ನೀ ಸಿನೆಮಾದೊಳಗೋ - ಸಿನೆಮಾ ನಿನ್ನೊಳಗೋ
ನಾನೊಂದು ಅದ್ಭುತವಾದ ಸಿನೆಮಾ ಮಾಡ್ತೀಆರ ಅಂತ ಹೇಳಿಕೊಂಡು ಬಂದ ಎಷ್ಟೋ ಜನ ಇನ್ನೂ ಸಿನೆಮಾದ ಒಂದು ಶಾಟ್ ಕೂಡ ತೆಗೆದಿಲ್ಲ. ಹತ್ತು ವರ್ಷ-ಹದಿನೈದು ವರ್ಷ ನಿರ್ದೇಶಕನಾಗಲು ಕಾದವರು ಇದ್ದಾರೆ. ಅದಕ್ಕೂ ಹೆಚ್ಚೂ ವರುಷಗಳು ಸಹ-ನಿರ್ದೇಶಕನಾಗಿ ದುಡಿದ ಕೊನೆಗೂ ನಿರ್ಮಾಪಕ ಸಿಗದೇ ಹೊಟ್ಟೆ ಪಾಡಿಗೆ ಬೇರೆ ಕೆಲಸವನ್ನು ಹುಡುಕಿಕೊಂಡ ಎಷ್ಟೋ ಜನರಿದ್ದಾರೆ. ಸಿನೆಮಾ ಎಂಬುದು ಚಕ್ರವ್ಯೂಹದ ಹಾಗೇ ಒಳಗೆ ಹೋಗುವುದು ಸುಲಭ. ಬರುವುದು ಅಷ್ಟು ಸರಳವಲ್ಲ. ಸಿನೆಮಾ ರಂಗದಲ್ಲಿ ಬಹಳಷ್ಟು ಜನ ಅಭಿಮನ್ಯುಗಳಿದ್ದಾರೆ.
ಇಷ್ಟೆಲ್ಲಾ ಕಷ್ಟ ಪಟ್ಟು ಒಬ್ಬ ನಿರ್ಮಾಪಕ ಸಿಕ್ಕಿ ಸಿನೆಮಾ ಮಾಡಿದ ಅಂಥಾದರೂ, ಸಿನೆಮಾದಲ್ಲಿ ಒಂದು ಅಂಶ ಚೆನ್ನಾಗಿಲ್ಲ ಅಂದ್ರೂ ಪ್ರೇಕ್ಷಕ "ಡುಬಾಕ್ ಪಿಚ್ಚರ್ ಗುರೂ" ಅಂದ್ರೆ ಸಾಕು. ಸಿನೆಮಾ ಕಥೆ ಅಧೋಗತಿ. ಸಿನೆಮಾ ಇಷ್ಟವಾಗುವುದು ಬಿಡುವುದು ಅವರವರ ವೈಯಕ್ತಿಕ ವಿಚಾರ ಅಥವಾ ಅವರ ಇಚ್ಛಾನುಸಾರ. ನನಗೆ ಇಷ್ಟವಾಗದ ಸಿನೆಮಾ, ಇನ್ನೊಬ್ಬನಿಗೆ ಅದ್ಭುತ ಅನ್ನಿಸಬಹುದು. ನಂಗೆ ಚಿತ್ರ ಇಷ್ಟವಾಗಿಲ್ಲ ಎಂದು ಬೇರೊಬ್ಬರಿಗೂ ಸಿನೆಮಾ ಚೆನ್ನಾಗಿಲ್ಲ ಹೋಗಬೇಡಿ ಎನ್ನುವುದು ಎಷ್ಟು ಸರಿ.! ಅವರ ಇಷ್ಟಗಳನ್ನು ನಿರ್ಧರಿಸುವುದಕ್ಕೇ ನಾವ್ಯಾರೂ..!?
ಇನ್ನೂ ಬಹಳ ಮಂದಿ ಸಿನೆಮಾ ನೋಡದೆ "ಹೇ ಡಬ್ಬಾ ಪಿಚ್ಚರ್ ಗುರೂ" ಅನ್ನುತ್ತಾರೆ. ಸಿನೆಮಾ ನೋಡಿದ್ದೀರ ಅಂತ ಕೇಳಿದರೆ ಅವರಿಂದ ಬರುವ ಉತ್ತರ "ಅವ್ನ ಹಳೇ ಪಿಚ್ಚರ್ಗಳು ನಾನ್ ನೋಡಿಲ್ವ" ಅಂತ..! ಹಳೇ ಸಿನೆಮಾಗಳನ್ನು ನೋಡಿ ಒಬ್ಬ ನಿರ್ದೇಶಕ ಅದೇ ರೀತಿ ಕೆಟ್ಟ ಸಿನೆಮಾ ತೆಗೆಯುತ್ತಾನೆ ಅಂತ ಘಂಟಾಘೋಷವಾಗಿ ಹೇಳುವುದು ಸರಿಯೇ ? ಪ್ರತಿ ನಿರ್ದೇಶಕನಿಗೂ ಪ್ರತಿ ಸಿನೆಮಾ ಕೂಡ ಪ್ರಸವದ ಹಾಗೇ ನೋವು,ಕಾತರ ಕಟ್ಟಿಟ್ಟ ಬುತ್ತಿ.
ಇಷ್ಟೇಲ್ಲಾ ಇಷ್ಟಪಟ್ಟು, ಕಷ್ಟಪಟ್ಟು ಸಿನೆಮಾ ಮಾಡುವುದು ಏನಕ್ಕೆ ?
ಹೆಸರಿಗಾಗಿಯೋ, ದುಡ್ಡಿಗಾಗಿಯೋ, ಆತ್ಮತೃಪ್ತಿಗಾಗಿಯೋ ಅಥವಾ ಪ್ರೇಕ್ಷಕರನ್ನು ರಂಜಿಸಲೋ !?
ಪ್ರೇಕ್ಷಕರನ್ನು ರಂಜಿಸಿದರೆ ನಮಗೆ ಸಿಗುವ ಭಾಗ್ಯವಾದರೂ ಏನು ?
ಹಾಗಾದರೆ ಒಬ್ಬ ನಿರ್ದೇಶಕ ಸಂತೋಷಕ್ಕಾಗಿ ಸಿನೆಮಾ ಮಾಡುತ್ತಾನ ? ಹಾಗಾದರೆ ಪ್ರೇಕ್ಷಕ-ದುಡ್ಡು -ಹೆಸರು-ಕೀರ್ತಿ ಇದೆಲ್ಲಾ ನಿಮಿತ್ತವೇ.!
ಕಾಡುವ ಕಥೆಗಳೇ ಅದ್ಭುತವಾದ ಸಿನೆಮಾಗಳಾಗುವುದು. ಸಿನೆಮಾ ನೀರಿನಂತೆ ಶುಭ್ರವಾಗಿ,ಸ್ಪಷ್ಟವಾಗಿರಬೇಕು. ಪ್ರೇಕ್ಷಕನಿಗೆ ಹತ್ತಿರವಾಗುವ ಕಥೆಗಳು, ತನ್ನ ಜೀವನಕ್ಕೆ ಸಂಬಂಧಪಟ್ಟಿದಷ್ಟು ಹತ್ತಿರವಿದ್ದರೇ ಸಿನೆಮಾ ಗೆಲುವು ಖಚಿತವೇ ?!
ಹಾಗಿದ್ದರೇ ಹತ್ತು ಕೋಟಿ ಹಾಕಿ ಐದು ಹಾಡುಗಳು, ಏಳು ಫೈಟುಗಳು, ನಾಲ್ಕು ಕಾಮಿಡಿ ದೃಶ್ಯಗಳನ್ನು ತುರುಕಿದರೆ ಅದ್ಭುತವಾದ ಸಿನೆಮಾವಾದಿತೇ..?
ಹಾಗಾದರೇ ಅದ್ಭುತವಾದ ಚಿತ್ರ ಹೇಗಾಗುತ್ತೆ. ?
ಬೇರೆಯಾರಿಗೂ ಕಟ್ಟು ಬೀಳದೇ ನಿರ್ದೇಶಕ ತನ್ನಿಷ್ಟದ ಸಿನೆಮಾ ಮಾಡಿದಾಗಲೇ ..!
ಸಿನೆಮಾ ನಿರ್ದೇಶಕನ ಕನಸು-ಕಲ್ಪನೆ. ಮೊದಲು ಅದನ್ನು ತನ್ನ ತಂಡದವರಿಗೆ ದಾಟಿಸಿಬೇಕು. ತದನಂತರ ಅವರ ಮೂಲಕ ಜನರಿಗೆ ದಾಟಿಸಿವುದು.
ಲಕ್ಷಾಂತರ ಜನ ಸೇರಿ ತಾಜ್ಮಹಲ್ ಕಟ್ಟಿದ ಹಾಗೇ.!
ಪ್ರತಿಯೊಬ್ಬನು ಮನಃಪೂರ್ವಕವಾಗಿ ಕೆಲಸ ಮಾಡಬೇಕು.
ಅಂತಹ ಅದ್ಭುತವಾದ ಸಿನೆಮಾ ಹುಟ್ಟುವುದು ಹೇಗೆ ? ಯಾವಾಗ ?
ಭೂಮಿಯಲ್ಲೀ ಬೀಜ ಮೊಳೆಕೆ ಹೊಡೆದ ಹಾಗೇ ನಿರ್ದೇಶಕನಲ್ಲಿ ಕಲ್ಪನೆ ಮೂಡಿದಾಗ.
"ಸಿನೆಮಾ ನಿರ್ದೇಶಕನೊಳಗೆ ಹುಟ್ಟಬೇಕು"
******
©ಮಹೇಶ್ ಪುಲಿಕೇಶಿ
25-02-2017
Comments
Post a Comment