ಭೂಮಿ
"ನಾನ್ ಅವಳನ್ನೇ ಮದ್ವೆ ಆಗ್ತೀನಿ" ಅಂತ ಧೃಡ ನಿರ್ಧಾರದಿಂದ ಆಕಾಶ್ ಹೇಳಿದ.
"ಎಲ್ರೂ ನಿನ್ನ ಮುಂಡೇಗಂಡ ಅಂತಾರೆ" ಎಂದು ವಾಸ್ತವತೆಯನ್ನು ಅರ್ಥ ಮಾಡಿಸಲು ಸುಮಂತ್ ಮುಂದಾದ.
"ಯಾರು ಏನಾದ್ರೂ ಅನ್ಕೊಳಿ.. ನನ್ನ ಜೀವ್ನ... ನಂಗೆ ಅನಿಸಿದ್ದೇ ಮಾಡೋದು" ಎಂದು ಮತ್ತೆ ತನ್ನ ಕೊನೆಯ ನಿರ್ಧಾರವನ್ನು ತಿಳಿಸಿದ.
"ಈ ವಿಚಾರನ ಭೂಮಿ ಹತ್ರ ಮಾತಾಡಿದ ?" ಎಂದು ಪ್ರೆಶ್ನೆ ಮಾಡಿದ.
"ಸಂಜೆ ಮಾತಾಡ್ತೀನಿ" ಅಂದನು.
"ನಿಮ್ಮ ಮನೆಯವರು ಏನ್ ಅಂತಾರೆ" ಎಂದು ಇನ್ನೊನ್ದು ಪ್ರೆಶ್ನೆ ಎಸೆದ.
"ಮನೇಯವರೀಗೇ ನಾನ್ ಅವ್ರನ್ನ ಮದ್ವೆ ಆಗೋದು ಸುತಾರಾಮ್ ಇಷ್ಟವಿಲ್ಲ. ಅಷ್ಟಕ್ಕೂ ಇಷ್ಟ ಆಗಬೇಕಾಗಿರೋದು ನಂಗೆ ಅಲ್ವಾ...." ಎಂದು ಉತ್ತರಿಸಿದನು.
"ಹಾಗಿದ್ರೆ ನಿನಗೆ ಮನೇಯವರ ಒಪ್ಪಿಗೆ ಬೇಡ" ಎಂದು ಕೇಳಿದ.
"ನಾವು ಒಪ್ಪಿಗೆ ಕೇಳೋದು ನಮ್ಮ ಖುಷಿಗೆ, ಒಪ್ಪಿದರೆ ನನ್ನ ತೀರ್ಮಾನ ಸರಿ ಎಂದು ಹಿಗ್ಗುತ್ತೇವೇ. ಒಪ್ಪದಿದ್ದರೆ ತಲೆ ಇಲ್ಲದ ಜನ ಏನೂ ತಿಳಿಯುವುದಿಲ್ಲ ಎಂದು ಅವರ ತೀರ್ಮಾನವನ್ನು ತಿರಸ್ಕರಿಸುತ್ತೇವೇ..... ಎಲ್ಲಾ ಅವರವರ ಮನಸ್ಸಿನಿಚ್ಚೆಯಂತೆ" ಎಂದು ಮೌನಕ್ಕೇ ಜಾರಿದನು.
"ಇನ್ನೂ ನಿನ್ನ ಹತ್ರ ಮಾತಾಡೋ ವ್ಯವಧಾನ ನನಗಿಲ್ಲ, ರಾತ್ರಿ ಸಿಗ್ತೀನಿ" ಎಂದು ಹೊರಟೆ ಬಿಟ್ಟ.
ಸೂರ್ಯ ಪಡುವಣ ದಿಕ್ಕಿಗೆ ಜಾರುತ್ತಿದ್ದ. ತಂಗಾಳಿ ಮೈಯನ್ನು ಸೋಕಿ ಹೋಗುತಿತ್ತು, ಬೆಟ್ಟದ ಮೇಲೆ ಹಂಗೇ ನಿಂತರೇ ಸ್ವರ್ಗದಲ್ಲಿ ಇರುವಂತೆ ಅನಿಸುತಿತ್ತು. ಮುಳುಗುವ ಸೂರ್ಯನನ್ನೇ ದಿಟ್ಟಿಸಿ ನೋಡುತ್ತಾ ನಿಂತಿದ್ದ ಆಕಾಶ್ಗೆ ಹಿಂದಿನಿಂದ ಯಾರೋ ಬಂದ ಸದ್ದಾಯ್ತು.
"ಹಾಯ್" ಎಂದು ಕೈಯನ್ನೆತ್ತಿದ.
"ಏನೋ ಮಾತಾಡಬೇಕು ಅಂತ ಮೆಸ್ಸೇಜ್ ಮಾಡಿದ್ರಿ..... ಏನು ವಿಚಾರ.....?" ಎಂದು ಭೂಮಿ ಕಣ್ಣಲ್ಲೇ ಪ್ರೆಶ್ನೆ ಮಾಡಿದಳು.
"ಮಾತಾಡಬೇಕು ಅಂದೆ ಆದ್ರೆ ನೀವು ಮುಂದೇ ಬಂದ್ರೆ ಮಾತೇ ಬರೋದಿಲ್ಲ" ಎಂದು ಹಲ್ಲು ಕಿರಿದನು.
"ಹಾಗಿದ್ರೆ ಫೋನಲ್ಲೇ ಹೇಳ್ಬೋದಿತ್ತು ಅಲ್ವಾ " ಎಂದಳು.
"ಇಲ್ಲಾ, ತುಂಬಾ ಮುಖ್ಯವಾದ ವಿಚಾರ...."ಎಂದನು.
"ಸರಿ. ಹಾಗಿದ್ರೆ ಹೇಳಿ" ಎಂದು ಭೂಮಿ ಶಾಂತ ಚಿತ್ತದಿಂದ ನಿಂತಳು.
"ನಿಮಗೆ ನನ್ನ ನೋಡಿದ್ರೆ ಏನ್ ಅನ್ಸುತ್ತೆ ?" ಎಂದನು.
"ತುಂಬಾ ಒಳ್ಳೆಯವರು.. ನೀವು, ನಿಮ್ಮ ಮನೇಯವರು... ನನ್ನ ಗಂಡ ತೀರಿಹೋದ ಮೇಲೆ ಗಂಡನ ಮನೇಯವರು ನನ್ನನ್ನು ಹೊರ ಹಾಕಿದರು.ಇರೋಕೆ ನೆಲೆ ಇರ್ಲಿಲ್ಲ.. ನಾನು ನನ್ನ ಮಗ ಇಬ್ಬರೇ.... ಆವಾಗ ಅನಿಸೋದು ನಂಗೂ ಅಪ್ಪ ಅಮ್ಮ ಎಲ್ರೂ ಇರಬೇಕಿತ್ತು ಅಂತ. ನಿಮ್ಮ ಅಕ್ಕ ಸಿಕ್ಕಿ ನಾನ್ ಇರೋವಾಗ ನಿನ್ ಯಾಕೇ ರೋಡಲ್ಲಿ, ಪಾರ್ಕಲ್ಲಿ ಮಲ್ಕೋಬೇಕು ಎಂದು ನಿಮ್ಮ ಮನೆಗೆ ಕರೆದುಕೊಂಡು ಬಂದ್ಲು. ಅವತ್ತಿಂದ ನಿಮ್ಮ ಅಪ್ಪ ಅಮ್ಮ ನನ್ನ ಸ್ವಂತ ಮಗಳಂತೆ ನೋಡ್ಕೋತಾ ಇದಾರೆ.... ನಂಗೂ ಅಷ್ಟೇ ಅವ್ರು ಸ್ವಂತ ಅಪ್ಪ ಅಮ್ಮ. ಆದರೆ ನೀವು ಸ್ವಲ್ಪ ತರ್ಲೆ.... ನನ್ನ ಗೋಳು ಹ್ಯುಕೋಳೋದು ಜಾಸ್ತಿ... ನಂಗೆ ಒಬ್ಬ ತಮ್ಮ ಇದಿದ್ದರೆ ನಿಮ್ಮ ತರಾನೇ ನೋಡ್ಕೋತಿದ್ದ ಅನಿಸೋದು..." ಎಂದು ಕಣ್ಣಂಚಲಿ ಜಾರಿದ ನೀರನ್ನು ಒರೆಸಿದಳು.
"ಥೂ..........! ತಮ್ಮ ಗಿಮ್ಮ ಎಲ್ಲಾ ಇಲ್ಲ ಆಕಾಶ್ ಅನ್ನಿ " ಎಂದು ಸಪ್ಪೆ ಮುಖ ಹಾಕಿದನು.
"ಸರಿ. ಹೇಳಿ ಆಕಾಶ್...... ಏನು ವಿಷಯ" ಎಂದು ಕೇಳಿದಳು.
"ನಾನು ನಿಮ್ಮನ್ನ ತುಂಬಾ ಪ್ರೀತಿಸ್ತಿದ್ದೀನಿ. ನನ್ನ ಮದ್ವೆ ಆಗ್ತೀರ ..?" ಎಂದನು.
"ಆಕಾಶ್ ನಿಮಗೇನು ತಲೆ ಕೆಟ್ಟಿದೆಯಾ .....?" ಎಂದು ಕಿರುಚಿದಳು.
"ಹು....!! ನಿಮ್ಮನ್ನ ನೋಡಿದಾಗಲೇ ನನ್ನ ತಲೆ ಕೆಟ್ಟೋಯ್ತು.... ಮೊದಲಿಗೆ ಅಪ್ಪ ನಿಮ್ಮನ್ನ ಮನೇಲಿ ಇರೀಸ್ಕೋಳೋದು ಬೇಡ ಅಂದ್ರು ಆಮೇಲೆ ನಾನೇ ಔಟ್ ಹೌಸಲಿ ಇರ್ಲಿ ಏನು ಆಗಲ್ಲ ಅಂದಿದಕ್ಕೆ ಒಪ್ಪಿಕೊಂಡ್ರು" ಎಂದು ವೃತ್ತಾಂತವನ್ನು ಬಿಚ್ಚಿಟ್ಟ.
"ನೀವು ಈ ತರ ಅಂತ ಗೊತ್ತಿದ್ರೆ ನಾನ್ ನಿಮ್ಮ ಮನೆಗೆ ಬರ್ತಾನೆ ಇರ್ಲಿಲ್ಲ.. ಒಬ್ಬ ಹೆಂಗ್ಸು ನಿಮ್ಮ ಹಂಗಿನಲ್ಲಿ ಇದಾಳೆ ಅಂದ್ರೆ ನೀವು ಹೇಳಿದ್ದೆಲ್ಲಾ ಕೇಳ್ತಾಳೆ ಅನ್ಕೋಂಡಿದ್ದೀರಾ ?" ಎಂದು ಪ್ರೆಶ್ನೆ ಹಾಕಿದಳು.
"ಇಲ್ಲಾ... ನಿಜವಾಗ್ಲೂ ನಾನ್ ನಿಮ್ಮನ್ನ ಪ್ರೀತಿಸ್ತಿದ್ದೀನಿ, ನಾನ್ ನಿಮ್ಮನ್ನ ಬಿಟ್ಟು ಇರೋಕೆ ಆಗಲ್ಲ" ಎಂದನು.
"ಹೇ.... ಒಂದು ಮಗು ಇರೋ ವಿಧವೆ ಹೆಂಗಸನ್ನ ಪ್ರೀತಿಸ್ತಿದೀನಿ ಅಂತಿದ್ದಿರಲ್ಲಾ ನಿಮಗೇನಾಗಿದೆ. ಗೊತ್ತಾದ್ರೆ ಜನ ಏನ್ ಅನ್ಕೊತಾರೆ... ಪರ್ಮನೇಟ್ ಆಗಿ ಮನೇಲಿ ಇರೋಕೆ ಆ ಹುಡ್ಗನನ್ನೆ ಬುಟ್ಟಿಗೆ ಹಾಕೊಂಡಿದಾಳೆ ಅಂತ ಮುಖಕ್ಕೇ ಉಗೀತಾರೆ" ಎಂದಳು.
"ಮಗು ಇದ್ದೂ ವಿಧವೆ ಆದ ಮಾತ್ರಕ್ಕೆ ಇನ್ನೊಂದು ಮದುವೆ ಆಗಬಾರದ....? ಪ್ರೀತಿಸಬಾರದ.....? ಜನಗಳು ಸಾಯೋವರ್ಗೂ ಮಾತಾಡ್ತಾರೆ. ಸತ್ರೂ ಮಾತಾಡ್ತಾರೆ" ಎಂದನು.
"ಮದುವೆ.. ? ಮದುವೆ ಅನ್ನೋದು ದೈಹಿಕ ಸಂಪರ್ಕಕ್ಕೇ ಇರುವ ಒಂದು ಮಾರ್ಗ, ಬೇರೇ ಸುಲಭದ ಮಾರ್ಗಗಳು ಇದಿದ್ದರೆ ಎಷ್ಟೋ ಜನ ಮದ್ವೇನೇ ಆಗ್ತಿರ್ಲಿಲ್ವೇನೋ ಉದಾಹರಣೆಗೆ ಲಿವಿಂಗ್ ಟುಗೇದರ್. ನಾನ್ ಚೆನ್ನಾಗಿದ್ದೀನಿ ಅಂತ ಮದ್ವೆ ಆಗ್ತೀನಿ ಅಂತಿದ್ದಿರಾ... ನಾನ್ ಕುರೂಪಿ ಆಗಿದ್ರೆ ?? ಕಾಮಕ್ಕೆ ಮದುವೆಯ ಮುಖವಾಡ ಹಾಕ್ಬೇಡಿ ಆಕಾಶ್" ಎಂದು ಮೌನಿಯಾದಳು.
"ಛೀ..... ಹಾಗೆಲ್ಲ ಮಾತಾಡ್ಬೇಡಿ. ಕಾಮದ ಮುಖವಾಡ ಕಾವಿಳಿದ ಮೇಲೆ ಕಳಚಲೇ ಬೇಕು. ಅದೇಲ್ಲವನ್ನು ಮೀರಿ ನಿಮ್ಮನ್ನ ಪ್ರೀತಿಸ್ತಿದೀನಿ. ನನ್ನ ಮದುವೆ ಆಗ್ತೀರಾ ?" ಎಂದು ಮತ್ತೆ ಕೇಳಿದ.
"ಮೂರು ಗಂಟು ಕಟ್ಟಿದ್ರೆ ಮದ್ವೆ ಆಗೋಲ್ಲ.
ಅನ್ಯೋನ್ಯತೆ, ನಂಬಿಕೆ ಮತ್ತು ಹೊಂದಾಣಿಕೆ ಈ ಮೂರು ಗುಣಗಳನ್ನು ತಿಳಿದು ಮದುವೆ ಆದರೆ ಅದು ಸುಖಿ ಸಂಸಾರ ಇಲ್ಲದಿದ್ರೆ ಯಾಂತ್ರಿಕ ಜೀವನ. ನಂಗೆ ಗಂಡಸಿನ ಅವಶ್ಯಕತೆ ಬೇಕಿಲ್ಲ" ಎಂದಳು.
"ನಿಮ್ಮ ದೇಹಕ್ಕೆ ಗಂಡಸಿನ ಅವಶ್ಯಕತೆ ಬೇಡದೇ ಇರಬಹುದು ಆದ್ರೆ ಮನಸ್ಸಿಗೆ ಒಬ್ಬ ಸಂಗಾತಿ ಬೇಕೇಬೇಕು" ಎಂದನು.
"ನನಗೆ ಮದುವೆ ಆಗೋಕೆ ಇಷ್ಟ ಇಲ್ಲ. ನಿಮಗೆ ಹಂಗೂ ವಿಧವೆಗೆ ಬಾಳು ಕೊಡ್ಬೇಕು ಅನಿಸಿದ್ರೆ, ಹುಡುಕಿದ್ರೆ ಸಾವಿರ ಜನ ಸಿಗ್ತಾರೆ ಆಗಿ" ಎಂದಳು.
"ಎಲ್ರೂ ನೀವು ಆಗೋಕೆ ಆಗಲ್ಲ ಭೂಮಿ" ಎಂದನು.
"ಅದೇ ನಾನ್ ಚೆನ್ನಾಗಿದ್ದೀನಿ ಅಂತ ಮದ್ವೆ ಆಗ್ತೀರ... ಗೊತ್ತು ಈ ಗಂಡಸರೇಲ್ಲಾ ಹೆಣ್ಣನ್ನ ಒಂದು ಭೋಗದ ವಸ್ತುವಾಗೀ ನೋಡ್ತಾರೆ" ಎಂದಳು.
"ನೀವು ನನ್ನ ಪ್ರೀತಿಸ್ತೀನಿ ಅಂತ ಹೇಳಿದ್ರೆ ಸಾಕು. ನಿಮ್ಮನ್ನ ಮದುವೆ ಆದ್ರೂ ಒಂದು ಮಾರು ದೂರ ನಿಂತು ನಿಮ್ಮನ್ನ ಪ್ರೀತಿಸ್ತೀನಿ... ಸಾಯೋವರ್ಗೂ ಮುಟ್ಟೋದೆ ಇಲ್ಲ... ನನ್ನ ಮದ್ವೆ ಆಗ್ತೀರ.. ?" ಎಂದು ಕಣ್ಣಲ್ಲಿ ಕಣ್ಣಿಟ್ಟು ನೋಡಿದ.
ಭೂಮಿಗೆ ಸೋಲದೆ ವಿಧಿಯೇ ಇರಲಿಲ್ಲ.
"ನಿಮ್ಮ ಮನೇಯವರು ?" ಎಂದಳು.
"ಅದೆಲ್ಲಾ ತಲೆ ಕೆಡಿಸ್ಕೋಬೇಡಿ ನಾನ್ ಒಪ್ಪಿಸ್ತೀನೀ" ಎಂದು ಖುಷಿಯಿಂದ ಅರುಚಿದ.
"ಒಪ್ಪಲಿಲ್ಲ ಅಂದ್ರೆ" ಎಂದು ಮರುಪ್ರೆಶ್ನೆ ಹಾಕಿದಳು.
"ವಿಷ ಕುಡೀತೀನಿ ಅಂತ ಹೆದ್ರುಸ್ತಿನಿ" ಅಂದನು.
"ಹಾಗೇನಾದ್ರೂ ಮಾಡಿದ್ರೆ ನಿಮ್ಮನ್ನ ಮದುವೆ ಆಗಲ್ಲ" ಎಂದು ಕೋಪ ಮಾಡಿಕೊಂಡಳು.
ಆಕಾಶ್ಗೆ ಅವಳನ್ನ ಒಂದ್ಸಾರಿ ಬಿಗಿದು ಅಪ್ಪಿಕೋಬೇಕು ಅನಿಸ್ತು ಆದ್ರೆ ಸಾಯೋವರ್ಗೂ ಮುಟ್ಟಲ್ಲ ಅಂದಿದ್ದು ನೆನಪಾಗಿ ಸುಮ್ಮನೆ ಅವಳನ್ನೇ ನೋಡುತ್ತಾ ನಿಂತ.
ಅಷ್ಟರಲ್ಲೀ ಸುಮಂತ್ ಭೂಮಿಯ ಮಗುವಿನ ಜೊತೆ ಬಂದಾ...
"ಸ್ಸಾರಿ ಮಗು ಅಳ್ತೀತ್ತು. ಫೋನ್ ಮಾಡಿದ್ದೆ ನಾಟ್ ರೀಚೆಬಲ್ ಬಂತು ಅದಕ್ಕೆ ಹುಡುಕಿಕೊಂಡು ಬಂದೆ" ಎಂದು ಮಗುವನ್ನು ಭೂಮಿ ಕೈಗೆ ಕೊಟ್ಟನು.
"ಯಾಕೋ ಧ್ರುವ ಅಳ್ತೀದ್ಯಾ" ಎಂದು ಭೂಮಿ ಸಮಾಧಾನ ಮಾಡ್ತಿದ್ದಳು.
"ಒಂದು ನಿಮಿಷ ಬಾ ಇಲ್ಲಿ" ಎಂದು ಸುಮಂತ್ ಆಕಾಶ್ನನ್ನು ಸೈಡಿಗೆ ಕರೆದನು.
"ಏನೋ ನಿಂದು" ಎಂದು ಆಕಾಶ್ ಕೇಳಿದ.
"ನೀವು ಒಪ್ಪಿಲ್ಲ ಅಂತ ಆಕಾಶ್ ಸಾಯೋಕೆ ಹೋಗ್ತೀನಿ ಅಂತಿದ್ದ ಅಂತ ನಿಮ್ಮ ಮನೇಲಿ ಸುಳ್ಳು ಹೇಳಿದೆ. ಅದಕ್ಕೆ ನಿಮ್ಮ ಮನೆಯವರು ರಂಡೇನೋ ಮುಂಡೇನೋ ಕಟ್ಕೋಂಡು ಒಟ್ಟ್ನಲ್ಲಿ ಬದುಕಿದ್ರೆ ಸಾಕು ಅಂದ್ರು. ಅದನ್ನೇ ತಿಳಿಸೋದಕ್ಕೆ ಮಗು ನೆಪ ಮಾಡ್ಕೋಂದು ಬಂದೆ" ಎಂದನು.
"ಅದ್ಸರೀ ಮಗು ಯಾಕೇ ಅಳ್ತಿದೆ" ಎಂದು ಕೇಳಿದ.
"ಮಗು ಅಳ್ತೀರಲಿಲ್ಲ ಅಂತ ಮೆಲ್ಲಗೆ ಗಿಲ್ ಬಿಟ್ಟೇ" ಎಂದನು.
"ಥೂ...! ಲೋಫರ್ ನನ್ ಮಗ್ನೆ ಹೋಗು" ಎಂದು ಓಡಿಸಿದನು.
"ಬರ್ತೀನಿ" ಎಂದು ಹೇಳಿ ಸುಮಂತ್ ಹೊರಟ.
ಧ್ರುವ ಇನ್ನೂ ಅಳುತ್ತಲೇ ಇದ್ದ.
"ಓಯ್ ಬಾರೋ ಚಿನ್ನಿ ಯಾಕೇ ಅಳ್ತೀಯಾ" ಎಂದು ಜೇಬಲ್ಲಿದ್ದ ಚಾಕಲೇಟ್ ಕೊಟ್ಟು ಎತ್ತಿಕೊಂಡ.
ಧ್ರುವ ನಿಧಾನಕ್ಕೆ ಅಳುವುದನ್ನು ನಿಲ್ಲಿಸಿದ.
"ಚಾಕಲೇಟ್ ತಿಂತೀರಾ ನೀವು" ಎಂದು ಕೇಳಿದಳು.
"ಇಲ್ಲ. ನಿಮಗೆ ಕೊಡೋಣ ಅಂತ ತಂದಿದ್ದೆ" ಎಂದನು.
"ನನ್ನ ವಯಸ್ಸು ಎಷ್ಟು ಗೊತ್ತಾ" ಅಂದಳು ಭೂಮಿ.
"ಮೂವತ್ತೆರಡಂತೆ..... ಅಕ್ಕಂದು ನಿಮ್ದು ಒಂದೇ ದಿನ ಬರ್ತಡೇ ಅಲ್ವಾ" ಅಂದನು.
"ಹ್ಮ. ನಿನಗೆ ಇಪ್ಪತ್ತನಾಲ್ಕು ವರ್ಷ ಅಲ್ವಾ" ಎಂದಳು.
"ಹೌದು. ಆದ್ರೂ ಆಂಟಿನ ಮದುವೆ ಆಗೋತರ ಆಯ್ತು" ಅಂದು ನಕ್ಕಿದ.
"ಬಾಯಿ ಮುಚ್ಚೋ ಗೂಬೆ" ಎಂದು ತಬ್ಬಿಕೊಂಡಳು.
ಅವರಿಬ್ಬರ ಮಧ್ಯದಲ್ಲೀ ಧ್ರುವ ನಕ್ಷತ್ರದಂತೆ ಮಿನುಗುತಿದ್ದನು.
ದೂರದಲ್ಲಿ ಭೂಮಿಯನ್ನು ಆಕಾಶ ಮುತ್ತಿಕ್ಕುವಂತೆ ಕಾಣುತಿತ್ತು.
******
©ಮಹೇಶ್ ಪುಲಿಕೇಶಿ
23-08-2016
Comments
Post a Comment