸ್ಟಾಪಿಗೆ ಬಾ ".
ಪ್ರೀತಮ್ ಏನೂ ಹೇಳದೇ ಪೋನಿಟ್ಟ.

ಬೆಳಿಗ್ಗೆ 7.20ಕ್ಕೇ ಹೋಗಿ ಬಸ್ ಸ್ಟಾಪಿನಲ್ಲಿ ಕಾಯ್ತಿದ್ದೆ. 8ಗಂಟೇ ಆದ್ರೂ ಪ್ರೀತಮ್ ಬರಲಿಲ್ಲ.
ಎದೆ ಢವ ಢವ ಅಂತ ಬಡಿದುಕೊಳ್ಳುತ್ತಿತ್ತು. 8.05ಕ್ಕೇ ಅದೇ ಗುಜುರೀ ಬೈಕಲ್ಲಿ ಬಂದು "ಸಾರಿ" ಅಂದ.
"ನಾವು ಓಡಿ ಹೋಗೋದು ಊರೋರೀಗೇಲ್ಲಾ ಗೊತ್ತಾಗ್ಲಿ ಅಂತ ಈ ಬೈಕ್ ತಂದ".
"ಹ್ಹ  ಹ್ಹ ಹೌದೌದು" ಅಂತ ಹಲ್ಲು ಬಿಟ್ಟ.
"ಸರಿ ಸರಿ ನಡಿ" ಎಂದು ಬೈಕ್ ಹತ್ತಿದೆ.

ಮತ್ತೇ ಸೋನೆ ಮಳೆ ಶುರು ಆಯ್ತು.
ಆ ಮಳೇಗೋ,ಗಾಡಿ ಸೌಂಡಿಗೋ,ಅವನ ಪ್ರೀತಿಗೋ ಸೋತಿ, ಅವನನ್ನು ತಬ್ಬಿ ಹಿಡಿದೆ, ನಿಜಕ್ಕೂ ನಾನು ಆಕಾಶದಲ್ಲಿ ತೇಲುತ್ತಾಯಿದ್ದೇ.
"ಐ ಲವ್ ಯೂ ಪ್ರೀತಮ್".

                                           *****

14-05-2016
©ಮಹೇಶ್ ಪುಲಿಕೇಶಿ

Comments

Popular Posts