ಕಾಣೆಯಾದವರು: ಪ್ರೀತಿಯಲ್ಲಿ

-1-

"ಈ ವರ್ಷ ಕಾಲೇಜಿಂದ ಟ್ರಿಪ್ಗೆ ಎಲ್ಲಿಗೇ ಹೋಗೋದು ?" ಎಂಬ ಚರ್ಚೆಯನ್ನು ಹುಟ್ಟು ಹಾಕಿದ ಶಶಿಕಿರಣ.
"ಟ್ರಿಪ್ಪಾ.....!?" ಎಂದು ಆಶ್ಚರ್ಯದಿಂದ ಕೇಳಿದಳು ಮಂಜುಳ.
"ಇಲ್ಲಾ.., ಎಲೆಕ್ಷನ್ ಕ್ಯಾಂಪೇನಿಂಗ್ ಹೋಗ್ತೀದ್ದೀವೀ, ಬರ್ತೀಯಾ ?" ಎಂದು ಛೇಡಿಸಿದ.
"ಲೋ ಅವ್ಳ ವಿಷ್ಯ ಬಿಡೋ...., ಎಲ್ಲಿಗೇ ಹೋಗ್ಬೇಕು ಯೋಚ್ನೆ ಮಾಡು" ಎಂದು ಸುಹಾಸ್ ಹೇಳಿದ.
"ಇನ್ನೆಲ್ಲಿಗೆ ನಮ್ಮ ತವರು ಮನೆ ಗೋವಾಗೆ.." ಎಂದು ಸಂಭ್ರಮದಿಂದ ಹೇಳಿದನು ಶಶಿಕಿರಣ.
ಗೋವಾ ಅಂತ ಕೇಳುತಿದ್ದಂತೇ ಒಂದಷ್ಟು ಜನ ಅತಿ ಉತ್ಸಾಹ ತೋರಿದರು. 
ಮನಸಲ್ಲೇ ಯಾರ್ಯಾರು ಯಾರಿಗೆ ಕಾಳು ಹಾಕಬಹುದು. ಯಾರು ಫ್ರೀ ಇದ್ದಾರೆ ?
ಯಾರನ್ನ ಪಾರ್ಟ್ನರ್ ಮಾಡ್ಕೊಂಡ್ರೆ ಚಂದ ?
ಯಾವ ಹುಡುಗಿ ಸಲುಗೆಯಿಂದ ಇರುತ್ತಾಳೆ ಎಂದು ಲೆಕ್ಕಾಚಾರ ಹಾಕತೊಡಗಿದರು.
ಒಂದಿಬ್ಬರು ಹುಡುಗಿಯರು "ಮನೇಯಲ್ಲೀ ಗೋವಾ ಅಂದ್ರೆ ಕಳಿಸೋಲ್ಲ" ಎಂದು ತಗಾದೆ ತೆಗದರು, ಇಂಜಿನಿಯರಿಂಗ್ನ ಕೊನೆ ವರ್ಷ ಆಗಿರುವುದರಿಂದ ಹಾಗೂ ಗೋವಾಕ್ಕೆ ಬಹುಮತ ಸಿಕ್ಕಿದ್ದರಿಂದ ಗೋವಾಕ್ಕೆ ಹೋಗಲು ಪೂರ್ವ ಸಿದ್ಧತೆಗಳೇನು ಎಂದು ಯೋಚಿಸಲು ಶುರು ಮಾಡಿದರು.

ಮಧ್ಯದಲ್ಲಿ ಎದ್ದ ಧೀರಜ್,
"ನೋಡ್ರಪ್ಪಾ...ಎಲ್ಲಿಗಾದ್ರೂ ಕರ್ಕೋಂಡು ಹೋಗಿ. ಆದ್ರೆ ಶೃತಿ ಪಕ್ಕ ಯಾರಾದ್ರೂ ಕೂತ್ಕೋಬೇಕಲ್ಲ ಆವಾಗಿರೋದು ನಿಮ್ಗೆ" ಎಂದನು.
"ಹೇ ಆ ಬಿಳಿ ಗೂಬೆ ಪಕ್ಕ ಯಾರು ಕೂರ್ತಾರೋ ಕೂತ್ರೆ ಕಾಗೆ ನನ್ನ ಮಗ ನೀನೇ ಕೂರ್ಬೇಕು" ಎಂದು ರೇಗಿಸಿದ ಪ್ರಶಾಂತ.
"ಇದಾಳಲ್ಲೋ ಈ ಬೇವರ್ಸಿ ಸೌಮ್ಯ. ಹೋಗಿ ಹೋಗಿ ಅಂಟ್ಕೋತಾಳೆ ಅವ್ಳಿಗೆ" ಎನ್ನುತ್ತಾ ಸೌಮ್ಯಳತ್ತ ಬೆರಳು ಮಾಡಿದ.
"ಯಾಕೋ ನಾಯಿ, ಬೇವರ್ಸೀ ಅಂತೀಯಾ ? ನೀವು ಏನಾದ್ರೂ ಮಾಡ್ಕೋಳಿ ನಾನಂತೂ ಮಧ್ಯ ಬರಲ್ಲ ಎಂದು ಕೈ ಮುಗಿದಳು.
"ಲೋ ಸಾಕು ನಿಲ್ಸಿ ನಿಮ್ಮ ಕೋಳಿ ಜಗಳ, ಮೊದ್ಲು ಯಾರ್ ಯಾರು ಬರ್ತಾರೆ ಅಂತ ಕನ್ಫರ್ಮ್ ಮಾಡ್ಕೋಳಿ" ಎಂದು ಹರ್ಷಿತಾಳ ಕಡೆ ನೋಡಿದ ಮಹೇಶ. ಇವನು ನೋಡುವ ಮೊದಲೇ ಹರ್ಷಿತಾ ತಲೆ ತಗ್ಗಿಸಿದ್ದಳು.
ಮೊದಲಿಗೆ ಒಂದಷ್ಟು ಫೀಮೇಲ್ ಫ್ಯಾಕಲ್ಟೀಸ್ ಬರಲ್ಲ ಅಂದರೂ ತದ ನಂತರ ಒಪ್ಪಿಸಿಕೊಂಡು ಹೊರಟರು.

-2-
ಬಸ್ಸಿನಲ್ಲಿ ಎಲ್ಲರೂ ಹಾಡುತ್ತಾ ಕುಣಿಯುತ್ತಾ, ಛೇಡಿಸುತ್ತಾ ಸಂಭ್ರಮಿಸುತ್ತಿದ್ದರು.
ಗೋವಾಕ್ಕೇ ಹೋಗುವ ಮೊದಲು ಕರ್ನಾಟಕದ ಒಂದಷ್ಟು ಪ್ರವಾಸಿ ತಾಣಗಳನ್ನು ನೋಡಿಕೊಂಡು ಹೋಗಬೇಕಂದು ತೀರ್ಮಾನವಾಗಿತ್ತು,
ಧೀರಜ್ ಮಿಮಿಕ್ರಿ ಮಾಡುತ್ತಾ ಬಸ್ಸಿನಲ್ಲಿರುವ ಅಧ್ಯಾಪಕರನ್ನೇ ರೇಗಿಸುತ್ತಿದ್ದ.
ಅಬ್ಬಿ ಫಾಲ್ಸ್ ಬಂತು ಎಂದು ಕಿರುಚಿದೊಡನೆ ಮಲಗಿದ್ದವರೇಲ್ಲಾ ಎದ್ದರು.
ಆಗಲೇ ಊಟದ ಸಮಯವಾಗಿತ್ತು. ಹುಡುಗರು ಫಾಲ್ಸ್ ನೋಡಿಕೊಂಡು ಬರುವುದರೊಳಗೆ ಅಡುಗೆ ಮಾಡಬೇಕೇಂದು ಭಟ್ಟರಿಗೆ ಹೇಳಿ, ಅಧ್ಯಾಪಕರು ವಿಧ್ಯಾರ್ಥಿಗಳ ಜೊತೆಗೆ ಮೆಟ್ಟಲುಗಳನ್ನು ಇಳಿಯಲು ಶುರು ಮಾಡಿದರು.

"ಆ ಕಡೆ ಮೊಸಳೆ ಇದೆ" ಅಂತ ಗಾರ್ಡ್ ಸುಮ್ನೇ ಹುಡುಗರಿಗೆ ಎಚ್ಚರಿಸಿದ.
"ಹೇ.... ಇಲ್ಲಿ ಕಪ್ಪೇನೇ ಇಲ್ಲ, ಇನ್ನೂ ಮೊಸಳೆ ಎಲ್ಲಿಂದ ಬರ್ಬೇಕು" ಎಂದು ಗಾರ್ಡ್ಗೆ ಪ್ರತ್ಯುತ್ತರ ನೀಡುತಿದ್ದರು ಹುಡುಗರು.
ಅಧ್ಯಾಪಕರು ಮೊದಲಿಗೆ ನಿಧಾನವಾಗಿ ಮೆಟ್ಟಲುಗಳನ್ನು ಹತ್ತಲು ಶುರು ಮಾಡಿದರು. 
ಟೈಮಾಯ್ತು ಬನ್ನಿ ಎಂದು ಹೇಳಿ ಹೊರಟರು.
ಎಲ್ಲರೂ ಮೇಲೆದ್ದು ಬಂದು ಬಟ್ಟೆಗಳನ್ನು ಹಿಂಡುತ್ತಾ ಬೇರೆ ಬಟ್ಟೆಗಳನ್ನು ಹಾಕಿಕೊಂಡು ಹೊರಟರು.
ಧೀರಜ್,ಸಾನ್ವಿ,ಶಶಿಕಿರಣ,ಮಂಜುಳ,ಹರ್ಷಿತಾ ಮುಂದೇ ಮುಂದೇ ಹೋಗುತಿದ್ದರು. ಮಹೇಶ ಅವರನ್ನೇ ಹಿಂಬಾಲಿಸುತ್ತಿದ್ದ.
ತಟ್ಟನೇ ನಿಂತು ಧೀರಜ್ ಹೇಳಿದ "ಹಿಂಗೇ ಎಡಕ್ಕೆ ಕಾಲು ದಾರೀಲಿ ಹೋದ್ರೆ ಬೇಗ ಹೋಗ್ಬೋದು" ಎಂದು ಎಡಕ್ಕೆ ತಿರುಗಿ ಮುನ್ನೆಡೆದ.
ಹರ್ಷಿತಾ ನಿಧಾನವಾಗಿ ನಡಿಗೆಯ ವೇಗವನ್ನು ಕಡಿಮೆ ಮಾಡುತ್ತಾ ಮಹೇಶನೊಟ್ಟಿಗೆ ಹೆಜ್ಜೆ ಹಾಕುತ್ತಿದ್ದಳು.
ಅದೇನೋ ಇಬ್ಬರಿಗೂ ಸಂಕೋಚ ಮಾತನಾಡುವುದಕ್ಕೆ.
ಹರ್ಷಿತಾ ಕಾಲಿಗೆ ಮುಳ್ಳು ಚುಚ್ಚಿದಂತೆ ಆಗಿ ನಿಂತು "ಅಮ್ಮ" ಎಂದು ಕಿರುಚಿದಳು.
"ಏನಾಯ್ತು ಹರ್ಷಿತಾ ಅವ್ರೇ ?" ಎಂದು ಕಾಲು ನೋಡಿದ.
"ಏನೋ ಕಚ್ತಾ ಇದೆ" ಎಂದು ಶೂ ಬಿಚ್ಚಿದಳು.
"ಅರ್ಧ ಬೊಗಸೆಯಷ್ಟು ರಕ್ತ ಹೋಗಿತ್ತು. ಕಾಲಿಗೆ ಜಿಗಣೆ ಕಚ್ಚಿ.
"ಇರಿ.....ತೆಗಿತೀನಿ" ಎಂದು ಜೇಬಿಂದ ಲೈಟರ್ ತೆಗ್ದು ಅದರ ಕಿಡಿಯನ್ನು ಜಿಗಣೆಗೆ ತಾಗಿಸಿದ.
"ಸ್ಸ್..... ಸ್ಸ್..." ಎಂದು ಹರ್ಷಿತಾ ಮೆಲ್ಲಗೆ ಚೀರಿದಳು.
"ನೋವಾಯ್ತ...?" ಎಂದು ಮಹೇಶ ಕೇಳಿದ.
"ಏನಿಲ್ಲ.." ಎಂದು ಮಂದಹಾಸ ಬೀರಿದಳು.
ಕುಕ್ಕುರುಗಾಲಿನಲ್ಲಿ ಕೂತು ಮಹೇಶ ಅವಳ ಕಾಲನ್ನು ತನ್ನ ಮಂಡಿಯ ಮೇಲಿಟ್ಟು ಅವಳ ಕಾಲಿಗಂಟಿಕೊಂಡಿದ್ದ ಇನ್ನರ್ಧ ಜಿಗಣೆಯನ್ನು ಸುಟ್ಟಿದ. ರಕ್ತದಿಂದ ಮಹೇಶನ ಪ್ಯಾಂಟ್ ಕೂಡ ರಕ್ತಸಿಕ್ತವಾಯಿತು.
"ಸ್ಸಾರಿ ನಿಮ್ಮ ಪ್ಯಾಂಟೇಲ್ಲಾ ಹಾಳಾಯ್ತು" ಎಂದು ಕೊರಗಿದಳು.
"ತೊಳುದ್ರೆ ಹೋಗುತ್ತೆ ಬಿಡಿ" ಎಂದು ಎದ್ದು ಹೆಜ್ಜೆ ಹಾಕಿದರು. ಆದರೆ ಅವರ ಮುಂದೇ ಇದ್ದ ಸ್ನೇಹಿತರು ಈಗಾಗಲೇ ಇವರಿಗಿಂತ ಬಹಳ ಮುಂದೇ ಹೋಗಿದ್ದರು.
ಇವರಿಬ್ಬರು ಅವಸರದಿಂದ ದೊಡ್ಡ ದೊಡ್ಡ ಹೆಜ್ಜೆ ಹಾಕಿದರು. ಆದರೂ ಅವರು ಕಾಣಲಿಲ್ಲ.
ಮುಂದೇ ಎರಡು ಕಾಲು ದಾರಿಗಳು ಸಿಕ್ಕಿದವು. ಈಗ ಇವರಿಬ್ಬರು ಪೇಚಿಗೆ ಸಿಲುಕಿದರು.
"ಈವಾಗ ಯಾವ ಕಡೆ ಹೋಗೋದು" ಎಂದು ಹರ್ಷಿತಾ ಮಹೇಶನನ್ನು ಕೇಳಿದಳು.
"ರೀ ನಾನು ಫರ್ಸ್ಟ್ ಟೈಮ್ ಹಿಂಗೇ ಬರ್ತಿರೋದು" ಎಂದನು.
"ಒಂದು ಕೆಲ್ಸ ಮಾಡೋಣ, ಈ ದಾರೀಲಿ ಹೋಗೋಣ" ಎಂದು ಬಲಕ್ಕೆ ತಿರುಗಿ ಹೋದಳು.
ಮಹೇಶ ಅವಳನ್ನೇ ಅನುಸರಿಸಿದ.

ಎಷ್ಟು ನಡೆದರೂ ರಸ್ತೇಯೇ ಸಿಗುತ್ತಿಲ್ಲ. ನಡೆದು ನಡೆದು ಸುಸ್ತಾಗಿ ಒಂದು ಕಡೆ ಕೂತರು.
"ನಾವು ತಪ್ಪಿಸಿಕೊಂಡಿದ್ದೀವಿ ಅನ್ಸುತ್ತೆ" ಎಂದು ಮಹೇಶ ಅನುಮಾನ ವ್ಯಕ್ತಪಡಿಸಿದ.
"ಅನ್ಸುತ್ತೆ ಏನು... ತಪ್ಪಿಸಿಕೊಂಡಿದ್ದೀವೀ" ಎಂದು ಹರ್ಷಿತಾ ಧೃಡಪಡಿಸಿದಳು.
"ನಿಜ ಹೇಳಿ ನಿಮ್ಗೆ ರೋಡ್ ಗೊತ್ತಿಲ್ವ..?" ಎಂದು ಕೇಳಿದ.
"ಗೊತ್ತಿತ್ತು. ನಾವು ಬಲಕ್ಕೆ ತಿರುಗುವ ಬದ್ಲು ಎಡಕ್ಕೆ ತಿರುಗಿ 500ಮೀಟರ್ ಹೋಗಿದ್ರೆ ನಮ್ಮ ಕಾಲೇಜ್ ಬಸ್ ಇರೋ ಜಾಗ ಸಿಕ್ಕಿರೋದು, ಬಟ್ ಈವಾಗ ನಂಗೂ ಗೊತ್ತಾಗ್ತಿಲ್ಲ ಹಾಗೇ ಬಂದಿದ್ದೀವಿ" ಎಂದಳು.
"ಹೇ ನಿಂಗೇನು ಲೂಸಾ, ನನ್ನ ಸಾಯ್ಸೋಕೇ ಹಿಂಗೇ ಕರ್ಕೋಂಡು ಬಂದಾ...!?" ಎಂದು ರೇಗಿದನು.
"ಸಾಯ್ಸೋಕೇ ಅಲ್ಲ, ಪ್ರೀತ್ಸೊಕೆ" ಎಂದಳು.
ಕಿವಿಗೆ ಕಾದ ಸೀಸ ಬಿದ್ದಂತಾಗಿ ಮಹೇಶ ಹತ್ತಿರ ಬಂದು,
"ಏನು" ಎಂದು ಕೇಳಿದ.
"ನೀವು ಅಂದ್ರೆ ನಂಗಿಷ್ಟ" ಎಂದು ಕಣ್ಣು ಹೊಡೆದಳು.
"ರೀ ಹುಲಿ, ಚಿರತೆ ಇರೋ ಕಾಡಿಗೆ ಕರ್ಕೊಂಡು ಬಂದು ಇಷ್ಟ ಅಂದ್ರೆ ಏನ್ರೀ ಅರ್ಥ ?, ಆ ಹುಲಿ ಜೊತೆ ಸೇರಿ ನನ್ನ ತಿನ್ನಲ್ಲ ತಾನೆ..?" ಎಂದು ತಬ್ಬಿಬ್ಬಾದ.
"ಅಯ್ಯೋ ರೀ ಹಾಗಲ್ಲ ನಿಜ ನೀವಿಷ್ಟ ನಂಗೆ" ಎಂದಳು.
"ರೀ ಕೋಳಿ ಕತ್ತಿನ ಮೇಲೆ ಚಾಕು ಇಟ್ಟು, ಕೋಳಿ ನಿನ್ ನಂಗಿಷ್ಟ ಅಂದಂಗೆ ಆಯ್ತು" ಎಂದನು.
"ಹು ಕಣೋ. ಏನೋ ಈವಾಗ ..? ಹಾಗೇ ಅನ್ಕೋ. ಮೊದ್ಲಿಂದಾನು ನನಗೊಂದು ಆಸೆ ಇತ್ತು, ನಾನ್ ಪ್ರೀತ್ಸೊ ಹುಡ್ಗನ್ನ ಕಿಡ್ನಾಪ್ ಮಾಡ್ಕೋಂಡು ಕಾಡಿಗೆ ಕರ್ಕೊಂಡು ಹೋಗಿ ಒಂದು ಮೂರು ದಿನ ಇರ್ಬೇಕು ಅಂತ" ಎಂದು ಒಂದೇ ಉಸಿರಿನಲ್ಲಿ ಮಾತು ಮುಗಿಸಿದಳು.
"ಅಯ್ಯೋ ಪಾಪಿ ನೋಡೋಕೆ ಇಷ್ಟು ಕ್ಯೂಟ್ ಆಗಿದ್ದೀಯಾ.. ಯೋಚ್ನೆ ಮಾತ್ರ ಟೆರರ್, ತಾಟಕಿನ ಮತ್ತೇ ಸೂರ್ಪನಕಿನ ಮಿಕ್ಸಿಲೀ ಹಾಕಿ ರುಬ್ಬುದ್ರೇ ಬರೋ ಕ್ಯಾರೆಕ್ಟರೇ ನಿಮ್ದು" ಎಂದನು.
"ಏನಾದ್ರೂ ಅನ್ಕೋಳೋ...ನಿನ್ ಇಷ್ಟ ನಂಗೆ" ಅಂದಳು.
"ಹೋಗೋ ಬಾರೋ ಅಂತೀರಾ..! ಕಾಲೇಜಲ್ಲಿ  ಮುಖ ನೋಡ್ತಿರಲಿಲ್ಲ" ಎಂದು ಕೇಳಿದನು.
"ಅಲ್ಲಿ ಹೊರಗಡೆ ಪ್ರಪಂಚಕ್ಕೇ ಹೆದ್ರುಕೋಬೇಕಿತ್ತು. ಇಲ್ಲಿ ಯಾರಿಗೆ ಹೆದ್ರುಕೋಬೇಕು. ನೋಡು ಡಾರ್ಲಿಂಗ್ ನಿನ್ನ ಮೇಲೆ ಸಿಕ್ಕಾಪಟ್ಟೆ ಲವಾಗೈತೆ ನಂಗೆ, ಮೂಚ್ಕೋಂಡು ತಾಳಿ ಕಟ್ಟುದ್ರೆ ಸರಿ. ಇಲ್ಲಾ ಕುರುಪ್ ಹಾಕ್ಬಿಡ್ತಿನಿ" ಎಂದು ಹೆದರಿಸುತ್ತಾಳೆ.
"ನಿಮ್ಮ ಹತ್ರ ಚಾಕು, ಬ್ಲೇಡ್ ಎಲ್ಲಿದೆ" ಎಂದು ನಕ್ಕನು.
"ಕಾಡಲ್ಲೇನು ಮುಳ್ಳಿಗೆ ಬರನಾ ? ಅದರಲ್ಲೂ ಕುರುಪ್ ಹಾಕ್ಬೋದು" ಎಂದಳು.
"ಹರ್ಷಿತಾ ನಿಮ್ಗೇನು ತಲೆ ಕೆಟ್ಟಿದ್ಯಾ ..., ಯಾಕೆ ಹೀಗ್ ಆಡ್ತಿದ್ದೀರಾ..?" ಎಂದು ಕೇಳಿದನು.
ಹರ್ಷಿತಾ ಎದ್ದು ಬಂದು ಮಹೇಶನ ಪಕ್ಕದಲ್ಲಿ ಕೂತು, ಅವನ ಕಣ್ಣನ್ನೇ ನೋಡುತ್ತಾ.
"ಮಹೀ ನಿನ್ ನಂಗೆ ಇಷ್ಟ ಕಣೋ. ನಾನ್ ನಿನ್ನ ತುಂಬಾನೇ ಪ್ರೀತಿಸ್ತೀನಿ. ಎಷ್ಟು ಅಂತೆಲ್ಲಾ ಹೇಳೋಕೆ ಆಗಲ್ಲ. ಪ್ರತಿಸಾರಿನೂ ನಿನ್ನ ನೋಡ್ತಿದ್ದಾಗಲು ನಾವಿಬ್ರೂ ಕಾಡಲ್ಲಿ ಕಳೆದು ಹೋಗ್ಬೇಕು. ನಮ್ಮನ್ನ ಹೇಳೋರು, ಕೇಳೋರು ಯಾರು ಇರಬಾರ್ದು. ನನ್ನ ಉಸಿರಿನಲ್ಲಿ ಬೆರೆತಿರೋ ಗಾಳಿ ತರ ನಿನ್ನ ಜೊತೆ ಈ ಕಾಡಲ್ಲಿ ಬೆರೆತು ಹೋಗ್ಬೇಕು ಅನ್ನೋ ಆಸೆ ಕಣೋ. ನಿನಗೆ ಇಷ್ಟ ಇಲ್ಲ ಅಂದ್ರೆ ಹೇಳು ವಾಪಾಸ್ಸು ಕರ್ಕೋಂಡು ಹೋಗ್ತೀನಿ" ಎಂದು ಅವನನ್ನೇ ನೋಡುತ್ತಾ ಸುಮ್ಮನಾದಳು. 
ಹಕ್ಕಿಗಳು, ಹುಳ ಉಪ್ಪಟೇ, ಕಾಡಿನ ಮರ, ನೀರು, ಕಪ್ಪೆ, ಹಾವು, ಅಷ್ಟೇಕೆ ಗಾಳಿ ಕೂಡ ಸದ್ದು ಮೂಡದೇ ಅವನ ಉತ್ತರಕ್ಕೇ ಮೌನವಾಗಿತ್ತು.
"ಯಾರಿಗೂ ಕಾಣದೇ ಇರೋ ಜಾಗಕ್ಕೇ ಹೋಗ್ಬೇಕು ಅಂದ್ರೆ ಯಾವ ಕಡೆ ಹೋಗ್ಬೇಕು" ಎಂದು ಅವಳನ್ನೇ ನೋಡುತ್ತಾ ನಕ್ಕನು.
"ಮಹೀ ಐ ಲವ್ ಯೂ ಕಣೋ" ಎಂದು ಬಿಗಿದಪ್ಪಿದಳು.
"ಐ ಲವ್ ಯೂ ಟು ಹರ್ಷೂ" ಎಂದನು.
ಇಡೀ ಕಾಡೇ ಸಂಭ್ರಮದಲ್ಲಿ ಮತ್ತೇ ಜೀವಂತವಾಗಿ ಶಬ್ಧ ಮಾಡಲು ಶುರು ಮಾಡಿತು.

ಇತ್ತ ಅಧ್ಯಾಪಕರು, ಸ್ನೇಹಿತರು ಎಷ್ಟೇ ಹುಡುಕಾಡಿದರೂ ಸಿಗಲಿಲ್ಲ. ಫೋನ್ ಮಾಡಿದರೇ ಔಟ್ ಆಫ್ ಸ್ಟೇಷನ್.... ವ್ಯಾಪ್ತಿ ಪ್ರದೇಶದಿಂದ ನಿಜವಾಗಿಯೂ ಅವರು ಹೊರಗಿದ್ದರು. ಕೊನೆಗೆ ಪೊಲೀಸ್ ಕಂಪ್ಲೇಟ್ ಕೊಟ್ಟರು. ಫಾರೆಸ್ಟ್ನವರು ಅಲ್ಲಿ ಚಿರತೆ ಕಾಟ ಜಾಸ್ತಿ ಇದೆ ಬೆಳಗ್ಗೆ ಹುಡುಕೋದು ಸೂಕ್ತ ಅಂತ ಕೈ ಚೆಲ್ಲಿ ಕೂತರು.

ಆಗಲೇ ಕತ್ತಲಾಗಿತ್ತು. ದಟ್ಟವಾಗಿ ಕರಿಯ ಮೋಡಗಳು ಹುಣ್ಣಿಮೆಯ ಚಂದ್ರನ ಮೇಲೆ ದಾಳಿ ಮಾಡುತಿದ್ದವು. 
"ಮಹೀ ಈ ಕತ್ತಲಲ್ಲೀ ನಡೆದುಕೊಂಡು ಹೋಗೋದು ಕಷ್ಟ. ನಾವು ಇಲ್ಲೇ ಇದ್ದು ಬೆಳಗ್ಗೆ ಎದ್ದು ಹೋಗೋಣ" ಎಂದಳು                        
"ಬೆಳಗ್ಗೇ ಎದ್ದು ಎಲ್ಲಿಗೇ ಹೋಗೋದು ಹರ್ಷೂ ..?" ಎಂದು ಕೇಳಿದನು.
"ಮಾಹೀ ಬೀಚ್ಗೆ.....ಕೇರಳ" ಎಂದಳು.
"ಕೇರಳಗೇ..... !? ಹೇಗೆ ಹೋಗೋದು" ಎಂದನು.
"ಡೋಂಟ್ ವರಿ ಡಾರ್ಲಿಂಗ್ ಬೆಳಗ್ಗೆ ಯೋಚ್ನೆ ಮಾಡೋಣ" ಎಂದಳು.
"ಮಾಹಿ ಬೀಚ್ಗೆ ಏನಕ್ಕೆ ?" ಎಂದು ಪ್ರಶ್ನೆ ಮಾಡಿದನು.
"ನಮ್ಮ ಹುಡ್ಗ ಮಹೀ ಜೊತೆ ಮಾಹಿ ಬೀಚ್ಗೇ ಹೋಗ್ಬೇಕು ಅನ್ಕೋಂಡಿದ್ದೇ. ಬರಲ್ವಾ ಮುದ್ದು ಎಂದು ಕೈ ಹಿಡಿದಳು.
"ಹರ್ಷೂ ನೀನು ಕರೆದರೆ ನರಕಕ್ಕೂ ಖುಷಿಯಾಗಿ ಬರ್ತೀನಿ" ಎಂದನು.
"ಸೋ ಸ್ವೀಟ್ " ಎಂದು ಕೆನ್ನೆ ಗಿಲ್ಲಿದಳು.
"ಸರಿ ಹರ್ಷೂ ಈವಾಗ ಮಲಗೋಕೆ ಒಂದು ವ್ಯವಸ್ಥೇ ಮಾಡೋಣ" ಎಂದು ಮೊಬೈಲ್ ಟಾರ್ಚ್ ಆನ್ ಮಾಡಿದ. ಒಂದು ದೊಡ್ಡ ಮರ ಬೋರಲಾಗಿ ಬಿದ್ದಿತ್ತು. ಅದರ ಮೇಲೆ ಇಬ್ಬರು ಆರಾಮಾಗಿ ಮಲಗಬಹುದಿತ್ತು. ಅದರ ತೊಗಟೆ ಚುಚ್ಚದಂತೆ ತರಗೆಲೆಗಳನ್ನು ತಂದು ಹಾಕಿದರು.
ಇಬ್ಬರು ಆಕಾಶ ನೋಡುತ್ತಾ ಮಲಗಿಕೊಂಡರು.
"ಮಹೀ ಟಾರ್ಚ್ ಆಫ್ ಮಾಡು" ಎಂದಳು ಹರ್ಷಿತಾ.
"ಹರ್ಷೂ ಹಾವು-ಗೀವು ಬಂದ್ರೆ ?" ಎಂದು ಕೇಳಿದನು.
"ನಾನಿಲ್ವ ಮುದ್ದು, ಏನೂ ಹೆದ್ರುಕೋಬೇಡ. ಹಂಗೇನಾದ್ರೂ ನೀನು ಸತ್ರೇ, ನೀನು ಸ್ವರ್ಗಕ್ಕೇ ಹೋಗೋಕು ಮುಂಚೇ ಬಂದು ನಿನ್ನ ಸೇರ್ಕೋತೀನಿ" ಎಂದಳು.
ಅವಳ ಪ್ರೀತಿಗೆ ಏನೂ ಹೇಳದೇ ಟಾರ್ಚ್ ಆಫ್ ಮಾಡಿ. ಯಾಕೇ ನನ್ನೇ ಓಡಿಸಿಕೊಂಡು ಬಂದೆ" ಎಂದು ಕೇಳಿದನು.
"ಏನಕ್ಕೆ ಅಂದ್ರೆ ನಿನ್ ನಂಗಿಷ್ಟ. ನಿನ್ನ ನೋಡಿದಾಗೇಲ್ಲಾ ನಂಗೆ ಮಾತೆ ಬರ್ತಿರಲಿಲ್ಲ, ಮೂಕಿ ತರ ಆಗ್ಬಿಡ್ತಿದ್ದೇ. ಹೃದಯ ಬೇರೆ ಕಪ್ಪೆ ತರ ವಟ ವಟ ಅಂತ ಹೊಡೆದುಕೊಳೋದು. ಒಳ್ಳೆ ಉಸೇನ್ ಬೋಲ್ಟ್ ತರ ಬಿ.ಪಿ ಮೇಲಕ್ಕೆ ಓಡೋದು, ಮಾತಾಡೋಕೇ ಧೈರ್ಯ ಸಾಕಾಗ್ತಿರಲಿಲ್ಲ" ಎಂದಳು.
"ಇವಾಗೇನೂ ಇಷ್ಟೋಂದು ಧೈರ್ಯ ಸಡನ್ ಆಗಿ ?" ಎಂದು ಕೇಳಿದ.
"ಈ ಚಾನ್ಸ್ ಬಿಟ್ರೆ ಹುಡ್ಗ ಸಿಗಲ್ಲ ಅಂತ ಗೊತ್ತು. ಅದಕ್ಕೆ ಯರ್ರಾಬಿರ್ರಿ ಧೈರ್ಯ ಮಾಡಿ ಎತ್ತಾಕೊಂಡು ಬಂದೆ" ಎಂದಳು.
"ಆದ್ರೂ ನಿಮ್ಗೆ ಡಬಲ್ ಗುಂಡಿಗೇ, ಈ ಕಾಡಲ್ಲಿ ಒಬ್ಬನ್ನೇ ಕರ್ಕೋಂಡು ಬಂದಿದ್ದೀರಲ್ಲ" ಎಂದನು.
"ಮಹೀ ಬರೋದು ಬಂದಿದ್ದೀನಿ ಈವಾಗ ಎದೆ ಪುಕ ಪುಕ ಅಂತ ಬಡ್ಕೋತಿದೆ ಕಣೋ" ಅಂದಳು.
"ಯಾಕೆ ಹರ್ಷೂ" ಎಂದು ಕೇಳಿದ.
"ನಂಗೆ ಇಲ್ಲಿಂದ ದಾರಿ ಗೊತ್ತಿಲ್ಲ" ಎಂದಳು.
"ಅಯ್ಯೋ ನಿಮ್ಮ....." ಎನ್ನುತ್ತಾ ಧಡಕ್ಕನೆ ಎದ್ದು ಕೂತ ಮಹೇಶ.
ಹರ್ಷಿತಾ ಅವನ ಕೈನ ಹಿಡಿದೆಳೆದು,
"ಬಿದ್ಕೋ ಚಿನ್ನ ಗೊತ್ತು ಕರ್ಕೋಂಡು ಹೋಗ್ತೀನಿ" ಎಂದಳು.
"ಅದ್ಸರೀ ನಿನಗೆ ಹೇಗೆ ಈ ಕಾಡು ದಾರಿ ಎಲ್ಲಾ ಗೊತ್ತು" ಎಂದು ಕೇಳಿದ.
"ನಾವು ಮೈಸೂರಿಗೆ ಶಿಫ್ಟ್ ಆಗೋಕ್ಕಿಂತ ಮುಂಚೇ ಇಲ್ಲೇ ಇದ್ದಿದ್ದು. ಹದಿನೆಂಟು ವರ್ಷ ಈ ಕಾಡಲ್ಲಿ  ಕಳೆದಿದ್ದೀವೀ" ಅಂದಳು.
"ಹೋ ಹಂಗೋ ಸಮಾಚಾರ.....!" ಎಂದನು.
ದೂರದಲ್ಲಿ ಚಿರತೆಯೋ, ಹುಲಿಯೋ ಬರುತ್ತಿರುವಂತೆ ಕಾಡಿನ ಪಕ್ಷಿಗಳು, ಕೋತಿಗಳು, ಗೂಬೆಗಳು ಸೂಚನೆ ಕೊಡುತಿದ್ದವು.
ಹರ್ಷಿತಾ ತಟ್ಟನೇ ಎದ್ದು "ಮಹೀ ಎದ್ದೇಳು ಬೆಂಕಿ ಹಾಕ್ಬೇಕು" ಅಂದಳು.
"ಯಾಕೇ ಹರ್ಷೂ" ಎಂದನು.
"ಚಿರತೆನೋ, ಹುಲಿನೋ ಬರಬಹುದು, ಬೆಂಕಿ ಹಾಕಿದ್ರೆ ಅವಕ್ಕೇ ಭಯ ಬರಲ್ಲ. ಬೇಗ ಟಾರ್ಚ್ ಆನ್ ಮಾಡು" ಎಂದಳು.
ಮಹೇಶ ಎದ್ದು ಟಾರ್ಚ್ ಆನ್ ಮಾಡಿ ಎದ್ದು ಟಾರ್ಚ್ ಆನ್ ಮಾಡಿ ಕೆಳಗೆ ಬಿದ್ದಿರೋ ತರಗೆಲೆಗಳನ್ನು ಒಂದು ಗುಡ್ಡೆ ಮಾಡಿ, ಹಾಗೇ ಸಣ್ಣ ಪುಟ್ಟ ಮರದ ಕಡ್ಡಿಗಳು, ಕೊಂಬೆಗಳನ್ನು, ಚೆಕ್ಕೆಯನ್ನು ಹಾಕುತಿದ್ದರು.
ಮಹೇಶ ತನ್ನ ಲೈಟರ್ನಿಂದ ತರಗೆಲೆಯನ್ನು ಹಚ್ಚಿದ. ಅದು ಗಾಳಿಗೆ ಹಾರಿ ಹೋಗುತ್ತಿತ್ತು.
"ಮಹೀ ಕರ್ಚಿಫ್ ಇದೀಯಾ ?" ಎಂದು ಕೇಳಿದಳು.
"ಇಲ್ಲ ಹರ್ಷೂ. ಅಲ್ಲೇ ಬಸ್ಸಲ್ಲೇ ಇದೆ" ಎಂದನು.
"ಬನಿಯನ್ ಹಾಕಿದ್ಯಾ... ?" ಎಂದು ಕೇಳಿದಳು.
"ಇಲ್ಲ. ಯಾಕೆ  ?" ಎಂದು ಕೇಳಿದ.
"ಅದಕ್ಕೆ ಬೆಂಕಿ ಹಚ್ಚಿ ಆಮೇಲೆ ಮರದ ಕಡ್ಡಿಗಳಿಗೆ ಹಚ್ಚಬೋದು" ಅಂದಳು.
"ಅಯ್ಯೋ ಹಾಕೋಂಡಿಲ್ವೇ, ಬನಿಯನ್ ಹಾಕಿ ಅಭ್ಯಾಸ ಇಲ್ಲ" ಅಂದನು.
"ಹ್ಮ್ಮ್... ಚಡ್ಡಿ ಹಾಕಿದ್ಯಾ...?" ಎಂದು ನಾಚುತ್ತಾ ಕೇಳಿದಳು.
"ಇಲ್ಲಪ್ಪ ಹಾಕಿಲ್ಲ" ಎಂದು ತಕ್ಷಣ ಉತ್ತರಿಸಿದ.
"ನಾನೇ ನೋಡಿದ್ದೀನಿ ಫಾಲ್ಸ್ ಹತ್ರ ಚಡ್ಡಿಲೀ ಇದ್ದಿದ್ದು" ಎಂದು ಕಣ್ಣಿನಿಂದ ಇರಿಯುವಂತೆ ಅವನನ್ನೇ ನೋಡಿದಳು.
"ಸರಿ. ಟಾರ್ಚ್ ಆಫ್ ಮಾಡು" ಎಂದನು.
"ತೆಗಿಯೋಲೋ ನಾನೇ ನಿನ್ನ ಕಟ್ಕೋಲೋದು. ನಿನ್ನ ಶೀಲಕ್ಕೆ ನಾನೇ ಗ್ಯಾರಂಟಿ" ಎಂದು ಟಾರ್ಚ್ ಆಫ್ ಮಾಡಿದಳು.
"ಸದ್ಯ ಒಣಗಿದೆ" ಎಂದು ಚಡ್ಡಿಯನ್ನು ಕೊಟ್ಟು ಪ್ಯಾಂಟ್ ಹಾಕಿಕೊಳ್ಳುತಿದ್ದ. ಇವಳು ಬೇಕುಂತಲೇ ಟಾರ್ಚ್ ಆನ್ ಮಾಡಿದಳು.
"ಹೇ ಆಫ್ ಮಾಡೇ ನಿನ್ನಜ್ಜಿ" ಎಂದು ಕಿರುಚಿದ.
ಅಂತೂ ಕಷ್ಟ ಪಟ್ಟು ಬೆಂಕಿ ಹಚ್ಚಿದರು.

ಮತ್ತೆ ಮರದ ಮೇಲೆ ಬಂದು ಮಲಗಿದರು.
"ಈ ಓಡಿ ಹೋಗೋ ಪ್ಲಾನ್ ಯಾಕೆ ಹರ್ಷೂ ?" ಎಂದು ಕೇಳಿದ.
"ನೋಡೋ ನಿನ್ ಬಂದು ಎಷ್ಟೇ ಕೇಳ್ಕೊಂಡ್ರು ನಮ್ಮ ಮನೇಲಿ ನಿಂಗೆ ಮದ್ವೇ ಮಾಡಿಕೊಡಲ್ಲ" ಎಂದು ನಿರ್ಲಿಪ್ತವಾಗಿ ಹೇಳಿದಳು.
"ಹ್ಮ್ಮ್ ಗೊತ್ತು. ಅದಕ್ಕೆ ನಾನ್ ಯಾವತ್ತೂ ನಿಂಗೆ ನನ್ನ ಪ್ರೀತೀನ ಹೇಳಿರ್ಲಿಲ್ಲ" ಎಂದನು.
"ಅದು ನಮಗೆ ಗೊತ್ತು. ಅದಕ್ಕೆ ನಿಮ್ಮನ್ನ ಎತ್ತಾಕೊಂಡು ಬಂದಿದ್ದು. ಬೀಚ್ ನೋಡಿದ್ಮೇಲೆ ಸೀದಾ ಮನೆಗೆ ಹೋಗಿ ನಮ್ಮೀಬ್ರು ಮಧ್ಯೆ ಆಗ್ಬಾರ್ದು ಆಗಿದೆ. ಮೂರು ತಿಂಗಳು ಬಿಟ್ರೇ ನೀವು ಅಜ್ಜಿ ತಾತ ಆಗ್ತೀರ. ಅಷ್ಟರೊಳಗೆ ಮೂಚ್ಕೋಂಡು ಮದ್ವೇ ಮಾಡ್ಸಿ ಅಂತೀನಿ" ಎಂದಳು.
"ಏನೂ ? ಐಡಿಯಾ ಕೋಡ್ತಿದ್ದೀರೋ" ಎಂದು ಕೇಳಿದನು.
"ನಿನ್ ಏನು ಅಂತ ನಂಗೆ ಗೊತ್ತು ಡಾರ್ಲಿಂಗ್" ಎಂದು ತಬ್ಬಿ ಅವನ ಎದೆಯ ಮೇಲೆ ತಲೆ ಇಟ್ಟಳು.
"ಹರ್ಷೂ ಯಾಕೋ ಕರೆಂಟ್ ಹೊಡ್ದಂಗೆ ಆಗ್ತಿದೆ" ಎಂದನು.
"ಮೂಚ್ಕೋಂಡು ಮಲ್ಕೋಂಡಿಲ್ಲ ಅಂದ್ರೆ ಫ್ಯೂಸ್ ಕಿತ್ತಾಕ್ತೀನೀ ಡಾರ್ಲಿಂಗ್" ಎಂದಳು.
ಮಹೇಶ ನಕ್ಷತ್ರ ಎಣಿಸುತ್ತಾ ಆಕಾಶಕ್ಕೇ ಕಣ್ಣನ್ನು ನೆಟ್ಟಿದನು.

ಇಬ್ಬರಿಗೂ ಎಚ್ಚರವಾದಾಗ ಸೂರ್ಯನ ಹೊಂಗಿರಣ ಅವರನ್ನು ಸ್ವಾಗತಿಸುತ್ತಿತ್ತು. ಕಾಡಿನಲ್ಲಿ ಅಲ್ಲೆಲ್ಲಿ ಬೆಳಕು ಮರಕ್ಕೆ ಬಿದ್ದು ಅದರ ಪ್ರತಿಫಲನ ಬೀಳುತ್ತಿತ್ತು.
"ಅಬ್ಬಾ ನಾವು ಸತ್ತಿಲ್ವಾ" ಎಂದು ಮಹೇಶ ಸಂತೋಷದಿಂದ ಕೂಗಾಡಿದ.
"ಹೇ ಸುಮ್ನೇ ಇರೋ ಗೂಬೆ" ಎಂದಳು ಹರ್ಷಿತಾ.
"ಆಯ್ತಮ್ಮ ಈವಾಗ ಯಾವ ಕಡೆ ಹೋಗ್ಬೇಕು ಹೇಳು" ಎಂದು ಸುತ್ತಾಮುತ್ತ ಕಣ್ಣಾಡಿಸುತ್ತಾ ಕೇಳಿದ.
"ಹಿಂಗೇ ಪಶ್ಚಿಮಕ್ಕೇ ದಿಕ್ಕಲ್ಲಿ ಹಳ್ಳವನ್ನು ದಾಟಿಕೊಂಡು ಹೋಗ್ಬೇಕು. ಅಲ್ಲಿ ಒಂದು ಹಳ್ಳಿ ಸಿಗುತ್ತೆ. ಅಲ್ಲಿಂದ ನಲ್ವತ್ತು-ಐವತ್ತು ಕಿಲೋ ಮೀಟರ್ ಇದೆ" ಎಂದಳು.
"ಇನ್ನೂ ಅಷ್ಟೋಂದು ನಡಿಬೇಕಾ" ಎಂದು ಅನ್ಯಮನಸ್ಕನಾಗಿ ಕೇಳಿದ.
"ಏಯ್ ಬಾರೋಲೋ" ಎಂದು ಅವನ ಕೈ ಹಿಡಿದುಕೊಂಡು ಹೋದಳು.
ಪಶ್ಚಿಮಕ್ಕೇ ಸುಮಾರು ಐದಾರು ಕಿಲೋ ಮೀಟರ್ ನಡೆದ ಮೇಲೆ ಒಂದು ಸಣ್ಣ ಹಳ್ಳ ಸಿಕ್ಕಿತ್ತು.
"ಲೇ ಲೇ ನನ್ನ ಕೈ ಬಿಡೆ. ನಂಗೆ ತುಂಬಾ ಅರ್ಜೇಂಟು" ಎಂದು ನುಲಿಯುತ್ತಿದ್ದ.
"ಥೂ..... ಹೋಗೋ" ಎಂದು ಕೈ ಬಿಟ್ಟು ಮುಖ ಮುಚ್ಚಿಕೊಂಡಳು.
"ಏಯ್ ನೀನು ಹೋಗೆ" ಎಂದನು ಮಹೇಶ.
"ಸರಿ ಸರಿ. ಜಿಪ್ ಹಾಕೋ ಮೊದ್ಲು" ಎಂದು ಪೊದೆ ಹಿಂದೇ ಹೋದಳು.
ಇವನು ನಿತ್ಯಕರ್ಮವನ್ನು ಮುಗಿಸಿ ಹತ್ತು ನಿಮಿಷ ಆದ್ರೂ ಅವಳು ಪೊದೆಯಿಂದ ಬರಲೇ ಇಲ್ಲ. ಎಲ್ಲಿ ಹೋದಳು ಎಂದು "ಹರ್ಷೂ ಹರ್ಷೂ" ಎನ್ನುತ್ತಾ ಪೊದೆ ಹತ್ತಿರ ಬಂದು ನೋಡುತ್ತಾನೆ. ಅವಳು ಇಲ್ಲ ...!

ಎಷ್ಟು ಹುಡುಕಾಡಿದರೂ ಹರ್ಷಿತಾ ಸಿಗಲೇ ಇಲ್ಲ.
ಅವಳ ಹೆಸರು ಕೂಗಿ ಕೂಗಿ ಉಸಿರೇ ನಿಲ್ಲುವ ಹಾಗೇ ಆಯ್ತು. ಕಾಡಿನ ಒಂದೊಂದು ಮರ,ಗಿಡಗಳು ಕೂಡ ವೈರಿಯಂತೆ ಕಾಣತೊಡಗಿದವು. ಕಣ್ಣಿಗೆ ಮಂಕು ಕವಿಯಿತು. ಮಹೇಶನ ಜಂಘಾಬಲವೇ ಉಡಗಿ ಹೋಗಿತ್ತು. ಕೂತಲ್ಲೇ ಬೆರಗು ಬಡಿದವರಂತೆ ಕೂತಿದ್ದ. ನಿನ್ನೆ ಅವಳ ಜೊತೆ ಕಳೆದಿದ್ದ ಮಧುರ ಕ್ಷಣಗಳು ಜೀವಂತವಾಗಿ ಮುಂದೇ ಬಂದವು.
ಅವಳು "ಮಹೀ..... ಮಹೀ..." ಅಂದಿದ್ದೆ ನೆನಪು.
ಮತ್ತೆ ದೂರದಲ್ಲಿ ಮಹೀ ಅಂತ ಕೂಗಿದ ಸದ್ದು. ಮಹೇಶ ವಾಸ್ತವಕ್ಕೆ ಬಂದ, ನಿಜವಾಗಲೂ ಹರ್ಷಿತಾ ನನ್ನ ಕೂಗ್ತೀದ್ದಾಳೆ ಅನಿಸಿತು. ಇನ್ನೊನ್ದು ಸಾರಿ ಅವಳ ಧ್ವನಿ ಬರಲೀ ಎಂದು ದೇವರಲ್ಲಿ ಪ್ರಾರ್ಥಿಸಿದ.
"ಬೇಗ ಬಾರೋ ಗೂಬೆ" ಅಂದಿದ್ದು ಕೇಳಿಸಿತು.
ಸುತ್ತಾ ಕಣ್ಣಾಡಿಸಿದ ಮೇಲೆ ಅನತಿ ದೂರದಲ್ಲಿ ಹರ್ಷಿತಾ ಸೈಕಲ್ ತಳ್ಳಿಕೊಂಡು ಬರುತಿದ್ದಳು.
ಅವಳನ್ನು ನೋಡಿ ಮಹೇಶನಿಗೆ ಹೋದ ಜೀವ ಬಂದಂತಾಯ್ತು. ಓಡಿ ಹೋಗಿ ಅವಳ ಮುಂದೇ ನಿಂತ, ಅವಳನ್ನು ನೋಡುತ್ತಲೇ ಕಣ್ಣಲ್ಲಿ ನೀರು ಹರಿಯಿತು.
"ಹೇ ಯಾಕೋ ಮಹೀ, ಏನಾಯ್ತು" ಎಂದು ಹಿಡಿದಿದ್ದ ಸೈಕಲನ್ನು ಬಿಟ್ಟು ಬಂದು ಕಣ್ಣನ್ನು ಒರೆಸಿದಳು.
"ಏಯ್ ನಿಂಗೇನು ತಿಕ್ಲಾ..? ಎಲ್ಲಿ ಹೋಗಿದ್ದೆ ಈ ಹಾಳಾದ್ ಕಾಡಲ್ಲಿ ನನ್ನ ಒಬ್ಬನೇ ಬಿಟ್ಟು" ಎಂದು ರೇಗಿದ.
"ನಾನ್ ಅಲ್ಲಿ ಪೊದೆ ಹಿಂದೇ ಕೂತಿರುವಾಗ ಒಂದು ಕೋತಿ ಬಂದು ನನ್ನ ಪಕ್ಕ ಇಟ್ಟಿದ್ದ ಪರ್ಸನ್ನ ಎತ್ತಿಕೊಂಡು ಹೋಗ್ತಿತ್ತು. ಅದನ್ನ ಅಟ್ಟಿಸಿಕೊಂಡು ಹೋದ್ರೆ ಅದು ಯಾವ್ದೋ ಹಳ್ಳ ಎಲ್ಲಾ ದಾಟಿಕೊಂಡು ಅಲ್ಲಿ ಮೂಲೇಲಿ ಇರೋ ಮನೆ ಒಳಗೆ ಹೋಯ್ತು. ನಾನು ಆ ಮನೆ ಒಳಗೆ ಹೋಗಿ ಪರ್ಸ್ ಕೊಡಿ ಅಂದ್ರೆ ಯಾವ ಪರ್ಸು ಇಲ್ಲ ಅಂತ ಹೇಳಿದ್ರು. ಜೋರಾಗಿ ಜಗ್ಳ ಮಾಡಿದ್ಮೇಲೆ ಪರ್ಸ್ ಕೊಟ್ರು" ಎಂದು ಒಂದೇ ಉಸಿರಿನಲ್ಲಿ ಇಡೀ ವೃತ್ತಾಂತವನ್ನು ಬಿಚ್ಚಿಟ್ಟಳು.
"ಅದ್ಸರೀ ಈ ಸೈಕಲ್ ಎಲ್ಲಿ ಸಿಗ್ತು ಹರ್ಷೂ" ಎಂದು ಬಿದ್ದಿದ್ದ ಸೈಕಲನ್ನು ಎತ್ತಿದ.
"ಪರ್ಸು ಕೊಟ್ರು ಅಲ್ವ ಅವ್ರ ಹತ್ರ ತಗೊಂಡು ಬಂದೆ, ಹೆಂಗಿದ್ರೂ ಇನ್ನೂ ದೂರ ಹೋಗ್ಬೇಕು ಅಲ್ವ ಸೋ ಎಂದಳು.
"ಎಷ್ಟು ದುಡ್ಡು ಕೊಟ್ಟೆ ?" ಎಂದು ಕೇಳಿದ.
"ಎರಡು ಸಾವಿರ" ಎಂದಳು.
"ಲೇ ಈ ಡಬ್ಬ ಸೈಕಲ್ಗೇ ಎರಡು ಸಾವ್ರನ..!" ಎಂದು ಆಶ್ಚರ್ಯ ವ್ಯಕ್ತಪಡಿಸಿದ.
"ಲೋ ಈ ಸೈಕಲ್ಗೇ ಮಾತ್ರ ಅಲ್ಲ, ನಮ್ಮನ್ನ ಹುಡ್ಕೋಂಡು ಬೆಳಗ್ಗೇನೆ ಫಾರೆಸ್ಟ್ ಅವ್ರು, ಪೊಲೀಸ್ ಅವ್ರು ಬಂದಿದ್ರಂತೆ, ಅವ್ರಿಬ್ರೂ ಸಿಕ್ಕುದ್ರೆ ಹೇಳಿ ಅಂತ ಅದಕ್ಕೆ ನಾನು ಇವ್ರಿಗೆ ದುಡ್ಡು ಕೊಟ್ಟು 'ನೀವೇನೂ ಹೇಳ್ಬೇಡಿ ನಾಳೆ, ನಾಳಿದ್ದರಲ್ಲೀ ನಾವೇ ಹೋಗ್ತೀವಿ' ಅಂದು ಬಂದೆ" ಎಂದಳು.
"ಹ್ಮ್ ವೆರಿ ಗುಡ್ ಮುದ್ದು, ಆದರೆ ಇನ್ನೊನ್ದು ಸಲ ಹೀಗೇ ಹೇಳ್ದೆ ಕೇಳ್ದೆ ಬಿಟ್ಟು ಹೋಗ್ಬೇಡ" ಎಂದು ಕೈ ಹಿಡಿದುಕೊಂಡನು.
"ಇಲ್ಲ ಕಣೋ. ನಿನ್ನ ಬಿಟ್ಟು ನಾನೆಲ್ಲೂ ಹೋಗಲ್ಲ. ನನ್ನ ಕರ್ಕೋಂಡು ಹೋಗೋಕೆ ಯಮ ಬಂದ್ರು 'ಇರು ನಮ್ಮ ಹುಡ್ಗನಿಗೇ ಹೇಳ್ಬಿಟ್ಟು ಬರ್ತೀನಿ' ಅಂತೀನಿ" ಎಂದು ಕಣ್ಣಲ್ಲಿ ಬರುತ್ತಿದ್ದ ಹನಿಯನ್ನು ಒರೆಸಿದಳು.
"ಮುದ್ದು, ನೀನೇನು ಪುಣ್ಯಕೋಟಿ ಹಸುನಾ ನಿನ್ನ ನಂಬೋಕೆ ಅಂತ ಯಮ ಕೇಳಿದ್ರೆ" ಎಂದು ಛೇಡಿಸಿದನು.
"ನಾನ್ ಮತ್ತೆ ವಾಪಾಸ್ಸು ಬಂದ್ರೆ, ನನ್ನನ ನಮ್ಮ ಹುಡ್ಗನ ಜೊತೆ ಬಿಟ್ಟು. ನೀನು ಬೆಟ್ಟದ ಮೇಲಿಂದ ಬಿದ್ದು ಸಾಯ್ತೀಯಾ ಅಂತ ಯಮನ್ನೇ ಕೇಳ್ತೀನಿ" ಎಂದಳು.
ಅವಳ ಅಗಾಧ ಪ್ರೀತಿಗೇ, ಬುದ್ಧಿವಂತಿಕೆಗೆ ಅವನಿಗೆ ಮಾತೇ ಬರಲಿಲ್ಲ.
"ಮುದ್ದಾದ ರಾಕ್ಷಸಿ.." ಎಂದು ನಕ್ಕನು.
"ಹ್ಹ ಹ್ಹ ಸರಿ ನಡಿ ಬೇಗ ಮಹೀ, ಬೇಗ ಹೋಗ್ಬೇಕು" ಎಂದು ಸೈಕಲ್ ತಳ್ಳಿಕೊಂಡು ದಿಬ್ಬವನ್ನೇರಿದರು.

ಹದಿನೈದು ಕಿಲೋ ಮೀಟರ್ ಕ್ರಮಿಸಿದ ಮೇಲೆ ಒಂದು ಹಳ್ಳಿ ಸಿಗ್ತು. ಹೇಳಿಕೊಳ್ಳಲು ಅಂತಹ ದೊಡ್ಡ ಹಳ್ಳಿಯೇನಲ್ಲ ಇಪ್ಪತ್ತು-ಮೂವತ್ತು ಸಿದ್ಧಿ ಜನಾಂಗದವರು ವಾಸಿಸುತ್ತಿದ್ದರು. ಇಬ್ಬರಿಗೂ ಸುಸ್ತಾಗಿದ್ದರಿಂದ ಸೈಕಲನ್ನು ನಿಲ್ಲಿಸುವ ಪ್ರಮೇಯ ಬಂತು.
ಹರ್ಷೂ ಸುಸ್ತಾಗ್ತೀದೆ ಕಣೇ" ಎಂದು ಮಹೇಶ ಏದುಸಿರು ಬಿಟ್ಟನು.
"ಇಲ್ಲಿ ತಿನ್ನೋಕೇ ಏನಾದ್ರೂ ಸಿಗುತ್ತಾ ಕೇಳೋಣ ಇರು" ಎಂದು ಸೈಕಲ್ನ ಮುಂದಿನ ಕಂಬಿಯ ಮೇಲೆ ಕುಳಿತಿದ್ದವಳು ಸೀದಾ ಇಳಿದು ಹೋಗಿ ಅಲ್ಲಿ ನಿಂತಿದ್ದ ಒಬ್ಬ ಅಜ್ಜನಿಗೆ,
"ಅಜ್ಜ ಇಲ್ಲಿ ತಿನ್ನೋಕೆ ಏನಾದ್ರೂ ಸಿಗುತ್ತಾ ?" ಎಂದು ಕೇಳಿದಳು.
"ಉಹು" ಅನ್ನುವಂತೆ ತಾತ ಕೈಯನ್ನು ಅಲುಗಾಡಿಸಿದ.
"ಅಯ್ಯೋ ದೇವ್ರೇ ಏನಪ್ಪಾ ಮಾಡೋದು ನಮ್ಮ ಹುಡ್ಗನ ಹೊಟ್ಟೆಗೆ" ಎನ್ನುತ್ತಾ ತಲೆ ಮೇಲೆ ಕೈನಿಟ್ಟುಕೊಂಡಳು.
ತಕ್ಷಣ ಏನೋ ಹೊಳೆದಂತೆ ತನ್ನ ಪರ್ಸಿಂದ ನೂರು ರೂಪಾಯಿಯ ನೋಟನ್ನು ಕೊಟ್ಟು, ತಿನ್ನೋಕೆ ಏನಾದ್ರೂ ಕೊಡುವಂತೆ ಕೈ ಸನ್ನೆ ಮಾಡಿ ಕೇಳಿದಳು.
ಆಗಲಿ ಎನ್ನುವಂತೆ ತಾತ ತಲೆಯನ್ನು ಆಡಿಸುತ್ತಾ ಮುಂದಕ್ಕೇ ಹೋದ ಅವನ್ನನೇ ಇವರಿಬ್ಬರೂ ಅನುಸರಿಸಿದರು.

ಒಂದು ಪುಟ್ಟ ಗುಡಿಸಲು. ಸುಮಾರು ಎಂಟು-ಹತ್ತು ಅಡಿ ಇದ್ದರೇ ಹೆಚ್ಚೂ. ಆ ಗುಡಿಸಲಿನಲ್ಲಿ ಅವರ ಮಗ, ಸೊಸೆ, ಇಬ್ಬರು ಪುಟ್ಟ ಮೊಮ್ಮಕ್ಕಳು ವಾಸಿಸುತ್ತಿದ್ದರು. ತಾತನ ಹೆಂಡತಿ ಸತ್ತು ಗತಕಾಲವೇ ಉರುಳಿತ್ತು. ಅವರ ಮನೇಯಲ್ಲೀ ರಾಗಿ ಅಮಲಿ ಹಾಗೂ ನೆನ್ನೆ ಬೇಟೆ ಆಡಿದ ಮೊಲದ ಮಾಂಸ. ಮಹೇಶ ಬರೀ ರಾಗಿ ಅಮಲಿ ಕುಡಿದ. "ಮಾಂಸ ಬೇರೆ ಯಾವ್ದೋ ಪ್ರಾಣಿ ತರ ಕಾಣ್ತಿದೆ" ಎಂದು ಬೊಬ್ಬೆ ಹೊಡೆದ.
"ನಿಂದೂ ನಂಗೆ ಮಿಕ್ತು ಬಿಡು. ನಾನೇ ತಿಂತಿನಿ" ಎಂದು ಸ್ವಲ್ಪ ಬಾಯಿಗೆ ಇಟ್ಟಳು. ಆದರೆ ಅವನನ್ನ ಬಿಟ್ಟು ತಿನ್ನೋಕೆ ಅವಳಿಗೆ ಮನಸ್ಸು ಬರಲಿಲ್ಲ.
"ನಂಗೂ ಬೇಡ" ಅಂದು ಎದ್ದು, ಇಬ್ಬರು ಹೊರಬಿದ್ದರು. ಮಾಹಿ ಬೀಚ್ಗೆ ಹೇಗೆ ಹೋಗ್ಬೇಕು ಎಂದು ಮತ್ತೊಮ್ಮೆ ತಿಳಿದುಕೊಂಡು ಸೈಕಲ್ ಬೆನ್ನೇರಿದರು. ಅವರಿನ್ನೂ ಇಪ್ಪತ್ತು ಕಿಲೋ ಮೀಟರ್ ಹೋಗಬೇಕಿತ್ತು.

ಒಂದು ಕಿಲೋ ಮೀಟರ್ ಹೋದ ಮೇಲೆ ದಾರಿ ತುಂಬಾ ಕೆಟ್ಟೋಗಿತ್ತು. ಮಣ್ಣೆಲ್ಲಾ ಮಳೆಯಿಂದ ರಾಡಿಯಾಗಿತ್ತು. ಸೈಕಲ್ ಚಕ್ರ ಮಣ್ಣಿನೊಳಗೆ ಲೀನವಾಗುತ್ತಿತ್ತು. ಇನ್ನೂ ಸೈಕಲ್ ತುಳಿಯುವುದು ಆಸಾಧ್ಯವೇಂದು ಅರಿತು ಸೈಕಲ್ ಜೊತೆಗೆ ಇಬ್ಬರು ವಾಕಿಂಗ್ ಹೊರಟರು. ಹತ್ತು ಹೆಜ್ಜೆ ಇಟ್ಟ ಮೇಲೆ ಟೊಂಕ್ ಟೊಂಕ್ ಎಂದು ಶಬ್ಧ ಬರಲು ಶುರುವಾಯಿತು. ತಕ್ಷಣ ನಿಂತಿತು. ಮತ್ತೇ ಗುಟ್ರೋ ಗುಟ್ರೋ ಎಂದು ಬರುತ್ತಿತ್ತು. ಇಬ್ಬರಿಗೂ ಗಾಬರಿಯಾಯಿತು. ಒಬ್ಬರನೊಬ್ಬರು ನೋಡಿಕೊಂಡರು. ಮಹೇಶ ಬೆವರುತಿರುವದನ್ನು ಕಂಡು "ಲೋ ಮಹೀ ಅದು ಕಾಡು ಪಾರಿವಾಳ ಕಣೋ, ಗುಟ್ರಾಕ್ತಿದೆ" ಎಂದಳು.
ಇವನಿಗೂ ಸರಿ ಅನಿಸಿ "ಹೌದಲ್ವ. ನಾನೇನೋ ಅನ್ಕೋಂಡು ಡುಸ್ ತಗೊಂಡೆ" ಎಂದನು.
"ನಾನಿರೋವರ್ಗೂ ನೀನ್ಯಾಕೋ ಹೆದ್ರುತೀಯಾ" ಎಂದಳು ಹರ್ಷಿತಾ.
"ರಪ್" ಎಂದು ಹರ್ಷಿತಾ ತಲೆಗೆ ಏಟು ಬಿತ್ತು.
"ಏನು" ಅಂತ ತಿರುಗುವುದರೊಳಗೆ ಮಹೇಶನಿಗೂ ಏಟು ಬಿತ್ತು. ಇಬ್ಬರು ದೊಪ್ ಎಂದು ಕುಸಿದು ಬಿದ್ದರು.

ಕಣ್ಣು ಬಿಟ್ಟಾಗ ಕತ್ತಲು ಅಂದರೆ ಕತ್ತಲು. ಕಣ್ಣು ಕುರುಡಾಗಿರಬಹುದು ಎಂದು ಅನುಮಾನಿಸಿ,
"ಏನಾದ್ರೂ ಕಾಣ್ತಿದ್ಯಾ" ಎಂದು ಮಹೇಶನಿಗೆ ಕೇಳಿದಳು ಹರ್ಷಿತಾ.
"ಎಲ್ಲಿದ್ಯಾ ಹರ್ಷೂ" ಎಂದು ಮಹೇಶ ಕೇಳಿದ.
"ಅಬ್ಬಾ" ಎಂದು ನಿಟ್ಟುಸಿರು ಬಿಟ್ಟಳು ಹರ್ಷಿತಾ.
ದೂರದಲ್ಲಿ ಯಾರೋ ಲಾಟೀನು ಹಿಡಿದುಕೊಂಡು ಬರುವಂತೆ ಕಂಡಿತು.
"ಯಾರ್ರೀ ನೀವೂ, ನಮ್ಗೆ ಏನಕ್ಕೆ ಕಟ್ಟು ಹಾಕಿದ್ದೀರಾ" ಎಂದು ಹರ್ಷಿತಾ ಕಿರುಚಿದಳು. ಅದಕ್ಕೆ ಮಹೇಶನೂ ದನಿಗೂಡಿಸಿದ.
"ಬಾಯಿ ಮೂಚ್ಕೋಂಡು ಇಬ್ರೂ ಕೂತ್ರೆ ಸರಿ. ಇಲ್ಲಾ ಹೆಣ ಬೀಳಿಸ್ತಿನಿ" ಅಂತ ಬೆದರಿಕೆಯನ್ನು ಹಾಕಿದ.
"ಹೆಣ ಬೀಳಿಸೋದು ಆಮೇಲೆ ಇರಲಿ. ನಮ್ಮನ್ನ ಏನಕ್ಕೆ ಕರ್ಕೋಂಡು ಬಂದ್ರೀ" ಎಂದು ಹರ್ಷಿತಾ ಕೇಳಿದಳು.
"ನಮಗೆ ನಿಮ್ಮನ್ನ ಹುಡುಕಬೇಕು ಎಂದು ಸುಪಾರಿ ಬಂದಿದೆ" ಎಂದನು ಗುಂಪಿನ ನಾಯಕ.
"ಸುಪಾರಿ !?" ಎಂದು ಪ್ರಶ್ನಾರ್ಥಕವಾಗಿ ಕೇಳಿದ ಮಹೇಶ.
"ಹೌದು. ಸರ್ಕಾರದಿಂದ ಆಗದ ಕೆಲ್ಸಕ್ಕೆ ನಮ್ಮಂತೆ ಕಾಡಲ್ಲೇ ಇರುವವರಿಗೆ ಹುಡುಕಿಕೊಡಲು ಸುಪಾರಿ ಕೊಟ್ಟಿದ್ದಾರೆ" ಎಂದು ಗುಂಪಿನ ನಾಯಕ ಹೇಳಿದ.
"ಅಯ್ಯೋ ಭಗವಂತ... ರೀ ನಾಳಿದ್ದು ನಾವೇ ಮನೆಗೆ ಹೋಗ್ತೀವಿ ಬಿಡ್ರಿ" ಎಂದು ಕೇಳಿದಳು.
"ಹೆಚ್ಚಿಗೆ ಮಾತಾಡಿದ್ರೆ ಹೂತಾಕಿ ಬಿಡ್ತೀನಿ" ಎಂದನು.
"ಆಯ್ತು. ನೀವೆಲ್ಲಾ ಹೂಳೋಕೆ ಹಳ್ಳ ತೆಗೀರಿ. ನಾವಿಬ್ರೂ ಮಲಕೋತೀವಿ. ಈ ಗಂಟಾದ್ರೂ ಬಿಚ್ಚಿ" ಎಂದು ಕೇಳಿದಳು ಹರ್ಷಿತಾ.
"ಭೂತಾಕಾರವಾಗಿ ನಿಂತಿದ್ದ ವ್ಯಕ್ತಿ ಅವನ ಪಕ್ಕದಲ್ಲಿರುವವನಿಗೆ ಜೋರಾಗಿ ಹೊಡೆದ. ಆ ಸದ್ದನ್ನು ಕೇಳಿ ಇವರಿಬ್ಬರು ಬೆಕ್ಕಿನ ಮರಿಗಳಂತೆ ನೆಲಕ್ಕೊರಗಿದರು.

ಕಲ್ಲು ನೀರು ಕರಗುವ ಸಮಯವಿರಬಹುದು.
"ಉಶ್.. ಉಶ್..." ಎಂದು ಹರ್ಷಿತಾ ಸನ್ನೆ ಮಾಡುತ್ತಾ ಮಹೇಶನನ್ನು ಎಬ್ಬಿಸಿದಳು.
"ಆಹ್ ...ಹ್ಮ್" ಎದ್ದು "ಏನ್ ಹರ್ಷೂ ನಿದ್ರೆ ಬಂದಿಲ್ವ" ಎಂದು ಮೆಲ್ಲಗೆ ಕೇಳುತ್ತಾನೆ.
"ಹು. ಲೋ ಗೂಬೆ ನಿನ್ನ ಹತ್ರ ಇದ್ದ ಲೈಟರ್ ಎಲ್ಲಿ ಕೊಡು" ಎಂದು ಕೇಳುತ್ತಾಳೆ.
ಈ ಕಡೆಯ ಜೇಬು ಎನ್ನುವಂತೆ ಅವಳ ಎರಡು ಕೈಯನ್ನು ತನ್ನ ಪ್ಯಾಂಟಿನ ಎಡ ಜೇಬಿನ ಹತ್ತಿರ ಇಡುತ್ತಾನೆ.
ಅವಳು ಎರಡು ಕೈಯಲ್ಲಿ ಕಷ್ಟ ಪಟ್ಟು ಲೈಟರ್ ತೆಗೆದು. ಮೊದಲು ಅವನ ಕೈಗೆ ಕಟ್ಟಿರುವ ಹಗ್ಗವನ್ನು ಸುಡುತ್ತಾಳೆ.
ತಕ್ಷಣ ಮಹೇಶ ಲೈಟರ್ ಇಸ್ಕೋಂಡು ಅವಳ ಕೈ-ಕಾಲುಗಳಿಗೆ ಕಟ್ಟಿರುವ ಹಗ್ಗವನ್ನು ಬಿಚ್ಚುತ್ತಾನೆ. ನಂತರ ಅವನ ಕಾಲಿನ ಹಗ್ಗವನ್ನು ಬಿಡಿಸಿಕೊಂಡು ಇಬ್ಬರು ಮೆಲ್ಲಗೆ ಕಾಲಿಡುತ್ತಾ ಬಾಗಿಲ ಬಳಿ ಬರುತ್ತಾರೆ. ಇವರ ಅದೃಷ್ಟಕ್ಕೇ ಬಾಗಿಲಿಗೆ ಚಿಲಕವೇ ಇರುವುದಿಲ್ಲ.
ಸದ್ದಿಲ್ಲದೆ ಬಾಗಿಲು ತೆಗದು ಹೊರಗೆ ಬರುತ್ತಾರೆ.
"ಇರೋ ಬಂದೆ" ಎಂದು ಹರ್ಷೀತಾ ಬಾಗಿಲ ಮುಂದೇ ದೊಡ್ಡ ಕಲ್ಲುಗಳನ್ನು ಇಟ್ಟು, ಇಬ್ಬರು ಕತ್ತಲ್ಲಲ್ಲಿ ಓಡುತ್ತಾರೆ.

ಸ್ವಲ್ಪ ದೂರ ಬಂದ ಮೇಲೆ ಅವರ ಹತ್ತಿರ ಇರುವ ಮೊಬೈಲ್ ಟಾರ್ಚ್ ಹಾಕಲು ತೆಗೆದರೆ,ಆ ಮೊಬೈಲ್ ಸತ್ತು ಸುಮಾರು ಗಂಟೆಗಳೇ ಆಗಿದೆ.
ನಿಧಾನಕ್ಕೆ ದೂರದಲ್ಲಿ ನೀರಿನ ಭೋರ್ಗರೆತ ಕೇಳಿಸುತ್ತದೆ.
"ಹೇ ಮಹೀ ಈ ಕಡೇಯಿಂದ ಸೌಂಡ್ ಬರ್ತಿದೆ" ಎಂದು ಪಶ್ಚಿಮದತ್ತ ಕೈ ತೋರಿಸುತ್ತಾಳೆ.
"ಹ್ಞು ಹೌದು. ನಡಿ ಹೋಗೋಣ" ಅಂದು ಒಂಚೂರು ಬೆಳಕು ಕಾಣಲಿ ಎಂದು ಲೈಟರ್ನ್ನು ಹತ್ತಿಸುತ್ತಾನೆ.
"ಲೋಫರ್ ಸಿಗರೇಟ್ ಸೇದ್ತೀಯಾ ನೀನು ?" ಎಂದು ಹರ್ಷಿತಾ ಕೋಪದಿಂದ ಕೇಳಿದಳು.
"ಥೂ...! ಇಲ್ಲಪ್ಪ" ಎಂದನು ಮಹೇಶ.
"ಮತ್ತೇ ನಿನ್ನ ಹತ್ರ ಲೈಟರ್ ಏನಕ್ಕೆ ಇಟ್ಕೋಂಡಿದ್ದೀಯಾ ?" ಎಂದು ಪ್ರಶ್ನಿಸುತ್ತಾಳೆ.
"ಕಾಡಲ್ಲಿ ಜಿಗಣೆ ಕಾಟ ಅಲ್ವ ಅದನ್ನ ತಪ್ಪಿಸೋಕೆ ಕಾಲಿಗೆ ಉಪ್ಪು ನೀರು ಹಾಕೋ ಇಲ್ಲಾ ಒಂದು ಬೆಂಕಿ ಪೊಟ್ಟಣ ಇಟ್ಕೋ ಅಂತ ಅಮ್ಮ ಹೇಳಿದ್ರು ಅದಕ್ಕೆ ಲೈಟರ್ ತಂದಿದ್ದೆ" ಅಂದನು.
"ಓಹೊ ಅತ್ತೆ ಹೇಳಿದ್ದಾ..!  ಭಾರೀ ಪಾಕ್ಡ ಇದ್ದೀಯಾ ಕಣೋ ನೀನು" ಎನ್ನುತ್ತಾಳೆ.
"ನೀವೇನು ಕಮ್ಮೀನಾ" ಎಂದು ಎಂದಾಗ ಇಬ್ಬರು ನಗುತ್ತಾರೆ.
ಕಾಡಲ್ಲಿ ತಡಕಾಡುತ್ತಾ, ಎಡವುತ್ತಾ, ತೊಡರುತ್ತಾ ಒಂದು ಮೈಲಿ ನಡೆದು ಬಂದ ಮೇಲೆ ಸಮುದ್ರದ ತೀರ ಸಿಕ್ಕಿತು.

ನಡೆದು ನಡೆದು ಸುಸ್ತಾಗಿದ್ದ ಇಬ್ಬರೂ ಮರಳಿನ ಮೇಲೆ ಕೂತರು. ನೀರಿನ ದಾಹವಾಗೀತ್ತು. ನೀರಿದ್ದರು ಕುಡಿಯಲಾಗದು.
"ಮಹೀ ಸುಸ್ತಾಗಿದೆ ಕಣೋ" ಎಂದಳು ಹರ್ಷಿತಾ.
ಸುತ್ತಲೂ ನೋಡಿದ ಸುಮಾರು ಇಪ್ಪತ್ತು ಗಜ ದೂರದಲ್ಲಿ ತೆಂಗಿನ ಮರಗಳ ಸಾಲು.
"ಬಂದೆ" ಎಂದು ತೆಂಗಿನ ಮರದ ಹತ್ತಿರ ಹೋದನು.
"ಇರೋ ನಾನು ಬಂದೆ" ಎಂದು ಅವನನ್ನೇ ಹಿಂಬಾಲಿಸಿದಳು ಹರ್ಷಿತಾ.
ತೆಂಗಿನ ಮರವನ್ನೇರಲು ಶುರು ಮಾಡಿದ.
"ಪಕ್ಕಕ್ಕೆ ಹೋಗು ಹರ್ಷೂ" ಎಂದು ಮೇಲಿಂದಲೇ ಕೂಗಿದ. ಈಗಾಗಲೇ ಕತ್ತಲಿಗೆ ಅವರಿಬ್ಬರ ಕಣ್ಣುಗಳು ಬಹಳಷ್ಟು ಹೊಂದಿಕೊಂಡಿದ್ದವು. ಒಂದೆರಡು ಎಳನೀರು ಕಾಯಿಗಳನ್ನು ಕೆಳಗೆಸೆದ ಮೇಲೆ,
"ಮಡಿಕೇಲಿ ಹೆಂಡ ಕಟ್ಟಿದ್ದಾರೆ ಕುಡೀತೀಯಾ" ಎಂದು ಮಹೇಶ ಕೇಳಿದನು.
"ಹ್ಞೂ ತಗೋ ಬಾ ಚಳಿ ಆಗ್ತಿದೆ" ಎಂದು ಎರಡು ಕೈನ್ನೂ ಉಜ್ಜಿದಳು. ಕೆಳಗೆ ಬಂದಮೇಲೆ ಮೊದಲು ಇಬ್ಬರೂ ಎಳನೀರು ಕುಡಿದು, ನಂತರ ಹುಳಿ ಹುಳಿಯಾಗಿದ್ದ ಹೆಂಡವನ್ನು ಪೂರ್ತಿಯಾಗಿ ಕುಡಿದರು. ಮೈ ಸ್ವಲ್ಪ ಬೆಚ್ಚಗಾಯ್ತು. ತೀರದ ಹತ್ತಿರ ಬಂದು ಮರಳಿನ ಮೇಲೆ ಲವ್(ಹಾರ್ಟ್) ಸಿಂಬಲ್ ಬಿಡಿಸಿ ಅದರೊಳಗೆ ಹರ್ಷೂ ಲವ್ಸ್ ಮಹೀ ಅಂತ ಬರೆದಳು. ಇಬ್ಬರು ಅಂಗಾತ ಮಲಗಿಕೊಂಡು ಕೈ ಹಿಡಿದುಕೊಂಡರು. ಚೂರು ಜೋಂಪು ಹತ್ತಿತ್ತು.

"ಹರ್ಷಿತಾಳ ಕಿವಿಗೆ ತೇವವಾದಂತೇ ನಿಧಾನಕ್ಕೇ ಕಣ್ಣು ಬಿಟ್ಟಳು. ಎಲ್ಲಾ ಮಂಜು ಮಂಜಾಗಿ ಅಸ್ಪಷ್ಟವಾಗಿ ಕಾಣುತಿದ್ದವು. ಸಮುದ್ರದ ಮಧ್ಯೆ ಇರುವಂತೆ,
ಐದಾರು ಜನ ಬಂದೂಕುಧಾರಿಗಳು ನಿಂತಿರುವ ಹಾಗೇ. ಎಲ್ಲರೂ ಶಾಲಾ ಮಕ್ಕಳ ಹಾಗೇ ಒಂದೇ ತರದ ಸಮವಸ್ತ್ರ ತೊಟ್ಟಿದ್ದಾರೆ. ಕಣ್ಣು ಉಜ್ಜಿ ಸ್ಪಷ್ಟವಾಗಿ ನೋಡುತ್ತಾಳೆ. ಹೌದು ಕಂಡದ್ದೆಲ್ಲಾ ನಿಜ.
ಧಡಕ್ಕನೆ ಎದ್ದು ಕೂತು ಭಯದಿಂದ ನೋಡುತ್ತಾಳೆ. ಕಿವಿಗೆ ತೇವವಾಗಿದ್ದನ್ನು ಒರೆಸಿಕೊಳ್ಳುತ್ತಾಳೆ. ಅಂಟಂಟು ಕೈ ಮುಂದೇ ತಂದು ನೋಡುತ್ತಾಳೆ ರಕ್ತ..!
ಗಾಬರಿಯಾಗಿ, ಹೃದಯವನ್ನು ಗಟ್ಟಿ ಮಾಡಿಕೊಂಡು ನೋಡಿದಳು. ಮಹೇಶನ ತಲೇಯಿಂದ ರಕ್ತ ನೀರಾಗಿ ಹರಿದಿದೆ.
"ಮಹೀsssssss......!!!" ಎಂದು ಕಿಟಾರನೇ ಕಿರುಚಿ ಅವನ ತಲೆಯನ್ನು ತನ್ನತ್ತ ತಿರುಗಿಸುತ್ತಾಳೆ. ಹಣೆಯ ಮೇಲೆ ಹತ್ತು ರೂಪಾಯಿ ನಾಣ್ಯದಷ್ಟು ದೊಡ್ಡದಾದ ತೂತಾಗಿದೆ. ಗುಂಡು ಹೊಕ್ಕಿದೆ ಎಂದು ಯಾರು ಬೇಕಾದರೂ ಊಹಿಸಿಬಹುದು. ಮಾತೇ ಬರುವುದಿಲ್ಲ.
"ಮಹೀ ಮಹೀ" ಎಂದು ಕೆನ್ನೆಯನ್ನು ಮೆತ್ತಗೆ ಅಲುಗಾಡಿಸುತ್ತಾ, ಮೆಲ್ಲಗೆ ಹೆಸರನ್ನು ಉಸುರುತ್ತಾಳೆ.
ವಾಸ್ತವಕ್ಕೇ ಬರದೇ ದಿಗ್ಭ್ರಾಂತಳಾಗಿ. ಯಾಂತ್ರಿಕವಾಗಿ ಅವನಿಂದ ಹಿಂದೆ ಬಂದು ಎದ್ದು ನಿಲ್ಲುತ್ತಾಳೆ. ಹಿಂದಿನಿಂದ ಬಂದೂಕುಧಾರಿ ಅವಳನ್ನು ಹಿಡದು ಕೀಚಕನಂತೇ ಗಹಗಹಿಸಿ ನಗುತ್ತಾನೆ. ಅವನಿಂದ ಬಿಡಿಸಿಕೊಳ್ಳಲು ಪ್ರಯತ್ನನಿಸುತ್ತಾಳೆ. ಅವನು ಹಿಡಿತವನ್ನು ಬಿಗಿಗೊಳಿಸುತ್ತಾನೆ. ಪಕ್ಕದಲ್ಲಿದ್ದ ಅವರ ಸಹಚರರನ್ನು ಕರೆಯುತ್ತಾನೆ. ಅಷ್ಟರಲ್ಲಿ ಹರ್ಷಿತಾ ಒಂದು ಹೆಜ್ಜೆ ಹಿಂದಕ್ಕೇ ಹಾಕಿ ತನ್ನೆಲ್ಲಾ ಬಲವನ್ನು ಬಿಟ್ಟು ಅವನ ಸಮೇತಾ ಹಡುಗಿನಿಂದ ಸಮುದ್ರಕ್ಕೇ ಹಾರಿದಳು.

ತೀರದಲ್ಲಿ ಹರ್ಷೂ ಲವ್ಸ್ ಮಹೀ ಎಂದು ಬರೆದಿರುವುದನ್ನು ಸಮುದ್ರದ ಅಲೆಗಳು ಅಳಿಸಿ ಹಾಕಿದೆ.

                
                                    *******
©ಮಹೇಶ್ ಪುಲಿಕೇಶಿ 
06-02-2017

Comments

Popular Posts