ಖುಷಿ
ಅಪ್ಪಾ ಎಲ್ಲಿ ಹೋಗ್ತೀದ್ದೀವೀ.. ?" ಎಂದು ಕೇಳಿದ ಮುಗ್ಧ ಕಣ್ಣಿನಲ್ಲಿ ದುಃಖ ಆವರಿಸಿತ್ತು.
"ನಾವು ಇಡೀ ವಿಶ್ವವನ್ನೇ ಸುತ್ತಿ ಬರೋಣ ಮಗಳೇ" ಎಂದು ಮಗಳ ತಲೆಯನ್ನು ಸವರಿದೆ.
"ಅಪ್ಪಾ ನಾವೀಬ್ರೇನಾ ? ಅಮ್ಮ ಮತ್ತೇ ಚಿಂಟು ಬರೋದೀಲ್ವಾ ?" ಎಂದು ಏನು ಅರಿಯದೆ ಕೇಳಿದಳು.
"ಇಲ್ಲ, ಅವ್ರಿಬ್ರೂ ಬರೋದಿಲ್ಲ ಅವ್ರಿಗೆ ಊರಿನಲ್ಲಿ ಬೇರೆಯದೇ ಕೆಲ್ಸ ಇದೆ..." ಎಂದಾಗ ಕಣ್ಣು ತುಂಬಿಕೊಂಡಿತು.
"ಊರಿನಲ್ಲಿ ನಮಗೇನು ಕೆಲ್ಸ ಇಲ್ವಾ ಅಪ್ಪ, ಈ ವರ್ಷ ನಂಗೆ ಸ್ಕೂಲಿಗೆ ಸೇರಿಸ್ತೀನಿ ಅಂದಿದ್ದಲ್ಲ" ಎಂದು ಆತಂಕದಿಂದ ಕೇಳಿದಳು.
"ಎಲ್ಲಾ ಸರಿಯಾದ್ರೆ ಹೊರಡೋಣ, ಇಲ್ಲಾಂದ್ರೇ ಇಲ್ಲೇ ಸ್ಕೂಲಿಗೆ ಸೇರಿಸ್ತೀನಿ ಇವಾಗ ಮಲ್ಕೋ ಮಗಳೇ" ಎಂದೆ.
"ಸರಿಯಪ್ಪ" ಎಂದು ತಲೆಯನ್ನು ನನ್ನ ಭುಜಕ್ಕೆ ಕೊಟ್ಟಳು.
ಬಸ್ ಒಳಗೇ ಡ್ರೈವರ್ ಬರುತ್ತಲೇ "ಟಿಕೇಟ್ ಕೌಂಟರಲ್ಲೇ ತಗೋಬೇಕು ಇಲ್ಲಿ ಕೊಡಲ್ಲ" ಎಂದನು
ಮಗಳನ್ನು ಮಲಗಿಸಿ ಕೌಂಟರಿಗೆ ಹೋಗಿ ಟಿಕೇಟ್ ತಂದೆ.
ಡ್ರೈವರ್ ಎಲ್ಲರನ್ನೂ ಲೆಕ್ಕಾ ಹಾಕಿ ಬಸ್ಸನ್ನೂ ಸ್ಟಾರ್ಟ್ ಮಾಡಿದ.
ಬಸ್ಸು ಹಳ್ಳ ಕೊಳ್ಳದಲ್ಲಿ ಇಳಿದು ಶಬ್ಧ ಮಾಡುತ್ತಲೇ ಶಿವಮೊಗ್ಗವನ್ನು ಬಿಟ್ಟಿತ್ತು.
ಬಸ್ಸು ಹಾಸನಕ್ಕೆ ಬಂದಾಗ ರಾತ್ರಿ ಹನ್ನೊಂದಾಗಿತ್ತು.
ಡ್ರೈವರ್ ಬಸ್ಸನ್ನು ಆಫ್ ಮಾಡುತ್ತಾ
"ಐದು ನಿಮಿಷ ಟೈಮಿದೆ ಕಾಫೀ-ಗೀಫಿ ಕುಡಿಯೋರು ಕುಡಿಬೋದು" ಎಂದು ಕೆಳಗೆ ಇಳಿದ.
ಮಗುವಿನ ತಲೆಯನ್ನು ನಿಧಾನಕ್ಕೆ ಪಕ್ಕಕ್ಕೆ ಒರಗಿಸಿ ಕೆಳಗೆ ಇಳಿದು.
"ಒಂದು ಬಿಸ್ಕಟ್ ಪಾಕೆಟ್ ಕೊಡಿ ಹಾಗೇ ಒಂದು ಚಾಕಲೇಟ್ ಕೊಡಿ ಇಪ್ಪತ್ತು ರೂಪಾಯಿದು" ಎಂದು ಐನೂರು ರೂಪಾಯಿ ನೋಟು ಕೊಟ್ಟೆ.
"ಚೇಂಜ್ ಇಲ್ವಾ ಸಾರ್" ಎಂದು ಅಂಗಡಿಯವನು ಕೇಳಿದ.
"ಇಲ್ಲಪ್ಪ" ಎಂದು ಜೇಬನ್ನು ತಡಕಾಡಿದೆ
ಅಂಗಡಿಯವ ಗೊಣಗುತ್ತಲೇ ಚಿಲ್ಲರೇ ಕೊಟ್ಟ.
ಬಸ್ಸು ಹತ್ತಿದವನೇ ಮಗುವಿನ ಹತ್ತಿರ ಬಿಸ್ಕೆಟ್ ಮತ್ತು ಚಾಕಲೇಟ್ ಕವರನ್ನು ಪಕ್ಕದಲ್ಲಿ ಇಟ್ಟು, ಮಗುವಿನ ಹಣೆಗೆ ಒಂದು ಮುತ್ತನ್ನು ಕೊಟ್ಟು ಕಣ್ಣು ಮುಚ್ಚಿದೆ.
ಏನೇನೋ ನೆನಪುಗಳು ಮನಸ್ಸನು ಕಲಕಿ ಬಿಟ್ಟಿದ್ದವು.
ರಾಜೇಶ್ವರಿ, ನಾನು ಪ್ರೀತಿಸಿ ಮದುವೆಯಾದ ಹುಡುಗಿ, ಪ್ರೀತಿಗೆ ಮನೆಯವರು ವಿರೋಧಿಸಿದಾಗ ಎರಡೂ ಕುಟುಂಬವನ್ನು ಧಿಕ್ಕರಿಸಿ ಮದುವೆಯಾದವು.
ಹೊಸ ಮನೆ, ಹೊಸ ಆಲೋಚನೆಗಳು, ಹೊಸ ಕೆಲಸ, ಇಬ್ಬರೂ ಹಳೇದೇಲ್ಲಾ ಬಿಟ್ಟು ಬಂದಿದ್ದೋ
ನಾವಿಬ್ಬರೇ ಎಷ್ಟು ಖುಷಿಯಾಗಿದ್ದೆವೊ..
"ನಮ್ಮ ಖುಷಿಯನ್ನು ಹಂಚಿಕೊಳ್ಳಲು ಮನೆಗೆ ಹೊಸ ಅತಿಥಿ ಬರುತ್ತಾರೆ" ಎಂದಳು ರಾಜೀ.
"ನಿಜವಾಗ್ಲೂ" ಅಂದೆ.
ಅವತ್ತು ಅದೆಷ್ಟು ಸಂತಸ, ನಮ್ಮಿಬ್ಬರ ಪ್ರೀತಿ ಸಂಕೇತವೇ ಎಂದುಕೊಂಡು ಖುಷಿ ಇಮ್ಮಡಿಯಾಗಿತ್ತು.
ಮೊದಲ ಹೆರಿಗೆ ಅಂತ ರಾಜೀ ತುಂಬಾ ಭಯಗೊಂಡಿದ್ದಳು.
ನಾನು ಎಷ್ಟು ಧೈರ್ಯವನ್ನು ಹೇಳಿದರೂ ಅಳುತ್ತಿದ್ದಳು.
ನೀವೂ ಆಪರೇಷನ್ ರೂಮಿನಲ್ಲೇ ಇರಬೇಕೆಂದು ಮಗುವಿನಂತೆ ರಚ್ಚೆ ಹಿಡಿದಳು.
ಹೇಗೋ, ಡಾಕ್ಟ್ರು ಕೈ ಕಾಲು ಹಿಡಿದ ಮೇಲೆ ಒಳಗೇ ಇರಲು ಅನುಮತಿ ಕೊಟ್ಟರು.
ಆ ದೃಶ್ಯ ಇನ್ನೂ ನನಗೆ ಕಣ್ಣಲ್ಲಿ ಕಟ್ಟಿದ ಹಾಗಿದೆ.
ರಾಜೀ ನೋವಿನಿಂದ ಅರಚುತ್ತಿದ್ದಾಳೆ.
ಅವಳ ಕೈಯನ್ನೂ ಬಿಗಿಯಾಗಿ ಹಿಡಿದ ನರ್ಸುಗಳು,
"ಹೇ ಬಾಯಿ ಮುಚ್ಚಮ್ಮ, ಯಾರು ಹೆರದೆ ಇರೋದು ಹೇರ್ತೀದ್ಯಾ" ಅಂದಳು
ಈ ಮಾತನ್ನು ಆ ನರ್ಸು ಆಸ್ಪತ್ರೆಯ ಹೊರಗಡೆ ಹೇಳಬೇಕಿತ್ತು, ಬಾಯಲ್ಲೀ ಇರೋ ಹಲ್ಲನೇಲ್ಲಾ ಉದುರಿಸುತ್ತಿದ್ದೆ. ಆದರೆ ಇವಾಗೇನೂ ಮಾಡೋಕೆ ಆಗೋದಿಲ್ಲ ಎಂದು ಹಲ್ಲನಷ್ಟೆ ಕಚ್ಚಿದೆ.
"ಶಿವು ಆಗ್ತಿಲ್ಲ, ಅಯ್ಯೋ ಅಮ್ಮ" ಎಂದು ಕಣ್ಣೀರಿಡುತ್ತಿದ್ದಳು.
"ರಾಜೀ ಏನೂ ಆಗಲ್ಲ ನಾನಿದ್ದೀನಿ" ಎಂದು ಅವಳ ಎಡಗೈ ಹಿಡಿದೆ.
"ಅಯ್ಯೋ ಆಗ್ತಿಲ್ಲ, ಶಿವು ಶಿವೂ" ಎಂದು ನಿಧಾನಕ್ಕೆ ಕಣ್ಣು ಮುಚ್ಚುತ್ತಿದ್ದಳು.
"ಡಾಕ್ಟ್ರೇ, ಕಣ್ಣು ಮುಚ್ಚುತ್ತಿದ್ದಾಳೆ" ಎಂದೆ ಗಾಬರಿಯಿಂದ.
"ರಾಜೇಶ್ವರಿ ಕಣ್ಣು ಬಿಡಿ, ನಿಮ್ಮ ಹಸ್ಬೇಂಡ್ ಜೊತೆ ಮಾತಾಡಿ" ಅಂತ ಡಾಕ್ಟ್ರು ಹೇಳಿದರು.
"ಹೇ ಕಣ್ಣು ಬಿಡಮ್ಮ" ಎಂದು ನರ್ಸು ಕೆನ್ನೆಯನ್ನು ಹಿಡಿದು ಅಲುಗಾಡಿಸಿದಳು.
"ಲೋ ಬಿ.ಪಿ ಆಗಿದೆ" ಎಂದು ಡಾಕ್ಟ್ರು ಯಾವ್ದೋ ಇಂಜೆಕ್ಷನ್ ಕೊಟ್ರು.
ರಾಜೀ ಅರೆ ಪ್ರಜ್ಞಾವಸ್ಥೆಗೆ ತಲುಪಿದಳು.
"ನಾರ್ಮಲ್ ಡೇಲಿವೆರಿ ಆಗೋದು ಕಷ್ಟ ಸೀಜೇರೀಯನ್ ಮಾಡಬೇಕು, ಮಾಡಿದ್ರು ಇಬ್ಬರನ್ನೂ ಉಳಿಸೋದು ಕಷ್ಟ" ಎಂದು ಡಾಕ್ಟರ್ ನಿರ್ಮಲ ಕೈ ಚೆಲ್ಲಿದರು.
"ಡಾಕ್ಟ್ರೇ ನಂಗೆ ರಾಜೀನೇ ಮುಖ್ಯ, ಅವಳಿದ್ರೆ ಸಾಕು ದಯವಿಟ್ಟು ನಂಗೆ ಅವ್ಳನ್ನ ಉಳಿಸಿಕೊಡಿ" ಎಂದು ಅಂಗಲಾಚಿದೆ.
"ಸರಿ, ಆ ಫಾರ್ಮಗೆ ಸೈನ್ ಮಾಡಿ" ಎಂದು ಹೊರಗೆ ಕಳುಹಿಸಿದರು.
ಓ.ಪಿ.ಡಿ ಹೊರಗೆ ಅಂಡು ಸುಟ್ಟಿಕೊಂಡ ಬೆಕ್ಕಿನಂತೆ ಅತ್ತಿಂದಿತ್ತ ಓಡಾಡುತಿದ್ದೇ.
ಸುಮಾರು ಹೊತ್ತು ಆದ್ಮೇಲೆ ಮಗು ಅಳುವಿನ ಶಬ್ಧ ಕೇಳಿಸಿತು.
"ಡಾಕ್ಟ್ರು ದೇವರಂತೋರು ಇಬ್ಬರನ್ನು ಉಳಿಸಿದ್ದಾರೆ" ಎಂದು ಆನಂದಭಾಷ್ಪ ಸುರಿಸಿದೆ.
ಡಾಕ್ಟ್ರು ಹೊರಗೆ ಬಂದ್ರು, ಅವ್ರ ಕೈ ಹಿಡಿದು
"ಡಾಕ್ಟ್ರೇ ನಿಮ್ನ ನಾನು ಈ ಜನ್ಮದಲ್ಲಿ ಮರಿಯೊಲ್ಲ, ನೀವು ದೇವ್ರು" ಎಂದು ಕೈ ಮುಗಿದೆ.
ಡಾಕ್ಟ್ರು ನಿಧಾನವಾಗಿ ಸ್ಥೆತಸ್ಕೋಪನ್ನು ಕತ್ತಿನಿಂದ ತೆಗೆದು...
"ಶಿವಮೂರ್ತಿ ನಿಮ್ಮ ಹೆಂಡತಿನ ಉಳಿಸೋದಕ್ಕೆ ತುಂಬಾ ಪ್ರಯತ್ನ ಪಟ್ಟೋ ಆದರೆ ಆಗಲಿಲ್ಲ" ಎಂದು ತಲೆ ತಗ್ಗಿಸಿ ಹೊರಟು ಹೋದರು.
ಸೀದಾ ಒಳಕ್ಕೆ ಓಡಿ ಹೋಗಿ ನೋಡಿದೆ.
ಮಗು ನರ್ಸ್ ಕೈಯಲ್ಲೀದೇ.
ರಾಜೀ ಅರೆಗಣ್ಣು ಬಿಟ್ಟು ಬಾರದ ಲೋಕಕ್ಕೆ ಹೋಗಿದ್ದಳು.
ಬಿರು ಬಿಸಿಲಿನಲ್ಲೂ ಬೆವೆತು ಮೈ ಒದ್ದೆಯಾಗಿತ್ತು.
"ಹೆಣ್ಣು ಮಗು ಆಗಿದೆ, ತಗೋಳಿ" ಎಂದು ನರ್ಸು ಮಗುವನ್ನು ಕೈಯಲ್ಲಿಟ್ಟಳು.
ಕಣ್ಣು,ಮೂಗು,ಬಾಯಿ,ಬಣ್ಣ ಎಲ್ಲ ಥೇಟ್ ರಾಜೀಯಂತೇ.
ಆದ್ರೆ ಆಯಸ್ಸು ಮಾತ್ರ ಅವಳಷ್ಟು ಇರದೆ ಇದ್ರೆ ಸಾಕು ಎಂದು ಮನಸ್ಸಲ್ಲೇ ದೇವ್ರಿಗೆ ಪ್ರಾರ್ಥಿಸಿದೆ.
ರಾಜೀ ಸಂಸ್ಕಾರ ಮಾಡೋಕೆ ಪಟ್ಟ ಕಷ್ಟ ಅಷ್ಟಿಸ್ಟಲ್ಲ, ಅಳೋರಿಲ್ಲ,ಕೇಳೋರಿಲ್ಲ ಅಷ್ಟೇ ಯಾಕೇ ಹೆಣ ಹೊರೊರು ಯಾರು ಇಲ್ಲ.
ಮನೆಯವರಿಗೆ ಫೋನ್ ಮಾಡಿದ್ರೆ
"ನೀವಿಬ್ಬರೂ ನಮ್ಮ ಪಾಲಿಗೆ ಯಾವಗ್ಲೋ ಸತ್ತೋದ್ರಿ" ಅಂದರು.
ಆಮೇಲೆ ಒಂದಿಬ್ಬರು ಸ್ನೇಹಿತರು ಬಂದ್ರು, ಆಸ್ಪತ್ರೆಯ ಆಂಬುಲೆನ್ಸ್ಗೆ ದುಡ್ಡು ಕೊಟ್ಟು, ಸ್ಮಶಾನಕ್ಕೇ ಹೆಣ ಅಂತ ಹೇಳಲ್ಲ ನನ್ನ ರಾಜೀಯನ್ನು ತೆಗೆದುಕೊಂಡು ಹೋದೋ...
ಎಲ್ಲ ಪೂಜೆ ಮುಗಿಸಿ ಇನ್ನೇನು ಬೆಂಕಿಗೆ ಕೊಡಬೇಕು ಎನ್ನುವಷ್ಟರಲ್ಲೀ ರಾಜೀಯ ಅಮ್ಮ ಮತ್ತು ತಮ್ಮ ಓಡೋಡಿ ಬಂದರು.
ಅವರೋಂದಷ್ಟು ಕಣ್ಣೀರಿಟ್ಟರು.
ರಾಜೀಯ ದೇಹದ ಮೇಲೆ ಕರ್ಪೂರ ಹಚ್ಚುವಾಗ ನನ್ನ ಮಗಳು ಅರುಚುತ್ತಿದ್ದಳು.
ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ ಅಂತ ಅವಳನ್ನು ವಿದ್ಯುತ್ ಚಿತಾಗಾರಕ್ಕೇ ತಳ್ಳಿದೆ.
ಮನೆಗೆ ಬಂದು ಎಷ್ಟೇ ಸ್ನಾನ ಮಾಡಿದರು, ಕೊಳೆ ಹೋಯಿತೇ ವಿನಃ ರಾಜೀಯ ನೆನಪು ಕಿಂಚಿತ್ತು ಹೋಗಲಿಲ್ಲ.
ಮಗುವಿನ ಪಾಡಂತೂ ಹೇಳತೀರದು.
ಕಣ್ಣು ಬಿಟ್ಟಾಗಲೇಲ್ಲ ಅಳು-ಅಳು.
ಅದು ಎಷ್ಟು ಅಂತ ಬಾಟ್ಲು ಹಾಲು ಕುಡಿಯುತ್ತೇ.
ಅಷ್ಟಕ್ಕೂ ಮಗು ಹಸಿವಿಗೇ ಅಳುತೀದ್ಯೋ, ಮತ್ತೇನಕ್ಕೇ ಅಳುತೀದೇಯೋ ಅಂತ ಗೊತ್ತೇ ಆಗ್ತಿರ್ಲಿಲ್ಲ. ಎಷ್ಟೇ ಆದ್ರೂ ಗಂಡಸ್ರು, ನಮಗೆಲ್ಲಿ ಈ ಸೂಕ್ಮಗಳು ಅರ್ಥ ಆಗುತ್ತೆ.
ಅದಕ್ಕೇ ಹೇಳೋದು ತಾಯಿ ದೇವ್ರು ಅಂತ...
ಒಂದು ತಿಂಗಳು ಆದ ಮೇಲೆ ರಾಜೀ ಅಮ್ಮ ಫೋನ್ ಮಾಡಿದ್ರು.
"ಮಗು ಹೇಗಿದ್ಯಾಯಪ್ಪ" ಎಂದು ನಿರ್ಭಾವುಕ ಧ್ವನಿಯಲ್ಲೇ ಕೇಳಿದರು.
"ಹಾ..! ಚೆನಾಗಿದೆ ಅಮ್ಮ, ಸ್ವಲ್ಪ ಅಳುತ್ತಾಳೆ" ಎಂದು ಮೌನಿಯಾದನು.
"ನಿನ್ನ ಆರೋಗ್ಯನು ನೋಡ್ಕೋಳಪ್ಪ" ಎಂದರು.
"ಸರಿ ಅಮ್ಮ" ಎಂದಷ್ಟೇ
"ನಾನು ನಿನ್ನ ತಾಯಿ ತರ, ಹೀಗೆ ಹೇಳ್ತೀನಿ ಅಂತ ಬೇಜಾರು ಮಾಡ್ಕೋ ಬೇಡಪ್ಪಾ. ನೀನು ಯಾರ್ನಾದ್ರೂ ಮದುವೆ ಆದ್ರೆ ಮಗು ನೋಡ್ಕೊಳೋ ನಿನ್ನ ತಾಪತ್ರಾಯನು ತಪ್ಪುತ್ತೆ. ದೀಪ ಹಚ್ಚೋಕೆ ಅಂತೆ ಮನೇಲಿ ಒಬ್ಬಳು ಹೇಣ್ತಿ ಅಂತಾನು ಆಗ್ತಾಳೆ" ಎಂದು ಕಣ್ಣೀರಿಟ್ಟರು.
"ಇಲ್ಲಮ್ಮಾ, ನಂಗೆ ಮದ್ವೆ-ಗಿದ್ವೆ ಬೇಡ, ಒಂದಕ್ಕೆ ಸಾಕಾಗಿದೆ, ನನ್ನಿಂದ ರಾಜೀನ ಮರೆಯೋಕೇ ಆಗ್ತಿಲ್ಲ, ನಾನು ನನ್ನ ಮನಸಾಕ್ಷಿಗೆ ಮೋಸ ಮಾಡಲ್ಲ" ಎಂದೆ.
"ಮನಸಾಕ್ಷಿ ಎಲ್ಲ ನೋಡೋ ಟೈಮಲ್ಲ ಇದು, ನಿನಗಲ್ಲದಿದ್ದರೂ ಆ ಮಗುವಿಗಾದ್ರೂ ಒಂದು ತಾಯಿ ಅಂತ ಆಗ್ತಾಳೆ" ಎಂದರು.
"ಸರಿಯಮ್ಮ ನಾನು ಯೋಚ್ನೆ ಮಾಡಿ ಹೇಳ್ತೀನಿ" ಎಂದೆ.
"ಯೋಚ್ನೆ-ಗಿಚ್ನೇ ಮಾಡೋದು ಏನೂ ಬೇಕಾಗಿಲ್ಲ, ನನ್ನ ದೂರದ ಸಂಬಂಧಿಕರ ಒಂದು ಹುಡ್ಗಿ ಇದೆ, ಅವ್ಳಿಗೆ ಅಪ್ಪ ಇಲ್ಲ, ಅವ್ರು ಬಡವ್ರು ಅಂತ ಯಾವ ಒಳ್ಳೇ ಗಂಡು ಸಿಗ್ತಿಲ್ಲ, ಹುಡ್ಗಿ ನೋಡೋಕೆ ಚೆನ್ನಾಗಿದಾಳೆ. ಬೆಂಗಳೂರಲ್ಲಿ ಕೆಲ್ಸ ಮಾಡ್ತಿದಾಳೆ, ಮದ್ವೆ ಆದ್ಮೇಲೆ ಶಿವಮೊಗ್ಗಲೇ ಯಾವುದಾದರೂ ಕೆಲ್ಸ ಮಾಡಿದ್ರೆ ಆಯ್ತು" ಎಂದರು.
"ಹ್ಮ್, ಮಗು ಅಳ್ತಿದೆ ನಾನು ಆಮೇಲೆ ಫೋನ್ ಮಾಡ್ತೀನಿ ಅಮ್ಮ" ಅಂತ ಹೇಳಿದೆ
"ಸರಿ ಸರಿ, ಮಗಳಿಗೆ ಏನು ಹೆಸ್ರು ಇಟ್ಟಪ್ಪಾ" ಎಂದು ಕೇಳಿದರು.
"ಖುಷಿ, ಅವಳಾದರೂ ಖುಷಿಯಾಗಿರಲಿ ಅಂತ" ಎಂದು ಫೋನಿಟ್ಟೆ.
ಒಂದು ವರ್ಷ ಒಳಗೇ ಗಡಿಬಿಡಿಯಲ್ಲಿ ಮನೆ ಮನೆಯವರೆ ಸೇರಿ ಲಕ್ಷ್ಮಿ ವೆಂಕಟೇಶ್ವರ ದೇವಾಸ್ಥಾನದಲ್ಲಿ ಮದುವೆ ಮಾಡಿದರು.
ಮೊದಲ ರಾತ್ರೀಯಲ್ಲೇ ಸುಮಾ ಜಗ್ಳ ಆಡಿದಳು.
"ಇವತ್ತು ಮಗು ಇದೇ ರೂಮ್ಮಲ್ಲಿ ಇರಬೇಕಾ" ಎಂದು.
ಒಂದಷ್ಟು ದಿನ ನಾವು ಸೇರಿರಲಿಲ್ಲ, ಅವಳಿಗೂ ಕೋಪ ಕಮ್ಮಿ ಆಯ್ತು, ನಂಗೂ ಅವಳ ಮೇಲೆ ಪ್ರೀತಿ ಆಯ್ತು..
ಸುಮಾಗೆ ಸ್ವಲ್ಪ ಆತುರದ ಬುದ್ಧಿ, ಮುಂಗೋಪಿ..
"ನೀವು ತರೋ ಸಂಬಳ ಸಾಕಾಗೋದಿಲ್ಲ, ನಾನು ಕೆಲ್ಸಕ್ಕೆ ಹೋಗ್ತೀನಿ" ಅಂದಳು.
"ಯಾಕೆ ಸುಮಾ ನಾನು ಹೋಗ್ತೀಲ್ವ" ಅಂದೆ.
"ನಿಮ್ಮ ಸಂಬ್ಳ ನೆಚ್ಚಿಕೊಂಡ್ರೆ ನಾವು ಹಿಂಗೇ ಬಾಡಿಗೆ ಮನೇಯಲ್ಲೇ ಸಾಯ್ಬೇಕಾಗುತ್ತೆ, ನಾನು ಬೆಂಗಳೂರಲ್ಲೀ ಕೆಲ್ಸ ಮಾಡ್ತಿದ್ದ ಕಂಪನಿಯವರು, ಶಿವಮೊಗ್ಗದಲ್ಲೇ ಹೊಸ ಬ್ರಾಂಚ್ ಶುರು ಮಾಡಿದ್ದಾರೆ" ಎಂದಳು.
"ಸರಿ.ನಿನ್ನಿಷ್ಟ" ಅಂದೆ.
ಸುಮಾ ಬೆಳಿಗ್ಗೆ ಹೊರಟ್ರೆ ಬರ್ತೀದೀದ್ದೇ ರಾತ್ರಿ ಎಂಟಕ್ಕೆ. ಅವ್ಳು ಬರೋಷ್ಟರಲ್ಲಿ ನಾನು ಆಫೀಸಿನಿಂದ ಬಂದು ಅಡುಗೆ ಮಾಡ್ತಿದ್ದೆ.
ಮಗುನ ಡೇ ಕೇರಲ್ಲಿ ಬಿಟ್ಟಿದ್ದೋ..
ಸುಮಾ ಬಂದ್ರು ಫೋನು ಹಿಡಿದುಕೊಂಡು ಕೂತು ಬಿಡೋಳು.
ಹೀಗೆ ಒಂದು ಮೂರು-ನಾಲ್ಕು ತಿಂಗಳ ನಂತರ ಸುಮಾ ಗರ್ಭ ಧರಿಸಿದಳು.
ಆರು ತಿಂಗಳು ತುಂಬೋವರೆಗೂ ಕೆಲ್ಸಕ್ಕೆ ಹೋದಳು.
ಸುಮಾ ಒಂದು ಮುದ್ದಾದ ಗಂಡು ಮಗನನ್ನು ಹೆತ್ತಳು. ಪುನೀತ್ ಎಂದು ಹೆಸರಿಟ್ಟವು ಆದ್ರೆ ಮನೆಯಲ್ಲಿ ನಾವು ಚಿಂಟು ಅಂತ ಕರೀತೀದ್ದೋ...
ಸುಮಾ ಪುನೀತಿಗಷ್ಟೇ ಮುದ್ದಾಡೋಳು, ಖುಷಿಯನ್ನು ಆದಷ್ಟೂ ದೂರ ಇಡೋಳು.
ಚಿಂಟುಗೆ ಒಂದು ವರ್ಷ ತುಂಬಿದ ಮೇಲೆ ಅವನನ್ನು ಡೇ ಕೇರಿಗೆ ಸೇರಿಸಿದಳು.
ಸುಮಾ ಮತ್ತೇ ಕೆಲಸಕ್ಕೇ ಹೊರಟಳು.
ಇತ್ತೀಚಿಗೆ ಸುಮಾಳ ನಡುವಳಿಕೆ ಮೇಲೆ ಅನುಮಾನ ಬಂತು. ಅತಿಯಾಗಿ ಫೋನಲ್ಲಿ ಮಾತಾಡೋದು, ಮೆಸ್ಸೇಜ್ ಮಾಡ್ತಾ ಕೂರೋದು.
ಅವಳು ಸ್ನಾನಕ್ಕೆ ಹೋಗಿದ್ದಾಗ ಅವ್ಳ ಮೊಬೈಲ್ ನೋಡಿ ದಂಗಾದೆ...
ರೋಹಿತ್ ಅನ್ನೋನಿಂದ "ಡಾರ್ಲಿಂಗ್ ಲವ್ ಯೂ, ಮಿಸ್ ಯೂ" ಅಂತ ಕಳ್ಸಿರೋದು.
ಅದಕ್ಕೆ ಇವ್ಳು
"ಹೌ ಮಚ್ ಡು ಯು ಲವ್ ಮಿ" ಅಂತ ಕೇಳಿರೋದು.
ಅವತ್ತು ಪೂರ್ತಿ ಜಗಳ ಜಗಳ....
ಕೋಪದಲ್ಲಿ ಸಂಜೆ ಮನೆಗೆ ಹೋಗದೆ ಬಾರಿಗೆ ಹೋದೆ. ನಮ್ಮ ಆಫೀಸಿನ ಕ್ಲರ್ಕ್ ವೆಂಕಟೇಶ ಕೂಡ ಇದ್ದ. ಅವ್ನ ಹೆಂಡತಿ ಕೂಡ ಸುಮಾಳ ಆಫೀಸಲ್ಲೇ ಕೆಲ್ಸ ಮಾಡೋದಂತೆ.
ಸ್ವಲ್ಪ ಎಣ್ಣೆ ಒಳಗೇ ಹೋಗುತ್ತಿದ್ದಂತೆ
"ಥೂ...! ಏನ್ ಹೆಂಗಸ್ರೋ" ಎಂದು ಉಗಿದೆ.
"ಗುರು ನಿನ್ನ ಹೆಂಡ್ತೀಗೆ ಬೇಕಿದ್ರೆ ಬೈಯ್ಕೋ, ಪಾಪ ನನ್ನ ಹೆಂಡ್ತೀಗೂ ಯಾಕೆ ಸೇರ್ಸಿ ಬೈತೀಯ" ಅಂದ.
"ಜೀವ್ನ ಸಾಕಾಗಿ ಹೋಗಿದೆ ವೆಂಕಟೇಶ, ಬರೀ ಜಗ್ಳ ಮನೇಲಿ" ಅಂದೆ.
"ಗುರು ಹಿಂಗೇ ಹೇಳ್ತೀನಿ ಅಂತ ನನ್ನ ಬಗ್ಗೆ ಏನು ತಪ್ಪು ತಿಳ್ಕೋಬೇಡ, ನಿನ್ನ ಹೆಂಡ್ತೀಗೂ ಬಾಸಿಗೂ ಸಂಬಂಧ ಇದೆ ಅಂತ ಆಫೀಸಲ್ಲೇಲ ಫುಲ್ ಪುಕಾರಂತೆ, ನನ್ನ ಎಡ್ತೀ ಹೇಳಿದ್ಲು" ಅಂದು ದಬ್ಬಾಕೀಕೊಂಡ.
ಅನುಮಾನ ನಿಜವಾಯಿತು. ಏನು ಮಾತಾಡದೇ ಪೂರ್ತಿ ಕುಡಿದು ಮನೆಗೆ ಹೋದೆ.
ಮಾರನೇ ದಿನ ಬೆಳಿಗ್ಗೆ..
"ಸುಮಾ, ನಿನಗೂ ನಿಮ್ಮ ಬಾಸಿಗೂ ಸಂಬಂಧ ಇದೆಯಂತೆ ನಿಜಾನ... ?" ಅಂತ ಕೇಳಿದೆ.
"ಹೌದು. ಅವ್ನು ನನ್ನ ಹಳೇ ಲವರ್. ಅವ್ರ ಮನೇಲಿ ನಾವು ಬಡವರು ಅಂತ ಒಪ್ಪಿಕೊಳ್ಳಲಿಲ್ಲ, ನೀನು ಸೆಕೆಂಡ್ ಹ್ಯಾಂಡ್ ಗಂಡ ನಾನು ಅಡ್ಜಸ್ಟ್ ಮಾಡ್ಕೋಂಡಿಲ್ವ.. ಏನ್ ಇವಾಗ...?" ಎಂದು ಮುಖಕ್ಕೆ ಹೊಡೆದಂತೆ ಕೇಳಿದಳು.
ನಾನು ಏನೇ ಹೇಳಿದ್ದರು ಅವ್ಳು ಕೇಳುವ ಸ್ಥಿತಿಯಲ್ಲಿ ಇರ್ಲಿಲ್ಲ. ನಾನು ಏನು ಹೇಳ್ದೆ ಮೌನಕ್ಕೇ ಜಾರಿದೆ.
ಅವತ್ತಿಂದ ನಾನು ನನ್ನ ಮಗಳು ಮನೇಯಲ್ಲಿ ಇದ್ದರೂ ಇಲ್ಲದಂತೆ ಹೋರಾಂಡದಲ್ಲೇ ಮಲಗಿಕೊಳ್ಳುತ್ತಿದ್ದೊ.
ಆಕ್ಸಿಡೇಂಟ್ ಆಗೀ ನನ್ನ ಬಲಗಾಲು ಮುರಿದು ಹೋಗಿತ್ತು. ರಾಡ್ ಹಾಕಿದ್ರು ಎದ್ದು ಒದ್ದಾಡೋದು ಕಷ್ಟ ಆಗೋದು. ಕಮ್ಮಿ ಅಂದ್ರು 8-10 ತಿಂಗಳು ಬೆಡ್ ರೆಸ್ಟ್ ತಗೋಬೇಕು ಅಂತ ಡಾಕ್ಟ್ರು ಹೇಳಿದ್ರು.
ಕಳೆದ ಒಂದು ವರ್ಷದಿಂದ ನಾನೇ ಮನೇಲಿ ಮಕ್ಕಳನ್ನ ನೋಡ್ಕೋತಿದ್ದೇ.
ವಿಧಿಯಿಲ್ಲದೆ ಮಕ್ಕಳನ್ನ ಚೆನ್ನಾಗಿ ನೋಡ್ಕೋತ್ತಿದ್ದೇ.
ಅವ್ಳು ಮನೆಗೆ ಬಂದಾಗಲೆಲ್ಲ ಖುಷಿಗೆ ಹೊಡಿಯೋಳು. ನೆನ್ನೆ ರಾತ್ರಿ ನಾನು ಹೊರಗೆ ಹೋಗಿದ್ದಾಗ ಖುಷಿಗೆ ಗೇಣುದ್ದ ಬರೇ ಹಾಕಿದ್ದಳು. ರಾತ್ರಿಯೇ ತೀರ್ಮಾನ ಮಾಡಿದೆ, ಇಲ್ಲಿ ಇನ್ನೂ ಇರಬಾರ್ದು ಅಂತ...
ಅವ್ಳು ಆಫೀಸಿಗೆ ಹೋಗ್ತಿದಂಗೇ ಚಿಂಟುನನ್ನು ಮಲಗಿಸಿ, ಪಕ್ಕದ ಮನೆಯವರ ಹತ್ರ ಕೊಟ್ಟು ಬಂದೋ...
"ಬೆಂಗಳೂರು ಬಂತು ಇಳೀರಿ" ಎಂದು ಡ್ರೈವರ್ ಕಿರುಚಿದಾಗ ಕಣ್ಣುಬಿಟ್ಟೆ.
ಮಗುವನ್ನು ಎತ್ತಿಕೊಂಡು ಜನ ದಟ್ಟಣೆಯಿಂದ ಸ್ವಲ್ಪ ದೂರಕ್ಕೆ ಬಂದೆ.
"ಅಪ್ಪ ಹೊಟ್ಟೆ ಹಸಿತಿದೆ" ಎಂದು ಮೆಲ್ಲಗೆ ಹೇಳಿದಳು ಖುಷಿ.
"ಬಿಸ್ಕೆಟ್ ತಿಂತಿಯಾ ಮಗಳೇ" ಎಂದು ಕೇಳಿದೆ.
"ಬೇಡಪ್ಪ" ಅಂದಳು.
"ಸರಿ ಚಾಕೊಲೇಟ್ .....?"ಎಂದೆ.
"ಬೇಡಪ್ಪ ಹಲ್ಲು ನೋಯುತ್ತೆ" ಅಂದಳು.
"ಸರಿ ಮಗಳೇ ಬ್ರೆಡ್ ತಗೋಡ್ತಿನಿ ಇರು" ಎಂದೆ.
"ಓಕೆ. ಅಪ್ಪ ಕಕ್ಕ ಮಾಡ್ಬೇಕು"ಅಂದಳು.
ಅಲ್ಲೇ ಪಕ್ಕದ ದೊಡ್ಡ ಮೋರಿ ಹತ್ರ ಕೂರಿಸಿ
ನಾನು ಎದುರುಗಡೆ ಅಂಗಡಿಲೀ ಬ್ರೆಡ್ ತಗೋ ಬರ್ತೀನಿ" ಎಂದು ಹೊರಟೆ.
ಚಿಲ್ಲರೇ ಕೊಟ್ಟು ಬ್ರೆಡ್ ಮತ್ತೆ ಒಂದು ಲೋಟ ಹಾಲು ತೆಗೆದುಕೊಂಡು ತಿರುಗಿದೆ. ಖುಷಿ ಕಾಣ್ತಿಲ್ಲ.
ಅಕ್ಕ ಪಕ್ಕ ಹುಡುಕಿದೆ ಎಲ್ಲೂ ಇಲ್ಲ...
ಸುತ್ತಾಮುತ್ತ ಹುಚ್ಚು ನಾಯಿ ತರ ಹುಡುಕಿದೆ, ಎಲ್ಲೂ ಸಿಗಲಿಲ್ಲ.
ಯಾರನ್ನ ಕೇಳಿದ್ರು ಗೊತ್ತಿಲ್ಲ.
ಸ್ವಿಚ್ ಆಫ್ ಮಾಡಿದ್ದ ಫೋನನ್ನು ಆನ್ ಮಾಡಿದೆ.
ಸುಮಾಳ ಫೋನ್ ಬಂತು
"ಎಲ್ಲಿ ಸಾಯೋಕೆ ಹೋದ್ರಿ ಅಪ್ಪ ಮಗ್ಳು" ಎಂದು ರೇಗಿದಳು.
"ನಿನಗೆ ನಾವು ಇದ್ರೆ ಹಿಂಸೆ ಅಲ್ವಾ ಅದಕ್ಕೇ ಮನೆ ಬಿಟ್ಟು ಬಂದ್ವಿ, ಆದ್ರೆ ಖುಷಿ ತಪ್ಪಿಸ್ಕೊ ಬಿಟ್ಟೀದಾಳೆ" ಅಂದೆ.
"ಏನೂ ...? ನಿಮಗೇನು ಬಂತು ದೊಡ್ಡ ರೋಗ, ಹೆಂಗಾದ್ರೂ ಸಾಯ್ರೀ" ಅಂತ ಫೋನಿಟ್ಟಳು.
ನಾನು ತಡ ಮಾಡದೆ ಪೊಲೀಸ್ ಸ್ಟೇಷನಿಗೆ ಹೋಗಿ ಕಂಪ್ಲೈಂಟ್ ಕೊಟ್ಟೆ.
"ಎಲ್ಲಾದ್ರೂ ರೈಲ್ವೆ ಟ್ರಾಕ್,ಕಸದ ತೊಟ್ಟಿ ನೋಡ್ರಿ, ಇವಾಗೀನ ಕಾಲದಲ್ಲಿ ವಯಸ್ಸಾದೋರು ಮಕ್ಳು ಅಂತ ನೋಡಲ್ಲ ರೇಪ್ ಮಾಡಿ ಬಿಸಾಕ್ತಾರೇ" ಅಂದ್ರು.
"ಸಾರ್ ಹಾಗೇ ಹೇಳ್ಬೇಡಿ" ಕಣ್ಣಲ್ಲಿ ನೀರು ಗಳ ಗಳನೆ ಬಂತು.
"ಅಲ್ಲಿ ನಂಬರ್ ಮತ್ತೆ ಅಡ್ರೇಸ್ ಬರೆದು ಹೋಗಿ" ಅಂದ್ರು.
"ಸರಿ" ಎಂದು ಬರೆದು ಬಂದೆ.
ನಾನೇ ಇನ್ನೊಂದು ಸಲ ಹುಡುಕಾಡಲು ಶುರು ಮಾಡಿದೆ. ಇಪ್ಪತ್ತು ನಿಮಿಷ ಆದ್ಮೇಲೆ ಒಂದು ಫೋನ್ ಬಂತು.
"ಹೆಲ್ಲೋ ನಾನ್ ರೋಹಿತ್ ಅಂತ"
"ಹಲ್ಲೋ ಯಾವ ರೋಹಿತ್ ಹೇಳಿ" ಅಂದೆ
"ಅದೆಲ್ಲಾ ಹೇಳ್ತಿನಿ ನಿಮ್ಮ ಮಗಳು ಸಿಕ್ಕಿದಾಳೆ, ವಿಜಯನಗರ ಪೈಪ್ ಲೈನ್ ಹತ್ರ ಬನ್ನಿ" ಅಂದ.
"ಸರಿ ಸರಿ ಬರ್ತೀನಿ" ಅಂತ ಖುಷಿಯಲ್ಲೀ ಫೋನಿಟ್ಟೆ.
ಆಟೋದವನು "ಇನ್ನೂರು ರೂಪಾಯಿ" ಅಂದ್ರು ಮರು ಮಾತಾಡದೇ ಹತ್ತಿದೆ.
ಕೆಂಪು ಬಣ್ಣದ ಕಾರು ಪಾರ್ಕಿಂಗ್ ಲೈಟ್ ಹಾಕಿಕೊಂಡು ನಿಂತಿತ್ತು. ಭಯ ಮತ್ತು ಖುಷಿಯಿಂದಲೇ ಹತ್ತಿರ ಹೋಗಿ ನೋಡಿದ್ರೆ ಕಾರಲ್ಲೀ ಖುಷಿ ಕೇಕ್ ತಿನ್ನುತ್ತಾ ಇದ್ದಳು.
ನನ್ನನ್ನು ನೋಡ್ತೀದಂಗೇ "ಅಪ್ಪಾ" ಎಂದು ಕೇಕ್ ಬಿಸಾಕಿ ಓಡಿ ಬಂದು ತಬ್ಬಿಕೊಂಡಳು.
ನಾನು ಎತ್ತಿಕೊಂಡು ಮುದ್ದಾಡಿ "ಎಲ್ಲಿ ಹೋಗ್ಬಿಟ್ಟಿದ್ದೆ ಮಗಳೇ, ನನ್ನ ಜೀವಾನೇ ನಿಂತು ಹೋದಂಗೆ ಆಗಿತ್ತು" ಅಂತ ಮಗುವನ್ನು ನಿಧಾನಕ್ಕೆ ಕೆಳಗೆ ಇಳಿಸಿ.
"ನೀವು" ಅಂತ ಕೇಳಿದೆ.
ಅದಕ್ಕೆ ಅವ್ನು "ಪಾಪು ಕಾರಲ್ಲೀ ಇನ್ನೊಂದು ಬಾಕ್ಸಲ್ಲಿ ಕೇಕೀದೆ ತಿನ್ನು" ಅಂದನು.
ಖುಷಿ ಕಾರಿನ ಒಳಗೆ ಹೋದಳು.
"ನಾನು ರೋಹಿತ್ ಅಂತ, ನಿಮ್ಮ ವೈಫ್ ಬಾಸ್" ಎಂದು ಕೈ ಕುಲುಕಿದ.
"ಹೋ ನಾನು ಶಿವಮೂರ್ತಿ ಅಂತ ನಿಮ್ಮ ಲವರ್ ಸೇಕೆಂಡ್ ಹ್ಯಾಂಡ್ ಗಂಡ" ಎಂದು ಮುಖ ಮುರಿದೆ.
ಅವ್ನು ಏನೂ ಮಾತಾಡಲಿಲ್ಲ. ನಾನೇ ಮತ್ತೆ
"ಖುಷಿ ಎಲ್ಲಿ ಸಿಕ್ಕಿದ್ಲು ?" ಅಂತ ಪ್ರೆಶ್ನೆ ಮಾಡಿದೆ.
"ನಾನು ವಿಜಯನಗರದ ನನ್ನ ಫ್ರೇಂಡ್ ಮನೆಗೆ ಹೋಗಬೇಕಾದ್ರೆ, ಯಾವ್ದೋ ಮಗು ಆಟೋಲಿ ಕಿರುಚಿದ ಶಬ್ಧ ಕೇಳಿಸಿತು, ಯಾರು ಅಂತ ಕಾರ್ ಸ್ಲೋ ಮಾಡಿ ನೋಡಿದ್ರೆ ಖುಷಿ, ಅವ್ರ ಆಟೋಗೆ ಕಾರ್ ಅಡ್ಡ ಹಾಕುತಿದ್ದಂತೇ ಮಗು ಬಿಟ್ಟಿ ಓಡಿ ಹೋದ್ರು" ಅಂದ.
"ಅಯ್ಯೋ ಪಾಪಿಗಳು, ಅದ್ಸರೀ ನಿಮ್ಗೆ ಖುಷಿ ಹೇಗೆ ಗೊತ್ತು" ಎಂದು ಕೇಳಿದೆ.
"ಸುಮಾ ಮೊಬೈಲಲ್ಲಿ ನೋಡಿದ್ದೆ" ಅಂತ ಹೇಳಿದ.
"ಸರಿ. ನಾವು ಹೋರಡ್ತಿವಿ" ಎಂದೆ.
"ಯಾಕೆ ಬೆಂಗಳೂರಿಗೆ ಬಂದ್ರಿ... ?" ಅಂದ.
"ಏನ್ ಮಾಡೋದು ಮದ್ವೆ ಆದ ಹೇಣ್ತಿ ಬೇರೊಬ್ಬನ ಜೊತೆ ಸಂಸಾರ ಮಾಡ್ತಿದ್ರೆ ಗಂಡನಿಗೆ ಏನು ಬೆಲೆ" ಅಂದೆ.
ಸ್ಸಾರಿ ಸರ್! ನಾನು ಹೊರಡ್ತೀನಿ" ಅಂತ ಕಾರ್ ಒಳಗೆ ಕೂತ
"ಸರಿ" ಅಂದೆ.
ಖುಷಿ ಕಾರಿಂದ ಆಚೆ ಬಂದು "ಬೈ" ಅಂಕಲ್ ಅಂದಳು.
"ಬೈ ಖುಷಿ" ಎಂದು ಹೊರಟನು.
ಅರ್ಧ ಘಂಟೆಯ ನಂತರ ಸುಮಾ ಫೋನ್ ಮಾಡಿದಳು.
"ಖುಷಿ ಸಿಕ್ಕಿದ್ಲಾ ?" ಅಂತ ಕೇಳಿದ್ಲು.
"ಹು" ಅಂದೆ ಅಷ್ಟೇ.
"ರೀ ನನ್ನನ್ನು ಕ್ಷಮಿಸಿ ಬಿಡಿ" ಅಂತ ಕಣ್ಣೀರಿಟ್ಟಳು.
"ಯಾಕೆ, ಏನಾಯ್ತು" ಅಂದೆ.
"ಖುಷಿ ತಪ್ಪಿಸಿಕೊಂಡಿದ್ದಾಳೆ ಅಂತ ರೋಹಿತ್ಗೆ ಇವಾಗ ಫೋನ್ ಮಾಡಿದ್ದೆ, ಅಮ್ಮನ ತರ ಮಗಳೂ ಇನ್ಯಾವನ್ ಹಿಂದೆ ಹೋಗೊಳೋ ಅಂತ ಮಗು ಅನ್ನೋದು ನೋಡದೆ ಹೇಳ್ಬಿಟ್ಟ" ಎಂದು ಬಿಕ್ಕಿ ಬಿಕ್ಕಿ ಅತ್ತಳು.
ಏನು ಗೊತ್ತಿಲ್ಲದವನಂತೆ "ಹೋಗ್ಲಿ ಬಿಡು" ಅಂದೆ.
"ರೀ ಇನ್ಯಾವತ್ತೂ ನಿಮ್ಮನ್ನ,ಖುಷಿನ ನೋಯಿಸಲ್ಲ ದಯವಿಟ್ಟು ನನ್ನನ್ನು ಕ್ಷಮಿಸಿ" ಅಂತ ಗೋಗರೆದಳು.
"ಸರಿ. ಆಗಿದ್ದೆಲ್ಲ ಆಯ್ತು ಬಿಡು" ಎಂದೆ.
"ಆಯ್ತು, ಬೇಗ ಬನ್ರೀ ಕಾಯ್ತಾ ಇರ್ತೀನಿ" ಎಂದು ಫೋನಿಟ್ಟಳು.
ಖುಷಿಯನ್ನು ಎತ್ತಿಕೊಂಡು,
"ಚಿನ್ನಿ ಅಮ್ಮ ಕೂಗ್ತೀದಾಳೆ, ಮನೆಗೆ ಹೋಗೋದೋ ಬೇಡ್ವೋ ?" ಅಂತ ಕೇಳಿದೆ.
"ಅಪ್ಪ ಚಿಂಟು ನೋಡ್ಬೇಕು ಅನಿಸ್ತಿದೆ ಹೋಗೋಣ" ಅಂದಳು.
"ಸರಿ ಮಗಳೇ, ನಿನ್ನಿಷ್ಟ" ಎಂದು ಕೆನ್ನೆಗೆ ಮುತ್ತಿಟ್ಟೆ.
ಅಂತೂ ಮಧ್ಯಾರಾತ್ರಿಲೀ ಹುಡುಕಾಡಿದ ಮೇಲೆ ಶಿವಮೊಗ್ಗಕ್ಕೇ ಹೋಗುವ ಒಂದು ಬಸ್ಸು ಸಿಗ್ತು ಹತ್ತಿ ಕುಳಿತೆವು.
"ಅಪ್ಪ ನಿದ್ದೆ ಬರ್ತಿದೆ" ಅಂತ ಹೇಳಿದಳು.
"ಆಯ್ತು, ತೊಡೆ ಮೇಲೆ ಮಲ್ಕೋ ಮಗಳೇ" ಎಂದು ತಟ್ಟಿ ಮಲುಗಿಸಿದೆ.
*****
©ಮಹೇಶ್ ಪುಲಿಕೇಶಿ
17/06/2016
Comments
Post a Comment